ಎದೆಶಿಥಿಲ ನಡೆಜಟಿಲ ಶ್ರುತಿಯೊಡೆದ ಬೆರಳು; ಸರಿದ ಬಾಗಿಲಿನಾಚೆ ಖಾಲಿ ನೆರಳು.
ಶರಣು ಬಂದರೂ ನೀವು ಸಿಗಲಿಲ್ಲ ಕೊನೆಗೂ. ಕೈಚಾಚಿದಷ್ಟೂ ಕಪ್ಪುಹೊರಳು.
ಬೆಳಕು ಹರಿಯುವ ಮುನ್ನ ಕರೆದು ಕೂರಿಸಿ ನನ್ನ ಬೇಗುದಿಯ ಕಳೆದವರು ನೀವು.
ಮರೆಯಾದಿರೇಕೆ?
ದನಿಹಗುರ ಸ್ವರಪದರ ಧ್ಯಾನಸ್ಥ ಜತಿನೋಟ; ಅನವರತ ನೀಡಿದಿರಿ ರಾಗದೀಕ್ಷೆ
ರೂಕ್ಷನಗರವ ದಾಟಿ ತಲುಪಿದರೂ ದಕ್ಕಲಾರದೆ ಹೋಯ್ತು ನಿಮ್ಮ ರಕ್ಷೆ;
ಹದಗತ್ತಲಿನ ಹೊದಿಕೆ ಸರಿಸಿ ನಡೆದಿರಿ ನೀವು ನಿಮ್ಮದೇ ಹಾದಿಯಲ್ಲಿ.
ಕರೆಯಾದಿರೇಕೆ?
ದಿನಹಗಲು ರಾತ್ರಿಗಳ ಕ್ಷಣಗಳೆಣಿಸದ ಬದುಕು; ನಾದಬಿಂದುಗಳಾಚೆ ನಿಮ್ಮ ಗಮನ.
ಎದೆಗುದಿಯ ತಳಮಳವ ಕಳೆವ ಸಂತನ ಶಕ್ತಿ. ನಿಮ್ಮಡಿಗೆ ನನ್ನ ನಮನ.
ಬಿರುಗಳಿಗೆ ಸುಡುಮಳೆಗೆ ಪಕ್ಕಾಗದಂತೇನೆ ನೆರಳು ಕೊಟ್ಟಿರಿ ನೀವು
ಸ್ವರವಾದಿರೇಕೆ?
ಓ ಗುರುವೇ..
ನನ್ನೊಳಗೆ ನದಿಯಾದಿರೇಕೆ?
೭ ಫೆಬ್ರುವರಿ ೨೦೧೯