ದ್ವೇಷದ ಹಾದಿ ಗೊತ್ತ ಬಾ ಹೇಳಿಕೊಡುತ್ತೇನೆ
ಹೇಗೆ ಸಿಗರೇಟು ಸುಡುತ್ತ ಕರಗಿಸುತ್ತೆ ನೋವನ್ನು
ಫುಟ್‌ಪಾತ್ ಕಳಕೊಂಡಿದೆ ಸೂಕ್ಷ್ಮತೆಯನ್ನ
ಲಕ್ಷ ಲಕ್ಷ ಹೆಜ್ಜೆಗಳಿಂದ ಮೆಟ್ಟಿಸಿಕೊಂಡು
ಗೊತ್ತೇನೇ ಸಮುದ್ರೋಪಾದಿಯಲ್ಲಿ
ಹರಡಿದ ಸುಖದ ಕಣಗಳೆಲ್ಲ
ದ್ವೇಷದ ಹೊಗೆಯೊಳಗಿಂದ ಮೂಡಿವೆ
ಹೇಳಿಕೊಡುತ್ತೇನೆ ಬಾ ಇಲ್ಲಿ ಈ
ಎದೆಕಟ್ಟೆ ಮೇಲೆ ಕೂತುಕೋ
ಕೇಳು.
ಸಹಸ್ರಾರು ಕ್ಷಣಗಳ ಕೆಳಗೆ ನಾನು
ಈ ಮರದೊಳಗೆ ಬೇರಾಗಿದ್ದೆ
ಒಳಗೊಳಗೇ ಬೀಜ ಬಿಡುವ ಹಣ್ಣಾಗಿದ್ದೆ
ಪ್ರೀತಿಯ ಬಲೆ ಹೊಸೆವ
ಕರುಣೆಯ ಹಣೆ ಮುತ್ತಿಡುವ
ಅಕ್ಕರೆಯ ಹಾಸಿ ಹೊದೆಸುವ
ಹಸಿರೆಲೆಯಾಗಿದ್ದೆ
ಕೇಳು.
ಈಗಷ್ಟೆ ಬಿದ್ದ ಮಳೆಯಲ್ಲಿ
ಯಾವ ದುಷ್ಟ ನಕ್ಷತ್ರದ ಕಣ್ಣಿತ್ತೋ
ಈಗಷ್ಟೇ ಬೀಸಿದ ಗಾಳಿಯಲ್ಲಿ
ಎಂಥ ಕೇಡುಮಣ್ಣಿತ್ತೋ
ಈಗಷ್ಟೇ ಬಿದ್ದ ಆಲಿಕಲ್ಲಿನಲ್ಲಿ
ಎಂಥ ಕಟುವಿಷವಿತ್ತೋ
ಯಾವ ಹೊತ್ತೋ
ಗೊತ್ತಿಲ್ಲ ಕಣೆ
ಕೇಳು.
ಭುಜ ಹಚ್ಚಿ ಕೂತವಳೆ
ಬೆರಳು ತಟ್ಟಿದ ಕೂಸೆ
ನನ್ನ ದ್ವೇಷದ ಹಾಡು
ಕೇಳು.
ಆವತ್ತಿನಿಂದ ನಾನು
ದ್ವೇಷದಿಂದ ಪ್ರೀತಿಸುತ್ತೇನೆ.
ಪ್ರೀತಿಯಿಂದ ದ್ವೇಷಿಸುತ್ತೇನೆ.
ಅಪ್ಪಟ ದ್ವೇಷಿಯೇ
ನಿಜ ಪ್ರೇಮಿ.