ಡಿಜಿಟಲ್ ಕಚೇರಿ
ಹೌದು ಡಿಜಿಟಲ್ ಕಚೇರಿ ಎಂದ ಮೇಲೆ ನೀವು
ಕತ್ತಿಗೆ ಒಂದು ನಾಯಿ ಬೆಲ್ಟು ಕಟ್ಟಿಕೊಂಡು
ಓಡಾಡಬೇಕು ಗಸಗಸ ಉಜ್ಜಿದರೆ
ಕುನ್ನಿಯ ಹಾಗೆ ಕುಯ್ ಗುಟ್ಟುತ್ತ
ತೆರೆದುಕೊಳ್ಳುತ್ತದೆ ಗಾಜಿನ ಬಾಗಿಲು.
ಈ ಬೆಲ್ಟನ್ನು ತೂಗಿಸುತ್ತಾ ಗಾಂಧಿ ರಸ್ತೆಯಲ್ಲಿ
ಊಟ ಸಿಂಫೋನಿಯಲ್ಲಿ ಶ್ವಾಜೆಂಜರ್
ಡಬಲ್ ಆಕ್ಟ್ ಮಾಡುತ್ತ ನಗುವ ಅಲೌಕಿಕ ದೃಶ್ಯದ ಖರೀದಿ
ಅಥವಾ ಪ್ಯಾರಡೈಸ್‌ಬುಕ್‌ಶಾಪಿನಲ್ಲಿ ಹೊಸ ವೋಚರ್ ಡಿಸ್ಕೌಂಟ್
ಡಿಜಿಟಲ್ ಕಚೇರಿ ಎಂದ ಮೇಲೆ ಈ-ಮೈಲಿನಲ್ಲೇ
ಪರಿಚಯ ಹೊತ್ತ ಕರಪತ್ರವನ್ನು ತೂರಿ, ಪರಿಸರ
ಕಾಳಜಿಯಿಂದ ಕಾಗದವೇ ಇಲ್ಲದೆ ಬಂದ ನೋಟೀಸಿಗೆ ಉತ್ತರ
ಕೊಟ್ಟು ಇನ್ನು ನಲವತ್ತೆಂಟು ಗಂಟೆಗಳ ಒಳಗೆ
ಪ್ರಮೋಶನ್ನಿಗೆ ಕಾಯುತ್ತ ಪ್ರೇಯಸಿ ಇನ್ನೇನು
ಎರಡು ನಿಮಿಷ ಮೂವತ್ತನಾಲ್ಕು ಸೆಕೆಂಡುಗಳ ಒಳಗೆ ಯಾಹೂ
ಮೆಸೆಂಜರಿನಲ್ಲಿ ಕಾಣಿಸಿಕೊಂಡರೆ ಅಲ್ಲೇ ಟ್ಯಾಬ್
ಒತ್ತಿ ಅತ್ತ ಇತ್ತ ಕೆಲಸ ಹಾಗೂ ಮಜಾ
ಡಿಜಿಟಲ್ ಕಚೇರಿ ಎಂದ ಮೇಲೆ ಫಾರ್ಮಲ್ ಡ್ರೆಸ್ಸಿನ
ಒಳಗೆ ಕೂತು ಶೇಂಗಾ ಬೀಜದಕನಸು
ಅಕಸ್ಮಾತ್ ಹಳೇ ಮೆಜಿಸ್ಟಿಕ್ಕಿನ ಬಿಸಿ ಬಿಸಿ ಚಿತ್ರಾನ್ನ
ನೆನಪಾದರೆ ಅಲ್ಲೇ ಸವಿದು ಹೊಸ
ಪಿಜ್ಜಾ ಮತ್ತು ಗುಂಡಿಯೊತ್ತಿದರೆ ಸೊರ್ರೆಂದು
ಸುರಿಯುವ ಕಾಫಿ ಅಥವಾ ಚಹಾ ಅಥವಾ ಹಾಲು
ಅಥವಾ ಡಿಜಿಟಲ್ ಕಚೇರಿ ಎಂದರೆ ಇನ್ನೂ
ಮಜವಾಗಿ ಹೇಗೆ ಎಂದರೆ
ಬೆನ್ನು ಬಾಗಿದಂತೆ ಬಳುಕುವ ಕುರ್ಚಿಯಲ್ಲಿ ಕೂತೇ
ಮಹಾನ್ ಚಿಂತನೆಗಳನ್ನು ತಲೆಗೆ ಹಚ್ಚಿಕೊಂಡು
ಡಿಜಿಟಲ್ ಕಚೇರಿಯಲ್ಲಿ ಅಬ್ಬ ಏನೇನು ಕೆಲಸ
ಹಗಲೂ ರಾತ್ರಿ ಇಲ್ಲಿ ಗುಡಿಸುತ್ತಾರೆ ಕಸ.