ಹೌದು: ನಾನು ಯಾವಾಗಲೂ ಯಾವುದಾದರೂ ಕೆಲಸ ಬಿಟ್ಟರೆ ಅದರ ನೆನಪಿಗೆ ಒಂದು ಒಳ್ಳೆಯ ವಸ್ತುವನ್ನು ಕೊಳ್ಳುತ್ತೇನೆ ಅಥವಾ ಒಂದು ಒಳ್ಳೆಯ ಹವ್ಯಾಸವನ್ನು ಬೆಳೆಸಿಕೊಳ್ಳುತ್ತೇನೆ. ಪದೇ ಪದೇ ಕೆಲಸ ಬಿಡುತ್ತಿದ್ದ ನನಗೆ ಸುಮಾರು ಹತ್ತು ಕೆಲಸಗಳನ್ನು ಬಿಟ್ಟ ಮೇಲೆ ಅನ್ನಿಸಿದ್ದು: ಕೆಲಸ ಬಿಟ್ಟದ್ದಕ್ಕೆ ಏನಾದರೂ ನೆನಪಿನ ಕಾಣಿಕೆಯನ್ನು ನನಗೆ ನಾನೇ ಕೊಟ್ಟುಕೊಳ್ಳಬೇಕು.
ಆಗತಾನೇ ವಿಶ್ವದೆಲ್ಲೆಡೆ ಸಂಚಲನ ಮೂಡಿಸಿದ್ದ ಡಾಟ್‌ಕಾಮ್ ಬೂಮ್‌ನಲ್ಲಿ ನಾನು ಆ ಕಾಲದಲ್ಲಿ ಪತ್ರಕರ್ತನೊಬ್ಬನಿಗೆ ಕೊಡಬಹುದಾದ ಅತಿಹೆಚ್ಚು/ಅಪರೂಪದ ಸಂಬಳದ ಕೆಲಸಕ್ಕೆ ಸೇರಿದ್ದೆ. ಆದರೆ ಡಾಟ್‌ಕಾಮ್ ಜಗತ್ತಿನ ಏರುಪೇರುಗಳಂತೆಯೇ ನಾನೂ ಕೆಲಸ ಬಿಡಬೇಕಾಯಿತು. ಆಗಷ್ಟೇ ನಾನು ಡೈರೆಕ್ಟ್ ಟು ಹೋಮ್ (ಡಿಟಿಎಚ್) ಡಿಜಿಟಲ್ ರೇಡಿಯೋದ ಬಗ್ಗೆ ಕೇಳಿ ತಿಳಿದಿದ್ದೆ. ವರ್ಲ್ಡ್‌ಸ್ಪೇಸ್ ಎಂಬ ಸಂಸ್ಥೆಯು ಭಾರತದ ಯಾವುದೇ ಮೂಲೆ-ಕಾಡು-ಮೇಡಿನಲ್ಲಾದರೂ ಕೇಳಬಹುದಾದ ಸ್ಫಟಿಕಶುದ್ಧ ಧ್ವನಿಗುಣಮಟ್ಟದ ರೇಡಿಯೋ ಕಾರ್ಯಕ್ರಮ ರೂಪಿಸಿದೆ ಎಂದು ತಿಳಿದು ರೋಮಾಂಚಿತನಾಗಿದ್ದೆ. ಡಯಲ್‌ಅಪ್ ಇಂಟರ್‌ನೆಟ್‌ನಲ್ಲೇ (ಇದೇನು ಎಂದು ಪ್ರಶ್ನಿಸಬೇಡಿ; ಆ ಕಾಲದಲ್ಲಿ ನಾವು ಮೋಡೆಮ್‌ನ್ನು ಆನ್ ಮಾಡಿ ಅದನ್ನು ಒಂದು ನಿಮಿಷ ಕುಯ್ಯೋ ಮರ್‍ರೋ ಎಂದು ಕಿರುಚಿಸಿದ ನಂತರವೇ ೧೪.೪ ಕೆಬಿಪಿಎಸ್ ವೇಗದ ಇಂಟರ್‌ನೆಟ್ ಸಂಪರ್ಕ ಉಂಟಾಗುತ್ತಿತ್ತು) ಈ ಸಂಸ್ಥೆಯ ಬಗ್ಗೆ ತಿಳಿದುಕೊಂಡೆ. ಆಮೇಲೆ ಚರ್ಚ್ ಸ್ಟ್ರೀಟ್‌ಗೆ ಹೋಗಿ ಒಂದು ಜೆವಿಎಸ್ ವರ್ಲ್ಡ್‌ಸ್ಪೇಸ್ ರೇಡಿಯೋ ಸೆಟ್ ಖರೀದಿಸಿದೆ. ಆ ಕಾಲದಲ್ಲಿ ಅದರ ಬೆಲೆ ಸುಮಾರು ೮ ಸಾವಿರ ರೂ. ಇತ್ತು. ವರ್ಲ್ಡ್‌ಸ್ಪೇಸ್‌ನ ಎಲ್ಲ ರೇಡಿಯೋ ಕೇಂದ್ರಗಳೂ ಆರಂಭದಲ್ಲಿ ಉಚಿತವಾಗಿದ್ದವು. ಅದಾದ ಮೇಲೆ ನಾನು ಶುಲ್ಕವನ್ನು ಪಾವತಿಸಿದ್ದೂ ಇದೆ. ಉಪಗ್ರಹಗಳ ಮೂಲಕ ಮನೆಗಳಿಗೆ ನೇರವಾಗಿ (ಇದಕ್ಕಾಗಿ ಒಂದು ವಿಶೇಷ ಆಂಟೆನ್ನಾ ಸ್ಥಾಪಿಸಿ ಅದನ್ನು ೪೫ ಡಿಗ್ರಿ ಕೋನದಲ್ಲಿ ಪೂರ್ವಕ್ಕೆ ಮುಖಮಾಡಿ ಕೂರಿಸುವ ಕಲೆಯನ್ನೂ ನಾನು ಕರಗತ ಮಾಡಿಕೊಂಡಿದ್ದೆ!). ಈಗಲೂ ವರ್ಲ್ಡ್‌ಸ್ಪೇಸ್ ರಿಸೀವರ್ ಕೆಲಸ ಮಾಡುತ್ತಿದೆ. ಈ ಸಂಸ್ಥೆ ಈಗಿಲ್ಲ.
ಅದಾಗಿ ನಾನು ಟಿಎಂಜಿ ಎಂಬ ತಂತ್ರಜ್ಞಾನ ಸುದ್ದಿಗಳನ್ನೇ ಆಧರಿಸಿದ ಇಂಗ್ಲಿಶ್ ಟಿವಿ ಚಾನೆಲ್‌ಗೆ ಸೇರಿ ಅದರಲ್ಲಿ ಕನ್ನಡ ಕಾರ್ಯಕ್ರಮಗಳನ್ನು ರೂಪಿಸುವ ತಂಡದಲ್ಲಿದ್ದೆ. ಆಕಾರ್ಯಕ್ರಮವೇನೋ ಉದಯ ಟಿವಿಯಲ್ಲಿ ಭಾರೀ ಟಿ ಆರ್‌ಪಿ ಹೊಂದಿತ್ತಂತೆ. ಆದರೆ ಅದೇ ಹೊತ್ತಿಗೆ ಸೆಪ್ಟೆಂಬರ್ ೯ರ ದುರಂತ ಘಟಿಸಿ ಅಮೆರಿಕಾದ ವಿಶ್ವವ್ಯಾಪಾರ ಕೇಂದ್ರದ ಕಟ್ಟಡಗಳು ಉರುಳಿದವು. ಡಾಟ್‌ಕಾಮ್‌ಬೂಮ್‌ಗೆ ಭಾರೀ ಹೊಡೆತ ಬಿತ್ತು. ಆಗ ನಾನು ಕೆಲಸಕ್ಕೆ ರಾಜೀನಾಮೆ ಕೊಟ್ಟು ನೆನಪಿನ ಕಾಣಿಕೆಗಾಗಿ ಹುಡುಕಾಟ ನಡೆಸಿದೆ. ಆಗ ನನಗೆ ಕಂಪ್ಯೂಟರಿಗೆ ಒಳ್ಳೆಯ ಸ್ಪೀಕರ್ ಸೆಟ್ ಬೇಕು ಎಂದು ಅನ್ನಿಸಿತ್ತು. ಆ ಸಂಸ್ಥೆಯಲ್ಲಿದ್ದ ಸ್ನೇಹಿತನಿಂದ ಒಂದು ೪:೧ ಸರೌಂಡ್ ಸ್ಪೀಕರ್ ಜೊತೆಯ ಬಗ್ಗೆ ತಿಳಿದುಕೊಂಡು ಅದನ್ನೇ ಮಹಾತ್ಮ ಗಾಂಧಿ ರಸ್ತೆಯಲ್ಲಿದ್ದ ಕಂಪ್ಯೂಟರ್‌ವೇರ್‌ಹೌಸ್‌ನಲ್ಲಿ ಖರೀದಿಸಿ ಮನೆಗೆ ತಂದೆ. ನಿಮಗೆ ಗೊತ್ತಿರಲಿ, ೧೬ ವರ್ಷಗಳಿಂದ ಅದು ಒಂದೇ ಸಮನೆ ಕೆಲಸ ಮಾಡುತ್ತಿದೆ. ಈಗಲೂ ನನ್ನ ಅಚ್ಚುಮೆಚ್ಚಿನ ಸಾಧನವಾಗಿದೆ. ಈ ಕೇಂಬ್ರಿಜ್ ಸೌಂಡ್‌ವರ್ಕ್ಸ್‌ನ ಬಿಳಿ ಸ್ಪೀಕರ್‌ಗಳ ವಿಶೇಷವೆಂದರೆ ಸ್ಪೆಶಿಯಲ್ ಎಫೆಕ್ಟ್ ಬಗ್ಗೆ ತಲೆ ಕೆಡಿಸಿಕೊಳ್ಳದೆ ಇದ್ದ ಶಬ್ದವನ್ನು ಇದ್ದ ಹಾಗೇ ಕೊಡುವುದು. ಆದ್ದರಿಂದ ಸಹಜವಾದ ಧ್ವನಿಯನ್ನೇ ನಾನು ಕೇಳುತ್ತೇನೆ. ಸಾವಿರಗಟ್ಟಳೆ ಗಂಟೆಗಳ ಕಾಲ ಈ ಸ್ಪೀಕರುಗಳಿಂದ ಹಾಡುಗಳನ್ನು ಕೇಳಿದ್ದೇನೆ. ಕೆಲವೊಮ್ಮೆ ಈ ಸೆಟ್‌ನ್ನು ತಿಂಗಳುಗಟ್ಟಳೆ ಆಫ್ ಮಾಡಿಲ್ಲ. ಆದರೂ ಈ ಸೆಟ್ ಹಾಳಾಗಿಲ್ಲ.
ನಾನು ವಿಜಯ ಕರ್ನಾಟಕ ಬಿಟ್ಟಾಗ ನನ್ನ ರಾಜೀನಾಮೆಗೆ ಸೂಕ್ತವಾದ ನೆನಪಿನ ಕಾಣಿಕೆ ಹುಡುಕುತ್ತಿದ್ದೆ. ಆಗ ನನಗೆ ನೆರವಾದವರು ಪತ್ರಕರ್ತ ಅರವಿಂದ ನಾವಡರು. ನನ್ನ ಹಿಂದುಸ್ತಾನಿ ಸಂಗೀತ ಪ್ರೇಮವನ್ನು ಅರಿತಿದ್ದ ಅವರು ನೀವೇಕೆ ಹಿಂದುಸ್ತಾನಿ ಸಂಗೀತ ಕಲಿಯಬಾರದು ಎಂದು ಮುಖಕ್ಕೆ ಹೊಡೆದಂತೆ ಪ್ರಶ್ನಿಸಿದರು! ನಾನು ಸಾವರಿಸಿಕೊಂಡು `ನಾನು ಎಲ್ಲಿ ಕಲಿಯಲಿ?’ ಎಂದು ಕೇಳಿದೆ, ಅವರು ನನಗೆ ಬಾನ್ಸುರಿ ಕಲಿಸುವ ಗುರುವನ್ನು ಹುಡುಕಿಕೊಟ್ಟರು. ನಾನು ಕೊಳಲು ಕಲಿಯಲು ಆರಂಭಿಸಿದೆ.
ಕೆಲಸವನ್ನು ಬಿಡುವುದು ಎಂದರೆ ಕೆಲಸಕ್ಕೆ ಸೇರಿದಷ್ಟೇ ಸಂಭ್ರಮದ ವಿಚಾರ. ಆದ್ದರಿಂದ ನಾನು ಕೆಲಸ ಬಿಡುವ ಬಗ್ಗೆಯೇ ಹಲವು ಲೇಖನಗಳನ್ನು ಬರೆದಿದ್ದೇನೆ. (ಇಂಥ ಹಲವು ಲೇಖನಗಳನ್ನು ಬರೆಯಲು ನಾನು ಕೆಲಸದಲ್ಲಿ ಇರದಿದ್ದುದೇ ಕಾರಣವಾಗಿದ್ದೂ ನಿಜ!). ಕೆಲಸವನ್ನು ಬಿಡುವುದು ಇನ್ನೊಂದು ಒಳ್ಳೆಯ ಕೆಲಸದತ್ತ ಪಯಣ ಎಂದು ಹಲವರಿಗೆ ಹೇಳಿದ್ದೇನೆ. ಆದ್ದರಿಂದ ಕೆಲಸ ಬಿಡುವುದು ಎಂದೂ ವಿಷಾದದ ಸಂಗತಿಯಾಗಬಾರದು – ಅದು `ಕೆಲಸದಿಂದ ವಜಾ’ ಆಗದ ಹೊರತು!
ಹಾಗಂತ ನೀವು ನೆನಪಿನ ಕಾಣಿಕೆ ಕೊಡುವುದಕ್ಕಾಗಿಯೇ ಕೆಲಸ ಬಿಡಿ ಎಂದು ಹೇಳುತ್ತಿಲ್ಲ! ಒಂದುವೇಳೆ ನೀವು ಕೆಲಸ ಬಿಟ್ಟರೆ ಆ ಕೆಲಸವನ್ನು, ಆ ದಿನಗಳನ್ನು ಸ್ಮರಿಸಿಕೊಳ್ಳಲು ಒಂದು ಪುಟ್ಟ ಸ್ಮರಣಿಕೆಯನ್ನು ನೀವೇ ಆರಿಸಿ ಕೊಂಡುಕೊಳ್ಳಿ. ಅದು ಸದಾ ನಿಮ್ಮ ಎದುರಿಗೆ ಇರಲಿ. ನೀವು ಎಲ್ಲಿಂದ ಎಲ್ಲಿಗೆ ನಡೆದಿರಿ ಎಂಬ ಕಾಲದ ಹೆಜ್ಜೆಗಳನ್ನು ನೀವು ಸದಾ ಗಮನಿಸುತ್ತ ಇರಬಹುದು.