ಕನ್ನಡಿಗ ಪ್ರೊ|| ಕವಿ ನಾರಾಯಣಮೂರ್ತಿ ರೂಪಿಸಿರುವ `ಸಾರ’ – ಭಾರತೀಯ ಭಾಷೆಗಳ ನಡುವಣ ಅನುವಾದದ ಅತಿ ಕಾರ್ಯದಕ್ಷತೆಯ ತಂತ್ರಾಂಶ!
ಕನ್ನಡದಿಂದ ತೆಲುಗಿಗೆ ಸೆಕೆಂಡಿಗೆ ಒಂದು ಲಕ್ಷ ವಾಕ್ಯಗಳನ್ನು (ಪದಗಳನ್ನಲ್ಲ – ಗಮನಿಸಿ) ಯಂತ್ರಾನುವಾದ (ಮೆಶಿನ್ ಟ್ರಾನ್ಸ್‌ಲೇಶನ್) ಮಾಡುವ `ಸಾರ’ ತಂತ್ರಾಂಶವನ್ನು ಹೈದರಾಬಾದ್ ವಿಶ್ವವಿದ್ಯಾಲಯದ ಪ್ರೊ|| ಕವಿ ನಾರಾಯಣಮೂರ್ತಿಯವರು ರೂಪಿಸಿದ್ದಾರೆ. ಒಂದು ಭಾರತೀಯ ಭಾಷೆಯಿಂದ ಇನ್ನೊಂದು ಭಾರತೀಯ ಭಾಷೆಗೆ ಅನುವಾದ ಮಾಡುವ ಭಾರತದ ಅತ್ಯುತ್ತಮ ಎನ್ನಬಹುದಾದ ತಂತ್ರಾಂಶವಿದು. ೧೯೮೭ರಿಂದ ಆರಂಭಿಸಿ ೩೦ ವರ್ಷಗಳ ಪರಿಶ್ರಮ ಮತ್ತು ಅನುಭವದಿಂದ ಈ ತಂತ್ರಾಂಶವನ್ನು ರೂಪಿಸಿದ, ಕನ್ನಡಿಗರೂ ಆದ ಪ್ರೊ|| ಕವಿ ನಾರಾಯಣಮೂರ್ತಿಯವರಿಗೆ ನಮ್ಮೆಲ್ಲರ ಅಭಿನಂದನೆಗಳು.
ಸುಮಾರು ಇಪ್ಪತ್ತು ವರ್ಷಗಳ ಹಿಂದೆ ಪಿ ಟಿ ಐ ಸುದ್ದಿ ಸಂಸ್ಥೆಯ ಸುದ್ದಿಗಳನ್ನು ಅನುವಾದ ಮಾಡಲು ಯಂತ್ರಗಳನ್ನು ಬಳಸಲಾಗುತ್ತದೆ ಎಂದು ಪತ್ರಿಕೆಯ ಮಾಲಿಕರೊಬ್ಬರು ಪ್ರಕಟಿಸಿದಾಗ, ಅನುವಾದದಿಂದಲೇ ಬದುಕುತ್ತಿದ್ದ ನಾನು, ನನ್ನಂಥವರು ಗಾಬರಿಗೊಂಡಿದ್ದೆವು. ಆದರೆ ಹಾಗೇನೂ ಆಗಿರಲಿಲ್ಲ. `ಸಾರ’ವನ್ನು ನೋಡಿದ ಮೇಲೆ ಇಂಥದ್ದೊಂದು ಪ್ರಭಾವಶಾಲಿ ಯಂತ್ರಾನುವಾದ ಸಾಧ್ಯ ಎಂಬುದು ಖಚಿತವಾಗಿದೆ. ಅನುವಾದದ ಸೈದ್ಧಾಂತಿಕ ಅಡಿಪಾಯಗಳು, ಅದರ ವಿವಿಧ ವಿನ್ಯಾಸಗಳು, ತಂತ್ರಾಂಶದ ರಚನೆ ಮತ್ತು ಅದಕ್ಕೆ ಸಂಬಂಧಿಸಿದ ಭಾಷಾ ದತ್ತಾಂಶ ಸಂಪನ್ಮೂಲ- ಇವೆಲ್ಲವನ್ನೂ ಪ್ರೊ|| ಕವಿ ನಾರಾಯಣಮೂರ್ತಿಯವರೇ ರೂಪಿಸಿದ್ದಾರೆ. ಇವೆಲ್ಲವೂ ಸಹಜ ಭಾಷಾ ಸಂಸ್ಕರಣೆ (ನ್ಯಾಚುರಲ್ ಲಾಂಗ್ವೇಜ್ ಪ್ರೊಸೆಸಿಂಗ್) ಅಡಿಯಲ್ಲಿ ಬರುವ ವಿವಿಧ ಸಂಶೋಧನಾ ವಿಭಾಗಗಳು.
`ಸಾರ’ದ ವಿನ್ಯಾಸವನ್ನೇ ಅನುಸರಿಸಿ ಜಗತ್ತಿನ ಯಾವುದೇ ಎರಡು ಭಾಷೆಗಳ ನಡುವೆ ಯಂತ್ರಾನುವಾದದ ಸೌಲಭ್ಯವನ್ನು ಸುಲಭವಾಗಿ ರೂಪಿಸಬಹುದು ಎಂದು ಪ್ರೊ|| ನಾರಾಯಣಮೂರ್ತಿಯವರು ಪ್ರಕಟಿಸಿದ್ದಾರೆ. ಅತಿ ಉತ್ತಮ ಗುಣಮಟ್ಟದ ಅನುವಾದವನ್ನು ಅತಿ ಹೆಚ್ಚಿನ ವೇಗದಲ್ಲಿ ಪಡೆಯುವುದು ಅವರ ಗುರಿ. ಇಂಥ ಅನುವಾದದ ತಂತ್ರಾಶವನ್ನು ರೂಪಿಸಲು ವಿವಿಧ ನಿಘಂಟುಗಳು, ವಾಕ್ಯಭಾಗಗಳ ಪಟ್ಟೀಕರಣ, ವಾಕ್ಯ ವ್ಯಾಕರಣದ ಸೂತ್ರಗಳು, ಸಮಾನಾಂತರ ಪದಸಂಚಯ (ಕಾರ್ಪಸ್) – ಇವೆಲ್ಲವನ್ನೂ ಬಳಸಿಕೊಳ್ಳಲಾಗಿದೆ. ಇವುಗಳನ್ನು ಬಳಸಿ ಪಡೆದ ಭಾರೀ ಪ್ರಮಾಣದ ದತ್ತಾಂಶಗಳನ್ನು ಮತ್ತೆ ಮತ್ತೆ ಇದರ ಸುಧಾರಣೆಗೆ ಬಳಸಿಕೊಳ್ಳಲಾಗಿದೆ. ಒಂದು ರೀತಿಯಲ್ಲಿ ಇದು ಸದಾ ಗುಣಮಟ್ಟವನ್ನು ಸುಧಾರಿಸಿಕೊಳ್ಳುತ್ತ ಮುನ್ನಡೆವ ತಂತ್ರಾಂಶವಾಗಿದೆ.
`ಸಾರ’ ಅನುವಾದದ ಒಂದು ಉದಾಹರಣೆಯನ್ನು ನೀವು ಇಲ್ಲಿ ಓದಬಹುದು:
………………………………………………………………………………………
SAARA MACHINE TRANSLATION SAMPLE
ಯಾವುದು ಜೀವಿಗಳಿಗೆ ಪ್ರಯೋಜನವನ್ನು ಉಂಟುಮಾಡುವುದೋ ಅದು ಮೌಲ್ಯ.
ఏది జీవులకు ప్రయోజనాన్ని కలిగిస్తుందో అది మౌల్యం .
ಹಾಗೆಯೇ ಯಾವ ಸಾಧನೆಗಳು ನಮ್ಮ ಆಧ್ಯಾತ್ಮಿಕ ಉನ್ನತಿಗೆ ಸಹಾಯಕವಾಗುವುವೋ ಅವೇ ಆಧ್ಯಾತ್ಮಿಕ ಮೌಲ್ಯಗಳು.
అలాగే ఏ ప్రయత్నాలు మన ఆధ్యాత్మిక అబివృద్ధికి సహాయకమవుతాయో అవే ఆధ్యాత్మిక మౌల్యాలు .
ಉಪಯೋಗಿಸುವ ಎಲ್ಲ ವಸ್ತುಗಳೂ ವ್ಯಕ್ತಿಗೆ ಪ್ರಯೋಜನವನ್ನುಂಟುಮಾಡದೆ ಇರಬಹುದು.
ఉపయోగించే అన్ని వస్తువులూ వ్యక్తికి ప్రయోజనాన్నికలిగించక ఉండవచ్చు .
ಹೀಗೆಯೇ ನೈತಿಕವಾಗಿ, ಆಧ್ಯಾತ್ಮಿಕವಾಗಿ ಹಾನಿಯನ್ನುಂಟುಮಾಡುವ ಅನೇಕ ವಸ್ತುಗಳನ್ನು ಮತ್ತು ವಿಷಯಗಳನ್ನು ನಾವು ಬಳಸುತ್ತೇವೆ.
ఇలాగే నైతికంగా , ఆధ్యాత్మికంగా హానినిచేసే అనేక వస్తువులను మరియు విషయాలను మనము ఉపయోగిస్తాము .
ಆದ್ದರಿಂದ ವ್ಯಕ್ತಿ ಮತ್ತು ಸಮಾಜದ ಸರ್ವತೋಮುಖಹಿತಕ್ಕೆ ಸಹಾಯಕವಾಗುವಂಥವುಗಳನ್ನೇ ನಿಜವಾದ ಅರ್ಥದಲ್ಲಿ ಪುರುಷಾರ್ಥಗಳೆಂದು ಹೇಳಬಹುದು.
కావున వ్యక్తి మరియు సమాజాని సర్వతోముఖహితానికి సహాయకం_అయ్యేవాటినే నిజమైన అర్థంలో పురుశార్థాలని చెప్పవచ్చు .
ನೈಜ ಮೌಲ್ಯ ವಸ್ತುವಿನ ಉಪಯುಕ್ತತೆಯನ್ನೂ ಅದರ ಬಾಳಿಕೆಯನ್ನೂ ಸೂಚಿಸುತ್ತದೆ.
నైజ మౌల్యం వస్తువుయొక్క ఉపయుక్తతనూ దాని మన్నికనూ సూచిస్తుంది .
ಅನೇಕರು ಸಾಂಪ್ರದಾಯಿಕ ಧಾರ್ಮಿಕ ಆಚರಣೆಯಲ್ಲಿ ಮಗ್ನರಾಗಿರುತ್ತಾರೆಯೇ ಹೊರತು ಅದರ ಹಿಂದಿರುವ ಆಧ್ಯಾತ್ಮಿಕ ಆದರ್ಶವನ್ನು ಲೆಕ್ಕಿಸುವುದೇ ಇಲ್ಲ.
అనేకులు సాంప్రదాయకమైన ధార్మిక ఆచరణలో మగ్నులై_ఉంటారే తప్ప దాని వెనుక_ఉన్న ఆధ్యాత్మిక ఆదర్శాన్ని లెక్కించడమే లేదు .
ಹಾಗಾದರೆ ಮನುಷ್ಯಜೀವನಕ್ಕೆ ಅರ್ಥವೇ ಇಲ್ಲವೇ?
అలాగైతే మనుష్యజీవనముకు అర్థమే లేదా ?
ಧರ್ಮ, ಜನಾಂಗ, ಪ್ರಾಂತ ಭಾಷ ಹೀಗೆ ಯಾವುದಾದರೂ ನೆಪ ಮಾಡಿಕೊಂಡು ಇತರರನ್ನು ಹಿಂಸಿಸಲು ಕೊಲ್ಲಲು ಜನ ಉದ್ಯುಕ್ತರಾಗುತ್ತಾರೆ.
ధర్మం , జాతి , ప్రాంతం భాష ఈ_విధంగా ఏదైనా నెపం చేసుకొని ఇతరులని హింసించడానికి చంపడానికి జనం ఉద్యుక్తులవుతారు .
ಹಾಗೆಯೇ ಜೀವನವೂ ಅರ್ಥಪೂರ್ಣವಾದಾಗ ಯಾವ ಘಟನೆಯೂ ಅನರ್ಥವೆನಿಸುವುದಿಲ್ಲ, ನಾವು ಅನುಭವಿಸುವ ತೀವ್ರ ದುಃಖವೂ ಅರ್ಥಪೂರ್ಣವಾಗುತ್ತದೆ.
అలాగే జీవనమూ అర్థవంతమైనప్పుడు ఏ ఘటన_కూడా అనర్థమనిపించదు , మనము అనుభవించే తీవ్ర దుఃఖమూ అర్థవంతమవుతుంది .
ಪಾತ್ರಧಾರಿಗೆ ತನ್ನ ಭಿಕ್ಷಾವೃತ್ತಿ ನಿಜವಲ್ಲವೆಂದೂ ಕೇವಲ ಆಟಕ್ಕಾಗಿ ನಟಿಸಿರುವೆನೆಂದೂ ಗೊತ್ತಿದೆ.
పాత్రధారికి తన భిక్షావృత్తి నిజంకాదనీ కేవలం ఆటకోసం నటించాననీ తెలిసింది .
………………………………………………………………………………………
`ಸಾರ’ ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ಅವರು `ಬೇಳೂರು ಬ್ಲಾಗ್’ಗೆ ಸರಳವಾಗಿ ವಿವರಿಸಿದ್ದು ಹೀಗೆ: ಸಾಮಾನ್ಯವಾಗಿ (ಮತ್ತು ಸಹಜವಾಗಿಯೇ) ಈ ತಂತ್ರಾಂಶಕ್ಕೆ ಯುನಿಕೋಡ್ ಕನ್ನಡದಲ್ಲಿ ಪಠ್ಯವನ್ನು ಊಡಿಸಲಾಗುತ್ತದೆ. ಅಷ್ಟೆ; ಕ್ಷಣಮಾತ್ರದಲ್ಲಿ ತೆಲುಗು ಅನುವಾದದ ಯುನಿಕೋಡ್ ಪಠ್ಯದ ಕಡತವು ಹೊರಬರುತ್ತದೆ! ಹೀಗೆ ಹೊರಬಂದ ಪಠ್ಯವನ್ನು ಮತ್ತೆ ಸುಧಾರಿಸಲಾಗುತ್ತದೆ. ಈ ಸುಧಾರಣೆಯ ಅಂಶಗಳನ್ನು ಮತ್ತೆ `ಸಾರ’ ತಂತ್ರಾಂಶದೊಳಕ್ಕೆ ತೂರಿಸಲಾಗುತ್ತದೆ. ಮತ್ತೆ ಕನ್ನಡ ಪಠ್ಯವನ್ನು ಊಡಿಸಿದಾಗ ಇನ್ನೂ ಹೆಚ್ಚಿನ ಗುಣಮಟ್ಟದ ಅನುವಾದ ಹೊರಬೀಳುತ್ತದೆ. ಹೀಗೆ ಸುಮಾರು ಶೇಕಡಾ ೮೦ರಿಂದ ೯೦ರಷ್ಟು ಗುಣಮಟ್ಟದ ಅನುವಾದವನ್ನು ಪಡೆಯಬಹುದು. ಅಂತಿಮ ಹಂತದಲ್ಲಿ ಹೀಗೆ ತಯಾರಾದ ಯಂತ್ರಾನುವಾದವನ್ನು ಮಾನವ ನಿಗಾ ಮತ್ತು ಮಧ್ಯಪ್ರವೇಶದ ಮೂಲಕ ಶುದ್ಧೀಕರಿಸಿದರೆ ಅತ್ಯಂತ ಹೆಚ್ಚಿನ ಗುಣಮಟ್ಟದ ಅನುವಾದ ಪಠ್ಯ ಸಿದ್ಧ. `ಸದ್ಯಕ್ಕಂತೂ ಸಾರ ತಂತ್ರಾಂಶವು ದೇಶದಲ್ಲೇ ಅತ್ಯಂತ ಯಶಸ್ವೀ ಯಂತ್ರಾನುವಾದ ವ್ಯವಸ್ಥೆ ಎಂದು ಪರಿಗಣಿತವಾಗಿದೆ’ ಎಂದು ಪ್ರೊ|| ನಾರಾಯಣಮೂರ್ತಿ ಸಂತಸದಿಂದ ತಿಳಿಸಿದರು. `ಏನೇ ಇದ್ದರೂ ಅನುವಾದವನ್ನು ಕೇವಲ ತಂತ್ರಾಂಶದ ನೆರವಿನಿಂದಲೇ ಕರಾರುವಾಕ್ಕಾಗಿ ಮಾಡಲು ಅಸಾಧ್ಯ. ಭಾಷೆ ಬಲ್ಲವರ ನಿಗಾ ಮತ್ತು ಭಾಗಿತ್ವ ಇದ್ದರೆ ಖಂಡಿತ ಈ ಅನುವಾದದ ಕೆಲಸಗಳು ಬಹುಬೇಗ ಆಗುತ್ತವೆ’ ಎಂಬುದು ಅವರ ಅಭಿಮತ.
ಹಾಗಾದರೆ ಇದು ಸಾರ್ವಜನಿಕ ಬಳಕೆಗೆ ಸಿಗುತ್ತದೆಯೆ? `ಪ್ರಸ್ತುತ ಇದು ಸಾರ್ವಜನಿಕರಿಗೆ ಡೌನ್‌ಲೋಡ್ ಮಾಡಿ ಸ್ಥಾಪನೆ ಮಾಡಿಕೊಳ್ಳುವ ರೂಪದಲ್ಲಿ ಸಿಗುತ್ತಿಲ್ಲ. ಅಥವಾ ಇದನ್ನು ನೀವು ವೆಬ್‌ಸೈಟ್ ಮೇಲೆಯೇ ಬಳಸಲೂ ಸಾಧ್ಯವಿಲ್ಲ. ನಿಮಗೆ ಕನ್ನಡಿಂದ ತೆಲುಗಿಗೆ ಅನುವಾದ ಮಾಡುವ ಅವಶ್ಯಕತೆ ಇದ್ದಲ್ಲಿ ನೀವು ಪ್ರೊ|| ನಾರಾಯಣಮೂರ್ತಿಯವರಿಗೆ ಕನ್ನಡ ಪಠ್ಯವನ್ನು ಕಳಿಸಬೇಕು. ಅವರು ಅದನ್ನು ತೆಲುಗಿಗೆ ಅನುವಾದ ಮಾಡಿ ಕಳಿಸುತ್ತಾರೆ. ಇದನ್ನು ಬಳಸುವಾಗ ನೀವು `ಸಾರ’ ತಂತ್ರಾಂಶವನ್ನು ನಿಮ್ಮ ಬರಹದಲ್ಲಿ ಸೌಜನ್ಯಪೂರ್ವಕ ಉಲ್ಲೇಖಿಸಬೇಕು ಎಂಬುದಷ್ಟೇ ಅವರ ಕೋರಿಕೆ.
ಈ ತಂತ್ರಾಂಶವನ್ನು ಸುಧಾರಿಸುವ ಹಿನ್ನೆಲೆಯಲ್ಲಿ ಕನ್ನಡ ಮತ್ತು ತೆಲುಗು ಎರಡೂ ಭಾಷೆಗಳನ್ನು ಬಲ್ಲವರು ಬೇಕಾಗಿದ್ದಾರೆ ಎಂದು ಪ್ರೊ|| ನಾರಾಯಣಮೂರ್ತಿ ತಿಳಿಸಿದ್ದಾರೆ.
ಈ ಸಂಶೋಧನೆಯಲ್ಲಿ ಒಟ್ಟು ಆರು ಸಂಸ್ಥೆಗಳು ಭಾಗವಹಿಸಿದ್ದು ಇದಕ್ಕೆ ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಟೆಕ್ನಾಲಜಿ ಡೆವಲಪ್‌ಮೆಂಟ್ ಫಾರ್ ಇಂಡಿಯನ್ ಲಾಂಗ್ವೇಜಸ್( ಟಿಡಿಐಎಲ್ ) ಸಂಸ್ಥೆಯು ಧನಸಹಾಯ ನೀಡಿದೆ. ಈ ಸಂಶೋಧನೆಯಲ್ಲಿ ಸೇರಿಕೊಳ್ಳುವ ಆಸಕ್ತಿ ಇರುವ ಯಾರಿಗಾದರೂ ಸುಸ್ವಾಗತ ಎಂದು ಪ್ರೊ|| ನಾರಾಯಣಮೂರ್ತಿ ತಿಳಿಸಿದ್ದಾರೆ. ಈ ಕುರಿತು ದೇಶದ ಎಲ್ಲೆಡೆ ಅವರು ಕಾರ್ಯಾಗಾರಗಳನ್ನು ನಡೆಸುತ್ತಿದ್ದಾರೆ.
ಅಂದಹಾಗೆ ಪ್ರೊ|| ನಾರಾಯಣಮೂರ್ತಿಯವರು ದೇಶದ ಇಂಥ ಹಲವು ಸಂಶೋಧನೆಗಳಲ್ಲಿ ಭಾಗಿಯಾಗಿದ್ದಾರೆ. ನಾನು ಅವರನ್ನು ನನ್ನ ಕನ್ನಡ ವಿಶ್ವವಿದ್ಯಾಲಯದ ಪಠ್ಯಕ್ರಮ ರಚನೆಯ ದಿನಗಳಿಂದಲೂ ನೋಡುತ್ತಿದ್ದೇನೆ. ಅಲ್ಲಿಯೂ ಅವರು ಒಂದು ಕನ್ನಡ ಪದಸಂಚಯವನ್ನು ರೂಪಿಸುವಲ್ಲಿ ಮಹತ್ವದ ಪಾತ್ರ ನಿರ್ವಹಿಸಿದ್ದರು. ಸರಳ, ಸ್ನೇಹಮಯಿ ವ್ಯಕ್ತಿತ್ವದ ಪ್ರೊ|| ನಾರಾಯಣಮೂರ್ತಿಯವರು `ಸಾರ’ದ ಮೂಲಕ ಭಾರತದ ಯಂತ್ರಾನುವಾದ ರಂಗದಲ್ಲೇ ಒಂದು ಸಂಚಲನ ಮೂಡಿಸಿದ್ದಾರೆ.
ಹೈದರಾಬಾದ್ ವಿವಿಯ ಸ್ಕೂಲ್ ಆಫ್ ಕಂಪ್ಯೂಟರ್ ಎಂಡ್ ಇನ್‌ಫಾರ್ಮೇಶನ್ ಸೈನ್ಸಸ್ ಮತ್ತು ಸಂಸ್ಕೃತ ಅಧ್ಯಯನ ವಿಭಾಗದಲ್ಲಿ ಪ್ರಾಧ್ಯಾಪಕರಾಗಿರುವ ಪ್ರೊ|| ಕವಿ ನಾರಾಯಣಮೂರ್ತಿಯವರು ತಂತ್ರಜ್ಞಾನವಲ್ಲದೆ ಇನ್ನಿತರೆ ವಿಷಯಗಳ ಮೇಲೂ ಪುಸ್ತಕಗಳನ್ನು ಬರೆದಿದ್ದಾರೆ. `ಬ್ರಹ್ಮಚರ್ಯ: ಸೆಕ್ಸ್, ಎಜುಕೇಶನ್ ಎಂಡ್ ಹ್ಯುಮನ್ ಲೈಫ್’, `ಅಹಿಂಸ: ಆನ್ ಹೆಲ್ಥ್ ಎಂಡ್ ಹಾರ್ಮ್‌ಲೆಸ್ ಲಿವಿಂಗ್’, `ಫ್ರೀಡಂ’ – ಇವು ಅವರ ಮೂರು ಪುಸ್ತಕಗಳು. ಶಾಸ್ತ್ರೀಯ ಸಂಗೀತ, ಸಂಸ್ಕೃತ ಮತ್ತು ಭಾರತೀಯ ಪರಂಪರೆ, ಯೋಗ ಮತ್ತು ವೇದಾಂತ – ಇವು ಅವರ ಆಸಕ್ತಿಯ ಸಂಗತಿಗಳು.
ಯಂತ್ರಾನುವಾದದ ಇತರೆ ಯತ್ನಗಳು
- ಇಂಗ್ಲಿಶ್ ಪಠ್ಯವನ್ನು ರಾಜಭಾಷೆ ಹಿಂದಿಗೆ ಅನುವಾದಿಸಲು ಭಾರತ ಸರ್ಕಾರವು `ಮಂತ್ರ’ ಎಂಬ ತಂತ್ರಾಂಶವನ್ನು ರೂಪಿಸಿದೆ. (https://download-rajbhasha.rb-aai.in/)
- ಸಿಡ್ಯಾಕ್ ಸಂಸ್ಥೆಯೇ `ಗೋಟ್ರಾನ್ಸ್‌ಲೇಟ್’ ಎಂಬ ತಂತ್ರಾಂಶವನ್ನು ರೂಪಿಸಿದ್ದು ಇದು ಕ್ರೋಮ್ ಪ್ಲಗಿನ್ ಆಗಿಯೂ ಲಭ್ಯ. ಇದನ್ನು ಬಳಸಿದವರೇ ಇದರ ಬಗ್ಗೆ ಹೇಳಬೇಕಷ್ಟೆ. (https://chrome.google.com/webstore/detail/go-translate/cfmeoigobgkgnepgmpbecadegpcenllg?hl=en)
- `ಸಂಪರ್ಕ್’ ಎಂಬ ಇನ್ನೊಂದು ತಂತ್ರಾಶವನ್ನು ಟಿಡಿಐಎಲ್ ಆನ್‌ಲೈನ್‌ನಲ್ಲಿ ಒದಗಿಸಿದ್ದು ಇದನ್ನು ಬಳಸಲು ನನಗೆ ಸಾಧ್ಯವಾಗಲಿಲ್ಲ. (http://ilmt.tdil-dc.gov.in/sampark/web/index.php/content)
- ಮೈಕ್ರೋಸಾಫ್ಟ್ ಮತ್ತು ಗೂಗಲ್ ಸಂಸ್ಥೆಗಳು ಅನುವಾದ ತಂತ್ರಾಂಶಗಳನ್ನು ರೂಪಿಸಿದ್ದು ನಿಮಗೆ ತಿಳಿದೇ ಇರಬೇಕು. ಆದ್ದರಿಂದ ಆ ಬಗ್ಗೆ ಇಲ್ಲಿ ಬರೆದಿಲ್ಲ.
(ಈ ಪಟ್ಟಿ ಅಪೂರ್ಣ)