ಇದು ಕೇವಲ ಕಠಿಣ ಜಗತ್ತಲ್ಲ; ಪ್ರಕ್ಷುಬ್ಧ, ಅನೂಹ್ಯ ಜಗತ್ತು. ಕೋವಿಡ್ ಸಾಂಕ್ರಾಮಿಕ, ಉಕ್ರೇನ್ ಮತ್ತು ಮಧ್ಯ ಏಶ್ಯಾ ಕಲಹ, ಹವಾಗುಣ ಘಟನೆಗಳು, ತೀವ್ರವಾದ ಮತ್ತು ಭಯೋತ್ಪಾದನೆಗಳ ಪರಿಣಾಮಕ್ಕೆ ಇದು ತುತ್ತಾಗಿದೆ. ಚೀನಾದ ಏರುಗತಿ, ಯುನೈಟೆಡ್ ಸ್ಟೇಟ್ಸ್‌ನ ಬದಲಾದ ನಿಲುವು, ರಶ್ಯಾದ ಕಾರ್ಯತಂತ್ರ, ಜಾಗತೀಕರಣದ ಪರಿಣಾಮ, ಹೊಸ ತಂತ್ರಜ್ಞಾನಗಳ ಶಕ್ತಿ – ಇಂತಹ ಸಂಕೀರ್ಣ ಭೂ-ರಾಜಕೀಯಗಳು ಈಗ ಚಾಲ್ತಿಯಲ್ಲಿವೆ.
ಈ ಬಿರುಗಾಳಿಗೆ ಪಕ್ಕಾದ ಸಮುದ್ರದಲ್ಲಿ ತನ್ನ ಗಮನವನ್ನು ಬಿಟ್ಟುಕೊಡದೆ ಮುಂಚೂಣಿ ಶಕ್ತಿಯಾಗಲು ಭಾರತವು ಪಯಣಿಸುತ್ತಿದೆ. ವಿಶ್ವಮಿತ್ರ ದೇಶವಾಗಿ ಅದು ಗ್ಲೋಬಲ್ ಸೌತ್‌ನ ಹಿತವನ್ನು ಬಯಸುತ್ತದೆ; ಜಾಗತಿಕ ಒಳಿತಿಗಾಗಿ ಕೊಡುಗೆ ನೀಡಬಯಸುತ್ತದೆ. ಜಾಗತಿಕ ಲೆಕ್ಕಾಚಾರಗಳಲ್ಲಿ ಭಾರತವು ಹೆಚ್ಚು ಪ್ರಮುಖವಾಗಿದೆ; ಮುಂದಿರುವ ಹೊಣೆಗಾರಿಕೆಗಳನ್ನು ಮತ್ತು ಅವಕಾಶಗಳನ್ನು ಎದುರುಗೊಳ್ಳಲು ಸಿದ್ಧವಾಗಿದೆ. ಅದು ಅಮೃತಕಾಲವನ್ನು ಪ್ರವೇಶಿಸಿ, ತನ್ನ ಸಂಪ್ರದಾಯ ಮತ್ತು ಪರಂಪರೆಗಳಿಗೆ ತಕ್ಕಂತೆ ನಡೆದುಕೊಳ್ಳುತ್ತ ಪ್ರಗತಿ ಮತ್ತು ಅಭಿವೃದ್ಧಿಯ ಯುಗವನ್ನು ಪರಿಕಲ್ಪಿಸಿಕೊಂಡಿದೆ.
ವಿಶ್ವಬಂಧು ಭಾರತ – ಈ ಪುಸ್ತಕದಲ್ಲಿ ಭಾರತವು ಮೇಲೇರುತ್ತಿರುವ ಶಕ್ತಿಯಾಗಿ ಎಲ್ಲಕ್ಕಿಂತ ಮುಖ್ಯವಾಗಿ ಸ್ಥಿರತೆಯನ್ನುಹೊಂದುತ್ತ ಗಂಭೀರ ಅನಿಶ್ಚಿತತೆಯ ನಡುವೆಯೇ ಬೆಳೆಯಲು ಯೋಜಿಸಬೇಕಿದೆ ಎಂದು ಎಸ್.ಜೈಶಂಕರ್ ಪ್ರತಿಪಾದಿಸುತ್ತಾರೆ. ಇದು ನಾಗರಿತಾತ್ಮಕ ದೇಶವೊಂದರ ಪುನರುಜ್ಜೀವನವನ್ನೇ ಪ್ರತಿನಿಧಿಸುವುದರಿಂದ ಈ ಪ್ರಕ್ರಿಯೆಯು ವಿಶಿಷ್ಟವೂ ಆಗಿದೆ. ಅದೇ ಹೊತ್ತಿನಲ್ಲಿ, ಜಾಗತೀಕರಣಗೊಂಡ ವಿಶ್ವದಲ್ಲಿ ವಿದೇಶಾಂಗ ನೀತಿಯು ಹೇಗೆ ಎಲ್ಲಾ ನಾಗರಿಕರ ದಿನನಿತ್ಯದ ಬದುಕಿನಲ್ಲಿ ಹೆಚ್ಚುಹೆಚ್ಚು ಮಹತ್ತ್ವದ್ದಾಗುತ್ತಿದೆ ಎಂಬುದನ್ನೂ ಅವರು ವಿವರಿಸುತ್ತಾರೆ. ರಾಮಾಯಣದ ಮಸೂರದ ಮೂಲಕ ತಮ್ಮ ದೃಷ್ಟಿಕೋನಗಳನ್ನು ಮುಂದಿಡುವ ಅವರು ಸಮಕಾಲೀನ ಸನ್ನಿವೇಶಗಳಿಗೆ ವಿನೂತನ ಕಾರ್ಯವಿಧಾನಗಳನ್ನು ಸೂಚಿಸುತ್ತಾರೆ.
ಇಂಡಿಯಾವು ಭಾರತವಾಗಿದೆ ಎಂದು ದಿನಗಳು ಕಳೆದಂತೆಲ್ಲ ಸ್ಪಷ್ಟವಾಗುತ್ತಿರುವ ನಮ್ಮ ಕಾಲದ ವಾಸ್ತವದ ಬಗ್ಗೆ ಅರಿಯಲು ಮತ್ತು ಗಂಭೀರವಾಗಿ ಚಿಂತಿಸಲು ಪ್ರತಿಯೊಬ್ಬ ಭಾರತೀಯರೂ ಈ ಪುಸ್ತಕವನ್ನು ಓದಲೇಬೇಕಾಗಿದೆ.
………………………………..
2019ರಿಂದ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವರಾಗಿರುವ ಎಸ್. ಜೈಶಂಕರ್ ಈಗ ರಾಜ್ಯಸಭೆ ಸದಸ್ಯರಾಗಿ ಗುಜರಾತ್ ರಾಜ್ಯವನ್ನು ಪ್ರತಿನಿಧಿಸುತ್ತಿದ್ದಾರೆ. ಅವರು 2015ರಿಂದ 2018ರವರೆಗೆ ಭಾರತದ ವಿದೇಶಾಂಗ ಕಾರ್ಯದರ್ಶಿಯಾಗಿದ್ದರು. ಇಂಡಿಯನ್ ಫಾರಿನ್ ಸರ್ವಿಸ್‌ನಲ್ಲಿ ನಾಲ್ಕು ದಶಕಗಳ ಕಾಲ ವೃತ್ತಿ ಮಾಡಿದ್ದ ಅವರು ಯುನೈಟೆಡ್ ಸ್ಟೇಟ್ಸ್, ಚೀನಾ ಮತ್ತು ಝೆಕ್ ಗಣರಾಜ್ಯಗಳಲ್ಲಿ ರಾಯಭಾರಿಯಾಗಿ ಮತ್ತು ಸಿಂಗಾಪುರದ ಹೈ ಕಮಿಶನರ್ ಆಗಿ ಸೇವೆ ಸಲ್ಲಿಸಿದ್ದಾರೆ. ಅವರ ಈ ಹಿಂದಿನ ಪುಸ್ತಕ The India Way: Strategies for an Uncertain World – 2020ರಲ್ಲಿ ಪ್ರಕಟವಾಗಿತ್ತು.