ನಾನು ಸಮುದ್ರ
ಸುಖಶಿಖರಗಳು
ಗುಪ್ತನಗರಗಳು
ಭಾವನೆಯ ಸಹಸ್ರಾರು ಬಲಿಗಳು
ನನ್ನೊಳಗೆ ಭದ್ರ.
ಕಿವಿ ಮೂಗು ಕಣ್ಣು ಬಾಯಿ
ಕೊನೆಗೊಂದು ಸುದೀರ್ಘ ಸ್ಪರ್ಶ
ನಾನು ಪಂಚನದಿಗಳ
ಸಂಪೂರ್ಣ ಪುರುಷ.
ಸ್ಮರಣೆ ಕೊರೆದ ಕಣಿವೆಗಳಲ್ಲಿ
ಅನುಭವದ ಹವಳ
ಹೊಳೆಯುತ್ತಿದೆ. ತಳಕ್ಕಿಳಿದ
ಬೆಳಕಿನಿಂದ ದೀಪೋತ್ಸವ
ನಾನು ಆಕಾಶಗಂಗೆಯಂತೆ
ಮಹಾನ್ ಅನಾಥ.
ನನ್ನ ಹಿಡಿದೆಳೆವ ಚಂದ್ರ ಎಲ್ಲಿದ್ದಾನೆ?
ನನ್ನ ಕುಡಿದ ಅಗಸ್ತ್ಯ ಏನು ಮಾಡುತ್ತಿದ್ದಾನೆ?
ಕಡೆದ ರಾಕ್ಷಸರು ಎಲ್ಲಿದ್ದಾರೆ?
ದೇವತೆಗಳೆಲ್ಲಿ ಹೂಮಳೆ ಸುರಿದಿದ್ದಾರೆ?
ಸರಳ
ಸತ್ಯವಾಕ್ಕುಗಳಿಗೆ
ಸಾಕ್ಷಿ ವಿರಳ
ನಾನು ಸಮುದ್ರ
ಇದು ಸತ್ಯ
ನಾನು ದುಃಖಿತ
ಇದು ಕ್ಷಮಿಸಿ
ಅಪ್ರಸ್ತುತ
ಆದಿರಹಿತ.
…………………..
೨೫-೧೧-೮೮
ಬೆಂಗಳೂರು