ಉತ್ತರ
ಹೊಕ್ಕುಳಿನ ಒಳಕೂತ ನವೆಸಮಸ್ತಕ್ಕೆಲ್ಲ
ನಾ ತಟಸ್ಥನೆ ? ಅಲ್ಲ – ಉತ್ತರಿಸುವೆ
ಕುಸಿದ ಕಣ್ಣುಗಳಲ್ಲಿ ಮಿಂಚಲಾರವು ಮಾತು
ನಕ್ಷತ್ರದಂತೇನೆ ಬಿತ್ತರಿಸುವೆ
ಮೌನಪಲ್ಲವಿ ಹಿಡಿದೇ ನಿಮ್ಮೆದೆಯ ಮುಟ್ಟಿರುವೆ
ಸಹಜವೇ ನನ್ನಂಥ ಹಕ್ಕಿಗಳಿಗೆ.
ವಿರಳವಾಯಿತು ಮಾತು ನಿಜ ಅನುಮಾನ
ಮಾತಿತ್ತೆ ನೆಲವೆಲ್ಲ ಎದ್ದಗಳಿಗೆ ?
ಮಾತು ನೆಲದೊಳಗಿಲ್ಲ, ಮೇಲಿಲ್ಲ ಹೌದೇ
ಬತ್ತಲಾಕಾಶಕ್ಕೆ ಶಬ್ದಗಳ ತೀಟೆಯಿಲ್ಲ
ಮೌನದಿರವಿದ್ದೀತೆ ನಾಳೆಗಳ ನೆರಳಲ್ಲಿ
ಬರುವುದೇನಂತೆ ಮುಂದೆ ಗೊತ್ತಿಲ್ಲ – ಸಾವ ಗಳಿಗೆ ?
ಖುಷಿ ಬೆರೆತ ಸಕ್ಕರೆಯ ಗೊಂಬೆಯಾಗುತ್ತೇವೆ
ತೀಡುತ್ತ ತೊಗಲೊಳಗೆ ಕರಗುತ್ತೇವೆ
ಕೊನೆಯಂಕದಲ್ಲಿ ಏಕಾಂತಕ್ಕೆ ಒತ್ತು ಕೊಡುತ್ತೇವೆ
ನಿಟ್ಟುಸಿರೆ ನಿತ್ಯದ ರಾಗ, ಮೌನಕ್ಕೆ ಸಾಯುತೇವೆ
ಈ ಭೌಮ ಬದುಕಲ್ಲಿ ಶಬ್ದಗಳು ಇವೆಯಲ್ಲ
ತುಂಬಲಾರವು ನಮ್ಮ ಮೌನವನ್ನು
ಮಳೆ ಚಿಗಿತ ಕಣ್ಣಲ್ಲಿ ತೃಪ್ತಿ ಸೂಸುವಿರಾ ?
ಮಾತು ತುಂಬದು ನಿಮ್ಮ ಮೌನವನ್ನ