ನೀವು ಬೆಂಗಳೂರಿನ ಚರ್ಚ್ ಸ್ಟ್ರೀಟ್‌ನಲ್ಲಿರುವ ಪ್ರಸಿದ್ಧ ಹೋಟೆಲಿಗೆ ನುಗ್ಗಿದ್ದೀರಿ. ಮೂಗಿನೊಳಗೆ ಎಂಥದ್ದೋ ವಾಸನೆ. ಅದು ಯಾವುದೋ ವಿಶೇಷ ಆಹಾರದ ಘಮವೇ ಇರಬೇಕು ಎಂದು ನಿರ್ಣಯಿಸುತ್ತೀರಿ. ಹೊರಗೆ ಮಳೆ. ಒಳಗೆ ಹಸಿವಿನ ದಾಂದಲೆ. ಖಾಲಿಯಿದ್ದ ಖುರ್ಚಿಯಲ್ಲಿ ಆಸೀನರಾಗುತ್ತೀರಿ. ಹೋಟೆಲಿನ ನಗುಮುಖದ ಸಿಬ್ಬಂದಿ ಬಂದು ಮೆನ್ಯು ಕೊಡುತ್ತಾನೆ. ಆತುರಾತುರದಿಂದ ಅದನ್ನು ತೆರೆದರೆ….
ಇಡೀ ಮೆನ್ಯು ತುಂಬಾ ಹುಳಗಳ ಚಿತ್ರಗಳಿವೆ! ಪಿಂಗಾಣಿ ತಟ್ಟೆಗಳಲ್ಲಿ, ಬೋಗುಣಿಗಳಲ್ಲಿ ಎಲ್ಲೆಲ್ಲೂ ತರಾವರಿ ಹುಳ – ಹುಪ್ಪಟೆಗಳ ವರ್ಣಮಯ ನೋಟಗಳಿವೆ. ಬೆಲೆಯೂ ಅಂಥ ದುಬಾರಿಯಾಗಿ ಕಾಣಿಸುವುದಿಲ್ಲ. ಕೋಲಿಯೋಪ್ಟೆರಾ ಕುಟುಂಬದ ಜೀರುಂಡೆಗಳು, ಆರ್ಥೋಪ್ಟೆರಾ ಕುಟುಂಬದ ಮಿಡತೆಗಳು, ಹೆಮಿಪ್ಟೆರಾ ಕುಟುಂಬದ ಟ್ರೂ ಬಗ್‌ಗಳು, ಹೈಮೆನೋಪ್ಟೆರಾ ಕುಟುಂಬದ ಜೇನು, ಇರುವೆಗಳು, ಒಡೊಂಟಾ ಕುಟುಂಬದ ಪೀಟಗಳು, – ಅಥವಾ ವಿದೇಶಿ ಹುಳಗಳ ವಿಶೇಷ ಪದಾರ್ಥಗಳು… ಒಂದೆ, ಎರಡೆ,
ಇದೇನು `ದಿ ಮ್ಯಾಟ್ರಿಕ್ಸ್’ ಸಿನೆಮಾದಲ್ಲಿ ನಾಯಕ ಕಾನು ರೀವ್ಸ್‌ನ ಹೊಟ್ಟೆಯೊಳಗೆ ಕನಸಿನಲ್ಲಿ ಹೊಕ್ಕರೂ ನಿಜವಾದ ಎಲೆಕ್ಟ್ರಾನಿಕ್ ಹುಳದ ಕಥೆಯಲ್ಲ. ಕೆಲವೇ ದಶಕಗಳ ನಂತರದ ನೀವು ಹೋಟೆಲಿಗೆ ಹೋದರೆ ಈ ದೃಶ್ಯವಂತೂ ಖಂಡಿತ ವಾಸ್ತವವೇ!
ಈಗಾಗಲೇ ೨೦೦ ಕೋಟಿ ಜನ ತಿಂತಿದಾರೆ!
ಇಷ್ಟಾಗಿಯೂ ನೀವು ಈ ಆಹಾರಕ್ಕೆ ಹೊಸಬರು ಎಂಬುದನ್ನು ನೆನಪಿಡಿ! ಈಗಾಗಲೇ ಜಗತ್ತಿನ ೨೦೦ ಕೋಟಿ ಜನರು ಒಂದಲ್ಲ ಒಂದು ಬಗೆಯ ಕೀಟ, ಹುಳ, ಹುಪ್ಪಟೆಯನ್ನು ತಮ್ಮ ಆಹಾರ ಪದ್ಧತಿಯಲ್ಲಿ ಸೇರಿಸಿಕೊಂಡೇ ಇದ್ದಾರೆ. ಅವರ ಈ ಆಹಾರ ವ್ಯವಸ್ಥೆಯು `ಯೋಚಿಸಿ, ಸೇವಿಸಿ, ಉಳಿಸಿ’ ಎಂಬ ಈ ವರ್ಷದ ವಿಶ್ವ ಪರಿಸರ ದಿನದ ಘೋಷಣೆಗೆ ಅನುಗುಣವಾಗಿಯೇ ಇದೆ. ಏಕೆಂದರೆ `ಹುಳಾಹಾರ’ವು ಪೌಷ್ಟಿಕ, ಪರ್ಯಾಯ ಮತ್ತು ಪರಿಸರ ಸ್ನೇಹಿ. ಜೀರುಂಡೆ (ಕ್ಯಾಟರ್‌ಪಿಲ್ಲರ್), ದುಂಬಿ(ಬೀಟಲ್), ಕಣಜ(ವಾಸ್ಪ್), ಇರುವೆ, ಮಿಡತೆ (ಗ್ರಾಸ್‌ಹಾಪರ್), ಶಲಭ (ಲೊಕಸ್ಟ್), ಚಿಮ್ಮಂಡೆ(ಕ್ರಿಕೆಟ್), ಗೆದ್ದಲು ಹುಳ, ಕೊಡತಿ ಹುಳು (ಡ್ರಾಗನ್‌ಫ್ಲೈ) – ಇವು ಈ ಹೊತ್ತಿನಲ್ಲಿ ವಿಶ್ವದ ಹಲವು ಭಾಗಗಳಲ್ಲಿ ಆಹಾರದಲ್ಲಿ ಸೇರಿಹೋಗಿವೆ; ಕಣ್ತಪ್ಪಿ ಅಲ್ಲ, ನಿಜವಾಗಿ. ಮಾಂಸಾಹಾರದ ಹಾಗೆಯೇ ಕೀಟಗಳು ಪ್ರೋಟೀನ್ ಸತ್ವದ ಪ್ರಮುಖ ಮೂಲ ಎಂಬುದೀಗ ಸಂಶೋಧನೆಗಳಿಂದ ಖಚಿತವಾಗಿದೆ. ಡಚ್ ಸರ್ಕಾರವು ಈ ಕುರಿತು ಸಂಶೋಧನೆ ಮಾಡಲು ಎಂಟು ಕೋಟಿ ರೂ.ಗಳನ್ನು ನೀಡಿದೆ. `ಕೀಟತೋಟ’ಗಳ ನಿರ್ಮಾಣದ ಕುರಿತಂತೆ ಕಾನೂನು ರಚಿಸಲು ಮುಂದಾಗಿದೆ.
ವಿಶ್ವಸಂಸ್ಥೆ ವರದಿ ಹೇಳಿದ್ದೇನು?
ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಘಟನೆಯು (ಎಫ್‌ಎಓ) ಈಗಷ್ಟೇ ಒಂದು ಸುದೀರ್ಘ ವರದಿಯನ್ನು ಪ್ರಕಟಿಸಿದೆ. ೨೦೦ ಪುಟಗಳ ಈ ವರದಿಯಲ್ಲಿ ಜನರಿಗೆ, ರಾಸುಗಳಿಗೆ ಮತ್ತು ಸಾಕುಪ್ರಾಣಿಗಳಿಗೆ ಹಲವು ಬಗೆಯ ಹುಳಹುಪ್ಪಟೆಗಳನ್ನು ಶಿಫಾರಸು ಮಾಡಲಾಗಿದೆ. ಕೋಳಿ, ಹಂದಿ, ಎಮ್ಮೆ-ಕೋಣ-ಹಸು, ಮೀನು, ಮಾಂಸಕ್ಕೆ ಹೋಲಿಸಿದರೆ ಈ ಹುಳಾಹಾರವು ಹೆಚ್ಚು ಪುಷ್ಟಿದಾಯಕ; ಅದರಲ್ಲೂ ಅಪೌಷ್ಟಿಕತೆಯಿಂದ ಬಳಲುತ್ತಿರುವ ಲಕ್ಷಗಟ್ಟಳೆ ಮಕ್ಕಳಿಗೆ ಇದು ಅತ್ಯುತ್ತಮ ಆಹಾರವಾಗಬಲ್ಲದು ಎಂಬುದು ವಿಶ್ವಸಂಸ್ಥೆಯ ದೃಢ ನಂಬಿಕೆ. ಆಹಾರದ ಸಮಸ್ಯೆಯನ್ನು ನೀಗಲು ಜನರು ಹೆಚ್ಚು ಹೆಚ್ಚು ಕೀಟಗಳನ್ನೇ ತಿನ್ನಬೇಕು ಎಂಬುದು ವಿಶ್ವಸಂಸ್ಥೆಯ ಖಚಿತ ಅಭಿಮತ.
ಈ ಕೀಟಗಳು ಸುಣ್ಣ, ತಾಮ್ರ, ಕಬ್ಬಿಣ, ಮ್ಯಾಗ್ನೀಶಿಯಂ, ಮ್ಯಾಂಗನೀಸ್, ರಂಜಕ, ಸೆಲೆನಿಯಂ ಮತ್ತು ಝಿಂಕ್ ಖನಿಜಗಳನ್ನು ಹೊಂದಿದೆ. ಇವೆಲ್ಲವೂ ಶೀತರಕ್ತದ ಕೀಟಗಳಾದ್ದರಿಂದ ಇವುಗಳನ್ನು ಖಾದ್ಯ ಮಾಂಸವಾಗಿ ಪರಿವರ್ತಿಸುವುದು ತುಂಬಾ ಸುಲಭ ಎನ್ನುವುದು ಈ ವರದಿಯು ಪ್ರತಿಪಾದಿಸುವ ಇನ್ನೊಂದು ಅಂಶ. ಇನ್ನು ಈ ಕೀಟಗಳಿಂದ ಹಸಿರುಮನೆ ಅನಿಲ ಉತ್ಪಾದನೆಯೂ ತೀರಾ ಕಡಿಮೆ. ಇವುಗಳು ತ್ಯಾಜ್ಯ, ಕಾಂಪೋಸ್ಟ್‌ಗಳನ್ನು ತಿಂದೇ ಬೆಳೆಯುತ್ತವೆ. ಆದ್ದರಿಂದ ಪರಿಸರಕ್ಕೆ ಈ ಕೀಟಗಳಿಂದ ಅನುಕೂಲವೇ ಹೆಚ್ಚು. ಹಾನಿ ಕಡಿಮೆ ಎಂಬುದು ವರದಿಯ ಅಂದಾಜು.
`ಕೀಟಗಳನ್ನು ಮನುಕುಲದ ಹಲವು ಸಮುದಾಯಗಳು ಬಳಸುತ್ತಲೇ ಬಂದಿವೆ. ಆದರೆ ಕೆಲವೆಡೆ ಕೀಟಗಳ ಬಳಕೆಯ ಬಗ್ಗೆ ಅಸಹ್ಯ ಭಾವನೆ ಇದೆ. ಇದು ತಪ್ಪಬೇಕು’ ಎನ್ನುತ್ತಾರೆ ಈ ವರದಿಯನ್ನು ರೂಪಿಸಿದ ಎಡ್ವರ್ಡೋ ರೋಜಾಸ್ – ಬ್ರಿಯಾಲೆಸ್ ಮತ್ತು ಅರ್ನ್ಸ್ಟ್ ವಾನ್ ಡೆನ್ ಎಂಡ್. `ಈ ಕೀಟಗಳು ಸಾಮಾನ್ಯವಾಗಿ ಕಾಡುಗಳಲ್ಲೇ ಬೆಳೆಯುತ್ತವೆ; ಆದರೆ ಇವುಗಳನ್ನು ಬೃಹತ್ ಪ್ರಮಾಣದಲ್ಲಿ ಬೆಳೆಸುವ ಕುರಿತು ಸಂಶೋಧನೆಗಳು ಹಲವೆಡೆ ಆರಂಭವಾಗಿವೆ’ ಎಂದು ಇವರು ತಿಳಿಸುತ್ತಾರೆ. ಅಭಿವೃದ್ಧಿ ಹೊಂದಿದ ಮತ್ತು ಹೊಂದುತ್ತಿರುವ ದೇಶಗಳಲ್ಲಿ ಸಾಂಪ್ರದಾಯಿಕ ಜ್ಞಾನ ಮತ್ತು ಆಧುನಿಕ ವಿಜ್ಞಾನದ ನೆರವಿನೊಂದಿಗೆ ಹುಳಾಹಾರವನ್ನು ವಾಸ್ತವವಾಗಿಸಬಹುದು ಎಂಬುದು ಈ ಲೇಖಕರ ವಿಶ್ವಾಸ.
೨೦೫೦ರ ಹೊತ್ತಿಗೆ ನಮ್ಮ ಆಹಾರದ ಉತ್ಪಾದನೆಯು ಇಮ್ಮಡಿಯಾಗಲೇಬೇಕಿದೆ. ಆದರೆ ಇರುವ ಭೂಮಿಯ ಪ್ರಮಾಣ, ಕೃಷಿಗೆ ಬಳಸಬಹುದಾದ ಪ್ರದೇಶದ ಪ್ರಮಾಣ ಹೆಚ್ಚಾಗುವ ಸಾಧ್ಯತೆಯೇ ಕ್ಷೀಣ. ಸಮುದ್ರ ಮೀನುಗಾರಿಕೆಯೂ ಅತಿಯಾಗಿದ್ದು ಮೀನು ಬೆಳೆಯ ಗತಿ ಕುಗ್ಗಿದೆ. ಈಗಲೇ ಜಗತ್ತಿನಲ್ಲಿ ಒಂದು ಕೋಟಿ ಜನ ತೀವ್ರ ಹಸಿವೆಯಿಂದ ಬಳಲುತ್ತಿದ್ದಾರೆ. ಆದ್ದರಿಂದ ಇವತ್ತು ನಾವು ತಿನ್ನುತ್ತಿರುವುದೇನು, ನಾಳೆ ನಾವು ತಿನ್ನಬೇಕಾಗಿರುವುದೇನು – ಎಲ್ಲವನ್ನೂ ಮರುವಿಮರ್ಶೆ ಮಾಡಲೇಬೇಕಿದೆ ಎನ್ನುತ್ತದೆ ಈ ವರದಿ.
ಈ ವರದಿಯ ಲೇಖಕರಿಬ್ಬರೂ ನೆದರ್‌ಲ್ಯಾಂಡ್ ದೇಶದ ವ್ಯಾಜಿಂಜೆನ್ ವಿಶ್ವವಿದ್ಯಾನಿಲಯದ ಸಂಶೋಧಕರು. ಆಹಾರ – ಕೃಷಿ ಸಂಘಟನೆಯ ಅರಣ್ಯ ವಿಭಾಗದ ಕೋರಿಕೆಯ ಮೇರೆಗೆ ಸಂಶೋಧನೆ ಕೈಗೊಂಡ ಇವರು ಈ ವಿಶಿಷ್ಟ ವರದಿಯನ್ನು ಸಿದ್ಧಪಡಿಸಿದ್ದಾರೆ. ಕೃಷಿಕರು, ಮಾಧ್ಯಮಗಳು, ಸಾರ್ವಜನಿಕರು – ಎಲ್ಲರೂ ಈ ವಿಷಯದ ಬಗ್ಗೆ ಹೆಚ್ಚು ಗಮನ ಹರಿಸಬೇಕು, ಆದ್ಯತೆ ನೀಡಬೇಕು ಎಂದು ಈ ಲೇಖಕರು ತಮ್ಮ ಮುನ್ನುಡಿಯಲ್ಲಿ ವಿನಂತಿಸಿಕೊಂಡಿದ್ದಾರೆ. `ಕರ್ನಾಟಕ ಪರಿಸರ ವಾಹಿನಿ’ಯಲ್ಲಿ ಪ್ರಕಟವಾಗಿರುವ ಈ ಲೇಖನವು ಕನ್ನಡದಲ್ಲೇ ಈ ಕುರಿತ ವಿಶೇಷ ನುಡಿಚಿತ್ರ ಎಂಬುದು ಉಲ್ಲೇಖನೀಯ.
ಈ ಲೇಖಕರಿಗಿಂತ ಮುನ್ನ ಜೀನ್ ಆರ್ ಡಿಫೋಲಿಯಾರ್ಟ್ ಎಂಬ ವಿಜ್ಞಾನಿ ಹುಳಾಹಾರದ ಬಗ್ಗೆ ವಿಶೇಷ ಸಂಶೋಧನೆ ನಡೆಸಿದ್ದರು. ಆಹಾರ ಕೀಟಗಳ ಬಗ್ಗೆ ಅವರು ಒಂದು ವಾರ್ತಾಪತ್ರವನ್ನೂ ಪ್ರಕಟಿಸುತ್ತಿದ್ದರು. ಅವರ ನೆನಪಿಗೆ ಈ ಹೊಸ ವರದಿಯನ್ನು ಅರ್ಪಿಸಲಾಗಿದೆ.
ತಿನ್ನಲು ಯೋಗ್ಯ: ೧೯೦೦ ಬಗೆಯ ಕೀಟ
ಸುಮಾರು ೧೯೦೦ಕ್ಕಿಂತ ಹೆಚ್ಚು ಬಗೆಯ ಕೀಟಗಳು ಆಹಾರವಾಗಿ ಬಳಕೆಯಾಗುತ್ತಿವೆ. ಹಾಗೆ ನೋಡಿದರೆ ಕೀಟಗಳು ಮನುಕುಲಕ್ಕೆ ಮಾಡುತ್ತಿರುವ ಉಪಕಾರವು ವರ್ಣಿಸಲು ಆಗದಷ್ಟು ವಿಸ್ತಾರವಾಗಿದೆ. ಭಾರತೀಯ ಸನ್ನಿವೇಶದಲ್ಲಿ ಜೇನುತುಪ್ಪ, ರೇಷ್ಮೆ ಸೀರೆ – ಎರಡೇ ಉದಾಹರಣೆಗಳು ಸಾಕಲ್ಲವೆ? ಆಯುರ್ವೇದದಲ್ಲಿ ಜೇನುತುಪ್ಪ, ಸಾಂಪ್ರದಾಯಿಕ ಆಚರಣೆಗಳನ್ನು ರೇಷ್ಮೆ ಸೀರೆಗಳು ಬಳಕೆಯಾಗುತ್ತಿವೆ ತಾನೆ? ಕೀಟಗಳಿರದಿದ್ದರೆ ಇವೆರಡೂ ಉತ್ಪನ್ನಗಳು ಇರುತ್ತಿರಲಿಲ್ಲ. ಇನ್ನು ಪರಾಗಸ್ಪರ್ಶ, ಜೈವಿಕ ಪರಿವರ್ತನೆ, ಹಾನಿಕಾರಕ ಕೀಟ ನಿಯಂತ್ರಣ, – ಹೀಗೆ ಹಲವು ಬಗೆಗಳಲ್ಲಿ ಕೀಟಗಳು ಮಾನವನಿಗೆ ಉಪಕಾರಿಯಾಗಿವೆ.
ಜಗತ್ತಿನಲ್ಲಿ ಈಗ ಆಹಾರವಾಗಿ ಬಳಕೆಯಾಗುತ್ತಿರುವ ಕೀಟಗಳಲ್ಲಿ ದುಂಬಿಗಳ ಪಾಲು ಹೆಚ್ಚು (ಶೇ.೩೧). ಅದಾದ ಮೇಲೆ ಜೀರುಂಡೆಗಳು ಶೇ. ೧೮ರಷ್ಟು ಬಳಕೆಯಲ್ಲಿವೆ. ಮೇಲೆ ಉಲ್ಲೇಖಿಸಿದ ಎಲ್ಲ ಬಗೆಯ ಕೀಟಗಳೂ ಆಹಾರವಾಗಿವೆ. ಹೀಗೆ ಹುಳಗಳನ್ನು ತಿನ್ನುವ ಸಂಸ್ಕೃತಿಗೆ ಎಂಟೋಮೋಫಾಗಿ ಎಂಬ ಹೆಸರೂ ಇದೆ. ಕೀಟಗಳನ್ನು ತಿನ್ನುವುದೆಂದರೆ ಅನಾಗರಿಕ ಮನುಷ್ಯರ ಪ್ರವೃತ್ತಿ ಎಂಬ ಭಾವವು ಹಲವರಲ್ಲಿದೆ. ಇದರಿಂದಾಗಿ ಕೃಷಿ ರಂಗದಲ್ಲಿ ಕೀಟಗಳ ಕುರಿತ ಸಂಶೋಧನೆಗಳೇ ಹೆಚ್ಚಾಗಿ ನಡೆಯಲಿಲ್ಲ. ಈಗ? ಹುಳಾಹಾರದ ವಿಷಯವನ್ನು ಗಂಭೀರವಾಗಿ ಪರಿಗಣಿಸಲೇಬೇಕಾಗಿದೆ. ಕೀಟಕೃಷಿ, ಕೀಟತೋಟ – ಇವೆಲ್ಲ ಈಗಷ್ಟೇ ಮೂಡಿರುವ ಹೊಸ ಚಿಂತನೆಗಳು.
ಕೀಟಗಳೇ ಆಹಾರವಾದರೆ ಅವುಗಳ ಉತ್ಪಾದನೆಯ ಖರ್ಚುವೆಚ್ಚಗಳೇನು ಎಂಬ ಪ್ರಶ್ನೆಯನ್ನು ನೀವು ಕೇಳಬಹುದು. ಹುಳಾಹಾರದ ಶಿಫಾರಸಿಗೆ ಇರುವ ಕಾರಣಗಳಲ್ಲಿ ಹುಳಗಳು ಬಳಸುವ ಕಚ್ಚಾ ಪದಾರ್ಥಗಳ ಅತಿಕಡಿಮೆ ಪ್ರಮಾಣ ಪ್ರಮುಖವಾಗಿದೆ. ಉದಾಹರಣೆಗೆ ಒಂದು ಕಿಲೋ ಪ್ರಮಾಣದ ಚಿಮ್ಮಂಡೆ ಹುಳಗಳು ಒಟ್ಟು ಬಳಸುವ ಆಹಾರದ ಪ್ರಮಾಣ ಕೇವಲ ೨ ಕಿಲೋ. ಅಂದರೆ ಚಿಮ್ಮಂಡೆಗಳು ತಿನ್ನುವ ಅರ್ಧಕ್ಕರ್ಧ ಆಹಾರವನ್ನು ದೇಹದ ತೂಕವಾಗಿ ಪರಿವರ್ತಿಸುತ್ತವೆ. ಕೇವಲ ಮನುಷ್ಯರಿಗಷ್ಟೇ ಅಲ್ಲ, ರಾಸುಗಳಿಗೆ ಮತ್ತು ಸಾಕುಪ್ರಾಣಿಗಳಿಗೂ ಕೀಟಗಳನ್ನು ಆಹಾರವಾಗಿ ನೀಡಬಹುದು ಎಂಬುದನ್ನು ಇಲ್ಲಿ ಗಮನಿಸಬೇಕು.
ಇಲ್ಲೂ ಬೇಕು ನೀತಿ ನಿಯಮ !
ಕೀಟಗಳನ್ನು ಆಹಾರವಾಗಿ ಬಳಸುವ ಮುನ್ನ ಇತರೆ ಆಹಾರ ಪದಾರ್ಥಗಳ ಬಗ್ಗೆ ಪಾಲಿಸುವ ನೀತಿ ನಿಯಮಗಳನ್ನೇ ಇಲ್ಲಿಯೂ ಪಾಲಿಸಬೇಕು ಎಂದು ವರದಿಯು ಹೇಳಿದೆ. ಕೀಟಗಳಲ್ಲಿರುವ ಸೂಕ್ಷ್ಮಜೀವಿಗಳು, ಕೀಟಗಳ ವಿಷಪ್ರಮಾಣ, ಜೀರ್ಣ ಸಾಧ್ಯತೆ- ಎಲ್ಲವನ್ನೂ ಗಮನಿಸಬೇಕು.
ಕೀಟಗಳ ಬಳಕೆಯ ಇತಿಹಾಸ, ಕೀಟಗಳು ಮನುಕುಲಕ್ಕೆ ಹೇಗೆ ಉಪಕಾರಿಯಾಗಿವೆ, ಮತ ಸಂಪ್ರದಾಯಗಳು ಕೀಟ ಆಹಾರ ಪದ್ಧತಿಯ ಬಗ್ಗೆ ಏನು ಹೇಳಿವೆ, ಇತಿಹಾಸದಲ್ಲಿ ಏನೆಲ್ಲ ಘಟನೆಗಳು ದಾಖಲಾಗಿವೆ, ಕೀಟಗಳನ್ನು ವಿವಿಧ ಸಮುದಾಯಗಳು ಹೇಗೆ ಬಳಸುತ್ತಿವೆ ಎಂಬೆಲ್ಲ ವಿವರಗಳನ್ನು ಈ ವರದಿಯಲ್ಲಿ ಕಾಣಬಹುದು. ಉದಾಹರಣೆಗೆ ೧೮೭೩ ಮತ್ತು ೧೮೭೭ರಲ್ಲಿ ಅಮೆರಿಕಾದಲ್ಲಿ ಮಿಡತೆಗಳು ಕೋಟಿಗಟ್ಟಳೆ ಸಂಖ್ಯೆಯಲ್ಲಿ ಕೃಷಿಪ್ರದೇಶಗಳನ್ನೆಲ್ಲ ತಿಂದುಹಾಕಿದವು. ಆಗ ಭೀಕರ ಕ್ಷಾಮ ತಲೆದೋರಿತು. ಜನರು ಸಸ್ಯಜನ್ಯ ಆಹಾರದ ಬದಲು ಈ ಮಿಡತೆಗಳನ್ನೇ ತಿನ್ನಬಹುದಿತ್ತು; ಏಕೆಂದರೆ ಈ ಮಿಡತೆಗಳ ಒಟ್ಟು ತೂಕ ಸುಮಾರು ೨೭೫ ಕೋಟಿ ಟನ್ ಮೀರಿತ್ತು! ಅದೊಂದು ಗಿನ್ನೆಸ್ ದಾಖಲೆ.
ಕೀಟಗಳನ್ನೂ ಅತಿಯಾಗಿ ತಿನ್ನುವುದು, ಹಲವು ಕೀಟಗಳ ನಾಶದಿಂದ ಪಾರಿಸರಿಕ ಸಂತುಲನೆಗೆ ಧಕ್ಕೆ ಒದಗುವುದು, ಕಾಡುನಾಶ, – ಮುಂತಾದ ಸಮಸ್ಯೆಗಳೂ ಹುಟ್ಟಿಕೊಳ್ಳುವ ಸಾಧ್ಯತೆಯನ್ನು ಈ ವರದಿ ಅಲ್ಲಗಳೆದಿಲ್ಲ.
ಇದೇನು ಸಸ್ಯಾಹಾರವನ್ನು ಬಿಟ್ಟು ಎಲ್ಲರೂ ಹುಳ-ಹುಪ್ಪಟೆ ತಿನ್ನಿರಿ ಎಂದು ಸೂಚಿಸುವ ಲೇಖನವಲ್ಲ. ಆದರೆ ಮುಂದಿನ ದಿನಗಳಲ್ಲಿ ಮಾಂಸಾಹಾರಿಗಳು ಅನುಸರಿಸಲೇಬೇಕಾದ ಅನಿವಾರ್ಯ ಆಹಾರ ಪದ್ಧತಿಯ ಬಗ್ಗೆ ಬೆಳಕು ಚೆಲ್ಲುವ ಗಮನಾರ್ಹ ಮತ್ತು ವಾಸ್ತವಿಕ ವರದಿಯಷ್ಟೆ.
ಇನ್ನುಮುಂದೆ ಸಂಜೆಯ ನಿಮ್ಮ ಮನೆಯೊಳಗೆ ಯಾವುದಾದರೂ ಕೀಟ ಹಾರಾಡಿದರೆ, ಒಮ್ಮೆ ಈ ಲೇಖನ ನೆನಪು ಮಾಡಿಕೊಳ್ಳಿ!
ಆರೋಗ್ಯದ ಕಾರಣಗಳು
- ಕೋಳಿ, ಹಂದಿ, ಎಮ್ಮೆ-ದನ ಮತ್ತು ಮೀನಿನ ಬದಲಿಗೆ ಕೀಟಗಳು ಆರೋಗ್ಯಕರ ಪೌಷ್ಟಿಕ ಪರ್ಯಾಯ ಆಹಾರವಾಗಿವೆ.
- ಹಲವು ಕೀಟಗಳು ಗರಿಷ್ಠ ಪ್ರಮಾಣದ ಪ್ರೋಟೀನನ್ನು, ಕ್ಯಾಲ್ಸಿಯಂ, ಕಬ್ಬಿಣ ಮತ್ತು ಝಿಂಕ್ ಖನಿಜವನ್ನು ಹೊಂದಿವೆ.
- ಈಗಾಗಲೇ ಕೀಟಾಹಾರವು ಹಲವೆಡೆ ಆಹಾರ ಸಂಪ್ರದಾಯದ ಭಾಗವಾಗಿದೆ.
ಪಾರಿಸರಿಕ ಕಾರಣಗಳು
- ಹೆಚ್ಚಿನ ಕೀಟಗಳು ಉತ್ಪಾದಿಸುವ ಹಸಿರುಮನೆ ಅನಿಲದ ಪ್ರಮಾಣದ ತೀರಾ ಕಡಿಮೆ. ಗೆದ್ದಲು ಹುಳು ಮತ್ತು ಜಿರಲೆಗಳು ಮಾತ್ರವೇ ಮೀಥೇನ್ ಉತ್ಪಾದಿಸುತ್ತವೆ. ಅಮೋನಿಯಾ ವಿಸರ್ಜನೆಯೂ ಕಡಿಮೆ.
- ಕೀಟಗಳನ್ನು ಬೆಳೆಯಲು ಭೂಪ್ರದೇಶ ಬೇಕಾಗಿಲ್ಲ. ಕೀಟಗಳಿಗೆ ಬೇಕಾದ ಆಹಾರವನ್ನು ಸಂಗ್ರಹಿಸಲು ಮತ್ತು ನೀಡಲು ಮಾತ್ರ ಜಾಗ ಬೇಕು.
- ಕೀಟಗಳು ಶೀತರಕ್ತದ ಪ್ರಾಣಿಗಳಾದ್ದರಿಂದ ಅವುಗಳು ಅತಿ ಕಡಿಮೆ ಆಹಾರವನ್ನು ಬಳಸಿ ಹೆಚ್ಚಿನ ಪ್ರಮಾಣದ ಪ್ರೋಟೀನನ್ನು ಉತ್ಪಾದಿಸುತ್ತವೆ. ಪ್ರೋಟೀನ್ ಉತ್ಪಾದನೆಗಾಗಿ ಕೀಟಗಳು ಬಳಸುವ ಆಹಾರದ ಪ್ರಮಾಣವು ರಾಸುಗಳಿಗಿಂತ ೧೨ ಪಟ್ಟು ಕಡಿಮೆ, ಕುರಿಗಳಿಗಿಂತ ನಾಲ್ಕು ಪಟ್ಟು ಕಡಿಮೆ, ಹಂದಿಗಳಿಗಿಂತ ಆರ್ಧಕ್ಕರ್ಧ ಕಡಿಮೆ.
- ಕೀಟಗಳನ್ನು ಸಾವಯವ ತ್ಯಾಜ್ಯಗಳ ಮೇಲೂ ಬೆಳೆಸಬಹುದು.
ಜೀವನ ನಿರ್ವಹಣೆಯ ಕಾರಣಗಳು
- ಕೀಟಗಳನ್ನು ಬೆಳೆಯುವುದು / ಕೃಷಿ ಮಾಡುವುದು ಅತ್ಯಂತ ಕಡಿಮೆ ತಂತ್ರಜ್ಞಾನವನ್ನು ಬೇಡುವ ಕಡಿಮೆ ಹೂಡಿಕೆಯನ್ನು ಬಯಸುವ ವಿಧಾನ. ಇದರಿಂದ ಬಡ ವರ್ಗದವರು, ಮಹಿಳೆಯರು, ಭೂರಹಿತ ಕುಟುಂಬಗಳಿಗೆ ಅನುಕೂಲವಾಗಲಿದೆ.
- ಕೀಟಕೃಷಿಯು ನಗರ ಮತ್ತು ಗ್ರಾಮೀಣ ಜನರಿಗೆ ಸಮಾನವಾದ ಅವಕಾಶಗಳನ್ನು ರೂಪಿಸುತ್ತದೆ.
- ಕೀಟಕೃಷಿ ಉದ್ಯಮದ ಅನುಕೂಲಗಳು
- ಕಡಿಮೆ ಜಾಗ ಸಾಕು
- ಮಾನವನ ಆಹಾರ ಬಳಕೆಯ ಮೇಲೆ ಪರಿಣಾಮವಿಲ್ಲ
- ಸಾಕಷ್ಟು ಬೇಡಿಕೆ ಇದೆ
- ಗರಿಷ್ಠ ಸಂತಾನೋತ್ಪತ್ತಿ
- ಕಡಿಮೆ ಅವಧಿಯಲ್ಲೇ ಹೆಚ್ಚು ವರಮಾನ
- ಸಾಗಾಟ, ನಿರ್ವಹಣೆ ಸುಲಭ
- ಬೆಳೆಸುವುದಕ್ಕೆ ಹೆಚ್ಚಿನ ತರಬೇತಿ ಬೇಕಾಗಿಲ್ಲ.
ಖಾದ್ಯ ಕೀಟದ ಕಿರುಸುದ್ದಿಗಳು
- ಆಸ್ಟ್ರೇಲಿಯಾದ ಮೂಲನಿವಾಸಿಗಳು ಜೇನುತುಪ್ಪದಿಂದಲೇ ಸಕ್ಕರೆಯನ್ನು ಉತ್ಪಾದಿಸುತ್ತಾರೆ.
- ಮೆಕ್ಸಿಕೋದ ಪೋಪೋಲೋಕಾ ಜನರು ಮಳೆಗಾಲದಲ್ಲಿ ಹಲವು ಬಗೆಯ ಕೀಟಗಳನ್ನು ಆಹಾರವಾಗಿ ಬಳಸುತ್ತಾರೆ.
- ರೆಡ್ ಪಾಮ್ ವೀವಿಲ್ (ರಿಂಕೋಫೋರಸ್ ಫೆರ್ರುಜೀನಿಯಸ್) ಎಂಬ ಕೀಟವಂತೂ ಹಲವೊಮ್ಮೆ ವಿಪರೀತ ಪ್ರಮಾಣದಲ್ಲಿ ತೆಂಗಿನ ತೋಟಗಳನ್ನು ಆವರಿಸುತ್ತವೆ. ಇವುಗಳನ್ನು ತಿನ್ನುವುದೇ ಸೂಕ್ತವಾದ ಪರಿಹಾರ
- ಕೀನ್ಯಾದಲ್ಲಿ ಸರಳ ದೀಪ ಹೊಂಚು ವಿಧಾನದ ಮೂಲಕ ಮಾಕ್ರೋಟರ್ಮಸ್ ಸುಭ್ಯಾಲೈನಸ್ ಎಂಬ ಗೆದ್ದಲನ್ನು ಸಂಗ್ರಹಿಸುವ ಪ್ರಯೋಗ ನಡೆದಿದೆ.
- ಉಗಾಂಡದಲ್ಲಿ ಕೆಲವೊಮ್ಮೆ ಎರಡು ಮೂರು ದಿನಗಳ ಕಾಲ ವಿದ್ಯುತ್ ಸರಬರಾಜು ಇರುವುದಿಲ್ಲ. ಈ ಸಂದರ್ಭದಲ್ಲಿ ಅಲ್ಲಿ ಮಿಡತೆಗಳನ್ನು ಹಿಡಿಯುವುದೇ ಕಷ್ಟವಾಗಿದೆ. ಉಗಾಂಡದಲ್ಲಿ ಇಂಥ ಮಿಡತೆಗಳಿಗೆ ಭಾರೀ ಬೆಲೆ ಬಂದಿದೆ.
- ಸ್ಟಾರ್‌ಬಕ್ಸ್ ಕಾಫಿ ಕಂಪನಿ ಗೊತ್ತಲ್ಲ? ಒಮ್ಮೆ ಅದು ತನ್ನ ಕಾಫಿಯ ನಸುಗೆಂಪು ಬಣ್ಣಕ್ಕೆ ಕಾಕ್‌ನೀಲ್ ದುಂಬಿಯ ರಸವೇ ಕಾರಣ ಎಂದು ಹೇಳಿ ವಿವಾದ ಎದ್ದಿತ್ತು.
- ಮಾಲಿ ದೇಶದಲ್ಲಿ ಸಾಂಪ್ರದಾಯಿಕವಾಗಿ ಮಕ್ಕಳು ಮಿಡತೆಗಳನ್ನು ಹಿಡಿದು ತಿನ್ನುತ್ತಾರೆ. ಆದರೆ ಇಲ್ಲಿ ಕೀಟನಾಶಕ ಸಹಿತ ಕೃಷಿ ಮಾಡಬೇಕೆಂಬ ಸೂಚನೆ ಬಂದಮೇಲೆ ಶೇ. ೨೩ರಷ್ಟು ಮಕ್ಕಳಲ್ಲಿ ಅಪೌಷ್ಟಿಕತೆ ಕಂಡುಬಂದಿದೆ. ಈಗ ಕೀಟನಾಶಕಯುಕ್ತ ಮಿಡತೆಗಳನ್ನು ತಿನ್ನುವುದೂ ಕಷ್ಟವಾಗಿದೆ.
- ಅರೇಬಿಯಾ ಮತ್ತು ಲಿಬ್ಯಾ ಪ್ರದೇಶದಲ್ಲಿ ವಾಸಿಸುವ ಅಲೆಮಾರಿಗಳು ಶತಮಾನಗಳ ಕಾಲದಿಂದ ಮಿಡತೆ ದಾಳಿಯಾದರೆ ಸಾಕು ಖುಷಿ ಪಡುತ್ತಾರೆ. ಆಗಲೇ ಬೇಯಿಸಿ ತಿನ್ನುವುದಲ್ಲದೆ ಅದನ್ನು ಒಣಗಿಸಿ ಕುಟ್ಟಿ ಪುಡಿ ಮಾಡಿ ಇಟ್ಟುಕೊಳ್ಳುತ್ತಿದ್ದರು ಎಂಬುದು ಇತಿಹಾಸದಲ್ಲಿ ದಾಖಲಾಗಿದೆ.
- ಲಾವೋ ದೇಶದಲ್ಲಿ ೨೧ ಬಗೆಯ ಖಾದ್ಯ ಕೀಟಗಳನ್ನು ಸಂಗ್ರಹಿಸಿ ಸಂತೆಯಲ್ಲಿ ಮಾರುತ್ತಾರೆ. ಅದರಲ್ಲೂ ಇರುವೆ ಮೊಟ್ಟೆಗಳಿಗೆ ಭಾರೀ ಬೇಡಿಕೆ ಇದೆ.
- ಬ್ರೆಝಿಲ್ ದೇಶವು ಜಗತ್ತಿನಲ್ಲೇ ಅತಿ ಹೆಚ್ಚು ಅಂದರೆ ೧೩೫ ಬಗೆಯ ಖಾದ್ಯ ಕೀಟಗಳನ್ನು ಹೊಂದಿದೆ.
- ಮೆಕ್ಸಿಕೋದ ಮೊನಿಕಾ ಮಾರ್ಟಿನೆಜ್ ಎಂಬ ಕಲಾವಿದೆಯು ಕೀಟ ಖಾದ್ಯದ ಬಗ್ಗೆಯೇ ಕಲಾಕೃತಿಗಳನ್ನು ರಚಿಸಿ ಈ ಬಗ್ಗೆ ಜಾಗೃತಿ ಉಂಟುಮಾಡುತ್ತಿದ್ದಾರೆ. ಅವರಿಂದ ಪ್ರೇರಣೆ ಪಡೆದು ತಳ್ಳುಗಾಡಿಯಲ್ಲಿ ಬಗೆಬಗೆಯ ಕೀಟಗಳನ್ನು ಮಾರುವ ವ್ಯವಸ್ಥೆಯೂ ಆರಂಭವಾಗಿದೆ.
- ವಿನ್‌ಫುಡ್ ಎಂಬ ಯೋಜನೆಯ ಮೂಲಕ ಕಾಂಬೋಡಿಯಾದಲ್ಲಿ ಅಕ್ಕಿ, ಮೀನು ಮತ್ತು ಜೇಡಗಳಿಂದ ಕೂಡಿದ ಶಿಶು ಆಹಾರವನ್ನು ಅಭಿವೃದ್ಧಿಪಡಿಸಲಾಗಿದೆ. ಅದೇ ರೀತಿ ಕೀನ್ಯಾದಲ್ಲಿ ಜೋಳ, ಮೀನು ಮತ್ತು ಗೆದ್ದಲುಗಳಿರುವ ಆಹಾರ ಉತ್ಪಾದನೆಯಾಗುತ್ತಿದೆ. ಈ ಕುರಿತು ಇನ್ನೂ ಖಚಿತ ಮಾನದಂಡಗಳು ರೂಪುಗೊಳ್ಳಬೇಕಿದೆ.
- ಕೀಟಗಳನ್ನು ಗಗನಯಾತ್ರಿಗಳ ಪ್ರಮುಖ ಪ್ರೋಟೀನ್ ಆಹಾರವಾಗಿ ಬಳಸಬಹುದಾಗಿದೆ.
- ಪ್ರತಿ ವರ್ಷವೂ ನಿರ್ದಿಷ್ಟ ಕಾಲದಲ್ಲಿ ಸಾವಿರ ಕಿಮೀ ದೂರಕ್ಕೆ ವಲಸೆ ಹೋಗುವ ಬೊಗೊಂಗ್ ಪತಂಗಗಳು ಪೂರ್ವ ಆಸ್ಟ್ರೇಲಿಯಾದಲ್ಲಿ ಒಂದು ದೊಡ್ಡ ಸಮಸ್ಯೆ. ಆದರೆ ಈ ಹಿಂದೆ ದೇಸಿ ಆಸ್ಟ್ರೇಲಿಯನ್ನರು ಈ ಪತಂಗಗಳನ್ನು ಹಿಡಿದು ತಿನ್ನುತ್ತಿದ್ದರು. ಆದರೆ ಈ ಪತಂಗಗಳು ಅರ್ಸೆನಿಕ್ ವಿಷವನ್ನೂ ಸ್ವಲ್ಪ ಪ್ರಮಾಣದಲ್ಲಿ ಹೊಂದಿದ್ದವು ಎಂಬುದು ಈಗಿನ ಸಂಶೋಧನೆಗಳಿಂದ ತಿಳಿದಿದೆ.
- ನ್ಯೂಗಿನಿಯಲ್ಲಿ ರೆಡ್ ಪಾಮ್ ವೀವಿಲ್ ಹುಳವು ಒಂದು ಪ್ರಮುಖ ಆಹಾರವಾಗಿದೆ.
- ಕಾಂಬೋಡಿಯಾದಲ್ಲಿ ಹಲವರು ಜೇಡವನ್ನು ಮಾರಾಟ ಮಾಡಿ ದಿನಕ್ಕೆ ೧೦೦ ರೂ. ಸಂಪಾದಿಸುತ್ತಿದ್ದಾರೆ.
- ಥಾಯ್‌ಲೆಂಡಿನಲ್ಲಿ ಖಾದ್ಯ ಕೀಟಗಳ ಸಗಟು ಮಾರುಕಟ್ಟೆಗಳೇ ಚಾಲ್ತಿಯಲ್ಲಿವೆ.
ಕೀಟಖಾದ್ಯಗಳ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು ಈ ವೆಬ್‌ಸೈಟ್‌ಗಳಿಗೆ ಭೇಟಿ ನೀಡಿ
- http://www.fao.org/forestry/edibleinsects/65425/en/
- http://www.wageningenur.nl/en/Expertise-Services/Chair-groups/Plant-Sciences/Laboratory-of-Entomology/Edible-insects/Worldwide-species-list.htm
(ಕರ್ನಾಟಕ ಪರಿಸರ ವಾಹಿನಿಯ ೨೦೧೩ರ ಜೂನ್ ಸಂಚಿಕೆಯಲ್ಲಿ ಬರೆದ ಈ ಲೇಖನ ಈಗಲೂ ಪ್ರಸ್ತುತ!)