ಗೋಡೆ ಬರಹ.
ನೂರು ಮೀರಿದ ಹೆಜ್ಜೆ. ನಾಲ್ಕು ಮೀರದ ಮಾತು
ಹೊರಗೆ ಜಾರಿದ ಉಸಿರು ; ಕಾರ್ಗತ್ತಲು
ಎದೆಯ ಸಪ್ಪಳದಲ್ಲಿ ಕರಗಲಾರದ ನೋವು
ಸತ್ಯ. ಬರೆಯುತ್ತೇವೆ ಗೋಡೆ ಬರಹ.
ಜೀವಜಂತುಗಳಲ್ಲಿ ಎಲ್ಲೆಮೀರಿದ ನಡತೆ
ಮುರುಟಿ ಮುಕ್ಕಾಗಿರುವ ನೀತಿ ಹಣತೆ.
ನೇತ್ರಧಾರರು ಸೂತ್ರಧಾರರಾಗುತ್ತಿಲ್ಲ
ನೀತಿಯಂಕುಶ ನಮ್ಮ ಗೋಡೆಬರಹ
ಸಾಲುದೀಪಗಳಲ್ಲಿ ನಿತ್ಯಮುಗ್ಧತೆ. ಹರಿವ
ರಸ್ತೆಯಪ್ಪಿದೆ ನೋಡಿ – ಮೂಕ ನಿಷ್ಠೆ.
ಇವರು ಅಯ್ಯೋ ! ನಮ್ಮ ಜೀವ ತೆಗೆಯುತ್ತಾರೆ
ಶಿವನ ಕಣ್ಣಾಗಿರಲಿ ಗೋಡೆಬರಹ.
ಕೋಟಿ ಕಣ್ಣುಗಳಲ್ಲಿ ನಿದ್ದೆ ನೆಲೆಸಿದೆಯಂತೆ
ಮೀಟಿದರೆ ಎದ್ದೆದ್ದು ಬರಲಾರರೇ ?
ನಸುಕು ನೆತ್ತಿಯ ಮೇಲೆ ಮೊಟ್ಟೆಯೊಡೆದಂತೆಲ್ಲ
ನೇರ ನೋಡಲಿ ನಮ್ಮ ಗೋಡೆಬರಹ.
ರಂಗವಲ್ಲಿಯ ನೋಡಿ ಸೂರ್ಯ ಸಂತಸಪಟ್ಟು
ಕಯ್ಯ ಕುಶಲತೆಗೊಂದು ಧನ್ಯಭಾವ.
ಬರೆದ ವನಿತೆಯ ಕಣ್ಣು ಮೊದಲು ನೋಡಿದ್ದೇನು ?
ಈ ಸಮಾಜದ ಚಿತ್ರ – ಗೋಡೆಬರಹ.
ಬಣ್ಣಬಣ್ಣದ ಮಾತು ಬಲೆಯ ಬೃಂದಾವನದ
ಸುತ್ತ ತಿರುಗುವ ಮಂದಿಗೇನೆನ್ನುವ ?
ಬಣ್ಣವಾಗಲಿ ನಮ್ಮ ಹೃದಯ ಸಂದೇಶಗಳು
ಶ್ರೀ ತುಲಸಿಯೇ ನಮ್ಮ ಗೋಡೆಬರಹ !
ರಕ್ತನಾಳಗಳಲ್ಲಿ ಬುಗ್ಗೆಯಾಗಿದೆ ನೋವು
ಹಣೆಗಂಟಿರುವ ಬೆವರು ಸಾಲು ಮುತ್ತು.
ಕೈಕಾಲುಗಳ ಗತಿಗೆ ಯಾರು ಸಾಕ್ಷಿ ?
ಚಳಿಗೆ ತಲ್ಲಣಗೊಳದ ಗೋಡೆಬರಹ.
ದನಿದನಿಗಳೇ ನಮ್ಮ ದಾರಿಯಾಗದು. ನಿಮ್ಮ
ಎದೆಗುದಿಗಷ್ಟೇ ಬಗ್ಗರು ಈ ಖೂಳರು.
ಬನ್ನಿ ! ಭಾವದ ಜತೆಗೆ ಜೀವ ತುಂಬಿಸಿ ನೋಡಿ
ಕ್ರಾಂತಿ ಮೈದಳೆದಂತೆ – ಗೋಡೆಬರಹ.