ನನ್ನ ಕವಿ
೨೩-೧೦-೯೪
ಮೈಸೂರು
ಎಲ್ಲಿ ಹೋದ ನನ್ನ ಕವಿ ಬಹಳ ಅನುಭವಿ
ಸೂರ್ಯನನ್ನು ಸುತ್ತಿ ಸೆಳೆದು
ಚಂದ್ರನ ಜತೆ ಚಹಾ ಕುಡಿದು
ಎದೆಯನೊದ್ದು ಹೂವಕಿತ್ತು ಖ್ಯಾತನಾದ ಭವಿ
ಸ್ನೇಹಮೋಹ ಪಾಶದಲ್ಲಿ ಸದರಕೊಟ್ಟ ಹುಡುಗು ಕವಿ
ಸಿಗರೇಟಿನ ತುದಿಯ ಮುಟ್ಟಿ
ತುಟಿಯ ಬದಿಯ ಮಚ್ಚೆ ತಟ್ಟಿ
ಬೆರಳ ಕಚ್ಚಿ ಕಣ್ಣ ಮುಚ್ಚಿ ಧ್ಯಾನಿಸಿದನು ಈ ಭವಿ
ಬಟಾಬಯಲಿನಲ್ಲಿ ಮರಳು ಹಾದಿಯಲ್ಲಿ ನಡೆದ ಕವಿ
ನೂರು ಅಡ್ಡದಾರಿ ಹೊಕ್ಕು
ಬಿಕ್ಕಿ ಬಿಕ್ಕಿ ಅತ್ತು ನಕ್ಕು
ಬನ್ನಿರೋ ಬನ್ನಿರೋ ಎಂದು ಮೊರೆದ ಭವಿ
ಸೂಕ್ಷ್ಮವಾಗಲಿಲ್ಲ ಹಣೆಯ ಗೆಳೆಯನಾಗಲಿಲ್ಲ ಕವಿ
ಅಕ್ಷರಗಳ ಬರೆಯಲಿಲ್ಲ
ನಕ್ಷತ್ರವ ಎಣಿಸಲಿಲ್ಲ
ಭಾವುಕತೆಯ ಹೊದ್ದುಕೊಂಡು ಗುನುಗಲಿಲ್ಲವೀ ಭವಿ
ನನ್ನ ಕವಿ ನನ್ನ ಕವಿ ಎಲ್ಲಿ ಹೋದ ಸ್ವಾನುಭವಿ
ಯಾರೂ ತಿಳಿಯದಂತೆ ಹಾಗೆ
ಯಾರೂ ಕಾಣದಂತೆ ಹಾಗೆ
ಮಂಜಿನಲ್ಲಿ ಕರಗಿ ಹೋದ ಜಾರಿದಂತೆ ಭವಿ
ನನ್ನ ಕವಿ, ಅನುಭವಿ, ನನ್ನ ಹಾಗೆ ಭವಿ.