ಕಾಲನುವಾಚ
ಗೆಳೆಯಾ,
ಒಳಗುದಿಯ,
ಒಂಟಿದನಿಯಿಂದ
ಮಾತುಗಳಲುಗುಳುತ್ತ
ಮೌನವನ್ನಪ್ಪಚ್ಚಿ ಮಾಡುತ್ತ
ಕ್ರಾಂತಿಮಂತ್ರವ ಕೂಗಿ ಕೊರಗುತ್ತಿ ಯಾಕೆ ?
ಸವಿಯ ಶಾಂತಿ ಭ್ರಮೆಯ ಕಳೆಯುತ್ತಿ ಯಾಕೆ ?
ನಿನಗೊಂದು ಭ್ರಮೆ, ಗೆಳೆಯಾ,…..
ನೀನೊಂದು ಭ್ರಮೆ.
ನನ್ನಂತೆ, ನಿನ್ನ ರೋಹಿಣಿಯ ಕೂಡೆ
ಆಕಾಶಗಂಗೆಯಲಿ ಮಿಂದು
ಬೆಳೆಕ ಹಿಂದೊಗೆವ ಕುಬ್ಜ ಕ್ವಾಸಾರುಗಳ
ಸವಾರಿ ಮಾಡಿ,
ಶನಿಯುಂಗುರದಿ ಕೂತು ಗಿರಗಿಟ್ಟಿ ತಿರುಗಿ ಜಗದ
ರಂಗನು ಹೀರಿ
ನಾ-ರಹಿತ ಕೃಷ್ಣ ವಿವರದೊಳಡಗಿ
ಕೂಡಲಿಕೆ,
ಅವಕಾಶ ತುಂಬಲಿಕೆ
ನನ್ನಂತೆ ಸಾರ್ವಕಾಲಿಕವಾಗಿ
ಸತ್ಯಸರಿಗಮವ ಹಾಡಲಿಕೆ ಹೆದರುತ್ತಿ ಯಾಕೆ ?
ನಾನು ನಿನ್ನಂಥಲ್ಲ,
ಮೌನಿ ಗೆಳೆಯ
ನಿನಗೆಲ್ಲ ಮೌನಿಯಾದ
ಕಿರಣದುಂಡೆಗಳಾದ ವಸಿಷ್ಠ,
ತಲೆಕೆಟ್ಟು, ಕಣ್ಣು ಪಿಳಿಪಿಳಿಬಿಡುವ
ಅಗಸ್ತ್ಯರಿಗೆಲ್ಲ
ನಿನ್ನ ಸುಡುಸೂರ್‍ಯ,
ನಿನ್ನ ಸ್ಫೋಟಕ ಸೂರ್‍ಯ
ಶೂನ್ಯದೊಳಗಿನ ಕ್ಷೀಣ ಮೌನ ಚುಕ್ಕೆ.
ಇಷ್ಟೆಲ್ಲ ಗಳಹಿದರೂ
ಗೆಳೆಯಾ,….
ಬಾಯಿ ಬಡಿದಾಟವನು
ಬಿಡಲೊಲ್ಲೆ ಯಾಕೆ ?