ನಾನೇ ಕನಸು ಕಂಡು ಹೊಣೆ ಹೊತ್ತಿದ್ದ ಭಾರತವಾಣಿ ಯೋಜನೆಗೆ ನಾಲ್ಕು ವರ್ಷಗಳ ನಂತರ ರಾಜೀನಾಮೆ ನೀಡಿ, ಕರ್ನಾಟಕ ಸರ್ಕಾರದಲ್ಲಿ ಮಾನ್ಯ ಮುಖ್ಯಮಂತ್ರಿಯವರ ಇ – ಆಡಳಿತ ಸಲಹೆಗಾರನಾಗಿ ಕಾರ್ಯ ಆರಂಭಿಸಿದ ಈ ದಿನದ ಕೊನೆಗೆ ನನಗೆ ಅನ್ನಿಸಿದ್ದು…… ಬದಲಾವಣೆ ಜಗದ ನಿಯಮ!
ನಾಲ್ಕು ದಿನಗಳ ಹಿಂದೆ ಮುಖ್ಯಮಂತ್ರಿ ಮಾನ್ಯ ಶ್ರೀ ಬಿ ಎಸ್ ಯಡಿಯೂರಪ್ಪನವರನ್ನು ಭೇಟಿ ಮಾಡಿ ಅವರಿಂದ ನನ್ನ ಹೊಣೆ ನಿರ್ವಹಿಸಲು ಬೇಕಾದ ಕಿವಿಮಾತುಗಳನ್ನು ಸ್ವೀಕರಿಸಿದೆ. ಮೊನ್ನೆ ಭಾರತವಾಣಿ ತಂಡ ಮತ್ತು ಭಾರತೀಯ ಭಾಷಾ ಸಂಸ್ಥಾನದ ನಿರ್ದೇಶಕರು, ಸಹಾಯಕ ನಿರ್ದೇಶಕರು, ಉಪ ನಿರ್ದೇಶಕರಿಂದ ಬೀಳ್ಕೊಡುಗೆಯ ಭಾವುಕ ಸನ್ನಿವೇಶ ಅನುಭವಿಸಿದೆ. ಇಂದು ನನಗೆ ವಹಿಸಿದ ಹೊಣೆಯನ್ನು ನಿರ್ವಹಿಸಲು ಆರಂಭಿಸಿದೆ.
ಮೂರ್ನಾಲ್ಕು ದಿನಗಳಲ್ಲಿ ಏನೆಲ್ಲ ಬದಲಾವಣೆ ಆಗಿಹೋಯಿತು ಎಂದು ಮನಸ್ಸು ಹೇಳತೊಡಗಿತು. ಆದರೂ ಸರ್ದಾರ್ ಪಟೇಲ್ ಜನ್ಮದಿನದಂದೇ ಈ ಹೊಸ ಕೆಲಸ ಶುರು ಮಾಡಿದ್ದೇನೆಂಬ ಸಂಭ್ರಮವೂ ಮೂಡಿತು.
ಶುಭಾಶಯ ಹೇಳಿ ಕರೆ ಮಾಡಿದ, ಸಂದೇಶ ಕಳಿಸಿದ ಎಲ್ಲರಿಗೂ ನನ್ನ ತುಂಬು ಹೃದಯದ ವಂದನೆಗಳು. ನಿಮ್ಮೆಲ್ಲರ ಆಶಯಗಳೂ ಮಾನ್ಯ ಶ್ರೀ ಬಿ ಎಸ್ ಯಡಿಯೂರಪ್ಪನವರ ನಾಯಕತ್ವದ ಸರ್ಕಾರದ ಇ – ಆಡಳಿತದ ಬಗ್ಗೆ ಹೊಂದಿರುವ ನಿರೀಕ್ಷೆಗಳ ಮೊತ್ತ ಎಂದೇ ಭಾವಿಸುವೆ. ನನ್ನ ಕಾರ್ಯಚೌಕಟ್ಟಿನ ಮಿತಿಯಲ್ಲಿ ಖಂಡಿತ ಸಾರ್ವಜನಿಕ ವಿಶ್ವಾಸಕ್ಕೆ, ಉತ್ತರದಾಯಿತ್ವಕ್ಕೆ ಕುಂದು ಬಾರದ ಹಾಗೆ ವರ್ತಿಸುವೆ.
ನನ್ನನ್ನು ಇ – ಆಡಳಿತ ಸಲಹೆಗಾರ ಎಂದು ನೇಮಿಸಿ ಔದಾರ್ಯ ಮೆರೆದ ಶ್ರೀ ಬಿ ಎಸ್ ಯಡಿಯೂರಪ್ಪನವರನ್ನು ಮೊದಲು ವಂದಿಸುತ್ತೇನೆ.೧೯೮೪ರಲ್ಲಿ ಅಂಬ್ಲಿಗೊಳದಲ್ಲಿ ನಡೆದ ದಲಿತ ಯುವಕನ ಬೆತ್ತಲೆ ಮೆರವಣಿಗೆ ಪ್ರಕರಣದಲ್ಲಿ ನ್ಯಾಯಕ್ಕೆ ಒತ್ತಾಯಿಸಿ ಸೈಕಲ್ ಜಾಥಾ ನಡೆಸಿದ ಯಡಿಯೂರಪ್ಪನವರ ಹೋರಾಟದ ಬಗ್ಗೆ ʻಅಂಬ್ಲಿಗೊಳದಲ್ಲಿ ನಡೆದಿದ್ದೇನು?ʼ ಎಂಬ ವಾಸ್ತವಾಂಶದ ಪುಸ್ತಕ ಬರೆದಿದ್ದೆ. ಅಂದಿನಿಂದಲೂ ನನಗೆ ಅವರೊಬ್ಬ ಎನಿಗ್ಮಾ. ಅನಂತರ ೨೦೦೮ರ ವಿಧಾನಸಭಾ ಚುನಾವಣೆಯಲ್ಲಿ ಅವರೊಂದಿಗೆ ೮೦ ದಿನಗಳ ಕಾಲ ಪ್ರತಿದಿನವೂ ಓಡಾಡಿದ್ದೆ. ಆಗ ಅವರು ಯಾಕೆ ನಮ್ಮ ನಡುವಿನ ಮಾಸ್ ಲೀಡರ್ ಎಂಬ ಅರಿವಾಯಿತು. ಈಗ ಅವರ ಸರ್ಕಾರದಲ್ಲಿ ಈ ಹೊಣೆಗಾರಿಕೆ. ಎಲ್ಲವೂ ಬದಲಾವಣೆಯ ನಿಯಮಗಳಿಗೆ ಅನುಗುಣವಾಗಿಯೇ ಇವೆ!
೨೦೦೬ ರಲ್ಲಿ ನಾನು ನೂರಾರು ಸಲ ಓದಿಕೊಳ್ಳುತ್ತ ಬಂದಿರುವ ಗುಣಮಟ್ಟ ಹೇಳಿಕೆಯೇ ಈಗಲೂ ನನಗೆ ಮಾದರಿ:
Quality is never an accident; it is always the result of high intention, sincere effort, intelligent direction and skillful execution; it represents the wise choice of many alternatives.
ಉತ್ಕೃಷ್ಟತೆ ಎಂದೂ ಆಕಸ್ಮಿಕವಲ್ಲ; ಅದು ಉನ್ನತ ಉದ್ದೇಶ, ಪ್ರಾಮಾಣಿಕ ಯತ್ನ, ಜಾಣ ನಿರ್ದೇಶನ ಮತ್ತು ಕುಶಲ ಜಾರಿಯ ಒಟ್ಟಾರೆ ಫಲಿತಾಂಶ; ಅದು ಹಲವು ಪರಿಹಾರಗಳ ಪೈಕಿ ಕಂಡುಕೊಂಡ ವಿವೇಚನಾಯುಕ್ತ ಆಯ್ಕೆ.
ಇದನ್ನು ಹೇಳಿದವರು ವಿಲಿಯಂ ಏಡೆಲ್‌ಬರ್ಟ್ ಫಾಸ್ಟರ್ ಎಂಬ ಅಮೆರಿಕಾದ ಸೇನಾ ವೈದ್ಯ (https://en.wikipedia.org/wiki/William_A._Foster). ಎರಡನೆಯ ಮಹಾಯುದ್ಧದ ರಂಗದಲ್ಲಿ ತನ್ನ ಸಹ ಯೋಧರನ್ನು ರಕ್ಷಿಸಲು ಜಪಾನೀಯರು ಎಸೆದ ಗ್ರೆನೇಡ್ ಮೇಲೆ ಬಿದ್ದು ಸ್ಫೋಟಗೊಂಡ ಗಾಯಗಳಿಂದ ಅಮರರಾದ ಧೀರ (ಆಗ ಅವರ ವಯಸ್ಸು ೩೦)! ಅವರದೆಂದು ನನಗೆ ಸಿಕ್ಕಿದ ಒಂದೇ ಕೊಟೇಶನ್ ಇದು. ೧೩ ವರ್ಷಗಳಿಂದಲೂ ಅದನ್ನು ನಾನು ಪಾಲಿಸಲು ಹೆಣಗುತ್ತಿದ್ದೇನೆ; ಇನ್ನುಮುಂದೆಯೂ….
ಇ – ಆಡಳಿತ ವಿಷಯಕ್ಕೆ ಸಂಬಂಧಿಸಿ ನಿಮ್ಮ ಯಾವುದೇ ಮಾಹಿತಿಯನ್ನು belurusudarshana@gmail.com ಇದಕ್ಕೆ ಕಳಿಸಿ. ಫೇಸ್‌ಬುಕ್, ಟ್ವಿಟರ್, ವಾಟ್ಸಪ್, ಎಸ್ ಎಂ ಎಸ್‌ಗಳಲ್ಲಿ ಕಳಿಸಬೇಡಿ.
ವಂದನೆಗಳು.
ಬೇಳೂರು ಸುದರ್ಶನ
೩೧ ಅಕ್ಟೋಬರ್ ೨೦೧೯.