ನಮ್ಮನ್ನೆ ಬದಲಿಸಿಕೊಂಡು
ನಿನ್ನ ತುಟಿಕಣಿವೆಯಲಿ ನನ್ನ ಹಾಡಿದೆ ಗೆಳತಿ
ತೆಗೆದುಕೊಡು ಮೆಲ್ಲನೆ ಈ ಸಂಜೆ.
ಒಂದೊಂದೆ ಪದವ ಕಟ್ಟಿಕೊಡುವೆನು
ನಿನ್ನನ್ನೆ ಸ್ಥಾಯಿಯಾಗಿಸಿ ಈ ಸಂಜೆ.
ನಿನ್ನ ಹಣೆಕಂದರದಿ ನನ್ನ ಬದುಕಿದೆ ಗೆಳತಿ
ಬರೆದುಕೊಡು ನನಗಾಗಿ ಎಲ್ಲವನ್ನು.
ಎಲ್ಲ ವಿಧಿಲಿಖಿತ ಬದಲಿಸಲು ಯತ್ನಿಸುವ
ನಮ್ಮನ್ನೆ ಬದಲಿಸಿಕೊಂಡು ಈ ಸಂಜೆ.
ಈ ನಿನ್ನ ತೋಳಿನಲಿ ನನ್ನ ತಳಮಳ ತರಂಗ
ಬಿತ್ತರಿಸಿಬಿಡು ಈಗಲೇ ಕಿಟಕಿಯಾಚೆಗೆ.
ಹರಡಿಹೋಗಲಿ ನಮ್ಮ ಖಿನ್ನಭಾವಗಳು
ಅಡಗಲಿ ಅಶಾಂತ ಧೂಳು ಈ ಸಂಜೆ.
ನಿನ್ನ ಕಣ್ಣಂಚಿನ ಹನಿ ನನ್ನದೇ ಚೆಲ್ಲಿಬಿಡು
ಈ ಸುಖ ಬೊಗಸೆ ಅಂಗಳದಲ್ಲಿ
ನನ್ನೆದುರು ನಿಂತು ನೋಡು, ನಿಜ
ಮುಂದಿರುವುದೆಲ್ಲ ನಮ್ಮ ಸಂಜೆ.
ಬೆಚ್ಚಗಿರೊ ನಿನ್ನ ಅಂಗೈ ಹೊಮ್ಮಿಸಿದೆ
ಯಾವುದೋ ಯಾತನೆಯ ಕಣಗಳ.
ನಿನ್ನದೆ? ನನ್ನದೆ? ಯಾರದೆ?
ಬಾ. ಇಲ್ಲಿದೆ ಒಂದೇ ಒಂದು ಸಂಜೆ.
೧೮ ಡಿಸೆಂಬರ್ ೨೦೦೫
—————–