ಪಾಪಿಯ ಪದ್ಯ
೨೯-೧-೮೭
ಬೆಂಗಳೂರು
ನನ್ನ ತುಟಿ ಕಟುವಿಷದ ಬಳ್ಳಿಯಾಗಲಿ ದೇವಾ…
ಗೆದ್ದಲುಗಳು ಸುತ್ತಲಿ ಹೀಗೆ ಬೆರಳುಗಳ
ನನ್ನದೆಯೀಗ ಪಾಪಾಸು ಕಳ್ಳಿಯಾದರೂ ಸರಿಯೆ,
ಗೂಢ ನಿಶ್ಶಬ್ದಗಳು ಕಾಯಲಿ ಈ ದುರುಳ ನಾಲಗೆಯ
ನನ್ನೆರಡು ಕಣ್ಣುಗಳು ಗಂಧಕಾಮ್ಲದ ಹೊಗೆಗೆ
ಬೇಯಲಿ ದೇವಾ… ಕಿವಿಗಳೂ ಸಿಡಿಯಲಿ ಮೆಲ್ಲಗೆ
ಹೀಗೆ – ಪ್ರೀತಿ ಮಾತುಗಳಂತೆ. ಕರಗಿಸು ನನ್ನ
ಮನಸ್ಸನ್ನು, ಕತ್ತರಿಸು ಎದೆ ಕವಾಟಗಳ –
ಅವರಿವರು ನೆನಪಿರುವ ನೂರು ಕನಸುಗಳ
ಅಂಗಾಂಗಗಳನ್ನು ಚೆದುರಿಸು ಆಕಾಶದಲ್ಲಿ. ಉದುರಿಸು
ಈ ನೆಲದಲ್ಲಿ – ಸುಖದ ತುಂತುರುಗಳೂ ಕೊನೆಗೊಳ್ಳಲಿ
ನಾಳೆ ಎಂಬ ಸಾವು ನನಗೆ ಹೀಗೆ ಬರಲಿ.
ಎಂದು, ಈ ಕೆಟ್ಟ ಜೀವಕ್ಕೆ ವಿದಾಯ ಹೇಳಲೆಂದು
ಕ್ಷಣಗಳನ್ನೆಣಿಸಿ ಕುಳಿತಿದ್ದೇನೆ, ನೀ ಬರುತ್ತೀಯೆಂದು.