ಯು ಲಿಬರೇಟ್ ಹುಡುಗೀ
ಯು ಲಿಬರೇಟ್ ಹುಡುಗೀ…. ಎಂದು
ಮೋಕ್ಷದ ಕರೆ ಕೊಟ್ಟಿರುವುದೆಲ್ಲ
ನೀನು ಮರೆತೆ.
ನಾನು ಬರೆಯುತ್ತಲೇ ಕುಳಿತೆ.
ಅಂಗಳದಲ್ಲಿ ಕೂತು ಆಕಾಶ ನೋಡಿ ಬರೆದೆ.
ಹಾಸಿಗೆಗೆ ಒರಗಿ ದೀಪದಡಿಯಲ್ಲಿ ಬರೆದೆ.
ರೇಡಿಯೋ ಕೇಳುತ್ತ ಮತ್ತೆ ಮತ್ತೆ
ಒಳಗಣ್ಣಿನೊಳಗೆ ನೋಡಿಕೊಳ್ಳುತ್ತ ಬರೆದೆ.
ಯು ಲಿಬರೇಟ್ ಹುಡುಗೀ ಎಂದು
ಕೂಗಿ ಕೂಗಿ ಕರೆದೆ.
ಬಯಲುಗಾಳಿಗೆ ಒಡ್ಡಿಕೊಂಡೆ ಮೋಕ್ಷದ ಹಾಡುಗಳನ್ನು
ಗದ್ದೆಯಲ್ಲಿ ಬೀರಿದೆ ಮೋಕ್ಷದ ಕಾಳುಗಳನ್ನು
ಮರಳಿನಲ್ಲಿ ಬಗೆದು ಬಗೆದು ಕಟ್ಟಿದೆ ಮೋಕ್ಷದ ಗೂಡುಗಳನ್ನು
ನಿನಗಾಗಿ ಯು ಲಿಬರೇಟ್ ಹುಡುಗೀ ಎಂದು
ತೇಲಿಬಿಟ್ಟೆ ಅಳುವನ್ನು, ಎದೆಯೊಳಗೆ ಮುಳುಗಿಸದೆ
ನೋವಿನ ನಾವೆಗಳನ್ನು ಹಗೂರಾಗಿ ಹಾರಿಸಿದೆ
ನಗುಪಟವನ್ನು ಲಿಬರೇಟ್ ಹುಡುಗೀ ಎಂಬ ಬರಹವನ್ನು
ಗೀಚಿದ್ದಲ್ಲೆ ಗೀಚಿ.
ದೋಚಿಕೊಂಡೆ ನಿನ್ನ ಮಾತು, ಹುಡುಗಿಯರು ಹೀಗೆ
ಭಿಡೆಬಿಟ್ಟು ಕೊಟ್ಟರು ತಮ್ಮ ಕೆನ್ನೆಗಳನ್ನು ನನ್ನ
ಕಣ್ಣುಗಳಲ್ಲಿ ನೋಡಿದ್ದೀಯ ಅಕ್ಷರಗಳು
ಮಹಾನ್ ಭೀತಿಯಿಂದ ಬಡಬಡಿಸುವುದನ್ನು
ಹುಡುಗೀ ಲಿಬರೇಟ್ ಯುವರ್‌ಸೆಲ್ಫ್ ಎಂಬೀ
ದರಿದ್ರ ಹೃದಯ ಘೋಷಣೆಯನ್ನು
ಶ್ರೀಮಂತ ಹಾಳೆಗಳಲ್ಲಿ. ಯು ಲಿಬರೇಟ್
ಎಂಬ ಮೋಕ್ಷದ ನಾಳೆಗಳಲ್ಲಿ ಕಾಣುವುದೇನೆಂದು
ನನಗಿವತ್ತು ಗೊತ್ತಿಲ್ಲ.
ನಾನು ಕರೆಕೊಟ್ಟಿದ್ದೇನೆ ನಿನ್ನ ಕರುಳಿಗೆ
ಮೋಕ್ಷವನ್ನು ಕಾಣದ ಹಳೆ ಬೆರಳುಗಳಿಗೆ
ವಿರಹದಲ್ಲಿ ಬೇಯದ ಹುಬ್ಬು-ರೆಪ್ಪೆಗಳಿಗೆ
ದಿಕ್ಕು ತಪ್ಪದ ತುಟಿಗೆ
ನಿನ್ನ ಹಣೆಗೆ.
ಪಡೆದುಕೋ ನಿನ್ನ ಸ್ವಂತ ಗೆಳೆಯನ ಮಾತು
ಪಡೆದುಕೋ ನಿನ್ನ ಕಳೆದ ದಿನಗಳ ಹೂತುಬಿಡುವಂಥ ಮಾತು
ಪಡೆದುಕೋ ನಿನ್ನ ಬೆಳವಣಿಗೆಯಲ್ಲಿ ಹೆಜ್ಜೆಯಾಗುವ ದೊಡ್ಡಮಾತು
ಹುಡುಗೀ ಲಿಬರೇಟ್ ಯುವರ್‌ಸೆಲ್ಫ್
ಅಂಡ್ ಲಿವ್ ಅಟ್ ಯುವರ್ ಡ್ರೀಮ್ಸ್
ಪಡೆದುಕೋ ನನ್ನ ಮಾತುಗಳನ್ನು
ಬೇಡವಾದರೆ ಖಂಡಿತಾ ಬೇಡಿಕೋ
ನನ್ನನ್ನು
ಪಡೆದುಕೋ.
ಒಳಗಣ್ಣಿನೊಳಗೊಮ್ಮೆ ನೋಡಿಕೋ.