ಸದ್ಯದಲ್ಲೇ ಬಿಡುಗಡೆಯಾಗಲಿರುವ ನುಡಿ ೬.೦ ಆವೃತ್ತಿಯು ಸಂಪೂರ್ಣವಾಗಿ ಯುನಿಕೋಡ್ ಅಕ್ಷರಗಳನ್ನು ಮಾತ್ರ ಹೊಂದಲಿದ್ದು, ಮುಕ್ತ ತಂತ್ರಾಂಶವಾಗಿಯೂ ಬಿಡುಗಡೆಯಾಗಲಿದೆ ಎಂದು ಕನ್ನಡ ಗಣಕ ಪರಿಷತ್ತಿನ ಶ್ರೀ ನರಸಿಂಹಮೂರ್ತಿಯವರು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶ್ರೀ ಎಸ್ ಜಿ ಸಿದ್ಧರಾಮಯ್ಯನವರು ನಡೆಸಿದ ಸಭೆಯಲ್ಲಿ ಪ್ರಕಟಿಸಿದ್ದಾರೆ. ಅಂದರೆ ಇನ್ನುಮುಂದೆ ನುಡಿ ತಂತ್ರಾಂಶವನ್ನು ಸಮುದಾಯದ ತಂತ್ರಜ್ಞರು ಸುಧಾರಿಸಬಹುದಾಗಿದೆ. ಹಳೆಯ ತಂತ್ರಾಂಶಗಳನ್ನೇ ಬಳಸುವುದಕ್ಕೆ ಕುಮ್ಮಕ್ಕು ಕೊಡುವ ಆಸ್ಕಿ ಫಾಂಟ್‌ಗಳನ್ನು ನಿರುತ್ತೇಜಿಸಲು ಕನ್ನಡ ಅಭಿವೃದ್ಧಿ ಪ್ರಾಧಿಕಾರವು ನಿರ್ಧರಿಸಿರುವುದು ಒಂದು ಅತ್ಯುತ್ತಮ ಬೆಳವಣಿಗೆಯಾಗಿದೆ.
ನುಡಿ ತಂತ್ರಾಂಶದ ಆರಂಭದ ಅಭಿವೃದ್ಧಿಗಾಗಿ ಕರ್ನಾಟಕ ಸರ್ಕಾರವು ಧನಸಹಾಯ ನೀಡಿದ ಹಿನ್ನೆಲೆಯಲ್ಲಿ ಈಗಲಾದರೂ ಮುಕ್ತ ತಂತ್ರಾಂಶವಾಗಿ ಬಿಡುಗಡೆ ಮಾಡಬೇಕು ಎಂದು ಸಾರ್ವಜನಿಕ ಅಭಿಮತದ ಹಿನ್ನೆಲೆಯಲ್ಲಿ ಮಿತ್ರಮಾಧ್ಯಮದ ಟ್ರಸ್ಟಿಯಾಗಿರುವ ಶ್ರೀ ಬೇಳೂರು ಸುದರ್ಶನರು ಆಗ್ರಹಿಸಿದ ಹಿನ್ನೆಲೆಯಲ್ಲಿ ಕಗಪದ ಈ ವಾಗ್ದಾನವು ಪ್ರಕಟವಾಗಿದ್ದು ಇದಕ್ಕಾಗಿ ಮಿತ್ರಮಾಧ್ಯಮವು ಕಗಪವನ್ನು ಅಭಿನಂದಿಸುತ್ತದೆ.
ಇದಲ್ಲದೆ ಮಿತ್ರಮಾಧ್ಯಮವು ಮಂಡಿಸಿದ ವಿವಿಧ ಬೇಡಿಕೆಗಳನ್ನು ಅತ್ಯಂತ ಕಾಳಜಿಪೂರ್ವಕವಾಗಿ ಪರಿಶೀಲಿಸಿದ ಶ್ರೀ ಸಿದ್ಧರಾಮಯ್ಯನವರು ಕನ್ನಡ ತಂತ್ರಾಂಶ ಚರ್ಚೆ ಮತ್ತು ಅಭಿವೃದ್ಧಿಗಾಗಿ `ಡಿಜಿಟಲ್ ಜಗಲಿ’ಯನ್ನು ಸ್ಥಾಪಿಸುವ ಕುರಿತು ಈ- ಆಡಳಿತ ಇಲಾಖೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜೊತೆಗೆ ಮಾತುಕತೆ ನಡೆಸುವ ಭರವಸೆಯನ್ನು ನೀಡಿದ್ದಾರೆ.
ಅಲ್ಲದೆ ಕನ್ನಡದ ಕಲಿಕೆಗಾಗಿ ಹೊಸಕಾಲದ ಆನ್‌ಲೈನ್ ತರಗತಿಗಳನ್ನು ರೂಪಿಸಲು ಈಗಾಗಲೇ ಕೆಲಸ ಮುಂದುವರಿದಿದೆ ಎಂದು ಅವರು ಈ ಸಭೆಯಲ್ಲಿ ತಿಳಿಸಿದರು.
ಸರ್ಕಾರಿ ಕಚೇರಿಗಳಲ್ಲಿ ಲಿಬ್ರೆ ಆಫೀಸ್ ತಂತ್ರಾಂಶ ಹಾಗೂ ಡಿಟಿಪಿ ರಂಗದಲ್ಲಿ ಸ್ಕ್ರೈಬಸ್ ತಂತ್ರಾಂಶ – ಹೀಗೆ ಎಲ್ಲೆಲ್ಲೂ ಮುಕ್ತ ಮತ್ತು ಉಚಿತ ತಂತ್ರಾಂಶಗಳನ್ನು ಬಳಸಲು ವ್ಯಾಪಕ ಜನಜಾಗೃತಿ ನಡೆಸಲು ಈ ಸಭೆಯಲ್ಲಿ ಸಹಮತಕ್ಕೆ ಬರಲಾಯಿತು. ಈ ಹಿನ್ನೆಲೆಯಲ್ಲಿ ಸದ್ಯದಲ್ಲೇ ರಾಜ್ಯದ ಪ್ರಮುಖ ಪ್ರಕಾಶನ ಸಂಸ್ಥೆಗಳ ಮತ್ತು ಕನ್ನಡ ತಂತ್ರಾಂಶ ತಯಾರಕರ ಸಭೆಯನ್ನೂ ಆಯೋಜಿಸಲು ಶ್ರೀ ಸಿದ್ಧರಾಮಯ್ಯನವರು ಮುಂದಾಗಿದ್ದಾರೆ. ರಾಜ್ಯ ಸರ್ಕಾರದ ಜಾಲತಾಣಗಳನ್ನು ಕನ್ನಡದಲ್ಲಿ ಪ್ರಮುಖವಾಗಿ ಪ್ರಕಟಿಸಲು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದೂ ಶ್ರೀ ಎಸ್ ಜಿ ಸಿದ್ಧರಾಮಯ್ಯನವರು ಈ ಸಂದರ್ಭದಲ್ಲಿ ಈ-ಗವರ್ನೆನ್ಸ್ ಅಧಿಕಾರಿಗಳಿಗೆ ಸೂಚಿಸಿದರು.
ಮಿತ್ರಮಾಧ್ಯಮವು ಈ ಸಭೆಯಲ್ಲಿ ಈ ಕೆಳಗಿನ ಬೇಡಿಕೆಗಳನ್ನು ಇಟ್ಟಿತು:
ಮಿತ್ರಮಾಧ್ಯಮವು ಕನ್ನಡ ಮತ್ತು ಭಾರತೀಯ ಭಾಷಾ ಮಾಹಿತಿ ತಂತ್ರಜ್ಞಾನದ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ಸ್ವಯಂಸೇವ ಸಂಸ್ಥೆಯಾಗಿದೆ. ಕನ್ನಡ ಭಾಷೆಯನ್ನು ಆಧುನಿಕ ಮಾಹಿತಿ ತಂತ್ರಜ್ಞಾನದ ಸಾಧನಗಳಲ್ಲಿ ಅಳವಡಿಸುವ ಮತ್ತು ಕನ್ನಡವನ್ನು ಬಳಸುವ ಕುರಿತು ಮಿತ್ರಮಾಧ್ಯಮವು ತಮ್ಮ ಘನ ನಾಯಕತ್ವದಲ್ಲಿ ಈ ಕೆಳಗಿನ ಕ್ರಮಗಳನ್ನು ಕನ್ನಡ ಅನುಷ್ಠಾನದ ಹಿನ್ನೆಲೆಯಲ್ಲಿ ಈ ಕೂಡಲೇ ಗಮನಿಸಬೇಕಾಗಿ ವಿನಂತಿಸುತ್ತಿದ್ದೇವೆ:
- ಸರ್ಕಾರದ ವ್ಯವಸ್ಥೆಯಲ್ಲಿ ಯುನಿಕೋಡ್ ತಂತ್ರಜ್ಞಾನದಲ್ಲೇ ಕನ್ನಡ ಅಕ್ಷರ ಜೋಡಣೆ ಮಾಡಬೇಕೆಂದು ಕರ್ನಾಟಕ ಸರ್ಕಾರವು ೨೦೧೩ರಲ್ಲೇ ಆದೇಶ ಮಾಡಿದೆ. ಈ ಆದೇಶವನ್ನು ಈವರೆಗೂ ವಸ್ತುಶಃ ಜಾರಿ ಮಾಡಲಾಗಿಲ್ಲ. ಆದ್ದರಿಂದ ಈ ಅಧಿಸೂಚನೆಯಂತೆ ಕರ್ನಾಟಕ ಸರ್ಕಾರದ ಎಲ್ಲ ಕಚೇರಿಗಳಲ್ಲಿ ಯುನಿಕೋಡ್‌ನಲ್ಲೇ ಅಕ್ಷರಜೋಡಣೆ ಮಾಡುವುದನ್ನು ಎಂಬುದನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಖಚಿತಪಡಿಸಿಕೊಳ್ಳಬೇಕು.
- ಕನ್ನಡವನ್ನು ಪಠ್ಯಕ್ಕೆ ಬೇಕಾದ ಫಾಂಟ್‌ನಿಂದ ಹಿಡಿದು (ಬುಕ್‌ಫಾಂಟ್) ಯುನಿಕೋಡ್‌ನ ವಿವಿಧ ಶೈಲಿಯ ಅಕ್ಷರಗಳಲ್ಲಿ ಅಕ್ಷರ ಜೋಡಿಸುವ ತಂತ್ರಜ್ಞಾನವು ಈಗ ಸುಧಾರಿಸಿದೆ. ಅಲ್ಲದೆ ಸ್ಕ್ರೈಬಸ್ ಎಂಬ ಮುಕ್ತ ಮತ್ತು ಉಚಿತ ತಂತ್ರಾಂಶದ ಮೂಲಕ ಯುನಿಕೋಡ್ ಕನ್ನಡದಲ್ಲೇ ಎಲ್ಲ ಬಗೆಯ ಕಡತಗಳನ್ನು ರೂಪಿಸಬಹುದಾಗಿದೆ. ಪೇಜ್‌ಮೇಕರ್, ಇನ್‌ಡಿಸೈನ್ ಮುಂತಾದ ಪಾವತಿಸಿ ಬಳಸುವ ತಂತ್ರಾಂಶಗಳ ಬದಲಿಗೆ ಸ್ಕ್ರೈಬಸ್‌ನ್ನು ಯಾವುದೇ ಖರ್ಚಿಲ್ಲದೆ ಬಳಸಬಹುದಾಗಿದೆ. ಇದರ ಮೂಲಕ ಕನ್ನಡದ ಯುನಿಕೋಡ್ ವಿನ್ಯಾಸಗಳನ್ನೂ ಅಂದಚೆಂದವಾಗಿ ಮಾಡಬಹುದಾಗಿದೆ. ಈ ಹಿನ್ನೆಲೆಯಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಸ್ಕ್ರೈಬಸ್ ತಂತ್ರಾಂಶವನ್ನು ಬಳಸು ಆರಂಭಿಸುವಂತೆ ಸೂಚನೆ ನೀಡಬೇಕಾಗಿದೆ. (ಇದು ಮುಕ್ತ ತಂತ್ರಾಂಶವಾಗಿರುವುದರಿಂದ ಯಾವುದೇ ಖಾಸಗಿ ಸಂಸ್ಥೆಯನ್ನು ಶಿಫಾರಸು ಮಾಡಿದಂತೆ ಆಗುವುದಿಲ್ಲ. ). ಈ ತಂತ್ರಾಂಶವು ಇನ್‌ಡಿಸೈನ್ / ಪೇಜ್‌ಮೇಕರ್‌ಗಳಿಗಿಂತ ಹೆಚ್ಚಿನ ಅನುಕೂಲಗಳನ್ನು ಹೊಂದಿದೆ. ಅಲ್ಲದೆ ಇದಕ್ಕೆ ಪದಸೂಚಕ (prompt) ಮುಂತಾದ ಅನುಕೂಲಗಳನ್ನು ಸೇರಿಸಿದರೆ ಈಗಿರುವದಕ್ಕಿಂತ ಮೂರುಪಟ್ಟು ವೇಗದಲ್ಲಿ ಅಕ್ಷರ ಜೋಡಣೆ ಮಾಡಬಹುದು.
- ಇನ್ನು ವಿಂಡೋಸ್ ಆಪರೇಟಿಂಗ್ ತಂತ್ರಾಂಶವನ್ನು ಎಕ್ಸ್‌ಪಿ ಆವೃತ್ತಿಗಿಂತ ಮೇಲ್ದರ್ಜೆಗೇರಿಸದ ಯಂತ್ರಗಳನ್ನು ಹಂತಹಂತವಾಗಿ ಮೇಲ್ದರ್ಜೆಗೇರಿಸಲೇಬೇಕಾಗಿದೆ. ಒಂದೋ ವಿಂಡೋಸ್ ಆವೃತ್ತಿಯನ್ನೇ ಬಳಸುವುದು ಅಥವಾ ನೇರವಾಗಿ ಮುಕ್ತ ಆಪರೇಟಿಂಗ್ ವ್ಯವಸ್ಥೆಗೆ ಬದಲಾಗುವುದು – ಈ ಎರಡು ಆಯ್ಕೆಗಳ ಬಗ್ಗೆ ಈ ಗವರ್ನೆನ್ಸ್ ಇಲಾಖೆಯೊಂದಿಗೆ ಪ್ರಾಧಿಕಾರವು ಸಮನ್ವಯ ಸಾಧಿಸಬಹುದಾಗಿದೆ.
- ಕನ್ನಡವನ್ನು ಸಾಮಾನ್ಯ ಕಚೇರಿ ಸಂವಹನದಲ್ಲಿ, ದತ್ತ ಸಂಸ್ಕರಣೆಯಲ್ಲಿ, ಲೆಕ್ಕಪತ್ರದ ಹಾಳೆಗಳಲ್ಲಿ ಬಳಸಲು ಲಿಬ್ರೆ ಆಫೀಸ್ ಎಂಬ ಇನ್ನೊಂದು ಮುಕ್ತ, ಉಚಿತ ತಂತ್ರಾಂಶವು ಲಭ್ಯವಿದೆ. ಆದ್ದರಿಂದ ವಿಧಾನಸೌಧದ ಮತ್ತು ರಾಜ್ಯ ಸರ್ಕಾರದ ಎಲ್ಲ ಕಚೇರಿಗಳಲ್ಲೂ ಈ ತಂತ್ರಾಂಶವನ್ನು ಬಳಸಿ ಎಂ ಎಸ್ ಆಫೀಸ್ ಎಂಬ ಮೈಕ್ರೋಸಾಫ್ಟ್‌ನ ಪಾವತಿಸಿ ಬಳಸುವ ತಂತ್ರಾಂಶದ ಖರೀದಿಯನ್ನೇ ನಿಲ್ಲಿಸಿ, ಭಾರೀ ಪ್ರಮಾಣದ ಹಣವನ್ನು ಉಳಿಸಬಹುದಾಗಿದೆ. ಲಿಬ್ರೆ ಆಫೀಸ್ ಕೂಡ ಎಂ ಎಸ್ ಆಫೀಸ್‌ಗಿಂತ ಹೆಚ್ಚಿನ ಪ್ರಮಾಣದ ಅನುಕೂಲಗಳನ್ನು ಹೊಂದಿದೆ. ಈ ಹಲವು ಮುಕ್ತ ಮತ್ತು ಉಚಿತ ತಂತ್ರಾಂಶಗಳ ಪಟ್ಟಿಯನ್ನು ಈ ಪತ್ರದೊಂದಿಗೆ ಲಗತ್ತಿಸಲಾಗಿದೆ.
- ಇಸ್ಕಿ ಫಾಂಟ್‌ಗಳಿಗೆ ನಿರುತ್ತೇಜನ: ಈಗಲೂ ಸರ್ಕಾರ ಮತ್ತು ಖಾಸಗಿ ಸಂಸ್ಥೆಗಳು ಇಸ್ಕಿ ಫಾಂಟ್‌ಗಳನ್ನೇ ಬಳಸುತ್ತಿವೆ. ಅದರಲ್ಲೂ ಸರ್ಕಾರದ ಅಧಿಕೃತ ಕೀಲಿಮಣೆಯನ್ನು ಹೊಂದಿದೆ ಎಂದು ಪ್ರಕಟಿಸಿ ಪ್ರಚಾರ ಮಾಡುತ್ತಿರುವ ನುಡಿ ತಂತ್ರಾಂಶವನ್ನೇ ಹೆಚ್ಚಿನ ಸಿಬ್ಬಂದಿ ವರ್ಗವು ಬಳಸುತ್ತಿದೆ. ಈಗ ಬಂದಿರುವ ನುಡಿ ೫.೦ ಆವೃತ್ತಿಯಲ್ಲಿ ಆಸ್ಕಿ ಫಾಂಟ್‌ಗಳೇ ಇವೆ. ಆಸ್ಕಿ ಫಾಂಟ್ ಸ್ಥಾಪನೆಯಾಗಿರುವ ಕಂಪ್ಯೂಟರುಗಳಲ್ಲಿ ಕನ್ನಡವು ಕಾಣಿಸಿಕೊಂಡು, ಉಳಿದೆಡೆ ಅದು ಕಾಣಿಸುವುದೇ ಇಲ್ಲ. ಅಲ್ಲದೆ ದತ್ತ ಸಂಸ್ಕರಣೆ,ಪದಸಂಸ್ಕರಣೆ, ಅಕಾರಾದಿ ವಿಂಗಡಣೆ, ಅಂತರಜಾಲ ಪ್ರಕಟಣೆ, ಡಾಟಾಬೇಸ್ ನಿರ್ವಹಣೆ, ಅನ್ವಯಿಕ ತಂತ್ರಾಂಶಗಳ ಮೆನ್ಯುಗಳ ಲೋಕಲೈಸೇಶನ್, ಕಾಗುಣಿತ ತಿದ್ದುವಿಕೆ – ಹೀಗೆ ಹಲವು ಬಗೆಯ ಸಾರ್ವತ್ರಿಕ ತಾಂತ್ರಿಕ ಕೆಲಸಗಳಲ್ಲಿ ಯುನಿಕೋಡ್ ಇದ್ದರೇನೇ ಎಲ್ಲವೂ ಸಾಧ್ಯ. ಆದ್ದರಿಂದ ಆಸ್ಕಿ ಫಾಂಟ್‌ಗಳನ್ನು ಪ್ರಾಧಿಕಾರವು ನಿರುತ್ತೇಜಿಸಬೇಕು. ಈಗ ಬರಲಿರುವ ನುಡಿ ೬.೦ ಆವೃತ್ತಿಯಲ್ಲಿ ಆಸ್ಕಿ ಫಾಂಟ್‌ಗಳಿದ್ದರೆ ಅದನ್ನು ಕರ್ನಾಟಕ ಸರ್ಕಾರವು ಬೆಂಬಲಿಸಬಾರದು; ಅದನ್ನು ಬಿಡುಗಡೆ ಮಾಡುವುದಕ್ಕೂ ಹೋಗಬಾರದು. ಕೇವಲ ಯುನಿಕೋಡ್ ಕೀಲಿಮಣೆ, ಫಾಂಟ್‌ಗಳಿದ್ದರೆ ಮಾತ್ರ ಅದನ್ನು ಸರ್ಕಾರವು ಬೆಂಬಲಿಸಬೇಕು.
- ನುಡಿ ತಂತ್ರಾಂಶದ ಮೊದಲ ಆವೃತ್ತಿಯನ್ನು ಕರ್ನಾಟಕ ಸರ್ಕಾರದ ಧನಸಹಾಯದೊಂದಿಗೆ ರೂಪಿಸಲಾಗಿದ್ದು ಆಗಲೇ ಅದನ್ನು ಮುಕ್ತ ತಂತ್ರಾಂಶದ ಅಡಿಯಲ್ಲಿ ಸಮುದಾಯದ ಬಳಕೆಗೆ ಬಿಡುಗಡೆ ಮಾಡಬೇಕಾಗಿತ್ತು. ಆದರೆ ಹದಿನೈದು ವರ್ಷಗಳ ನಂತರವೂ ನುಡಿ ತಂತ್ರಾಂಶವು ಕೇವಲ ಉಚಿತ ತಂತ್ರಾಂಶವಾಗಿದೆಯೇ ವಿನಃ, ಸಮುದಾಯವು ಅಭಿವೃದ್ಧಿಪಡಿಸಬಹುದಾದ ಮುಕ್ತ ತಂತ್ರಾಂಶವಾಗಿಲ್ಲ. ನುಡಿಯ ಆರಂಭದಲ್ಲಿ ಧನಸಹಾಯ ನೀಡಿದ ಹಿನ್ನೆಲೆಯಲ್ಲಿ ನುಡಿ ೫.೦ ಮತ್ತು ನಂತರದ ಎಲ್ಲಾ ಆವೃತ್ತಿಗಳನ್ನೂ ಮುಕ್ತ ತಂತ್ರಾಂಶವಾಗಿ ಬಿಡುಗಡೆ ಮಾಡಬೇಕೆಂದು ಸರ್ಕಾರವು ಕನ್ನಡ ಗಣಕ ಪರಿಷತ್ತಿಗೆ ಸೂಕ್ತ ಆದೇಶವನ್ನು ನೀಡಬೇಕು. ಮುಕ್ತವಲ್ಲದ, ಕೇವಲ ಉಚಿತ ತಂತ್ರಾಂಶವಾಗಿದ್ದರೆ ಅದರ ಹೊಸ ಆವೃತ್ತಿಯನ್ನು ಕರ್ನಾಟಕ ಸರ್ಕಾರವು ಬೆಂಬಲಿಸಬಾರದು.
- ಕರ್ನಾಟಕದ ಮತ್ತು ಹೊರಗಿನ ಎಲ್ಲ ಕನ್ನಡ ಸಂಬಂಧಿತ ತಂತ್ರಾಂಶ ತಯಾರಕರ ಸಭೆಯನ್ನು ಕರೆದು ಅವರು ತಮ್ಮ ಎಲ್ಲ ಹಳೆಯ ಫಾಂಟ್‌ಗಳನ್ನೂ ಯುನಿಕೋಡ್ ಆಗಿ ಪರಿವರ್ತಿಸಲು ಮತ್ತು ಅವನ್ನು ಸಾಧ್ಯವಾದರೆ ಮುಕ್ತ ಫಾಂಟ್‌ಗಳಾಗಿ ಬಿಡುಗಡೆ ಮಾಡಲು ಆಗ್ರಹಿಸಬೇಕು. ಇದರಿಂದ ಕನ್ನಡ ಪ್ರಕಟಣಾ ರಂಗದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬಗೆಬಗೆಯ ಫಾಂಟ್‌ಗಳು ಸಿಗಲಿವೆ.
- ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವ್ಯಾಪ್ತಿಯಲ್ಲಿರುವ ಕನ್ನಡ ತಂತ್ರಾಂಶ ಅಭಿವೃದ್ಧಿ ಸಮಿತಿಯನ್ನು ಪುನಾರಚಿಸಿ ಅದರಲ್ಲಿ ಮುಕ್ತ ತಂತ್ರಾಂಶ ಅಭಿಯಾನಿಗಳು ಮತ್ತು ಯುವ ತಂತ್ರಜ್ಞ ಕಾರ್ಯಕರ್ತರು ಇರುವಂತೆ ಖಾತ್ರಿಪಡಿಸಿಕೊಳ್ಳಲು ಸೂಕ್ತ ಮನವಿಯನ್ನು (ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ) ಮಾಡಬೇಕು. ಸಮುದಾಯದಲ್ಲಿ ಕನ್ನಡದ ಕೆಲಸ ಮಾಡುತ್ತಿರುವ ಸದಸ್ಯರೇ ಇಲ್ಲದ ಈ ಸಮಿತಿಯು ನಾಲ್ಕು ಗೋಡೆಗಳ ನಡುವೆ ನಿರ್ಣಯ ತೆಗೆದುಕೊಳ್ಳುತ್ತಿರುವುದು ಹಲವು ಗೊಂದಲಗಳಿಗೆ ಕಾರಣವಾಗಿದೆ. ಕನ್ನಡದ ಓಸಿಆರ್ (ಚಿತ್ರದ ಪಠ್ಯಗಳನ್ನು ಗ್ರಹಿಸುವ ಆಪ್ಟಿಕಲ್ ಕ್ಯಾರೆಕ್ಟರ್ ರೆಕಗ್ನಿಶನ್) ತಂತ್ರಾಂಶವನ್ನು ಕೇಂದ್ರಸರ್ಕಾರದ ನಿಧಿಯನ್ನು ಬಳಸಿದ ಭಾರತೀಯ ವಿಜ್ಞಾನ ಸಂಸ್ಥೆಯೂ ಸೇರಿದಂತೆ ನಾಲ್ವರು ರೂಪಿಸಿದ್ದರೂ, ೮೦ ಲಕ್ಷ ಅಂದಾಜು ವೆಚ್ಚದ ಟೆಂಡರ್‌ನ್ನು ಕರೆದು ಕೊನೆಗೆ ಸಾರ್ವಜನಿಕ ಒತ್ತಡದಿಂದ ರದ್ದು ಮಾಡಿರುವುದು ಇದಕ್ಕೆ ಒಂದು ನಿದರ್ಶನ. ಅಲ್ಲದೆ ಈ ಹಿಂದೆ ಬಿಡುಗಡೆಯಾದ ಕನ್ನಡ ಯುನಿಕೋಡ್ ಫಾಂಟ್‌ಗಳು, ಬ್ರೈಲ್ ಕೀಲಿಮಣೆ, ಮೊಬೈಲ್ ಕೀಲಿಮಣೆ ಮತ್ತು ಯುನಿಕೋಡ್ ಪರಿವರ್ತಕಗಳು ಅಸಮರ್ಪಕವಾಗಿವೆ ಎಂಬುದನ್ನು ತಜ್ಞರು ಪದೇ ಪದೇ ಉಲ್ಲೇಖಿಸಿದ್ದಾರೆ.
- ಕೇವಲ ಸಮಿತಿಯಿಂದಲೇ ಎಲ್ಲ ಕೆಲಸವೂ ಆಗುವುದಿಲ್ಲ. ಆದ್ದರಿಂದ ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಕನ್ನಡ ಅನುಷ್ಠಾನದ ಹಿನ್ನೆಲೆಯಲ್ಲಿ ನಾಯಕತ್ವವನ್ನು ವಹಿಸಿ ಉತ್ಸಾಹಿ ಕನ್ನಡ ತಂತ್ರಜ್ಞರು, ಖಾಸಗಿ ಫಾಂಟ್ ಅಭಿವೃದ್ಧಿಕಾರರು, ಕನ್ನಡ ಐಟಿ ಸಾಧನಗಳಿಗಾಗಿ ಶ್ರಮಿಸುತ್ತಿರುವ ಸಾಮಾಜಿಕ ಕಾರ್ಯಕರ್ತರನ್ನು ನಿಯಮಿತವಾಗಿ ಸೇರಿಸಿ ಮುಕ್ತ ಚರ್ಚೆ ನಡೆಸಬೇಕು. ಈ ಕಾಲಘಟ್ಟದಲ್ಲಾದರೂ ಇಂಥ ಚರ್ಚೆ ನಡೆಯದಿದ್ದರೆ, ಕನ್ನಡ ತಂತ್ರಜ್ಞಾನವು ಸರಿಯಾಗಿ ರೂಪುಗೊಳ್ಳುವುದಿಲ್ಲ. ಕನ್ನಡ ತಂತ್ರಾಂಶಗಳ ಕಾರ್ಯವನ್ನು ನಿರ್ವಹಿಸಲು ಒಬ್ಬ ಸಮನ್ವಯಕಾರರನ್ನು ನೇಮಿಸಿದರೆ ತುಂಬಾ ಸೂಕ್ತವಾಗಿದೆ. ಅವರು ಕೇವಲ ಈ ಕೆಲಸಗಳಿಗೇ ಹೆಚ್ಚಿನ ಗಮನ ನೀಡಿ ಕನ್ನಡ ತಂತ್ರಾಂಶದ ಕೆಲಸಗಳ ತ್ವರಿತ ಜಾರಿಗೆ ಪ್ರಯತ್ನಿಸಬಹುದು.
- ಕರ್ನಾಟಕ ಸರ್ಕಾರದ ಜಾಲತಾಣಗಳ ಶೈಲಿ ಮಾನಕೀಕರಣ ಮತ್ತು ಕನ್ನಡೀಕರಣವು ಬಾಕಿ ಉಳಿದಿದೆ. ಈ ಕುರಿತು ಭಾರತ ಸರ್ಕಾರದ ಮಾರ್ಗದರ್ಶಿ ಸೂತ್ರಗಳಿಗೆ ಅನುಗುಣವಾಗಿ ಒಂದು ಕರಡು ಜಾಲತಾಣ ವಿನ್ಯಾಸ ಮತ್ತು ನಿರ್ವಹಣಾ ಸೂತ್ರಗಳ ಕೈಪಿಡಿಯನ್ನು ರೂಪಿಸಲು ಮಿತ್ರಮಾಧ್ಯಮದ ಟ್ರಸ್ಟಿಯಾಗಿರುವ ಶ್ರೀ ಬೇಳೂರು ಸುದರ್ಶನರು ಈ ಹಿಂದೆ ಕನ್ನಡ ಅಭಿವೃದ್ಧಿ ಪ್ರಾಧಿಕಾರವು ನಡೆಸಿದ ಸಭೆಗಳಲ್ಲಿ ಸಮ್ಮತಿಸಿದ್ದರು. ಈಗಲೂ ಮಿತ್ರಮಾಧ್ಯಮವು ತಜ್ಞರೊಂದಿಗೆ ಸಭೆಗಳನ್ನು ನಡೆಸಿ ಈ ಕುರಿತ ಮಾರ್ಗದರ್ಶಿ ಸೂತ್ರಗಳನ್ನು ರೂಪಿಸಲು ಸಿದ್ಧವಿದೆ.
- ಕನ್ನಡದಲ್ಲಿ ಪ್ರಕಟವಾಗುವ ಮತ್ತು ಕರ್ನಾಟಕದ ಕುರಿತ ರಾಜ್ಯ ಸರ್ಕಾರದ ಎಲ್ಲಾ ಪಠ್ಯಪುಸ್ತಕಗಳು ಮತ್ತು ಪ್ರಕಟಣೆಗಳನ್ನು `ಕಣಜ’ ಅಂತರಜಾಲ ಕನ್ನಡ ಜ್ಞಾನಕೋಶದಲ್ಲಿ ಪ್ರಕಟಿಸುವಂತೆ ಕ್ರಮ ಕೈಗೊಳ್ಳಬೇಕು.
- ಕನ್ನಡ ಕಲಿಕೆಯ ಆನ್‌ಲೈನ್ ತರಗತಿಗಳೇ ಅಲಭ್ಯವಾಗಿರುವ ಈ ಹೊತ್ತಿನಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರವು MOOC (massive open online course) ಮಾದರಿಯಲ್ಲಿ ವಿವಿಧ ವಯೋಮಾನದ, ವೃತ್ತಿಪರರ ಅನುಕೂಲಕ್ಕಾಗಿ ಆನ್‌ಲೈನ್ ಕೋರ್ಸ್‌ಗಳನ್ನು ರೂಪಿಸಿ ಉಚಿತವಾಗಿ ನೀಡಬೇಕು. ಈ ಕೋರ್ಸ್‌ಗಳ ಪರೀಕ್ಷೆ, ಮೌಲ್ಯಮಾಫನ ಮತ್ತು ಪ್ರಮಾಣಪತ್ರಕ್ಕಾಗಿ ಶುಲ್ಕ ವ್ಯವಸ್ಥೆಯನ್ನು (ಅಗತ್ಯ ವಿದ್ದರೆ) ರೂಪಿಸಬಹುದಾಗಿದೆ. ಈ ಕಲಿಕೆಯ ಕೋರ್ಸ್‌ಗಳು ಮತ್ತೆ ಪುನರಾವರ್ತನೆ ಆಗದಂತೆ ನೋಡಿಕೊಳ್ಳುವೂ ಅತ್ಯವಶ್ಯವಾಗಿದೆ. ಇದು ದೇಶ – ವಿದೇಶದ ಸಾರ್ವಜನಿಕರಿಗೆ, ಕನ್ನಡ ಆಸಕ್ತರಿಗೆ ತುಂಬಾ ಉಪಯುಕ್ತವಾಗಲಿದೆ. ಇದಕ್ಕಾಗಿ ಭಾರತೀಯ ಭಾಷಾ ಸಂಸ್ಥಾನ(CIIL)ದಂತಹ ಭಾಷಾ ಕಲಿಕೆ ಮತ್ತು ಸಂಶೋಧನಾ ಸಂಸ್ಥೆಗಳು, ನ್ಯಾಶನಲ್ ಇನ್‌ಸ್ಟಿಟ್ಯೂಟ್ ಆಫ್ ಓಪನ್ ಸ್ಕೂಲಿಂಗ್ (NIOS) ಮುಂತಾದ ಸಂಸ್ಥೆಗಳ ಸಹಕಾರವನ್ನು ಪಡೆಯಬಹುದು.