ಖಳನಾಯಕಿ
29.3.86 / ದಾವಣಗೆರೆ
ನಿನ್ನಕ್ಷರಗಳು ಕಟ್ಟಿದ ಕವನದ
ಖಳನಾಯಕಿ ನಾನು
ನನ್ನ ಕಾಡುತಿಹ ಪ್ರಶ್ನೆಗಳಲ್ಲಿನ
ಪ್ರತ್ಯುತ್ತರ ನೀನು
ನಿನ್ನ ಎದೆಗೊದ್ದ ಪ್ರೇಯಸಿಯೆದುರೇ
ನಿನಗೂ ಮುತ್ತಿಡುವೆ
ನಿನಗೆದುರು ಬರುವ ಖಳರ ತುಟಿಗಳಿಗೆ
ಕೆಂಡವ ತಾಗಿಸುವೆ
ನಿನ್ನ ಕಣ್ಣುಗಳ ಕುಸಿದ ರೆಪ್ಪೆಗಳ
ಜತನದಿಂದೆತ್ತುವೆ
ಹಣೆಯ ರೇಖೆಗಳ ದಿಕ್ಕು ಬದಲಿಸುವೆ
ನನ್ನ ಎದೆಗೊತ್ತುವೆ
ವಿರಹದ ವಿಷಾದಗೀತೆ ಬರೆಯದಿರು
ನಿನ್ನ ಬೆರಳಾಗುವೆ,
ಸುಖಮಯ ಸಂಜೆಯ ಸಣ್ಣ ಕಣಗಳಲಿ
ಸರಿವ ನೆರಳಾಗುವೆ
ತೆರೆದ ಬಾಗಿಲಿನ ನಡುವೆ ನಿಂತಿರುವ
ಕನಸುಗಾರ ನೀನು
ಸುಳಿಗತ್ತಲ ಸುಡು ಸೂರ್ಯನಾಗದಿರು
ಬರಿ ಬತ್ತಲು ನಾನು
ನಿನ್ನಕ್ಷರಗಳು ಕಟ್ಟಿದ ನನ್ನೆದೆ
ನಿನ್ನೊಳಗಾಗುವುದು
ನಿನ್ನ ಪ್ರಶ್ನೆಗಳ ಪರಿಮಿತಿಯಲ್ಲೇ
ಪ್ರೀತಿಯ ಹುಡುಕುವುದು.