ನಿವೇದನೆ
೨೩-೮-೮೭
ಬೆಂಗಳೂರು
ಗಡ್ಡ ಬೆಳೆದಷ್ಟುದ್ದ ತಪಸು ಉಳಿದಂತಿಲ್ಲ
ಒಳಗೆ ನಿದ್ದೆಯ ಕಾಟ. ಹೊರಗೆ ಸೊಳ್ಳೆ.
ಅರ್ಧರಾತ್ರಿಯ ಜತೆಗೆ ನಿರ್ಧಾರಗಳ ಮಾತು
ಬದುಕು ಬಬ್ಬಲ್‌ಗಮ್ಮು. ದೊಡ್ಡ ಗುಳ್ಳೆ.
ದುಃಖ-ಸುಖಗಳ ಗತಿಗೆ ಭಾಗವಾಯಿತು ಭಾವ
ಕಣ್ಣು ರೆಪ್ಪೆಗೆ ಕೊಂಚ ಸ್ಥಿತಿ ಮಂಪರು
ಕಾಂಕ್ರೀಟು ಗೋಡೆಗಳ ನಾಡಿಬಡಿತದ ನಡುವೆ
ಕಂತಿಹೋದಂತಿರುವ ನಗುದೀವಿಗೆ.
ಇಬ್ಬನಿಯ ಹೊದಿಕೆಯಲಿ ಊರು ಮನೆ. ಮುಂಜಾನೆ
ತೋಟ ಬಿಮ್ಮಗೆ ನಿಂತ ಹೊಸ ವೈಖರಿ
ಕೆರೆಯ ದಡದಲ್ಲೀಗ ಬಿದ್ದ ಮರವೂ ಚಿಗುರಿ
ತಾಯಿಗುಟುಕಿಗೆ ಬಾಯ್ದೆರೆದ ಗುಬ್ಬಿ.
ವರ್ಷದೊಳಗೆಷ್ಟು ದಿನ ನೆನಪಿಟ್ಟು ನನ್ನ ಜನ
ಕರೆದು ಹೇಳಿದ ಮಾತು ಹೊಸ ಚರಿತ್ರೆ
ಈಗಿಲ್ಲಿ ನಿಂತಿರುವ ಕೆಳಗೆ ಚಪ್ಪಲಿ ಮೀರಿ
ಪಾದ ತಟ್ಟಿದ ನೆಲದ ಚೂಪುಗಲ್ಲು.
ಪತ್ರ ಬರೆಯದ ಹಾಗೆ ಮನಸ್ಸು ದಿಕ್ಕಾಪಾಲು
ಪುಟ್ಟ ದೀಪದ ಕೆಳಗೆ ನನ್ನ ಸೋಲು
ಎದೆಗೆ ಕೇಳುವುದುಂಟೆ ಯಾವ ಪೆನ್ನಿಗೆ ಹೀಗೆ
ಕಷ್ಟು ಕೊಡದಂತೇನೆ ಹೊಳವ ಸಾಲು?
ತಣ್ಣಗಾಗುವ ಗಾಳಿ ಬಣ್ಣಗಾಗುವ ಕನಸು
ಕಾರುಜೀಪಿನ ಬೆಳಕು ರಸ್ತೆಯುದ್ದ
ಖಾಲಿಯಾಗುವ ನನ್ನ ಭಾವಕೋಶಗಳಿಲ್ಲಿ
ಎಲ್ಲೊ ನಿಶ್ಶಬ್ದ ಉಸಿರೆಳೆವ ಶಬ್ದ