ಇಂತಹ ಹುಡುಗಿ
ಇಂತಹ ಹುಡುಗಿಯೊಬ್ಬಳು
ನನ್ನ ಬಳಿ ಇದ್ದಳು ಎಂದರೆ
ಮರವೊಂದು ನೆಲದುಗುರು ಕಚ್ಚಿ
ನಿಂತಿತ್ತೆನ್ನುವಷ್ಟು ಸುಲಭವಲ್ಲ.
ಮಳೆಯ ಜೊಂಪಿಗೆ ಬಂದ ನಿದ್ದೆಗೆ
ಇರಸಲು ಸಿಡಿದಂತಾಗಿ ಎಚ್ಚರವಾಗಿ
ಕೆಂಡಕ್ಕೆ ಕೈ ಚಾಚುವಷ್ಟು ಸಲೀಸಲ್ಲ.
ಕೆಸರಲ್ಲಿ ನಡೆದು ಸಾರ ದಾಟಿ ಕಟ್ಟೆ
ಹತ್ತಿ ಮಣ್ಣಿನ ಹೆಜ್ಜೆ ಮೂಡಿಸುವಷ್ಟು ಸರಾಗವಲ್ಲ
ಇಂತಹ ಹುಡುಗಿಯೊಬ್ಬಳು ನನ್ನ
ಬಳಿ ಇರಲಿಲ್ಲ ಎನ್ನುವಂತೇ ಇಲ್ಲವಾದ್ದರಿಂದ
ಸಿಡಿಲಿಗೆ ಬೆಚ್ಚಿ ಲಾಟೀನಿನ ಬೆಳಕೇರಿಸಿ
ಚಂದಮಾಮ ಓದುವುದನ್ನು ಹೋಲಿಸುವಂತಿಲ್ಲ
ಓಡಿಹೋದ ನಾಗರಾಜನ ಚೊಟ್ಟ ಕಾಲಿಗೆ ನಕ್ಕು
ರೋಹಿಣಿಯ ಕಣ್ಣಿನ ಉಡಾಫೆಗೆ ಹೆದರುವಂತಿಲ್ಲ
ಇಂತಹ ಹುಡುಗಿ ಹೀಗೆ ಇದ್ದಳೋ…. ಇಲ್ಲವೋ
ಎಂದ ದ್ವಂದ್ವಕ್ಕೆ ಏನು ಜವಾಬು ?
ಇದ್ದರಲ್ಲವೇ ಬಾಲ್ಯತನ ಹೇಗೆ ಕಳೆಯಿತೆಂಬುದಕ್ಕೊಂದು
ಸಬೂಬು ? ಇರಾದೆಗೆ ಇಳಿದ ಮೇಲೆ
ಧರೆ ಹತ್ತಿ ಪೇರಲಕಾಯಿ ಕೊಯ್ಯಲೇಬೇಕು.
ಇಂತಹ ಹುಡುಗಿ ಇದ್ದಳು ನನ್ನ ಬಳಿ
ಎಂದರೆ ಇರಲೇಬೇಕು.
ಇದ್ದಾಳೆ.