ಮುಟ್ಟಬೇಡ ಗೆಳೆಯ ನೀನು
೨೮-೩-೮೪
ದಾವಣಗೆರೆ
ಮುಟ್ಟಬೇಡ ಗೆಳೆಯ ನೀನು
ಮಗುಚಬೇಡ ನೋವು
ಹುಚ್ಚು ಹೊಳೆಯ ಹಾದಿಯಲ್ಲಿ
ಬಿಚ್ಚಬೇಡ ನೆನಪು
ಕೂಟದೊಳಗೆ ಕರಗಿ ಕರಗಿ
ಶೂನ್ಯವಾದೆ ನಾನು
ಮೆದುನಗುವಿನ ಅಲೆಯೆಬ್ಬಿಸಿ
ಮಲಗಿತಲ್ಲ ಬಾನು?
ಕೆರೆಯೇರಿಯ ದಾರಿಹಿಡಿದು
ದೂರ ನಡೆದೆ ನೀನು
ಕೆರೆಯಂಚಿನ ಕಟ್ಟೆಯಲ್ಲಿ
ಬಿಮ್ಮನುಳಿದೆ ನಾನು
ನಾಳೆ ಬರುವ ನಿನ್ನ ಕಾದು
ಕಾಲದಲ್ಲಿ ಜಾರಿ
ಬಾಳು ಹರುಕು; ಬಯಲಗಲಕು
ಚೂರು ಚೂರು ದಾರಿ
ಹುಲ್ಲು ಹಾದಿಯಲ್ಲಿ ಕಲ್ಲು
ಉದ್ದಗಲಕು ಬೆಳೆದು
ನಿಲ್ಲದಂತೆ ಬದುಕು – ಮೆಟ್ಟಿ
ಮೈಯಗಲಕು ಬರಿದು
ಬೆಚ್ಚನುಸಿರು ಕತ್ತರಿಸುತ
ಕದಡಿತಲ್ಲ ನೋವು?
ಹಚ್ಚ ಹಸಿರ ಪಾಚಿ ಹರಡೀ
ಹೆಚ್ಚಿತಲ್ಲ ಕಾವು?
ಎದೆ ಮುಟ್ಟಿಯು ತಟ್ಟಬೇಡ
ನಯವಿಲ್ಲದ ಬೆರಳೇ…
ಎದೆ ತುಂಬಿದೆ ಮಾತು: “ಬೇಡ
ಭಯವಿಲ್ಲಿದು, ನೆರಳೆ.”
ಬಿಚ್ಚಬೇಡ ಗೆಳೆಯ ನೀನು
ಹುಚ್ಚು ಹೊಳೆಯ ನೆನಪು
ಮುಚ್ಚಬೇಡ ಹಾದಿಯನ್ನು
ಹೊರವಾಗಲಿ ನೆನಪು