I wrote this poem under intense depression. This year’s Vikrama Vijayadashami Special issue has carried this poem.
ನನ್ನ ಕಾಯವ ನಾಳೆ ಕರಗಿಸಿಬಿಡುವೆ
ಪ್ರೀತಿ ದ್ವೇಷಗಳ ಬೇರ್ಪಡಿಸಿ
ಯಾತನೆಯ ಕ್ಷಣಗಳನು ನಾನಿಟ್ಟುಕೊಳ್ಳುವೆ
ಎಲ್ಲ ಸವಿನೆನಪು ನಿನಗೆ ರವಾನಿಸಿ
ಖಿನ್ನತೆಯ ಕಂದರವ ಈಗಲೇ ದಾಟುವೆ
ನಿನ್ನ ಕರೆಯದೆ, ಶಬ್ದರಹಿತ ಕಣಿವೆ
ಹಾರುವೆ ಬಿಡು, ದೂರ ಹರಿಯುವೆ
ಕಲರವ, ಜುಳುಜುಳು ಏನೂ ಇಲ್ಲದೆ
ಭಾವಕೋಶಗಳ ಪೂರ್ಣ ಖಾಲಿ ಮಾಡುವೆ
ಒಳ-ಹೊರಗೆ ಹನಿ ಬಣ್ಣ ಇರದಂತೆ
ನೀನು ದಾಟಿದ ಮೇಲೆ ಹರಡಿದೆ ಮಂಜು
ಕಂಬನಿಯೂ ತಟಕ್ಕನೆ ಬೀಳದಂತೆ
ಕನವರಿಸಲಾರೆ ಈ ಹಗಲು – ರಾತ್ರಿ ಎಲ್ಲವೂ
ಒಂದಾಗಿಬಿಡುತ್ತೆ ಕೆಲಹೊತ್ತಿನಲ್ಲಿ
ಕಾಯುವ ಆಟ ಮುಗಿದು ಕಾಯದ ಮಾಟ
ಹರಿದುಬಿಡುತ್ತೆ ಚಣದ ತುದಿಯಲ್ಲಿ.
27 ಜೂನ್ 2005