ಅವಳ ನೆನಪು
೨೩-೧೧-೮೮
ಬೆಂಗಳೂರು
ನಾನು ದಿನಾ
ಅವಳ ನೆನಪಿನಿಂದಲೇ ಕೈ ತೊಳೆದುಕೊಳ್ತಿದೇನೆ
ಸದಾ ಅವಳು ಹೇಳ್ತಾಳೆ :
“ನೆನಪಿನಿಂದ ಮೈ ತೊಳೆದ ನನ್ನ ಪ್ರಕೃತಿಯಲ್ಲಿ
ಸ್ವಚ್ಛ ಆಹ್ಲಾದತೆ."
ಅವಳ ನೆನಪು
ತೊಟ್ಟು
ತೊಟ್ಟು
ತೊಟ್ಟಿಕ್ಕುತ್ತದೆ.
ಈಗವಳ ನೆನಪೇ
ನನ್ನ ಮೆಚ್ಚುಗೆಯ ಗಡಿಯಾರ. ನಾನೀಗ
ಏಕಾಂಗಿ ಸಮಯ ಸವೆಸುವ
ಹೊಸ ಸರದಾರ.
ಅವಳ ನೆನಪನ್ನು ಬೋರ್ನ್‌ವಿಟಾದಂತೆ
ದಿನಾ ಕುಡಿಯುತ್ತೇನೆ.
ನಾನು ಶಕ್ತಿಶಾಲಿ.
ಕೆಲವು ಸಲ
ಅವಳ ನೆನಪಿನ ಭಯಂಕರವಾದ ಶೀತದಿಂದ
ನರಳುವೆ. ಆ ರಾತ್ರಿ
ದೀಪಗಳನ್ನು ಆರಿಸದೆ ಒಬ್ಬಂಟಿ
ಹೊರಳುವೆ.
ಮರುದಿನ
ಅವಳ ನೆನಪಿನಿಂದ ಹಲ್ಲುಜ್ಜುವೆ
ಅವೀಗ ಹೆಚ್ಚು ಸುರಕ್ಷಿತವಾಗಿವೆ.
ಅವಳ ನೆನಪು
ಆರಂಭಕ್ಕೆ ಅತ್ಯುತ್ತಮ.
ಬೆಳವಣಿಗೆಗೆ ಅನುಪಮ.