ಸಂಬಂಧಪಟ್ಟವರಿಗೆ
ಒಳತೆವಲುಗಳೆ, ಬರಿಗತ್ತಲಿನ ಕವಲುಗಳೆ,
ಬಗಲುಗಳೆ, ತರ್ಕವಳೆದಿಟ್ಟ ಬಟ್ಟಲುಗಳೇ….
ಅರೆಹಗಲುಗಳೆ, ಅಡವಿಟ್ಟ ಗೊಲಗುಗಳೆ
ಅನಿಮಿತ್ತ ನಾಜೂಕು ಗೆದ್ದಲುಗಳೇ….
ಫುಟ್‌ಪಾತಿನಂತೇನೇ ನಿಶ್ಯಬ್ದವಿದ್ದೀರಾ ಹೇಳಿ
ಹೆಗಲಿನ ಚೀಲ ಕೆಳಗಿಟ್ಟ ನೆನಪೆಲ್ಲಿದೆ ?
ಡೊಗರು ವಿಶ್ವಾಸಕ್ಕಿನ್ನೂ ಡೊಂಕು ಸಲಾಮು, ಸರಿ…..
ಅನುಮಾನಗಳ ಮಾನ ಮುಚ್ಚುತೀರಾ ?
ಅಗಲಕ್ಕೆ, ಅವರಿವರ ಅಂತರದ ಆಳಕ್ಕೆ
ನಿಮ್ಮ ಮುತುವರ್ಜಿ ; ನೀವು ನೆಲಬಿಟ್ಟ ಮೀನುಗಳು ಸುಣ್ಣದೊಳಗೆ
ಹಣೆಗೆ ಹಣೆತಟ್ಟೊ ಮಗುವಿನ ಗುರ್ತಿದೆಯ ಹೇಳಿ…
ಅಥವಾ ನಗು….. ಎದುರಿದ್ದ ಕಣ್ಣಿನೊಳಗೆ ?
ಮಾತು ಬಿಡಿ ಮೌನಕ್ಕೆ ಹಚ್ಚಿದ್ದೀರಲ್ಲ ಚಾಡಿ
ಯಾಕೆ ಗೊಂದಲದಲ್ಲಿ ಸಿಗರೇಟು ಸೇದಬೇಕು ?
ಯಾಕೆ ಇವರೇ…. ನಿಮಗೆ ಯಾಕಿಲ್ಲ ನೆಲದಮಲು
ಹೀಗೇಕೆ ವಾದಗಳ ಕಿವುಚಬೇಕು ?