ಸ್ಥಿತಿ
ಸುಡಬೇಕು ನಿನ್ನ ನಾನು
ಬೂದಿಯಾದರೂ ಬಿಡದೆ ನಿನ್ನನ್ನು
ಸಮನಾಗಿಸಬೇಕು ಶೂನ್ಯಕ್ಕೆ
ಯಾಕೆಂದರೆ ನೀನಲ್ಲ ಸತ್ಯ ನಿತ್ಯ ;
ಸ್ಥಿತಿ ಮಾತ್ರ – ಗತಿಯಿಲ್ಲ
ಯಾಕೆಂದರೆ ನಾನು ಸತ್ಯ
ಹುಟ್ಟಿಸುತ್ತೇನೆ, ನಿನ್ನಳವಿನಲ್ಲೆ
ನನ್ನವರೊಡಗೂಡಿ ನಾನೂ ಒಂದು
ಸ್ಥಿತಿಯನ್ನು
ಯಾಕೆಂದರೆ
ನಮ್ಮ ಹಿಂದಿರಬಹುದಾದ
ಮುಂದೆ ಬರಬಹುದಾದ
ಕಾಲರೇಖೆಯ ನಿರ್ದಿಷ್ಟ ಸ್ಪಷ್ಟ ಅವಕಾಶದಲ್ಲಿರುವ
ಒಂದೊಮ್ಮೆ ನಮ್ಮಂತೇ ಅಸಂಬದ್ಧ
ಅನಿವಾರ್‍ಯ, ಭೂತವಾಗಲಿಕ್ಕಿರುವ
ನಮ್ಮಂತೆ ಅರೆಬದುಕ ಬದುಕಲಿಕ್ಕಿರುವ,
– ಅವರೆಲ್ಲ
ಗತಿಶೀಲರಾಗಲಿಕೆ ಅಷ್ಟೆ
ಅವರೂ ಸುಡಲಿ ನಮ್ಮ ಸ್ಥಿತಿಯನ್ನು
ಯಾಕೆ, ಸುಡಬೇಕು ನಮ್ಮ ಸ್ಥಿತಿಯನ್ನು
(ಹುಸಿಯಾಗಲಿಕ್ಕಿಲ್ಲ ನನ್ನ ಆಸೆ)
ಯಾಕೆಂದರೆ….
(ಕ್ಷಮಿಸಿ, ಮತ್ತೊಮ್ಮೆ ಶೋಕಾಸು ಅನಿವಾರ್‍ಯ)
ಯಾವಾಗಲೂ,
ಯಾವಾಗಲೂ ಇರಬೇಕೆಂಬ
ಸ್ವಾರ್ಥಿ ಸ್ಥಿತಿಯನ್ನು
ನಿಸ್ವಾರ್ಥದಿಂದ ಸುಡಬೇಕು,
ಗತಿಯನ್ನು ಉಡಬೇಕು, ಸತ್ಯವೆಂದೆಂದೂ
ಅಚಲವಾಗದ ಹಾಗೆ
ಯಾಕೆಂದರೆ,
ಸತ್ಯ ಗತಿಶೀಲ.