ಹೊಸ ವರ್ತಮಾನ
೧೪-೩-೯೨
ಬೆಂಗಳೂರು
ವರ್ತಮಾನದ ಹೊಸ ವಾರ್ತೆ ಕೇಳಿದ್ದೀರ? –
ಶಾಂತವಾಗಿದೆ ನನ್ನ ಎದೆ ಸಮುದ್ರ
ಬೇಜಾರು ದೋಣಿಗಳು ದಡಸೇರಿ ನಿಂತಿವೆ
ಮತ್ತೆ ಬೆಳೆದಿವೆ ತಳದಿ ಹವಳತೋಟ.
ಅನುಭವದ ಮಂಜುಗಡ್ಡೆಗಳು ಕರಗುತ್ತ
ಹರವು ಪಡೆದಿದೆ ನನ್ನ ಎದೆ ಸಮುದ್ರ
ಯಾತನೆಗೆ ಅಪ್ಪಳಿಸಿ ಅಪ್ಪಳಿಸಿ ಅಪ್ಪಳಿಸಿ
ಛಲದಿ ತಿರುಗೆದ್ದಿರುವ ಅಲೆಯ ಮೊರೆತ.
ಯಾತ್ರಿಕರು ಬಂದೆದುರಾಗಿ ನಿಂತವರು
ಕಲ್ಲೆಸೆದರೂ, ನಗುವ ಎದೆಸಮುದ್ರ
ಬಟ್ಟಬತ್ತಲೆಯಾಗಿ ಸುಖವನ್ನು ಸೋಕಿದರೂ
ಆರಲಾರದು ಉಪ್ಪುನೀರಿನೊಳತೋಟಿ.
ಬರುವ ದಿನಗಳ ನೂರು ಕ್ಷಣಿಕ ದೃಶ್ಯಗಳಲ್ಲಿ
ಬತ್ತಲಾರದು ನನ್ನ ಎದೆಸಮುದ್ರ
ಕಣ್ಣು ಸೋಲುವತನಕ ಪರೀಕ್ಷಿಸುತ್ತೀರ –
ಅಷ್ಟೆ. ಕೊನೆಗೆ ನೀವೇ ನನ್ನ ಎದೆಸಮುದ್ರ.