ಎಲ್ಲಿರಬಹುದು ಈ ಆಶಾ ಎಟ್ ಯಾಹೂ ಡಾಟ್‌ಕಾಮ್
ಎಂಬ ಹುಡುಗಿ/ಹುಡುಗ/ಮುದುಕ/ಮುದುಕಿ/ಪೋರ?
ಯಾವ ಕಂಪ್ಯೂಟರಿನಲ್ಲಿ ಟಕಟಕಾಯಿಸುತ್ತಿರಬಹುದು ಯಾವ
ಪ್ರಾಸೆಸರಿನಲ್ಲಿ ಎಷ್ಟು ರಭಸವಾಗಿ ಧುಮ್ಮಿಕ್ಕಬಹುದು ಊಹಿಸಿದ್ದೀರ?
ಎಲ್ಲಿಂದಳೋ ಬರೆಯುತ್ತಾಳೆ ಭ್ರಮಾಧೀನ ವಿಶ್ವದೊಳಗೆ
ಬೆಳಕಿನಂತೇ ತೂರಿ ನನ್ನ ಮೇಜಿನ ಮೇಲೆ ಬಿದ್ದಿದೆ ಅವಳ ಮೇಲು.
ಏನೋ? ನೀನು ಯಾರೋ? ಬೇಕಾ ನನ್ನ ಸ್ನೇಹ?
ಬರೀತೀಯಾ ಕಾಗದ? ಕೇಳಿದ್ದಾಳೆ ಸ್ಫುಟವಾಗಿ
ಎರಡೇ ವಾಕ್ಯಗಳಲ್ಲಿ ಆಶಾಭಾವನೆಯಿಂದ ಇದ್ದೀತೆ
ಒಳಗೊಳಗೆ ಹತಾಶೆಯ ದನಿ ಹುಡುಕಿದರೆ ಸಿಕ್ಕೀತೇನೋ
ಅಪ್ಪ-ಅಮ್ಮ ಬಿಟ್ಟುಹೋಗಿರುವ ಸೌಕರ್ಯಗಳು
ಚೆಲ್ಲಾಪಿಲ್ಲಿಯಾಗಿ ಫ್ರಿಜ್ಜಿನಲ್ಲಿ. ಆಶಾ ನನ್ನ ಆಶಾ
ಎಂದು ಕರೆಯಲೆ? ನಿನ್ನ ಹುಡುಕಲೇಬೇಕು
ಮಾತುಕತೆ ಕೋಣೆಯಲ್ಲಾದರೂ ಮುತ್ತಿಡುವ
ಗೆಳತಿಯರನ್ನು ಅಂದುಕೊಂಡೇ ತಾಸುಗಳ
ಕಳೆಯುತ್ತ ಬಂದ ಹೊತ್ತೇ ಆಶಾ ಬರೆದ
ಪತ್ರ.ಕೊನೆಗೂ ಸಿಕ್ಕಿದಳಲ್ಲ ಅಂದರೂನೂ
ಒಳಗೆ ಮಲಗಿದ್ದಾಳೆ ಇವಳು ವಾಸ್ತವದಲ್ಲಿ ಮನೆಗೆಲಸ
ಮುಗಿಸಿ ಹೈರಾಣಾಗಿ ಕೇಬಲ್ ಸಿನಿಮಾ ಕೂಡ ಅರ್ಥವಾಗದೆ.
ನಾಳೆಗಳ ನಡುವೆ ಸಿಗಬಹುದು ಕೊಂಚ ಬ್ರೇಕ್ ಎಂದೆನಿಸಿ
ಮಗಳೂ ಒರಗಿದ್ದಾಳೆ ಸೋಫಾದಲ್ಲಿ ಹೋಮ್‌ವರ್ಕ್ ಮುಗಿಸದೆ.
ಬದುಕಿನ ತಿರುವುಗಳಲ್ಲಿ ಇಣುಕೋ ಹಾಗೆ ಬಾಗಿ ಕೈ ಚಾಚಿ
ಮಾನಿಟರಿನ ಪರದೆಯಾಚೆಗೂ ಆವರಿಸಿದ್ದಾಳೆ ಎಂಬ
ವಾಸ್ತವಭ್ರಮೆಯಲ್ಲಿ ನಾನು ತೇಲಿದ್ದೇನೆ ಇಲ್ಲಿ
ಇದೇ ನಿಜವೆಂದು ಮಳೆ ಬಿದ್ದ ನೆಲದ ವಾಸನೆ ಕಿಟಕಿ ತೂರುತ್ತ
ಆಶಾ ನನ್ನ ಆಶಾ ಎಂಬ ಪರದೆಹುಡುಗಿಯ ತುಟಿ
ಮೇಲೆ ಧೂಳು ಒರೆಸಬಹುದು ಬಿಡಿ ಒಳಗೆ ಮುದುಡಿರೋ
ಯಾವುದೋ ಯಾತನೆಯ ಪಕಳೆಗಳ ಅರಳಿಸಬಹುದೆ
ಹೇಳಿ ಭ್ರಮೆಯಲ್ಲಿ ಬದುಕಿಯೂ ಅಳಬಹುದೆ ಇವಳು?
ಎಷ್ಟೆಂದರೂ ಆಶಾ ನೀನು ದೇಹವಿಲ್ಲದ ಹುಡುಗಿ
ನಾನೋ ಇಲ್ಲಿ ಭೌತಿಕ ದೇಹ ಹೊತ್ತಿರುವೆ ಗೊತ್ತೇನೆ
ಇರಬಹುದು ನಾನೂ ನಿನಗೆ ಪ್ರೀತಿಯಿಲ್ಲದ ಆತ್ಮ
ಆಗಿರಬಹುದು ನೀನೇ ಮೋಹಕ ಗುಣಗಳ ರಾಣಿ
ಬದುಕೇ ನೀರ ಮೇಲಿನ ಗುಳ್ಳೆ
ಎಂದಮೇಲೆ ಇವೆಲ್ಲ ಸರಿಯೇ
ಇರಬಹುದು ಬಿಡು ಕೊನೆಗೆ
ಉಳಿಯೋದಿಷ್ಟೆ
ಮಾತು ಕತೆ ವಿದಾಯದ ಹೊತ್ತು
ಆಶಾ ನೀನು ಯಾರೆ?