ವಿವರಣೆ
೨೯-೧-೮೭
ಬೆಂಗಳೂರು
ಎದೆಯು ಗಾಳಿಯ ಹಾಗೆ ಹಾರೋ ಸಮಯದ ಹೊತ್ತು
ಅವರು ಮರದಡಿಯಲ್ಲಿ ಕುಳಿತಿದ್ದರು
ಉಸಿರಾಟಗಳ ಜತೆಗೆ ರಕ್ತಪಲ್ಲಟವಾಗಿ
ಹೃದಯಗಳು ಘನವಾಗಿ ಅಳುತಿದ್ದವು.
ಹೃದಯ ಗಾಳಿಯ ಹಾಗೆ ಹಾರೋ ಸಮಯದ ಹೊತ್ತು
ಅವರು ಮರದಡಿಯಲ್ಲಿ ಕುಳಿತಿದ್ದರು
ಎದ್ದ ಪ್ರಶ್ನೆಗಳೀಗ ನಾಲ್ಕು ಮಾತುಗಳಲ್ಲೆ
ತೃಪ್ತವಾಗದೆ ಹಾಗೆ ನಿಂತಿದ್ದವು.
ಸುಖವು ಸಾಯುವ ಹಾಗೆ ಅನುಮಾನ ಬಂದ ಕ್ಷಣ
ಅವರು ಮರದಡಿಯಲ್ಲಿ ಕುಳಿತಿದ್ದರು
ಜನರ ಮಾತಿನ ಬಾಣ – ಅಥವಾ ಮೆಸ್ಸಿನ ಬಿಲ್ಲು
ಅಲ್ಲಿ ಒಂದರಗಳಿಗೆ ಮರೆತಿದ್ದರು.
ಮುತ್ತು ಮುತ್ತಿನ ಹಾರ ಕೊಡು – ತಗೊಳ್ಳುವ ಸಮಯ
ಅವರು ಮರದಡಿಯಲ್ಲಿ ಕುಳಿತಿದ್ದರು
ಸತ್ತ ನೆನಪುಗಳನ್ನು ಮತ್ತೊಮ್ಮೆ ಕೆದಕುತ್ತ
ಹುಚ್ಚು ಹದಿನಾಲ್ಕಾಣೆ – ನಗುತಿದ್ದರು.