ಬಿರುಕು
ಬಹಳ ಬರೆದಿದ್ದೇನೆ ಗೆಳೆಯ
ಸೂರ್ಯನ ಸನಿಹ ಕುಳಿತು
ಬೆವರು ಜಿನುಗುವವರೆಗೆ ಎಷ್ಟು ಸಲ
ಹೀಗೆ ಶಬ್ದಗಳ ಮರೆಸಿದ್ದೇನೆ
ಬೆರಳಿನ ನೆರಳು ನಿಟ್ಟುಸಿರು ಬಿಡುವವರೆಗೆ.
ಹುಣ್ಣಿಮೆಯಷ್ಟು ಪ್ರಖರವಿದ್ದರೆ
ಸಾಲುಗದ್ದೆಗಳಲ್ಲಿ ಹರವಾಗಿ
ಅವಳೆದೆಯನ್ನು ಹಗೂರ ಬಳಸುತ್ತಿದ್ದೆ
ಎಂಬ ಕಲ್ಪನೆ ಕೂಡ
ದುರ್ಬಲವಾಗಿ ಮಗುಚಿಕೊಂಡಿದೆ ಹಣೆಯ
ಗೆರೆಗಳಲ್ಲಿ. ಇಲ್ಲಿ
ಸಾವಿರ ಪಾದಗಳು ತುಳಿದ ರಸ್ತೆಗಳ
ದಾಟಿ ಬಯಲಿಗೆ ಬಂದು ಬಿಕ್ಕುವಲ್ಲಿಗೆ
ಶಬ್ದಗಳು ಸರಿವ ಸದ್ದು.
ಎದೆಗೂಡಿನಲ್ಲೆಲ್ಲೊ ಬಿರುಕುಬಿದ್ದು.
ಗೆಳೆಯಾ
ಬಹಳ ದಿನಗಳ ಮೇಲೆ
ಕರೆದಿದ್ದೇನೆ ನಿನ್ನ ನಿಜವಾದ
ಹೆಸರು ಅಥವಾ ನನ್ನ
ನರಗಳ ಉಸಿರು.
ಬಾ