ಅವಳು
೧೯೮೫
ತುಟಿಗೆರೆಗಳಲ್ಲಿ ಬೆರಳ ಮುದ್ರೆಗಳಲ್ಲಿ ತೆರೆದ
ಮಾತು ಮಧ್ಯಾಹ್ನದಲ್ಲಿ ನೆನಪಾಗಿ… ಮೆಟ್ಟಿಲ
ಮೇಲೆ ಈಗಿಲ್ಲ ರಂಗೋಲೆ
ಹೆಜ್ಜೆ ಗುರುತಾದ ಬಾಲೆ.
ದನಿದನಿಗಳಲ್ಲಿ, ದಾರಿಗಳ ಬರೀಬರೀ ಹಣೆಯಲ್ಲಿ
ಬರೆದ ಮಾತುಗಳಲ್ಲಿ ಇರಬಾರದಿತ್ತು
ಸುಳಿಯೊಡೆದ ನೆರಳು
ಒಳಗೆಳೆಯತಕ್ಕ ರಾಗತಾಳಗಳು.
ಅರೆಬಿಚ್ಚಿ ಕಣ್ಣಿನ ರೆಪ್ಪೆ, ಮೆದುಬಿದ್ದ ಅಂಗಾಲು
ತನಿಬೆವರ ಲೇಪನ ಮರೆತ ತೊಗಲು – ಮುಖದಲ್ಲಿ
ಮೌನ ಹರಡಿದಂತೆ ನೆಲದ ಜಡ,
ನಾಳೆಯೇ?… ಇಲ್ಲ.
ಅವಳು ಸತ್ತಿರುವಾಗ ಅಳಲು ಪರದೆಯಿದೆ
ಎದೆಯಗಲ ಕಥೆ ಮುಚ್ಚಲು
ಆದರೂ ರೇಖೆಗಳು, ಕಣ್ಣ ಹನಿಗಳು ಮಾತ್ರ
ಸಿದ್ಧ, ನಿಮ್ಮಲ್ಲಿ ಒಂದಷ್ಟು ವ್ಯಥೆ ಬಿಚ್ಚಲು.