ನನಗಾಗ 23 ವರ್ಷ ವಯಸ್ಸು. ಕಾಟನ್‌ಪೇಟೆಯ ಎಬಿವಿಪಿ ಆಫೀಸಿನಲ್ಲಿ ವಾಸ. ವಿದ್ಯಾರ್ಥಿ ಪಥ ಮ್ಯಾಗಜಿನ್ ನೋಡಿಕೊಳ್ಳುತ್ತಲೇ ರಾಷ್ಟ್ರೋತ್ಥಾನ ಪರಿಷತ್ತಿನ ಸಂಶೋಧನಾ ವೇದಿಯಲ್ಲಿ ಕೆಲಸ. ಆಗ ನಾನು ಮತ್ತು ಉತ್ಥಾನದ (ಈಗಲೂ ಅಲ್ಲಿ ಇದ್ದಾರೆ) ಶ್ರೀ ಕೇಶವ ಭಟ್ ಕಾಕುಂಜೆ ಐಡಿಯಾ ಮಾಡಿ ಶುರು ಮಾಡಿದ್ದು ಪೆನ್‌ಫ್ರೆಂಡ್. ಯುವ ಲೇಖಕರ ಬಳಗ. ವಾರಕ್ಕೊಮ್ಮೆ ಸಭೆ. ಎಲ್ಲ ಲೇಖಕರ ಲೇಖನಗಳನ್ನೂ ಚೆನ್ನಾಗಿ ಮಾಡಲು ಎಲ್ಲರಿಂದ ಸಲಹೆ ಸ್ವೀಕಾರ. ಅವುಗಳನ್ನು ತಿದ್ದಿ ಮ್ಯಾಗಜಿನ್‌ಗಳಿಗೆ ಕಳಿಸುವ, ಪ್ರಕಟಣೆಯಾಗುವಂತೆ ನೋಡಿಕೊಳ್ಳುವ ಹೊಣೆ ನನ್ನದು.
ಇವುಗಳ ಜೊತೆಗೇ ದಿಲ್ಲಿಯಿಂದ ಕೆ ಎ ಬದರೀನಾಥ್ (ಪಿ ವಿ ನರಸಿಂಹರಾವ್ ಕಾಲದ ಯೂರಿಯಾ ಹಗರಣ ತನಿಖೆ ಮಾಡಿದ ಪತ್ರಕರ್ತ; ಅವರು ಬೆಂಗಳೂರಿನ ಭಾರತೀಯ ವಿದ್ಯಾಭವನದಲ್ಲಿ ಪತ್ರಿಕೋದ್ಯಮದ ಸಂಜೆ ಕೋರ್ಸ್ ಮಾಡಿದ್ದು, ಆಗಲೇ ನನಗೆ ಪರಿಚಯ) ಟೈಪ್ ಮಾಡಿಸಿ ಕಳಿಸುತ್ತಿದ್ದ ದಿಲ್ಲಿ ವಾರ್ತಾಪತ್ರವನ್ನು ಕನ್ನಡಕ್ಕೆ ಅನುವಾದಿಸಿ ಜಿಲ್ಲಾ ಪತ್ರಿಕೆಗಳಿಗೆ ಕಳಿಸುತ್ತಿದ್ದೆ. ಆಮೇಲೆ ಹಲವು ವಾರ್ತಾಪತ್ರಗಳನ್ನು ವಾರಕ್ಕೊಮ್ಮೆ ಕಳಿಸುತ್ತಿದ್ದೆ. ತಿಂಗಳಿಗೆ ನೂರು ರೂ. ಚಂದಾ. ಕೊಟ್ಟರೆ ಸರಿ. ಇಲ್ಲಾಂದ್ರೆ ಇಲ್ಲ.
ಆಗಲೇ ನನಗೆ ಕೋಲಾರವಾಣಿಯ ನರಸಿಂಹಮೂರ್ತಿ (ಈಗಿನ ಸಂಪಾದಕ ಮುರಳಿಯ ತಂದೆ), ಕೋಲಾರ ಪತ್ರಿಕೆಯ ಪ್ರಹ್ಲಾದರಾವ್, ಮಂಡ್ಯದ ಪ್ರಸನ್ನಕುಮಾರ್, ಶ್ರೀಪಾದರಾವ್, ರಾಮನಗರದ ಸು ತ ರಾಮೇಗೌಡ, ಚಿಕ್ಕಮಗಳೂರಿನ ಗಿರಿಜಾಶಂಕರ, ಚೂಡನಾಥ ಅಯ್ಯರ್, – ಹೀಗೆ ರಾಜ್ಯದ ಹಲವು ಪತ್ರಿಕೆಗಳ ಸಂಪಾದಕರು ಪರಿಚಯವಾಗಿದ್ದು. ಕೆಲವರು ದುಡ್ಡು ಕೊಡದಿದ್ದರೂ ಊಟ ಹಾಕಿಸಿಯೋ, ಮಸಾಲೆ ದೋಸೆ ತಿನ್ನಿಸಿಯೋ ಕಳಿಸುತ್ತಿದ್ದರು! ಕಸ್ತೂರಿಯ ಗೋಪಾಲ ವಾಜಪೇಯಿ, ಸಂಕೇತದ ಎಂ ಬಿ ಸಿಂಗ್ ಮತ್ತು ಐ ಕೆ ಜಾಗೀರ್‌ದಾರ್, – ಹೀಗೆ ಹಲವರು ನಮ್ಮ ಪ್ರಯತ್ನಕ್ಕೆ ಬೆಂಬಲ ನೀಡಿದರು. ನಾನು ಶಿರಸಿಗೆ ಹೋದಮೇಲೆ ಪೆನ್‌ಫ್ರೆಂಡ್ ನಿಂತಿತು.
ಇವತ್ತು ಪೆನ್‌ಫ್ರೆಂಡ್ ಸದಸ್ಯ ಶ್ರೀ ಬಿ ಆರ್ ಪ್ರಸಾದ್ (ಬೆಂಗಳೂರಿನ ಅತಿ ಹಳೆಯ ಇಂಗ್ಲಿಶ್ ಪತ್ರಕರ್ತ, ಅದ್ಭುತ ಆಪ್ತ ಸಲಹೆಗಾರರು ಮತ್ತು ಆಪ್ತ ಸಲಹೆ ತರಬೇತುಗಾರರು, ಯೋಗಪಟು) ಈ ಪತ್ರವನ್ನು ಕಳಿಸಿದಾಗ ಇವೆಲ್ಲ ನೆನಪಾಗಿ ಕೊರೋನಾಕಾಲದ ಫ್ಲಾಶ್‌ಬ್ಯಾಕ್ ಎಂಬಂತೆ ಗೀಚಿದ್ದೇನೆ. ಬಹುಶಃ ಅವರೂ ಲಾಕ್‌ಡೌನ್ ಸಮಯದಲ್ಲಿ ಕಡತಗಳನ್ನು ಹುಡುಕುತ್ತಿದ್ದಾಗ ಸಿಕ್ಕಿರಬೇಕು!
ಪ್ರಸಾದ್ ಅವರಲ್ಲದೆ ಡಾ. ಮನಸಾ ನಾಗಭೂಷಣಂ, ನಯನಾ, ಶಾಂತಾರಾಂ, ಹೀಗೆ ಹಲವರ ಮೊದಲ ಲೇಖನಗಳನ್ನು ಪೆನ್‌ಫ್ರೆಂಡ್ ಮೂಲಕವೇ ಪ್ರಕಟಿಸಲಾಯಿತು ಎಂಬ ಜಂಬವೂ ನನ್ನದು!
ಒಟ್ಟು 50 ಲೇಖನಗಳು, 40ಕ್ಕೂ ಹೆಚ್ಚು ವಾರ್ತಾಪತ್ರಗಳನ್ನು ರೂಪಿಸಿದ ಖುಷಿ ನನ್ನದು.
ಪತ್ರ ನೋಡಿ ನಗು ಬರುತ್ತಿದೆ. ಇವೆಲ್ಲ ಈಗಲೂ ಪತ್ರಿಕಾ ಕಾಯಕದ ಆಶಯಗಳಾಗಿ ಇವೆಯೆ ಎಂಬ ಪ್ರಶ್ನೆ ಕಾಡುತ್ತದೆ.
ಕೊನೆಹನಿ : ವಾಸ್ತವದಲ್ಲಿ ಇನ್ನೊಂದು ಸಿಂಡಿಕೇಟ್ ಮೂಲಕ ಲೇಖನ ಬರೆಯಲು ಹೋಗಿ ನನ್ನ ಮೊದಲ ಲೇಖನವು ಕಳುವಾಗಿ ಇನ್ನೊಬ್ಬರ ಹೆಸರಿನಲ್ಲಿ ಪ್ರಖ್ಯಾತ ವಾರಪತ್ರಿಕೆಯಲ್ಲಿ ಪ್ರಕಟವಾಗಿದ್ದೂ ಇದೇ ಕಾಲಘಟ್ಟದಲ್ಲಿ!!
1 Comment
ಅ೦ತೂ ನಿಮ್ಮ ಈ ಜಾಲತಾಣದ ಪದಾರ್ಪಣೆ ನಿಮ್ಮ ಮನದಲ್ಲಿದ್ದುದನ್ನು ಕಾರ್ಯತಃ ಮಾಡಿರುವಿರಿ. ಧನ್ಯವಾದಗಳು.
ನಿಮ್ಮ ಹೆಸರೇ ಹೇಳುವ೦ತೆ ಸು-ದರ್ಶನ ವಾಗಿ ಕಾಣುತ್ತಿದೆ ಈ ಜಾಲತಾಣ ಇನ್ನು ಮು೦ದೆ ಒ೦ದೇಕಡೆ
ನಿಮ್ಮ ಬರಹಗಳನ್ನು ಓದಲು ಸಾಧ್ಯವಾದುದಕ್ಕೆ ಕೃತಜ್ನತೆಗಳು.
ಮುಕು೦ದ ಚಿಪಳೂಣಕರ್.ಕಾರ್ಕಳ.