ಬೇಡಿಕೆಗಳು
ತುಟಿಯ ಕಡಿಯಬೇಡ ಹುಡುಗ
ಕಟಿಯ ಹಿಡಿಯಬೇಡ
ತಟಕು ತಟಕು ಹಿಸುಕುವಾಟ
ದಿಟ ಹೇಳುವೆ ಬೇಡ
ಹೆದೆಯ ಕಟ್ಟಬೇಡ ಹುಡುಗ
ಎದೆಯ ತಟ್ಟಬೇಡ
ಹದವಿಲ್ಲದ ಹಾದಿಯಲ್ಲಿ
ಹಾದು ಹೋಗಬೇಡ
ಕೊರಳ ಬಳಸಬೇಡ ಹುಡುಗ
ಬೆರಳ ತಳುಕು ಬೇಡ
ಸರಳ ಹಿಂದೆ ನೆರಳಿನಲ್ಲಿ
ನರಳುವಾಟ ಬೇಡ
ಜಡೆಯ ಬಿಚ್ಚಬೇಡ ಹುಡುಗ
ತೊಡೆಯ ಕಚ್ಚಬೇಡ
ತುಡುಗುಹೋರಿ ದುಡುಕುವಂತೆ
ಕೆಡವಿ ಕಡೆಯಬೇಡ
ಸುಗ್ಗಿ ಈಗ ಬೇಡ ಹುಡುಗ
ಹಿಗ್ಗಿ ನುಗ್ಗಬೇಡ
ಹಗ್ಗ ಹರಿದು ಹೋಗುವಂತೆ
ಜಗ್ಗಿ ಜೀಕಬೇಡ
ಆಪ್ತನಾಗ ಬಯಸಬೇಡ
ತಪ್ತರಾಗ ನುಡಿಸಬೇಡ
ಸಪ್ತವರ್ಣ ರೇಖೆಗಳಲಿ
ಸುತ್ತಿ ಸೆಳೆಯಬೇಡ
ಮನಸು ಕಾಡಬೇಡ ಹುಡುಗ
ಕನಸಿನಲ್ಲಿ ಕೂಡಬೇಡ
ಮುನಿಸಿ ಅಂದ ಮಾತುಗಳಿಗೆ
ನನ್ನ ಮರೆಯಬೇಡ
ಕಥೆಯ ಕಟೆಯಬೇಡ ಹುಡುಗ
ಕವನ ಮೀಟಬೇಡ
ಮೈತ್ರಿರಥದ ದಾರಿ ಬಿಟ್ಟು
ವ್ಯಥೆಯ ಪುಟಿಸಬೇಡ