ಪಾರಿಜಾತ ಉವಾಚ
ಹೊಸವಸಂತಗಳಂತೆ ಅರಳಿರುವ ಜೀವವೇ
ಜಾರದಿರು ಘಟನೆಗಳ ದಾರಿಯಲ್ಲಿ
ವೇದನೆಗಳಿಂದಲೇ ತುಂಬಿದಂತಿರಬಹುದು
ಅದುರದಿರು ಅರೆಗಳಿಗೆ ಕಾಯುವಲ್ಲಿ
ನಾನುದುರಿ ಬಿದ್ದಿರುವ ರೀತಿಯಲ್ಲಿ
ನೋವು ಕೊಡದಿರು ನಿನ್ನ ನೆರೆಹೊರೆಯ ಹಿರಿಯರಿಗೆ
ಕಿಡಿಗಣ್ಣು ತೋರದಿರು ಸ್ನೇಹಿತರಿಗೆ
ಸಭ್ಯತೆಯ ಸೋಗುಗಳ ಎದೆಗೂಡಿನೊಳಗಿಡು
ಕಲಹ ತರದಿರು ಗಟ್ಟಿ ಗೆಳತಿಯರಿಗೆ
ಭಾಮೆ – ರುಕ್ಮಿಣಿಯರಿಗೆ ಬಂದ ಹಾಗೆ
ನಗು – ವಿನಮ್ರತೆ – ಭಕ್ತಿ – ತ್ಯಾಗ ಭಾವಗಳೆಲ್ಲ
ಬೇಕೆಂದು ನಾನೂ ಬೆಂಬಲಿಸುವೆ
ಆದರಿವುಗಳ ಕೊಡಲು ಅತಿರೇಕ ಹಾದಿಯಲಿ
ನಡೆವ ಯತ್ನಗಳನ್ನು ಧಿಕ್ಕರಿಸುವೆ.
ಆದರೂ ಗಿಡದಿಂದ ಬಿದ್ದುರುಳುವೆ.
ಮೋಹಗಳು ತೆರೆದಿಡುವ ದಿಕ್ಕುಗಳ ಮರೆತುಬಿಡು
ಸುಖಿಯಂತೆ ಕಾಣುವುದು ದಾರಿದೀಪ
ಬದುಕು ಕರೆದಂತೆಲ್ಲ ನಡೆಯದಿರು ಸುಮ್ಮನೇ
ಮುಖವ ತಳೆಯಲಿ ನಿನ್ನೆದೆಯ ರೂಪ
ಒಂಟಿ ದನಿಗಳ ಜನ್ಮ ನನಗೆ ಶಾಪ
ಶಿಥಿಲವಾಗಿಹ ನಮ್ಮ ಜಡಸಮಾಜದ ಹೊರಗೆ
ಏಕಾಂಗಿಯಾಗೆಂದೂ ನಿಲ್ಲಬೇಡ
ಹೇಗಿದ್ದರೇನಂತೆ ಎಲ್ಲಿದ್ದರೇನಂತೆ
ಸಂಘಜೀವನದಿಂದ ಓಡಬೇಡ
ನನ್ನಂತೆ ಬಿಡಿಯಾಗಿ ಬೀಳಬೇಡ