ನನ್ನ ಮೇಡಂ ಜಯಲಕ್ಷ್ಮಿ
೫-೭-೮೭
ಮೈಸೂರು
ನನ್ನ ಮೇಡಂ ಜಯಲಕ್ಷ್ಮಿ ಮದುವೆಯಾಗಲಿಲ್ಲ
ಎನ್ನುವುದಕ್ಕಿಂತ x 2 = ೨೫ ಇದ್ದಾಗ
`x ನ ಬೆಲೆ ಪ್ಲಸ್ಸೋ ಮೈನಸ್ಸೋ ಐದೋ – ಎಂದದ್ದು
ನನಗೆ ಸುದ್ದಿ. ಅದುವರೆಗೆ ಗಣಿತದಲ್ಲಿ
ನನಗಿರಲಿಲ್ಲ ಒಂಚೂರು ಬುದ್ಧಿ.
ನನ್ನ ಮೇಡಂ ಜಯಲಕ್ಷ್ಮೀ ಕನ್ನಡಕ ಹಾಕುತಿದ್ದರು
ಅನ್ನೋ ವಿಷಯ ಒತ್ತಟ್ಟಿಗಿಡುವೆ. ಲೆಕ್ಕತಪ್ಪಿದರೆ
ತೆಳುವಾಗಿ – ತೀಕ್ಷ್ಣವಾಗಿ ನೋಡಿ ತಿದ್ದಿ
ಅವರ ಕಣ್ಣುಗಳನ್ನು ನೆನಪಿಡುವೆ.
ನನ್ನ ಮೇಡಂ ಜಯಲಕ್ಷ್ಮಿ ನನಗಿಂತ ಕುಳ್ಳು ಎಂಬುದು
ನಿಜ. ಕುಳ್ಳಿ ಎಂಬುದು ಸುಳ್ಳು. ಕ್ಲಾಸು ತಪ್ಪಿಸಿ
ಕ್ರಿಕೆಟ್ಟಿಗೆ ಓಡಿದಾಗ ಎತ್ತರದಲ್ಲಿ –
ಎತ್ತರದ ದನಿಯಲ್ಲಿ ಏನೋ ಹೇಳಿದ್ದರು ; ಮರೆತಿದ್ದೇನೆ
ಕಳ್ಳತನದ ಕುಬ್ಜನಾಗಿದ್ದನ್ನು ಗುರುತಿಟ್ಟುಕೊಂಡಿದ್ದೇನೆ.
ನನ್ನ ಮೇಡಂ ಜಯಲಕ್ಷ್ಮಿ ದಿನಾಲೂ ನಾಲ್ಕಾರು
ಮೈಲಿ ದೂರ ನಡೆದು ಬರುತ್ತಿದ್ದರು
ಹುಡುಗ-ಹುಡುಗಿಯರೆಲ್ಲ ಬದುಕಿನ ಲೆಕ್ಕ ಕಲಿಸಿದರು
ನೂರಾರು ದಿನಗಳಾಗಿವೆ ಈಗ; ಅವರನ್ನು ನೋಡಿಲ್ಲ
`x'ನ ಬೆಲೆ ಕಂಡುಹಿಡಿದಿಲ್ಲ. ` Y'?
ಈಗ ನೀನು
ನಕ್ಕ ಮೇಲೆ
ನನ್ನ ಮೇಡಂ ನೆನಪಾದರೆಂದು ಅಳಲೆ?
ನೀನಾದರೂ ಕಂಡಿದ್ದಕ್ಕೆ ನಗಲೆ?
ಉತ್ತರಿಸು.