ವಿಶ್ವನಾಥನ್ ಆನಂದ್ ಮತ್ತೊಮ್ಮೆ ವಿಶ್ವ ಚದುರಂಗ (ಚೆಸ್) ಚಾಂಪಿಯನ್ ಆಗಿದ್ದಾರೆ. ಭಾರತೀಯರೇ ರೂಪಿಸಿದ ಆಟದಲ್ಲಿ ಭಾರತೀಯ ಆನಂದ್ ಮತ್ತೆ ಗೆದ್ದಿದ್ದಾರೆ, ಅದೂ ಈವರೆಗೆ ಮಹಾನ್ ಆಟಗಾರ ಎಂದೇ ಖ್ಯಾತಿ ಪಡೆದಿದ್ದ ಕ್ರಾಮ್ನಿಕ್ ಎದುರು! ಮ್ಯಾಚ್ ಪ್ಲೇ – ಅಂದರೆ ’ಪಂದ್ಯಾವಳಿಯಲ್ಲಿ ಕ್ರಾಮ್ನಿಕ್‌ನನ್ನು ಆನಂದ್ ಎಂದೂ ಸೋಲಿಸಿಲ್ಲವಲ್ಲ?’ ಎಂಬ ಕಪ್ಪು ಚುಕ್ಕೆಯೊಂದನ್ನು ರಶಿಯಾ ಆಟಗಾರರು, ವಿದೇಶಿ ಕ್ರೀಡಾಳುಗಳು ಎತ್ತಿ ತೋರಿಸುತ್ತಿದ್ದರು. ಈಗ ಈ ಆರೋಪವೂ ಹುರುಳಿಲ್ಲದಂತಾಗಿದೆ.
ಕ್ರಿಕೆಟ್ಟಿನಲ್ಲಿ ಗೆದ್ದಾಗ ಸಾವಿರಾರು ಪಟಾಕಿ ಹಚ್ಚುವ ನಾವು ಚದುರಂಗದಲ್ಲಿ ಹತ್ತಾರು ವರ್ಷಗಳಿಂದ ಗೆಲ್ಲುತ್ತ ಬಂದಿರುವ ಆನಂದ್‌ಗೆ ಜಿಂದಾಬಾದ್ ಹೇಳುವುದನ್ನೇ ಮರೆತುಬಿಡುತ್ತೇವೆ. ಪತ್ರಿಕೆಗಳಲ್ಲಿ ಒಂದಷ್ಟು ವರದಿಗಳು ಬಂದವು, ಟಿವಿ ವಾಹಿನಿಗಳು ಸುದ್ದಿಯನ್ನು ಬಿತ್ತರಿಸಿದವು ಎಂಬುದು ಬಿಟ್ಟರೆ ಅಂಥ ಸಡಗರವೇನೂ ಕಂಡುಬರಲಿಲ್ಲ. ಸಚಿನ್ ಸಿಕ್ಸರ್ ಎತ್ತಿದ್ದು ಕಣ್ಣಿಗೆ ಕಾಣುತ್ತೆ, ಚದುರಂಗದಲ್ಲಿ ಒಂದು ಮಹತ್ವದ ನಡೆ ಮಾಡಿದ್ದು ಚದುರಂಗ ಗೊತ್ತಿರುವವರ ಮನಸ್ಸಿಗೆ ಖುಷಿ ನೀಡುತ್ತದೆಯೇ ವಿನಃ ಒಂದು ಭರ್ಜರಿ ದೃಶ್ಯವಾಗಿ ಮೂಡುವುದಿಲ್ಲ. ಆದ್ದರಿಂದಲೇ ಚದುರಂಗಕ್ಕೆ ಟಿವಿ ಮಾಧ್ಯಮಗಳು ಹೆಚ್ಚಿನ ಮಹತ್ವ ನೀಡುವುದಿಲ್ಲ ಎಂಬುದನ್ನು ಒಪ್ಪಿಕೊಳ್ಳೋಣ. ಆದರೆ ಗೆದ್ದ ಮೇಲಾದರೂ ಸಂಭ್ರಮ ಆಚರಿಸೋದಕ್ಕೆ ನಮಗೆ ಯಾಕೆ ಆಗುವುದಿಲ್ಲ? ಬಿಡಿ, ಮಾಧ್ಯಮಗಳನ್ನು ಬೈಯುವುದರಲ್ಲಿ ಕಾಲ ಕಳೆಯುವುದಕ್ಕಿಂತ ಒಳ್ಳೆ ಕೆಲಸಗಳು ಬೇಕಾದಷ್ಟಿವೆ.
ಅದರಲ್ಲೂ, ಆನಂದ್ ಗೆಲುವು ನನ್ನೊಳಗೆ ಬಾಲ್ಯದ ಚದುರಂಗ ದಿನಗಳನ್ನು ನೆನಪಿಸಿದೆ. ನನ್ನ ಹುಟ್ಟೂರಾದ ಸೊರಬ ಜಿಲ್ಲೆಯ ಹೊಡಬಟ್ಟೆಯಲ್ಲಿ ನನ್ನ ಬಾಲ್ಯ ಕಳೆದಿದ್ದೇ ಚದುರಂಗ ಆಡುತ್ತ, ನೋಡುತ್ತ ಮತ್ತು ಕಲಿಯುತ್ತ; ದಿನವೂ ಒಂದಲ್ಲ ಒಂದು ಮನೆಯಲ್ಲಿ ಚದುರಂಗದ ಹಾಸು ಬಿಚ್ಚಿಕೊಂಡು ಆಡುವವರ ಗತ್ತೇನು, ಆ ಹೆಜ್ಜೆ ಹಾಗಲ್ಲ, ಹೀಗಿರಬೇಕಿತ್ತು ಎಂದು ತಜ್ಞ ಕಾಮೆಂಟ್ ಮಾಡುವವರ ವರಸೆಯೇನು, ಕಟ್ಟೆಯ ಮೇಲೆ ಕುಳಿತು ಪರ – ವಿರೋಧದ ಸಲಹೆ ನೀಡುವವರ ಗಮ್ಮತ್ತೇನು…. ಇದ್ದ ಇಪ್ಪತ್ತು ಚಿಲ್ಲರೆ ಮನೆಗಳಲ್ಲೂ ಚದುರಂಗದ ಮಣೆ, ಕಾಯಿಗಳು ಇದ್ದೇ ಇದ್ದವು. ಮೊದಲ ಮನೆ ಶೇಷಗಿರಿಯಣ್ಣನ ಕಟ್ಟೆಯಿಂದ ಹಿಡಿದು ಕಡೆಮನೆ ಕಿಟ್ಟಣ್ಣನ ಮನೆಯವರೆಗೆ ಎಲ್ಲೆಲ್ಲೂ ಚದುರಂಗಕ್ಕೇ ಮೊದಲ ಮಣೆ!
ಶೇಷಗಿರಿಯಣ್ಣನ ಮಕ್ಕಳು ದಯಾನಂದ ಮತ್ತು ಬಾಲಚಂದ್ರ ಚದುರಂಗ ಪಂದ್ಯಾವಳಿಗಳಲ್ಲಿ ಭಾಗವಹಿಸಿ ರಾಷ್ಟ್ರೀಯ ಮಟ್ಟದಲ್ಲಿ ರೇಟಿಂಗ್ ಪಡೆದಿದ್ದರು. ದಯಾನಂದ, ಕಡೆಮನೆ ಕಿಟ್ಟಣ್ಣನ ಮಗ ಪ್ರಸನ್ನ ಮತ್ತು ಈಗ ಎಲ್ಲೋ ಮರೆಯಾಗಿರುವ ನಾಗರಾಜ – ಮೂವರೂ ಮೈಸೂರು ವಿಶ್ವವಿದ್ಯಾಲಯದ ನಾಲ್ಕು ಜನರ ಚದುರಂಗ ತಂಡದ ಮೂವರಾಗಿದ್ದರು ಎಂದರೆ ಹೊಡಬಟ್ಟೆಯ ಚದುರಂಗ ಪ್ರೀತಿಯನ್ನು ನೀವು ಊಹಿಸಬಹುದು. ಈ ಮಧ್ಯೆ ತೋಟದ ಕೆಲಸ ಮಾಡುತ್ತಲೇ ನಡೆಯ ಸಲಹೆ ಕೊಡುತ್ತ ಹೊರಡುತ್ತಿದ್ದವರ ಸಂಖ್ಯೆಯೂ ಕಡಿಮೆ ಇರಲಿಲ್ಲ. ಹೊಡಬಟ್ಟೆ, ದೊಡ್ಡೇರಿ, ನಿಸರಾಣಿ, ಹೊರಬೈಲು, ಮಳಲಗದ್ದೆ – ಎಲ್ಲೆಲ್ಲೂ ಚದುರಂಗದ ಕಟ್ಟಾಳುಗಳ ದೊಡ್ಡ ಪಡೆಯೇ ಇತ್ತು ಎಂಬುದು ನನ್ನ ನೆನಪು.
ಅದಿರಲಿ, ನಡಹಳ್ಳಿ ಗಾಡಪ್ಪಜ್ಜನ ಮಗ ಅನಂತಪ್ಪ (ನಮಗೆಲ್ಲ ಅನಂತಜ್ಜ) ತನ್ನ ಜೋಳಿಗೆಯಲ್ಲಿ ಸದಾ ಚದುರಂಗದ ಮಣೆ – ಕಾಯಿಗಳನ್ನು ತುಂಬಿಸಿಕೊಂಡು ಓಡಾಡುತ್ತಿದ್ದರು. ಮದುವೆ – ಮುಂಜಿಗಳಲ್ಲಿ ಅನಂತಪ್ಪ ಬಂದ ಎಂದರೆ ಜಮಖಾನದಲ್ಲಿ ಚದುರಂಗದ ಹಾಸು ಬೀಳಬೇಕು; ಪಡ್ಡೆ ಹುಡುಗರು ಈ ಅಜ್ಜನನ್ನು ಒಮ್ಮೆ ಸೋಲಿಸುವಾ” ಎಂದು ಒಂದೇ ತಂಡವಾಗಿ ಕೂತುಬಿಡಬೇಕು. ಬಂದ ಅತಿಥಿಗಳೆಲ್ಲ ಎರಡು ಪಾಲಾಗಿ ಅನಂತಪ್ಪನ ನಡೆ ನೋಡುವುದಕ್ಕೆ ಮುಗಿಬೀಳುತ್ತಿದ್ದರು.
ಚದುರಂಗದ ಕಲಿಕೆಯಲ್ಲಿ ಎರಡು ಬಗೆಯಿದೆ: ಒಂದು – ಪುಸ್ತಕದ ಆಟ ಮತ್ತು ಒರಿಜಿನಲ್ ಆಟ. ಪುಸ್ತಕಗಳನ್ನು ಓದಿ ಚದುರಂಗದಾಟವನ್ನು ಮನನ ಮಾಡಿಕೊಳ್ಳುವವರೆಲ್ಲ ಒಂದು ರೀತಿ ಅಕಾಡೆಮಿಕ್ (ಔಪಚಾರಿಕ ಎನ್ನಿ) ಆಟಗಾರರು. ನೋಡಿ ಕಲಿತು ಆಡುವವರು ಒರಿಜಿನಲ್ ಆಟಗಾರರು. ಅನಂತಜ್ಜ ಇಂಥ ಒರಿಜಿನಲ್ ಆಟಗಾರ. ಯಾವ ನಡೆಯನ್ನು ಯಾವ ಉದ್ದೇಶದಿಂದ ಇಟ್ಟರು, ಮುಂದೆ ಈ ನಡೆ ಹೇಗೆ ಅವರಿಗೆ ಅನುಕೂಲವಾಗುತ್ತದೆ ಎಂಬುದನ್ನು ತಿಳಿಯುವುದೇ ಕಷ್ಟವಾಗಿತ್ತು. ಚೆದುರಿಹೋದಂತೆ ಕಾಣುತ್ತಿದ್ದ ಅವರ ನಡೆಗಳನ್ನು ಅರ್ಥೈಸಿಕೊಳ್ಳಲಾಗದ ನಮ್ಮ ಹುಡುಗರು ತಮ್ಮೆಲ್ಲ ಒರಿಜಿನಲ್ ಮತ್ತು ಪುಸ್ತಕದ ತಿಳಿವಳಿಕೆಯನ್ನೆಲ್ಲ ಪಣ ಇಟ್ಟು ನಡೆ ಇಡುತ್ತಿದ್ದರು. ಇನ್ನೇನು ಹುಡುಗರ ಕೈ ಮೇಲಾಯಿತು ಎನ್ನುವುದರೊಳಗೆ ಒಂದೇ ಒಂದು ಮ್ಯಾಜಿಕ್ ನಡೆಯ ಮೂಲಕ ಅನಂತಜ್ಜ ಎದುರಾಳಿ ಗುಂಪನ್ನು ಅನಾಮತ್ತಾಗಿ ಚಿತ್ ಮಾಡುತ್ತಿದ್ದರು! ಹಲವು ಸಲ ನಾನು ಅನಂತಜ್ಜನ ಆಟವನ್ನು ಖುದ್ದು ನೋಡಿದ್ದೆ; ಹೀಗೇ ಹೊಡಬಟ್ಟೆಯ ಮನೆಗಳ ಹೊರಗಣ ಕಟ್ಟೆಗಳಲ್ಲೇ ಚದುರಂಗ ಕಲಿತೆ ಎನ್ನುವುದೆಲ್ಲ ಈಗ ನೆನಪು.
ನಡಹಳ್ಳಿ ಅನಂತಜ್ಜನ ಬಗ್ಗೆ ಇಷ್ಟೇ ಬರೆದರೆ ನೀವು ಅವನನ್ನು ಒಬ್ಬ ಚದುರಂಗದ ಎಲೆಮರೆಯ ಕಾಯಿ ಎಂದು ತಿಳಿಯಬಹುದು. ಆದರೆ ಅನಂತಜ್ಜ ’ಇಷ್ಟೇ’ ಆಗಿರಲಿಲ್ಲ. ಕನ್ನಡ ಸಾಹಿತ್ಯವನ್ನು ಆಮೂಲಾಗ್ರವಾಗಿ ಅರಗಿಸಿಕೊಂಡ ವ್ಯಕ್ತಿತ್ವವಾಗಿದ್ದರು. ಅವರ ಜೋಳಿಗೆಯಲ್ಲಿ ಕನ್ನಡದ ಪ್ರಮುಖ ಪುಸ್ತಕಗಳು ಇರುತ್ತಿದ್ದವು. ಸಾಹಿತ್ಯಾಸಕ್ತರಿಗೆ ಅನಂತಜ್ಜ ಪುಸ್ತಕ ಕೊಡುತ್ತಿದ್ದ; ವಿಮರ್ಶೆ ಮಾಡುತ್ತಿದ್ದ. (ಅನಂತಜ್ಜನ ನೆರಳಿನಲ್ಲೇ ಕನ್ನಡ ಸಾಹಿತ್ಯವನ್ನು ಅರಗಿಸಿಕೊಂಡು ದಿನವಿಡೀ ಅದರ ಗುಂಗಿನಲ್ಲೇ ಇರುತ್ತಿದ್ದ ಶೇಷಗಿರಿಯಣ್ಣನ ಮಗ – ದಯಾನಂದನ ಅಣ್ಣ – ಆನಂದನ ಸಾವು ಒಂದು ಕರಾಳ ನೆನಪಾಗಿದೆ) ಒಂದು ರೀತಿಯಲ್ಲಿ ಅನಂತಜ್ಜ ನಡೆದಾಡುವ ಭಾರತೀಯ ಪರಂಪರೆಯ ರಾಯಭಾರಿಯಾಗಿದ್ದ. ಅನಂತಜ್ಜನ ಕಾಶಿಯಾತ್ರೆಯೂ ಪ್ರಸಿದ್ಧವೇ. ಅವರು ಎಷ್ಟೋ ಸಲ ಕಾಶಿಗೆ ಹೋಗಿ ಬಂದಿದ್ದಾರೆ ಎಂದು ನನ್ನ ಹಿರಿಯರು ಹೇಳುತ್ತಿದ್ದರು. ಅನಂತಜ್ಜ ಯಕ್ಷಗಾನದಲ್ಲಿ ಬಣ್ಣದ ವೇಷ ಹಾಕುವ ಅಪರೂಪದ ಕಲಾವಿದರೂ ಆಗಿದ್ದರು.
ಈಗ ಇಂಟರ್‌ನೆಟ್‌ನಲ್ಲೇ ಕನ್ನಡದ ಹಲವು ಪುಸ್ತಕಗಳು ಸಿಗುತ್ತವೆ; ಕಾಶಿಯಾತ್ರೆಯಂತೂ ಅತಿಸುಲಭದ ಕಾಯಕ. ಚದುರಂಗ? ನೀವು ಇಂಟರ್‌ನೆಟ್‌ನಲ್ಲಿ ಕೂತು ವಿಶ್ವದ ಯಾವುದೋ ಮೂಲೆಯಲ್ಲಿರುವ ಘಟ್ಟಿ ಆಟಗಾರನ ಜೊತೆ ಚದುರಂಗದ ಮಣೆ ಹಾಸಿ ಕೂರಬಹುದು. ಅಥವಾ ಚದುರಂಗದ ಆಟ ಕಲಿಸುವ, ವಿವಿಧ ಸ್ತರಗಳಲ್ಲಿ ಆಡುವ ತಂತ್ರಾಂಶವನ್ನು ನಿಮ್ಮ ಗಣಕದಲ್ಲಿ ಸ್ಥಾಪಿಸಿಕೊಂಡು ಯಾರ ನೆರವೂ ಇಲ್ಲದೆ ಸಾಕಷ್ಟು ಕಲಿಕೆ ಮಾಡಬಹುದು. ಚದುರಂಗದ ಕ್ಲಬ್ಬುಗಳಿವೆ; ವಾರಾಂತ್ಯದಲ್ಲೋ, ಸಂಜೆಯ ಹೊತ್ತೋ ಅಲ್ಲಿಗೆ ಹೋಗಿ ಆಡಬಹುದು. ಭಾರತದಲ್ಲಿ ವಿಶ್ವನಾಥನ್ ಆನಂದ್ ಸ್ಫೂರ್ತಿಯಿಂದ ಹತ್ತಾರು ಸ್ಪರ್ಧೆಗಳು ಹುಟ್ಟಿಕೊಂಡಿವೆ. ಜಿಲ್ಲೆ, ರಾಜ್ಯ ಮಟ್ಟದಿಂದ ಹಿಡಿದು ಅಂತಾರಾಷ್ಟ್ರೀಯ ಮಟ್ಟದವರೆಗೆ ಸ್ಪರ್ಧಿಸಬಹುದು. ವಯಸ್ಸಿನ ಹಂಗಿಲ್ಲದ ಓಪನ್ ಚೆಸ್ ಟೂರ್ನಮೆಂಟ್‌ಗಳೂ ಸಾಕಷ್ಟಿವೆ.
ಪ್ರಶ್ನೆ ಇಷ್ಟೆ: ಅನುಕೂಲ ಇದೆ; ಅವಕಾಶ ಇದೆ. ಆದರೆ ಬಳಸುವ ಮನಸ್ಸು ಎಲ್ಲಿದೆ? ಅನಂತಜ್ಜನ ಕಲಿಕೆಯ ಹುರುಪು, ಅದಮ್ಯ ಜೀವನೋತ್ಸಾಹ, ಆ ಹಳ್ಳಿಗಳಲ್ಲಿ ಇದ್ದ ಸಮೂಹ ಸಡಗರ ಎಲ್ಲಿದೆ? ಹೋಗಲಿ, ಆರಾಮಾಗಿ ಕೂತುಕೊಳ್ಳುವ ಕಟ್ಟೆಗಳು ಎಲ್ಲಿವೆ?
2 Comments
Pingback: ನನ್ನ ಒಂದ್ನೇ ಕ್ಲಾಸ್ ಶಾಲೆ : ಹೊಡಬಟ್ಟೆಯ ಮಧುರ ನೆನಪು | Mitra Maadhyama
Pingback: ನನ್ನ ಒಂದ್ನೇ ಕ್ಲಾಸ್ ಶಾಲೆ : ಹೊಡಬಟ್ಟೆಯ ಮಧುರ ನೆನಪು « ಬೇಳೂರು ಸುದರ್ಶನ