ಕಲಬುರಗಿಯಲ್ಲಿ ನಡೆದ ೮೫ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮಂಡಿಸಿದ ಪ್ರಬಂಧ
ಕನ್ನಡ ಭಾಷೆ – ಹೊಸ ತಂತ್ರಜ್ಞಾನ : ಈ ಗೋಷ್ಠಿಯಲ್ಲಿ ಕನ್ನಡ ತಂತ್ರಜ್ಞಾನದಲ್ಲಿ ಅಳವಡಿಕೆಯ ಸಮಸ್ಯೆಗಳ ಬಗ್ಗೆ ನಾನು ನನ್ನ ಅರಿವಿಗೆ ಬಂದ ಸಂಗತಿಗಳನ್ನು ನಿಮ್ಮ ಮುಂದೆ ಇಡಲು ಬಯಸಿದ್ದೇನೆ. ಅನ್ವಯಿಕ ತಂತ್ರಾಂಶಗಳ ವಿಷಯದಲ್ಲಿ ಇರುವ ತೊಡಕುಗಳ ಬಗ್ಗೆ ತಮ್ಮೆಲ್ಲರ ಗಮನವನ್ನು ಸೆಳೆಯಲು ಯತ್ನಿಸುತ್ತೇನೆ.
- ಕಾರ್ಯ ಸಮನ್ವಯದ ಕೊರತೆ: ಭಾಷಾ ಸಾಧನ ಮತ್ತು ತಂತ್ರಾಂಶ ಅಭಿವೃದ್ಧಿ ಪ್ರಕ್ರಿಯೆಗಳು ವಿವಿಧ ಸಂಘ ಸಂಸ್ಥೆಗಳ ನಡುವೆ ಹಂಚಿಹೋಗಿವೆ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಸಂಬಂಧಿತ ಇಲಾಖೆಗಳು, ಖಾಸಗಿ ಸಂಸ್ಥೆಗಳು ಮತ್ತು ಮುಕ್ತ ತಂತ್ರಾಂಶ ಸಮುದಾಯದ ನಡುವೆ ಸೂಕ್ತವಾದ ಸಮನ್ವಯವಿಲ್ಲ. ಮಾನದಂಡಗಳಿಗೆ ಅನುಗುಣವಾಗಿ ತಂತ್ರಜ್ಞಾನ ರೂಪಿಸುವುದು, ಯಾವುದೇ ಕಾರ್ಯದ ಪುನರಾವರ್ತನೆಯನ್ನು ಮಾಡದೇ ಇರುವುದು – ಇವು ಮುಖ್ಯವಾದ ಪಂಥಾಹ್ವಾನಗಳಾಗಿವೆ.
- ಏಕೀಕೃತ ಜಾಲತಾಣ: ಅವಶ್ಯಕತೆಗಳ ಪಟ್ಟಿಗೆ ಅನುಗುಣವಾಗಿರುವ. ಸೂಕ್ತವಾಗಿ ಪರಿಶೀಲನೆಗೆ ಒಳಪಟ್ಟಿರುವ, ಸಹಾಯದ ಮಾಹಿತಿ ಇರುವ ಕನ್ನಡ ಐಟಿ ಸಾಧನಗಳು ಮತ್ತು ತಂತ್ರಾಂಶಗಳ ಒಂದು ಏಕೀಕೃತ ಸಂಗ್ರಹತಾಣವನ್ನು ರೂಪಿಸುವುದು ದೊಡ್ಡ ಸವಾಲಾಗಿದೆ. ಏಕೆಂದರೆ ಈಗ ಲಭ್ಯವಿರುವ ಸಾಧನಗಳನ್ನು ವಿವಿಧ ಸಂಸ್ಥೆಗಳು ವಿವಿಧ ಹಣಕಾಸು ನೆರವಿನೊಂದಿಗೆ ರೂಪಿಸುತ್ತಿವೆ. ಆದಾಗ್ಯೂ ಇ – ಆಡಳಿತದಲ್ಲಿ ರೂಪುಗೊಂಡ ಕನ್ನಡ ಕಂಪ್ಯೂಟಿಂಗ್ ಯೋಜನೆಯು ಆದಷ್ಟೂ ಬೇಗನೆ ಇಂತಹ ಕ್ರೋಡೀಕೃತ ಜಾಲತಾಣ ಪುಟವನ್ನು ಅನಾವರಣಗೊಳಿಸಲು ಎಲ್ಲ ಯತ್ನಗಳನ್ನು ಮಾಡುತ್ತಿದೆ ಎಂದು ತಿಳಿಸಬಯಸುತ್ತೇನೆ.
- ಖಚಿತ ಮತ್ತು ಕನ್ನಡ ಕೇಂದ್ರಿತ ಮಾನದಂಡಗಳ ಕೊರತೆ: ಮಾನದಂಡಗಳನ್ನು ಅನುಸರಿಸದೇ ಇರುವುದು ದೊಡ್ಡ ಸಮಸ್ಯೆಯಾಗಿದೆ. ಈ ಕುರಿತು ಕಳೆದ ತಿಂಗಳಲ್ಲಿ ಇ ಕನ್ನಡ ಕಮ್ಮಟವನ್ನು ಸಂಘಟಿಸಿ ತಂತ್ರಜ್ಞರಿಂದ ಸ್ಥೂಲ ಮಾನದಂಡಗಳ ಪಟ್ಟಿ ಮಾಡಲಾಗಿದೆ ಎಂಬುದನ್ನು ತಮ್ಮ ಗಮನಕ್ಕೆ ತರಬಯಸುತ್ತೇನೆ. ಈ ಮಾನದಂಡಗಳನ್ನು ಆಧರಿಸಿ ಪ್ರತಿಯೊಂದೂ ತಂತ್ರಾಂಶಕ್ಕೆ ಬೇಕಾದ ಕನ್ನಡ ಭಾಷಾ ಕೇಂದ್ರಿತ ಮಾನದಂಡಗಳನ್ನು ರೂಪಿಸುವ ಬಗ್ಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮತ್ತು ಇ – ಆಡಳಿತ ಇಲಾಖೆಗಳು ಕಾರ್ಯನಿರತವಾಗಿವೆ ಎಂಬುದನ್ನೂ ತಿಳಿಸಲು ನನಗೆ ತುಂಬಾ ಸಂತೋಷವಾಗುತ್ತಿದೆ.
- ತಜ್ಞತೆಯ ಕಂದರ: ಭಾಷಾಶಾಸ್ತ್ರಜ್ಞರು ಮತ್ತು ಮಾಹಿತಿ ತಂತ್ರಜ್ಞಾನ ತಜ್ಞರ ನಡುವೆ ಸಂಪರ್ಕ ಕಲ್ಪಿಸುವುದು ಇನ್ನೊಂದು ದೊಡ್ಡ ಸವಾಲಾಗಿದೆ. ಪ್ರಸ್ತುತ ಬಹಳಷ್ಟು ಭಾಷಾಶಾಸ್ತ್ರಜ್ಞರು ಕಂಪ್ಯೂಟರ್ ಭಾಷೆಗಳು, ದತ್ತಸಂಚಯ ಇತ್ಯಾದಿಗಳ ಬಗ್ಗೆ ಹೆಚ್ಚು ಅರಿತವರಲ್ಲ. ಈ ಕಂದರವು ಭಾಷಾ ಸಂಪನ್ಮೂಲಗಳನ್ನು ಸ್ಥಾಪಿಸುವುದಕ್ಕೆ ತಡೆಯಾಗಿದೆ. ಹೀಗಿದ್ದೂ ಭಾಷಾಶಾಸ್ತ್ರಜ್ಞರೇ ಯಾವುದೇ ಐಟಿ ಸಾಧನದ ಯಶಸ್ಸಿಗೆ ಮೂಲಾಧಾರವಾಗಿದ್ದಾರೆ.
- ಅನ್ವಯಿಕ ತಂತ್ರಾಂಶಗಳಲ್ಲಿ ಸೂಕ್ತ ರೆಂಡರಿಂಗ್: ಅಕ್ಷರ ಜೋಡಣೆ ಅರ್ಥಾತ್ ಡಿಟಿಪಿ ರಂಗದಲ್ಲಿ ಈಗಲೂ ಪೇಜ್‌ಮೇಕರ್‌ನಂತಹ ಹಳೆಯ ತಂತ್ರಾಂಶಗಳನ್ನೇ ಬಳಸುತ್ತಿದ್ದಾರೆ. ಇದರಿಂದಾಗಿ ಇ-ಪುಸ್ತಕ ಚಳವಳಿಯನ್ನು ಆರಂಭಿಸಲು ಪ್ರಕಾಶನ ಸಂಸ್ಥೆಗಳಿಗೂ ಸಮಸ್ಯೆ ಆಗುತ್ತಿದೆ. ಅಲ್ಲದೆ ಡಿಟಿಪಿ ರಂಗದಲ್ಲಿ ಇನ್ನೂ ಯುನಿಕೋಡ್ ಅಲ್ಲದ ಫಾಂಟ್‌ಗಳನ್ನೇ ಬಳಸುವುದರಿಂದ ಫಾಂಟ್ ಪರಿವರ್ತನೆಯ ಲೋಪಗಳನ್ನೂ ಎದುರಿಸಬೇಕಾಗಿದೆ ಮತ್ತು ಇ – ಪುಸ್ತಕ ರಚನೆ ವಿಳಂಬವಾಗುತ್ತದೆ. ಈ ಹಿನ್ನೆಲೆಯಲ್ಲಿ ಮುಕ್ತ ಪೇಜಿನೇಶನ್ ತಂತ್ರಾಂಶವಾದ ಸ್ಕ್ರೈಬಸ್‌ನ್ನು ಸಂಪೂರ್ಣವಾಗಿ ಕನ್ನಡೀಕರಿಸಿ (ಆದೇಶ ಪದಗಳು ಮತ್ತು ಹೈಫೆನೇಶನ್, ಪದ ಊಹಿಸುವ ತಂತ್ರಾಂಶ, ವ್ಯಾಕರಣ ಮತ್ತು ಕಾಗುಣಿತ, ಇ – ಪುಸ್ತಕ ರಚನೆ ಹೀಗೆ ಭಾಷಾ ಸಂಬಂಧಿತ ಎಲ್ಲ ಸಾಧನಗಳನ್ನೂ ಅಳವಡಿಸಿ) ಬಳಸಿದರೆ ಪ್ರಕಾಶನ ರಂಗದಲ್ಲಿ ಕ್ರಾಂತಿಯನ್ನೇ ಉಂಟು ಮಾಡಬಹುದು. ಇದನ್ನು ಪ್ರಕಾಶನ ರಂಗದ ಪ್ರಮುಖರು ಕೂಡಲೇ ಗಮನಿಸಿ ಕೊಂಚ ಹಣಕಾಸಿನ ನೆರವನ್ನೂ ಕೊಟ್ಟರೆ, ಈ ಬಗ್ಗೆ ದೊಡ್ಡ ಹೆಜ್ಜೆಗಳನ್ನು ಇಡಬಹುದು.
- ಕೀಲಿಮಣೆ ಸಂಗತಿಗಳು: ಕರ್ನಾಟಕ ರಾಜ್ಯ ಸರ್ಕಾರವು ನುಡಿ ತಂತ್ರಾಂಶವನ್ನು ಅಧಿಕೃತ ಡಿಟಿಪಿ ತಂತ್ರಾಂಶವೆಂದು ಮಾನ್ಯಮಾಡಿ ಕನ್ನಡಭಾಷೆಗೆ ಕಗಪ ಕೀಲಿಮಣೆಯನ್ನೇ ಅಧಿಕೃತ ಕೀಲಿಮಣೆ ಮಾನದಂಡ ಎಂದು ಪ್ರಕಟಿಸಿದೆ. ಈ ಕೀಲಿಮಣೆಯನ್ನು ಶ್ರೀಕೆ.ಪಿ.ರಾವ್ ರೂಪಿಸಿದ ಕೀಲಿಮಣೆಯನ್ನು ಆಧರಿಸಿ ರೂಪಿಸಲಾಗಿದೆ. ಸಿಡ್ಯಾಕ್ ಕೂಡ ಇನ್‌ಸ್ಕ್ರಿಪ್ಟ್ ಕೀಲಿಮಣೆಯನ್ನು ಕನ್ನಡಕ್ಕಾಗಿ ರೂಪಿಸಿದ್ದು ಇದರಲ್ಲಿ ಎಲ್ಲಾ ಭಾರತೀಯ ಲಿಪಿಗಳಿಗೆ ಸಮಾನವಾದ ವಿನ್ಯಾಸವಿದೆ. ಕನ್ನಡ ಕಂಪ್ಯೂಟಿಂಗ್‌ನಲ್ಲಿ ಲಿಪ್ಯಂತರಣ ಕೀಲಿಮಣೆಯೂ ತುಂಬಾ ಜನಪ್ರಿಯವಾಗಿದೆ. ವಿಂಡೋಸ್ ಮತ್ತು ಮ್ಯಾಕ್ ಓಎಸ್ ಸಾಧನಗಳು ತಮ್ಮ ತಂತ್ರಾಂಶಗಳಲ್ಲೇ ಇನ್‌ಸ್ಕ್ರಿಪ್ಟ್ ಕೀಲಿಮಣೆಯನ್ನು ಅಡಕಗೊಳಿಸಿವೆ. ಲಿನಕ್ಸ್ ತಂತ್ರಾಂಶವು ಎಲ್ಲಾ ಮೂರು ವಿನ್ಯಾಸಗಳನ್ನೂ ಹೊಂದಿದೆ. ಕೆಪಿರಾವ್ ಕೀಲಿಮಣೆಯನ್ನು ಬಳಸಲು ವಿಂಡೋಸ್‌ನಲ್ಲಿ ಕೀಲಿಮಣೆ ಡ್ರೈವರ್ ಬೇಕಾಗುತ್ತದೆ; ಮ್ಯಾಕ್ ಓಎಸ್‌ನಲ್ಲಿ ಮುಕ್ತ ಕೀಲಿಮಣೆ ವಿನ್ಯಾಸವು ಲಭ್ಯವಿದೆ. ಮೈಕ್ರೋಸಾಫ್ಟ್ ಸಂಸ್ಥೆಯ ಭಾಷಾ ಇಂಡಿಯಾ ರೂಪಿಸಿದ ಭಾರತೀಯ ಭಾಷೆಗಳ ಕೀಲಿಮಣೆಗಳಲ್ಲಿ ಕೆಲವು ಝೀರೋ ವಿಡ್ತ್ ನಾನ್ ಜಾಯ್‌ನರ್‌ಗಳಂತಹ ಕೆಲವು ತೊಡಕುಗಳಿವೆ. ಗೂಗಲ್ ಇಂಡಿಕ್ ಸಾಧನಗಳು ವಿಂಡೋಸ್ ಮತ್ತು ಎಲ್ಲಾ ಗೂಗಲ್ ಕ್ಲೌಡ್ ಆಧಾರಿತ ಸೇವೆಗಳಿಗಾಗಿ ಲಿಪ್ಯಂತರಣ ಕೀಲಿಮಣೆ ವಿನ್ಯಾಸ ಮತ್ತು ಇನ್‌ಸ್ಕ್ರಿಪ್ಟ್ ಕೀಲಿಮಣೆ ವಿನ್ಯಾಸಗಳನ್ನು ಹೊಂದಿವೆ. ಈ ಹಿನ್ನೆಲೆಯಲ್ಲಿ ಯಾವುದೇ ಕಾರ್ಯಾಚರಣಾ ವ್ಯವಸ್ಥೆಯಲ್ಲಿ ಸಮನಾಗಿ ಕಾರ್ಯ ನಿರ್ವಹಿಸುವ ಮತ್ತು ಯುನಿಕೋಡ್ ಅಕ್ಷರಭಾಗಗಳನ್ನು ವೈಜ್ಞಾನಿಕವಾಗಿ ಅಳವಡಿಸಿಕೊಂಡಿರುವ ಕೆ ಪಿ ರಾವ್ ವಿನ್ಯಾಸ ಆಧಾರಿತ ಸಾರ್ವತ್ರಿಕ ಕೀಲಿಮಣೆಯನ್ನು ರೂಪಿಸುವುದು ಇಂದಿನ ಅಗತ್ಯವಾಗಿದೆ.
- ಫಾಂಟ್ ಸಂಗತಿಗಳು: ಈಗಲೂ ಕನ್ನಡಕ್ಕೆ ಯುನಿಕೋಡ್ ಪಠ್ಯಫಾಂಟ್ (ಬುಕ್ ಫಾಂಟ್) ಅಗತ್ಯವಿದೆ. ಈಗ ಕನ್ನಡದಲ್ಲಿ ಹಲವು ಯುನಿಕೋಡ್ ಫಾಂಟ್‌ಗಳು ಇದ್ದರೂ ಒಂದು ಸಾರ್ವತ್ರಿಕ ಬಳಕೆಯ ಬುಕ್ ಫಾಂಟ್ ಎಂಬುದು ಪೂರ್ಣವಾಗದ ಬೇಡಿಕೆಯಾಗಿದೆ. ಈಗಿರುವ ಯುನಿಕೋಡ್ ಫಾಂಟ್‌ಗಳಲ್ಲೂ ಹಲವು ಅಕ್ಷರಭಾಗಗಳ ಮತ್ತು ಎನ್‌ಕೋಡಿಂಗ್ ಲೋಪಗಳನ್ನು ಹೊಂದಿವೆ. ಇವುಗಳನ್ನೆಲ್ಲ ಸರಿಪಡಿಸಬೇಕಿದೆ. ಇಲ್ಲೂ ಶ್ರೀ ಕೆ ಪಿ ರಾವ್ ಅವರ ಅಪಾರ ಫಾಂಟನ್ನು ಮಾದರಿಯಾಗಿ ತೆಗೆದುಕೊಂಡು ಮುಂದಿನ ಹೆಜ್ಜೆಗಳನ್ನು ಇಡಬಹುದಾಗಿದೆ.
- ದೇಸೀಕರಣ: ಖಾಸಗಿ ಒಡೆತನದ ಅಥವಾ ಮುಕ್ತವಾದ ಅನ್ವಯಿಕ ತಂತ್ರಾಂಶಗಳ ದೇಸೀಕರಣ (ಲೋಕಲೈಸೇಶನ್) ಇನ್ನೊಂದು ಪ್ರಮುಖ ಸವಾಲಾಗಿದೆ. ಏಕೆಂದರೆ ಲೋಕಲೈಸೇಶನ್ ಕಾರ್ಯದಲ್ಲಿ ಹಲವು ಸಂಸ್ಥೆಗಳು ತೊಡಗಿವೆ. ಇತ್ತೀಚೆಗಷ್ಟೇ ದೇಸೀಕರಣ ಮತ್ತು ಪದಕಣಜ ರಚನೆಯ ಬಗ್ಗೆ ಇ – ಆಡಳಿತ ಇಲಾಖೆ ಮತ್ತು ಕನ್ನಡ ಅಭಿವೃದ್ಧಿ ಪ್ರಾಧಿಕಾರದಿಂದ ಹೆಜ್ಜೆ ಇಡಲಾಗಿದೆ. ಪದಕಣಜ ಮತ್ತು ಇ – ಆಡಳಿತದಲ್ಲಿ ಕನ್ನಡ ಅನುಷ್ಠಾನ ಕುರಿತ ಸಮಿತಿಗಳನ್ನು ಇನ್ನು ಕೆಲವೇ ದಿನಗಳಲ್ಲಿ ರಚಿಸಲಾಗುವುದು.
- ಯುನಿಕೋಡೇತರ ಫಾಂಟ್‌ಗಳಿಂದ ಯುನಿಕೋಡ್‌ಗೆ ಪರಿವರ್ತನೆ : ಕನ್ನಡದ ಬಹುತೇಕ ವಿಷಯವಸ್ತುಗಳು ಈಗಲೂ ಯುನಿಕೋಡೇತರ ಫಾಂಟ್‌ಗಳಲ್ಲೇ ಇವೆ. ಈಗಿರುವ ಹಲವು ಪರಿವರ್ತಕಗಳು *.txt. ಸ್ವರೂಪದಲ್ಲಿರುವ ಪಠ್ಯಗಳನ್ನು ಸುಲಭವಾಗಿ ಪರಿವರ್ತಿಸುತ್ತವೆ; ಆದರೆ ಇವುಗಳಲ್ಲಿ ಇಂಗ್ಲಿಶ್ ಫಾಂಟ್‌ಗಳನ್ನು ಬಳಸುವ ಹಾಗಿಲ್ಲ. ಇಂತಹ ಹಲವು ಪರಿವರ್ತಕಗಳು ಕಡತದಲ್ಲಿ ಇರುವ ಫಾಂಟ್ ಗಾತ್ರ, ವಿನ್ಯಾಸ, ಪ್ಯಾರಾಗಳು – ಯಾವುದನ್ನೂ ಉಳಿಸಿಕೊಳ್ಳುವುದಿಲ್ಲ. ಆದ್ದರಿಂದ ಯುನಿಕೋಡ್‌ಗೆ ಬಹುದೊಡ್ಡ ಪ್ರಮಾಣದಲ್ಲಿ ಪಠ್ಯವನ್ನು ಆಯಾ ಕಡತದ ಅಥವಾ ದತ್ತಾಂಶದ ಸ್ವರೂಪದಲ್ಲಿಯೇ ಪರಿವರ್ತಿಸುವ ತಂತ್ರಾಂಶಗಳನ್ನು ರೂಪಿಸುವುದು ಅತ್ಯಂತ ಅವಶ್ಯಕವಾಗಿದೆ.
- ಪಠ್ಯ ಮತ್ತು ಧ್ವನಿಸಂಚಯ: ಭಾರತೀಯ ಭಾಷೆಗಳು ಸಂಪನ್ಮೂಲ ಕೊರತೆಯಿಂದ ಕೂಡಿವೆ. ಇಲ್ಲೀಗ ಕೆಲವೇ ಲಕ್ಷ ವಾಕ್ಯಗಳ ಸಮಾಂತರ ಪಠ್ಯ ಅಥವಾ ಧ್ವನಿಸಂಚಯದ ಆಕರವಿದೆ. ಕಳೆದ ಒಂದು ದಶಕದಲ್ಲಿ ಹಲವು ಸಂಸ್ಥೆಗಳು ವಿಶ್ಲೇಷಣೆ-ಉತ್ಪಾದನೆ-ಅನುವಾದ, ಉದಾಹರಣೆ ಆಧಾರಿತ ಯಂತ್ರಾನುವಾದ, ನಿಯಮ ಆಧಾರಿತ, ಸಂಖ್ಯಾಶಾಸ್ತ್ರ ಬಳಸಿಮಾಡುವ ವಿಧಾನ – ಹೀಗೆ ಹಲವು ಅನುವಾದ ವಿಧಾನಗಳನ್ನು ಯಂತ್ರಾನುವಾದಕ್ಕಾಗಿ ಬಳಸಿವೆ. ಹೀಗಿದ್ದೂ ಇವುಗಳಲ್ಲಿ ಸಂಖ್ಯಾಶಾಸ್ತ್ರೀಯ ಆಧಾರಿತ ಮತ್ತು ಹೈಬ್ರಿಡ್ ಯಂತ್ರಾನುವಾದವೇ ಹೆಚ್ಚು ಉತ್ತಮ ಫಲಿತಾಂಶಗಳನ್ನು ನೀಡುತ್ತಿದೆ. ಹೀಗಿದ್ದೂ ಸಂಖ್ಯಾಶಾಸ್ತ್ರೀಯ ವಿಧಾನಕ್ಕೆ ಭಾರೀಪ್ರಮಾಣದ ಸಮಾಂತರ ಸಂಚಯಗಳು ಬೇಕಾಗಿವೆ. ಆದ್ದರಿಂದ ಯಂತ್ರಾನುವಾದದ ಫಲಿತಾಂಶವನ್ನು ಉತ್ತಮಪಡಿಸಲು ಅತಿ ಕರಾರುವಾಕ್ಕಾದ ಧ್ವನಿ ಮತ್ತು ಚಂಕಡ್ ಸಮಾಂತರ ಸಂಚಯಗಳನ್ನು ರೂಪಿಸಬೇಕಾಗಿದೆ. ಅಲ್ಲದೆ ಪಠ್ಯದಿಂದ ಧ್ವನಿಪರಿವರ್ತನೆಗೆ ಮತ್ತು ಧ್ವನಿಯಿಂದ ಪಠ್ಯ ಅನುವಾದಕ್ಕೆ ಕನ್ನಡದಲ್ಲಿ ಟಿಪ್ಪಣಿಯುಕ್ತ (ಆನೋಟೇಟೆಡ್) ಧ್ವನಿಸಂಚಯಗಳನ್ನು ರೂಪಿಸಬೇಕಾಗಿದೆ. ತರಬೇತಾದ ತಜ್ಞರು, ಭಾಷಾಶಾಸ್ತ್ರಜ್ಞರು ಮತ್ತು ಐಟಿ ನಡುವೆ ಸಂಪರ್ಕ ಸಾಧಿಸುವುದು ಒಂದು ಸವಾಲಾಗಿದೆ. ಮೈಸೂರಿನ ಭಾರತೀಯ ಭಾಷಾ ಸಂಸ್ಥಾನವು ಇತ್ತೀಚೆಗೆ ತನ್ನೆಲ್ಲ ಪಠ್ಯ ಮತ್ತು ಧ್ವನಿ ಸಂಚಯವನ್ನು ಮುಕ್ತ ಬಳಕೆಗೆ ನೀಡಿದ್ದು ಈ ನಿಟ್ಟಿನ ಒಂದು ಮಹತ್ವದ ಬೆಳವಣಿಗೆಯಾಗಿದೆ. ಆದರೆ ಕನ್ನಡ ಭಾಷೆಯ ವೈವಿಧ್ಯವನ್ನು ಕೂಡಾ ಸಂರಕ್ಷಿಸುವುದು ತಂತ್ರಜ್ಞಾನದ ಹೊಣೆಗಾರಿಕೆ. ಇಲ್ಲವಾದರೆ ಗ್ರಾಂಥಿಕ ಭಾಷೆಯೊಂದನ್ನೇ ಡಿಜಿಟಲ್ ರಂಗದಲ್ಲಿ ಕಾಣಬೇಕಾದ ಅನಿವಾರ್ಯತೆ ಉಂಟಾಗುತ್ತದೆ. ಇದು ಸ್ಥಳೀಯತೆಗೆ ಧಕ್ಕೆ ತರುತ್ತದೆ.
- ಸಂಪನ್ಮೂಲ ಹಂಚಿಕೆ ವ್ಯವಸ್ಥೆ ಮತ್ತು ಲಭ್ಯತೆ:ಐಟಿ ಸಾಧನಗಳನ್ನು ರೂಪಿಸಲು ಮತ್ತು ಪರಿಹಾರಗಳನ್ನು ಹುಡುಕಲು ಬೇಕಾದ ಬಹಳಷ್ಟು ಕನ್ನಡ ಭಾಷಾ ಸಂಪನ್ಮೂಲಗಳು ಮತ್ತು ಉಪವ್ಯವಸ್ಥೆಗಳು ನೀತಿ ನಿಯಮ ಸಂಗತಿಗಳಿಂದಾಗಿ ತಂತ್ರಾಂಶ ಅಭಿವೃದ್ಧಿಕಾರರಿಗೆ ಲಭ್ಯವಾಗುತ್ತಿಲ್ಲ. ಯಂತ್ರಾನುವಾದ, ಪಠ್ಯದಿಂದ ಧ್ವನಿಗೆ ಪರಿವರ್ತನೆ, ಧ್ವನಿಯಿಂದ ಪಠ್ಯಕ್ಕೆ ಪರಿವರ್ತನೆ, ಕಾಗುಣಿತ ಸರಿಪಡಿಸುವಿಕೆ, ದ್ವಿಭಾಷಾ ನಿಘಂಟುಗಳು, ಮಾರ್ಫಾಲಾಜಿಕಲ್ ಅನಲೈಸರ್‌ಗಳು, ಸ್ಟೆಮ್ಮರ್‌ಗಳು, ಲೆಮ್ಮಟೈಸರ್‌ಗಳು, ವರ್ಗಾವಣೆ ವ್ಯಾಕರಣಗಳು, ಮುಂತಾದ ಭಾಷಾ ಆಧಾರಿತ ತಂತ್ರಾಂಶಗಳನ್ನು ರೂಪಿಸಲು ಇವು ಅತ್ಯವಶ್ಯವಾಗಿವೆ. ಇವುಗಳನ್ನು ಹಲವು ಸರ್ಕಾರಿ ಅನುದಾನಿತ ಸಂಸ್ಥೆಗಳು ಮತ್ತು ಯಂತ್ರಾನುವಾದ ವ್ಯವಸ್ಥೆಗಳು ರೂಪಿಸಿದ್ದರೂ ಅವುಗಳು ವೆಬ್‌ಸರ್ವಿಸ್ ಆಗಿಯಾಗಲೀ, ಎಪಿಐ (ಅಪ್ಲಿಕೇಶನ್ ಡೆವಲಪ್‌ಮೆಂಟ್ ಇಂಟರ್‌ಫೇಸ್) ಆಗಿಯಾಗಲೀ ಲಭ್ಯವಿಲ್ಲ. ಇಂಥ ಉಪವ್ಯವಸ್ಥೆಗಳು ಮತ್ತು ಎಪಿಐಗಳು ತಂತ್ರಾಂಶ ಅಭಿವೃದ್ಧಿಯಲ್ಲಿ ಸಹಾಯಕವಾಗುತ್ತವೆ.
- ಮುಕ್ತ ತಂತ್ರಜ್ಞಾನ ನೀತಿ ಮತ್ತು ಸಾರ್ವಜನಿಕ ಹಣ ಆಧಾರಿತ ಯೋಜನೆಗಳು:ಭಾರತ ಸರ್ಕಾರ ಮತ್ತು ಕರ್ನಾಟಕ ಸರ್ಕಾರಗಳು ಭಾರತೀಯ ಭಾಷೆಗಳ/ಕನ್ನಡದ ಐಟಿ ಸಾಧನಗಳನ್ನು, ತಂತ್ರಾಂಶಗಳನ್ನು ರೂಪಿಸಲು ಧನಸಹಾಯ ನೀಡುತ್ತವೆ. ಇವುಗಳನ್ನು ಮುಕ್ತ ತಂತ್ರಾಂಶ ವ್ಯವಸ್ಥೆಯಲ್ಲಿ ರೂಪಿಸುವುದು ಮತ್ತು ಯಾವುದೇ ವೇದಿಕೆಯಲ್ಲಿ ಕೆಲಸ ಮಾಡುವ ಹಾಗೆ ರೂಪಿಸುವುದು ಒಂದು ಸವಾಲಾಗಿದೆ. ಅಲ್ಲದೆ ಅತ್ಯುತ್ತಮ ಭಾಷಾ ಐಟಿ ಸಾಧನಗಳನ್ನು ರೂಪಿಸಲು ಸಂಶೋಧಕರಿಗೆ, ತಜ್ಞರಿಗೆ ಮತ್ತು ಅಪ್ಲಿಕೇಶನ್ ತಯಾರಕರಿಗೆ ನಿಧಿಸಹಾಯ ಒದಗಿಸಬೇಕಾಗುತ್ತದೆ. ಅದಿಲ್ಲವಾದರೆ ಖಾಸಗಿ ತಂತ್ರಾಂಶಗಳೇ ಮೇಲುಗೈ ಸಾಧಿಸಿ ಸರ್ಕಾರಗಳು ಕೈಚೆಲ್ಲಿ ಕೂರಬೇಕಾಗುತ್ತದೆ. ಸರ್ಕಾರವು ಸ್ಟಾರ್ಟ್‌ಅಪ್ ಸಂಸ್ಥೆಗಳಿಗೆ ನಿಧಿ ನೀಡುವಾಗ ಸಾರ್ವಜನಿಕ ಹಿತಾಸಕ್ತಿ ಮತ್ತು ಮುಕ್ತ ಲಭ್ಯತೆಯನ್ನು ಗಮನದಲ್ಲಿ ಇಟ್ಟುಕೊಳ್ಳಬೇಕು ಎಂಬುದು ನನ್ನ ಆಗ್ರಹವಾಗಿದೆ. ಕರ್ನಾಟಕ ಸರ್ಕಾರವು ಮುಕ್ತ ತಂತ್ರಾಂಶ ನೀತಿಯನ್ನು ಅನುಮೋದಿಸಿ ಪ್ರಕಟಿಸಬೇಕು ಎಂಬುದು ನನ್ನ ವೈಯಕ್ತಿಕ ಆಗ್ರಹವಾಗಿದೆ.
- ಮುಕ್ತಜ್ಞಾನದ ಅಭಿಯಾನದಲ್ಲಿ ತೊಡಕುಗಳು: ಕರ್ನಾಟಕ ಸರ್ಕಾರವು ನಿರ್ವಹಿಸುತ್ತಿರುವ ಕಣಜ ಜಾಲತಾಣವು ಈಗ ಹೆಚ್ಚಿನ ಬೆಳವಣಿಗೆ ಕಾಣುತ್ತಿಲ್ಲ. ಈಗ ಕಣಜ ಜಾಲತಾಣವನ್ನು ಭಾರತದ ಅತ್ಯುತ್ತಮ ಜ್ಞಾನಕೋಶವಾಗಿ ರೂಪಿಸಲು ಹೊಸ ಹಾದಿಗಳನ್ನು ಹುಡುಕಬೇಕಾಗಿದೆ. ಸರ್ಕಾರದ ಮತ್ತು ಸಮುದಾಯದ ಎಲ್ಲ ಮುಕ್ತ ಜ್ಞಾನಗಳನ್ನೂ ಕಣಜ ಜಾಲತಾಣದಲ್ಲಿ ಪ್ರಕಟಿಸುವ ಬಗ್ಗೆ ಬೃಹತ್ ಆಂದೋಲನ ಆಗಬೇಕಿದೆ. ಪದೇ ಪದೇ ಆದ್ಯತೆಗಳು ಬದಲಾಗುವ ಸಮಸ್ಯೆಯನ್ನು ಕಣಜ ಜಾಲತಾಣವು ಎದುರಿಸುತ್ತಿದೆ. ಕಣಜ ಬೆಳೆಸುವಲ್ಲಿ ಸಮುದಾಯವನ್ನೂ ಹೆಚ್ಚಿನ ಪ್ರಮಾಣದಲ್ಲಿ ವಿಶ್ವಾಸಕ್ಕೆ ತೆಗೆದುಕೊಂಡು ಜ್ಞಾನ ಸಂಗ್ರಹವನ್ನು ವಿಸ್ತರಿಸಬೇಕಿದೆ. ಕಣಜ ಜಾಲತಾಣಕ್ಕೆ ಈಗಾಗಲೇ ಹತ್ತು ವರ್ಷಗಳು ಆಗುತ್ತಿರುವುದರಿಂದ ರಾಜ್ಯ ಸರ್ಕಾರವು ಮುಕ್ತಜ್ಞಾನ ನೀತಿಯನ್ನು ಪ್ರಕಟಿಸಿ ದೇಶಕ್ಕೇ ಮಾದರಿ ಆಗಬೇಕು ಎಂಬುದು ನನ್ನ ವೈಯಕ್ತಿಕ ಆಗ್ರಹವಾಗಿದೆ.
- ಸರ್ವಬಳಕೆಯ ಸೂತ್ರಗಳ ಅಳವಡಿಕೆ: ಕನ್ನಡ ತಂತ್ರಾಂಶಗಳನ್ನು ರೂಪಿಸುವಾಗ ವಿಶ್ವಮಾನ್ಯ ಸರ್ವಬಳಕೆಯ (ಆಕ್ಸೆಸಿಬಿಲಿಟಿ) ಸೂತ್ರಗಳನ್ನು ಕಡ್ಡಾಯವಾಗಿ ಅಳವಡಿಸಬೇಕಿದೆ. ಭಾರತದಲ್ಲಿ ಗಮನಾರ್ಹ ಸಂಖ್ಯೆಯಲ್ಲಿ ಆಕ್ಸೆಸಿಬಿಲಿಟಿ ಅಗತ್ಯವಿರುವ ಅರ್ಹ ಉದ್ಯೋಗಿಗಳು, ಭವಿಷ್ಯದ ಉದ್ಯೋಗಿಗಳು ಇದ್ದಾರೆ. ಆದ್ದರಿಂದ ಸಮಾನ ಅವಕಾಶಗಳನ್ನು ರೂಪಿಸಲು ತಂತ್ರಾಂಶ ನೀತಿಯಲ್ಲಿ ಸರ್ವಬಳಕೆಯ ಸೂತ್ರಗಳನ್ನು ಕಡ್ಡಾಯವಾಗಿ ಅಳವಡಿಸುವುದು ಬಹುದೊಡ್ಡ ಸವಾಲಾಗಿದೆ.