ಉಂಬರ್ಟೋ ಇಕೋ : ಐತಿಹಾಸಿಕ ಥ್ರಿಲ್ಲರ್‌ಗಳ ಹೊಸ ಕಥೆಗಾರ
ಡಾನ್ ಬ್ರೌನ್ ನ “ದಿ ಡ ವಿನ್ಸಿ ಕೋಡ್’ ಪುಸ್ತಕದ ಖ್ಯಾತಿ ಉತ್ತುಂಗಕ್ಕೆ ಹೋದ ಕಾಲವದು. ಅವನ ಹಾಗೆ ಥ್ರಿಲ್ಲರ್‌ಗಳನ್ನು ಬರೆದವರು ಬೇರಾರೂ ಇಲ್ಲವೇ ಎಂದು ಹುಡುಕಿದಾಗ ಉಂಬರ್ಟೋ ಇಕೋ ಕಣ್ಣಿಗೆ ಬಿದ್ದರು. ಅವರನ್ನು ನಾನು ಹುಡುಕುವ ಹೊತ್ತಿಗಾಗಲೇ ಅವರು ಜಗತ್ತಿನ ಪ್ರಮುಖ ಅಕ್ಯಾಡೆಮಿಕ್ ಆಗಿ ಗುರುತಿಸಲ್ಪಟ್ಟಿದ್ದರು.
ಮೊದಲು ಓದಿದ್ದು ಅವರ “ದಿ ನೇಮ್ ಆಫ್ ದಿ ರೋಸ್’ ಎಂಬ ಕಾದಂಬರಿಯನ್ನು. ಮಧ್ಯಯುಗದ ಚರ್ಚಿನಲ್ಲಿ ನಡೆಯುವ ಕೊಲೆಗಳ ಸುತ್ತ ಹೆಣೆದ ಈ ಕಾದಂಬರಿಯಂತೂ ನನಗೆ ನಮ್ಮ ಹಳಗನ್ನಡದ ಪಠ್ಯಗಳನ್ನು ನೆನಪಿಸಿತು. ಒಂಥರ ಶೆರ್ಲಾಕ್ ಹೋಮ್ಸ್‌ನಂಥ ಪತ್ತೇದಾರಿ, ವ್ಯಾಟ್ಸನ್‌ನಂಥ ಸಹವರ್ತಿ ಇಲ್ಲಿ ಇದ್ದಾರಾದರೂ, ಶೈಲಿ ಮತ್ತು ನಿರೂಪಣೆಯಲ್ಲಿ ಉಂಬರ್ಟೋ ಇಕೋರನ್ನು ಮೀರಿಸುವವರೇ ಇಲ್ಲ. ಅದರಲ್ಲಂತೂ ಅವರ ವರ್ಣನಾಶೈಲಿಯನ್ನು ಓದಿಯೇ ಅನುಭವಿಸಬೇಕು. ಮೊದಲು ೩೦ ಸಾವಿರ ಪ್ರತಿಗಳು ಮಾರಾಟವಾದರೆ ಹೆಚ್ಚು ಎಂದು ಭಾವಿಸಿದ್ದರೆ ಈ ಕಾದಂಬರಿಯ ೯೦ ಲಕ್ಷ ಪ್ರತಿಗಳು ಚಕಚಕನೆ ಓದುಗರ ಕೈ ಸೇರಿದವು!
ಈ ಕಾದಂಬರಿಯನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಇಕೋ ೧೯೫೨ರಿಂದಲೇ ಟಿಪ್ಪಣಿ ಮಾಡಿಕೊಳ್ಳುತ್ತಿದ್ದರಂತೆ. ಕೊನೆಗೆ ಬರೆಯಲು ಆರಂಭಿಸಿದ್ದು ೧೯೭೮ರಲ್ಲಿ. ಕೊನೆಗೆ ೧೯೮೦ರಲ್ಲಿ ಪ್ರಕಟವಾದ ಈ ಕಾದಂಬರಿಯನ್ನು ಮೆಚ್ಚದವರೇ ಇಲ್ಲ. ಇದು ಕೊನೆಗೆ ಸಿನೆಮಾ ಆಯಿತಾದರೂ ಅಮೆರಿಕಾ, ಇಂಗ್ಲೆಂಡುಗಳಲ್ಲಿ ಸೋತಿತು ಎಂಬುದು ನಿಜ ; ಆದರೆ ಯೂರೋಪಿನಲ್ಲಿ ಮಾತ್ರ ಭರ್ಜರಿ ಆಟ ಪ್ರದರ್ಶಿಸಿತು.
ಈ ಕಾದಂಬರಿಯನ್ನು ಬರೆದ ಮೇಲೆಯೂ ಅವರ ಟಿಪ್ಪಣಿಗಳು ಖಾಲಿಯಾಗಲಿಲ್ಲ. ಅದರ ಫಲವೇ “ಫೋಕಾಲ್ಟ್ಸ್ ಪೆಂಡ್ಯುಲಂ” ಎಂಬ ಅರ್ಧ ಆತ್ಮಕಥೆಯೂ ಆಗಿರುವ, ಉಳಿದರ್ಧ ಪತ್ತೇದಾರಿಯೂ ಆಗಿರುವ ಕಾದಂಬರಿ(೧೯೮೮). ಈ ಕಾದಂಬರಿಯು ಡ ವಿನ್ಸಿ ಕೋಡ್‌ನ ಮೂಲ ಕಾದಂಬರಿ ಎಂದೇ ವಿಮರ್ಶಕರು ಹೇಳುತ್ತಾರೆ. (ನನಗೆ ಈ ಕಾದಂಬರಿಯನ್ನು ಓದಲಾಗಿಲ್ಲ, ಮನ್ನಿಸಿ). ನನ್ನ ಪಾತ್ರಗಳೂ, ಡಾನ್ ಬ್ರೌನ್ ಪಾತ್ರಗಳೂ ಒಂದೇ ಬಗೆಯವು ಎಂದು ಅವರು “ದಿ ಹಿಂದೂ’ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
ಇದಾದ ಮೇಲೆ ಅವರು ದಿ ಐಲ್ಯಾಂಡ್ ಆಫ್ ದಿ ಡೇ ಬಿಫೋರ್ (೧೯೯೪) ಮತ್ತು ಬಾಡೋಲಿನೋ (೨೦೦೦) ಎಂಬ ಕಾದಂಬರಿಗಳನ್ನು ಬರೆದರು. ಅವರ ಇತ್ತೀಚೆಗಿನ ಕಾದಂಬರಿ : ದಿ ಮಿಸ್ಟೀರಿಯಸ್ ಫ್ಲೇಮ್ ಆಫ್ ಕ್ವೀನ್ ಲೋಆನಾ (೨೦೦೪).
‘ಬಾಡೋಲಿನೋ’ ೧೨ನೇ ಶತಮಾನದ ಕಥೆಯನ್ನು ಆಧರಿಸಿ ರೂಪಿಸಿರುವ ಹಾಸ್ಯಮಿಶ್ರಿತ ಕಾದಂಬರಿ. ಈ ಕಾದಂಬರಿಯನ್ನು ಓದಿದರೆ ಡಾನ್ ಕ್ವಿಕ್ಸೋಟ್ ನೆನಪಾಗುವುದು ನಿಜ. ಆದರೆ ಎಂಟು ಶತಮಾನಗಳ ಹಿಂದಿನ ಸನ್ನಿವೇಶಗಳನ್ನು ಊಹಿಸಿಕೊಂಡು ಸರಾಗವಾಗಿ ಒಂದು ನಗುಭರಿತ ಕಾದಂಬರಿಯನ್ನು ಬರೆಯುವ ಶೈಲಿಯನ್ನು ಹೇಗೆ ರೂಢಿಸಿಕೊಂಡಿದ್ದಾರು ಎಂದು ಅಚ್ಚರಿಯಾಗಿದ್ದೇ ಹೆಚ್ಚು.
ಉಂಬರ್ಟೋ ಇಕೋ ಮೂಲತಃ ಕಾದಂಬರಿಕಾರರಲ್ಲ ಎಂಬುದೇ ಇಲ್ಲಿ ನಾನು ಹೇಳಬೇಕಾಗಿದ್ದ ಅಚ್ಚರಿಯ ಸಂಗತಿ. ಅವರು ವಿಶ್ವದಲ್ಲಿ ಅತಿ ವಿರಳ ಸಂಖ್ಯೆಯಲ್ಲಿ ಇರುವ ಸಂಕೇತವಿಜ್ಞಾನಿಗಳಲ್ಲಿ (ಸೆಮಿಯೋಟಿಕ್ಸ್) ಒಬ್ಬರು. ಜೊತೆಗೇ ವಿಶ್ವದ ಸುಪ್ರಸಿದ್ಧ ತತ್ವಜ್ಞಾನಿಯೂ ಹೌದು. ಇಟಲಿಯ ಮಧ್ಯಯುಗವೆಲ್ಲ ಅವರಿಗೆ ಕರತಲಾಮಲಕ. ಅವರು ಕಾದಂಬರಿಗಳನ್ನು ಬರೆದದ್ದು ಇಂಗ್ಲಿಶಿನಲ್ಲಲ್ಲ, ಇಟಾಲಿಯನ್ ಭಾಷೆಯಲ್ಲಿ. ನಾವು ಓದುವುದೆಲ್ಲ ಇಂಗ್ಲಿಶ್ ಅನುವಾದಗಳು. ವಿಶ್ವಸಮರದ ನಡುವೆ ಹುಟ್ಟಿ ಬೆಳೆದ (೧೯೩೨) ಇಕೋ ಬಾಲ್ಯದಲ್ಲೇ ಇಟಲಿಯ ಆಂತರಿಕ ಸಮರವನ್ನು ಕಣ್ಣಾರೆ ಕಂಡವರು.
೨೩ ಡಾಕ್ಟರೇಟ್‌ಗಳು, ೨೮ ವಿಶ್ವವಿದ್ಯಾಲಯಗಳಲ್ಲಿ ಗೌರವ ಪ್ರಾಧ್ಯಾಪಕ ಹುದ್ದೆ, ಹತ್ತಾರು ಪ್ರತಿಷ್ಠಿತ ಸಂಕೇತವಿಜ್ಞಾನದ ಹುದ್ದೆಗಳಲ್ಲಿ ಸೇವೆ, – ಹೀಗೆ ಉಂಬರ್ಟೋ ಇಕೋ ವ್ಯಕ್ತಿಚಿತ್ರಣವನ್ನು ಸ್ಥೂಲವಾಗಿ ಕಟ್ಟಿಕೊಡಬಹುದು. ೨೦೦೫ರ ಕೊನೆಯಲ್ಲಿ ಭಾರತಕ್ಕೂ ಇತ್ತೀಚೆಗೆ ಬಂದಿದ್ದ ಅವರು ತಾನು ವಿಶ್ವವಿದ್ಯಾಲಯದ ಪ್ರೊಫೆಸರ್ ಮಾತ್ರ; ಭಾನುವಾರಗಳಂದು ಕಾದಂಬರಿ ಬರೆಯುತ್ತೇನೆ’ ಎಂದಿದ್ದರು. ಕಾದಂಬರಿಗಳಿಗಿಂತ ಮೊದಲೇ ಅವರು ತಮ್ಮ ವಿದ್ವತ್‌ಪೂರ್ಣ ಪ್ರಬಂಧಗಳಿಗಾಗಿ ಪ್ರಸಿದ್ಧರಾಗಿದ್ದರು!
ಅವರ ಇನ್ನೊಂದು ಮಹತ್ವದ ನಿಲುವೆಂದರೆ “ಫೋಕಾಲ್ಟ್ಸ್ ಪೆಂಡ್ಯುಲಂ” ಕಾದಂಬರಿಯನ್ನು ಸಿನೆಮಾ ಮಾಡಲು ಒಪ್ಪದಿರುವುದು. ಕಾದಂಬರಿಯನ್ನು ಹೀಗೇಯೇ ಓದಬೇಕು ಎಂದು ಒಮ್ಮೆ ಓದುಗನಿಗೆ ಗೊತ್ತಾದ ಮೇಲೆ ಸಿನೆಮಾವನ್ನು ಕೂಡಾ ಹಾಗೆಯೇ ನಿರ್ಮಿಸಬೇಕು ಎಂಬುದು ಇಕೋ ನಿಲುವು.
ನಿಯಾಮ್ ಚೋಮ್‌ಸ್ಕಿ ನಂತರದ ವಿಶ್ವದ ಚಿಂತಕರಲ್ಲಿ ಇಕೋ ಮತ್ತು ಹೋವಾರ್ಡ್ ಝಿನ್ ಎಂದೇ ಗುರುತಿಸಲಾಗಿದೆ. ಅಂದಮೇಲೆ ಉಂಬರ್ಟೋ ಇಕೋರ ಪ್ರೌಢತೆಯನ್ನು ನೀವೇ ಊಹಿಸಿ. ಹೌದು… ಅವರು ೪೦ಕ್ಕೂ ಹೆಚ್ಚು ಪುಸ್ತಕಗಳನ್ನು ಸಂಕೇತವಿಜ್ಞಾನ ಮತ್ತು ತತ್ವಶಾಸ್ತ್ರದ ಮೇಲೆ ಬರೆದಿದ್ದಾರೆ.
ಅಕಸ್ಮಾತ್ತಾಗಿ ಡಾನ್ ಬ್ರೌನ್‌ನ ಜನಪ್ರಿಯ ಶೈಲಿಯ ಕಾದಂಬರಿಯಿಂದಾಗಿ ಉಂಬರ್ಟೋ ಇಕೋ ಕಾಣಸಿಗುತ್ತಾರೆ ಎಂದರೆ…. ವಿಚಿತ್ರ ಅನಿಸುತ್ತದೆ.
ಇತಿಹಾಸ, ನಿಗೂಢತೆ, ಪತ್ತೇದಾರಿ, ಸೊಗಸಾದ ವರ್ಣನೆ – ಇವೆಲ್ಲವನ್ನೂ ನೀವು ಬಯಸುವುದಾದರೆ ಖಂಡಿತ ಈ ಕಾದಂಬರಿಗಳನ್ನು ಓದಿ.