ಈಗಲೂ ಹಟ ಹಿಡಿಯುತ್ತೀರ?
೨೧-೧-೯೮
ಬೆಂಗಳೂರು
ನಿರ್ಧಾರಗಳ ದಾರಿ ಬಲುಕಷ್ಟ ಗೆಳೆಯರೆ
ಸುಮ್ಮನಿರುವುದೆ ಎಷ್ಟೊ ವಾಸಿ.
ಹೇಳಿ ಕೊಟ್ಟಿಲ್ಲವೇ ನರಸಿಂಹರಾಯರು
ತುಟಿ ಬಿಚ್ಚದೇನೇ ಅಟಕಾಯಿಸಿ.
ಅದು ಸುಲಭ. ಎದೆಯೊಳಗೆ ಹರಿಯುತ್ತಲ್ಲ
ಗೊಂದಲದ ನದಿ. ಏನು ಮಾಡೋಣ?
ಹೃದಯನಾಳಗಳಲ್ಲಿ ಸಿಕ್ಕಿಕೊಂಡಿರೋ
ಅನುಮಾನಗಳ ಹೇಗೆ ಸೈರಿಸೋಣ?
ಮಾತಿಗೆಳೆಯುವ ಮಿತ್ರ ಕುಲ ಕೋಟಿಜನ
ಕೇಳುವರು ಏನಯ್ಯ ನಿನ್ನ ಹಾದಿ?
ಮಾಜಿ ಸ್ನೇಹಿತೆ ಇಲ್ಲಿ ಕಣ್ಣು ಮಿಟುಕಿಸುತ್ತಾಳೆ
ಮಾರಾಯಾ ಹುಡುಕೋಣ ಹೊಸಾ ಬೀದಿ.
ಸಂಬಳದ ಮೇಲೆ ನಿಂತಿದೆ ನಿಮ್ಮ
ನಿರ್ಧಾರ ಪರ್ಧಾರ – ಹೇಳುತ್ತಾನೆ ಹೆಂಡತಿ
ಸುಖದ ತೌಲನಿಕ ಅಧ್ಯಯನ ಕೈಗೊಳ್ಳು
ಸಲಹಾದಾನ ನೀಡುವನು ನೆರೆ ಸಾಹಿತಿ.
ಹಾಗೆ ನೋಡಿದರೆ ಮಲ್ಲಿಗೆ ಸೇವಂತಿಗೆ
ಅಂಟಿಕೊಂಡದ್ದು ನಿರ್ಧಾರಕ್ಕಲ್ಲ, ನೆಲಕ್ಕೆ.
ಕೈ ಚಾಚಿದ್ದು ಆಕಾಶಕ್ಕೆ ಅನ್ನೋದಾದರೆ
ಏನೆನ್ನಲಿ ನಿಮ್ಮ ಅನುಭವಕ್ಕೆ?
ನಮ್ಮ ನೀತಿಗೆ ನೆಲೆಗೆ ಬದ್ಧತೆಗೆ ಸೈಟಿನ ಬೆಲೆಗೆ
ದಿನಾ ಹುಡುಕುತ್ತೇವೆ ಹೊಸ ಸಿದ್ಧಾಂತ
ಅದೇ ನೋಡಿ ಕಾಡು – ನದಿ – ಕೊಳ್ಳ – ಕಂದರ
ಸಮುದ್ರ ಹೇಳಿದ್ದೆಲ್ಲ ಶಾಶ್ವತ.
ಬಡಾವಣೆಗೆ, ಹಂತಕ್ಕೆ, ಮನೆಬಾಗಿಲಿಗೆ
ಹಾಸಿದ್ದೇವೆ ಬೇಕಾಬಿಟ್ಟಿ ರಸ್ತೆ.
ಅಷ್ಟಾಗಿಯೂ ಯಾರನ್ನೋ ಹುಡುಕಾಡಿ
ತಿರುಬಿಕ್ಕಿಯಾದವರೂ ನಾವೆ, ಗೊತ್ತೆ?
ಶಬ್ದಗಳ ಜಾಲವಿದು ಎನ್ನದಿರಿ ಗೆಳೆಯರೆ
ಮೌನವೂ ಇಲ್ಲಿ ಆವರಿಸಿದೆ.
ಯಾಕೆ ಈಗಲೂ ಹಟ ಹಿಡಿಯುತ್ತೀರ
ನಾಳೆಗಳ ಹುಡುಕಾಟ ಹಿಡಿಯುತ್ತೀರ
ನಾಳೆಗಳ ಹುಡುಕಾಟ ಇದ್ದೇ ಇದೆ.