ಸ್ವಂತದ್ದೆಂಬ ಸವಲತ್ತುಗಳು
ಸ್ವಂತದ್ದೆಂಬ ಸವಲತ್ತುಗಳು ಸುಳ್ಳು ಮಾರಾಯ
ಸುಳ್ಳೇ ಚಿರವಾಗಿರೋ ಸತ್ಯ.
ಪಾಪಿನ್ಸ್‌ನ ಹಸಿರು ಕೆಂಪು ಹಳದಿ ಕೇಸರೀ ವರ್ಣಗಳು
ನಾಲಿಗೆಯಲ್ಲಿ ನಿತ್ಯವಾದರೂ
ಸ್ವಂತಕ್ಕೆ ರುಚಿಯೂ ಉಳಿಯದ ಹಾಗೆ ದಿವಸಾ
ನಾಲಿಗೆ ತೊಳೆಯುತ್ತೇನೆ. ಹಲ್ಲುಗಳು
ಉಜ್ವಲತೆಯನ್ನು ತರೋ ಹಲ್ಲುಪುಡಿಯಿಂದ
ಗಸಗಸ ತಿಕ್ಕಿಸಿಕೊಂಡು ಮಿನುಗುತ್ತಾವೆ.
ಸ್ವಂತಕ್ಕೆಂದಿಟ್ಟುಕೊಂಡಿದ್ದ ಡೆಟಾಲ್‌ಸೋಪಿನ ನೊರೆ
ನೊರೆಯಾಗಿಯೇ ಬಚ್ಚಲು ಜಾಲರಿಯಲ್ಲಿ ಜಾರಿ
ಕೆಂಗೇರಿಯಲ್ಲಿ ಲೀನವಾಗುತ್ತದೆ.
ಹವಾಯಿ ಪ್ರೇಮ ಧೂಮ ಗೀತೆ ಹಾಡುತ್ತ
ಟಾರಿನಲ್ಲಿ ಸೇರುತ್ತದೆ ಮಾರಾಯಾ….
ಜೀನ್ಸ್ ಕೂಡ ಸವೆಯುತ್ತದೆ !
ಸ್ವಂತದ ಪೆನ್ನಿನ ನಿಬ್ಬು ಸೊಗಸಾಗಿ ಬಾಗಿ
ಇಂಕು ಮಬ್ಬಾಗಿ
ಥತ್ತೆರಿಕೆ ಎಂಬ ಬೈಗುಳದಲ್ಲಿ ಪರಕೀಯನೂ
ಆಗಿಬಿಟ್ಟಿದ್ದೇನೆ ನಾನು.
ನನ್ನ ಹುಡುಗಿ ಸ್ವಂತದ್ದಾಗಲೆಂದು
ನೀನೂ ನನ್ನ ಹಾರೈಸಿದ್ದಷ್ಟೇ ಆಯಿತು.
ಅವಳಿಗಿನ್ನೂ ಸ್ವಂತಿಕೆಯೆಂಬ ಮಿಥ್ಯೆ ಆವರಿಸಿದ್ದು
ಇತ್ತೀಚೆಗೆ ತಿಳಿಯಿತು.
ಕಣಿವೆ ಕಾಡು ತೋಟ ಮನೆ ಮಾಡುಗಳಲ್ಲಿ
ಕಳೆಯಲಿಕ್ಕೂ ಸಾಧ್ಯವಿಲ್ಲ ಸ್ವಂತಿಕೆಯನ್ನ.
ಅದು ಸ್ವಂತ ಇದು ಸ್ವಂತವೆಂದು ಕೈಚಾಚಿ
ಬಾಚುವವರ ಬುದ್ಧಿವಂತಿಕೆಯನ್ನು.