ಇತ್ತೀಚೆಗಷ್ಟೆ ಆನ್‌ಲೈನ್ ಸಂವಹನದ ಮೂಲಕ ಪರಿಚಯವಾಗಿರುವ ಪತ್ರಕರ್ತ ಮತ್ತು ಬೈಸಿಕಲ್ ಅಭಿಯಾನಿ ಶ್ರೀ ಸಿ ಎಸ್ ಚರಣ್‌ರ ಈ ಕಥಾ ಸಂಕಲನಕ್ಕೆ ನಾನೇ ಮುನ್ನುಡಿ ಬರೆಯಬೇಕೆಂದು ಅವರು ನಿರ್ಧರಿಸಿದ್ದು ನನ್ನ ಡಿಜಿಟಲ್ ಫುಟ್‌ಪ್ರಿಂಟ್‌ಗಳನ್ನು ಗಮನಿಸಿ ಎಂಬುದು ಅಚ್ಚರಿಯ ಮತ್ತು ಅಪರೂಪದ ವಿಷಯ.
ಯಾವುದೇ ಒಬ್ಬ ವ್ಯಕ್ತಿಯ ಆನ್‌ಲೈನ್ ಚಟುವಟಿಕೆಗಳನ್ನು ಗಮನಿಸಿ, ವಿಶ್ಲೇಷಿಸಿ ಅವನ/ಳ ನಡೆನುಡಿಗಳನ್ನು, ಇಷ್ಟಾನಿಷ್ಟಗಳನ್ನು, ಗುಣಾವಗುಣಗಳನ್ನು ಒಂದಷ್ಟರಮಟ್ಟಿಗೆ ಗುರುತಿಸಲು ಸಾಧ್ಯವಿದೆ. ಇದನ್ನು ನಾನೇ ಸ್ವತಃ ಅನುಭವದಿಂದ ಕಂಡುಕೊಂಡಿದ್ದೇನೆ. ಆದರೆ ಈ ವಿಶ್ಲೇಷಣೆಯು ವಸ್ತುನಿಷ್ಠವೂ, ಸತ್ಯಕ್ಕೆ ಹತ್ತಿರವೂ ಆಗಿರಬೇಕಾದರೆ, ಹುಡುಕುವವರ ಅನುಭವ ಮಾಗಿರಬೇಕು. ಗೂಗಲ್‌ನಲ್ಲಿ ಮೊದಲ ಹಂತದ್ದಲ್ಲ, ಎರಡು – ಮೂರು – ನಾಲ್ಕನೇ ಹಂತದವರೆಗೆ ವಿವಿಧ ಬಗೆಯ ಹುಡುಕಾಟದ ಪದಗಳನ್ನು, ಪದಗುಚ್ಛಗಳನ್ನು ಹಾಕಿ ರಾತ್ರಿ-ಹಗಲೆನ್ನದೆ ಸಂಶೋಧಿಸಬೇಕು. ಜಂಕ್ ಯಾವುದು, ಸತ್ಯ ಯಾವುದು ಎಂಬುದನ್ನು ವಿಶ್ಲೇಷಿಸುವ ಪರಿಣತಿ ಬೇಕು. ನೋಡುವವರಿಗೆ ಇದೆಲ್ಲ ಸಮಯ ಹಾಳು ಮಾಡುವ ಕೆಲಸ ಎಂದು ಅನ್ನಿಸುತ್ತದೆ. ಆದರೆ ಕೊನೆಗೊಮ್ಮೆ ವಾಸ್ತವಕ್ಕೆ ಹತ್ತಿರವಾದ ಅಂಶಗಳು ಪತ್ತೆಯಾದಾಗ ದಿನಗಟ್ಟಳೆ ನಿದ್ದೆ ಮಾಡುವ ಉತ್ಸಾಹ ಬರುತ್ತದೆ!
ಕಳೆದ ೧೭ ವರ್ಷಗಳಲ್ಲಿ ಇಂಥ ಬಗೆಬಗೆಯ ಡಿಜಿಟಲ್ ತನಿಖೆಯಿಂದ ನಾನು ಹಲವು ಹಣಕಾಸು, ರಾಜಕೀಯ ಹಗರಣಗಳನ್ನು ಪತ್ತೆ ಮಾಡಿದ್ದೇನೆ; ಆತುರದಿಂದ ಮೋಸ ಹೋಗುವವವರಿಗೆ ಎಚ್ಚರಿಕೆ ನೀಡಿದ್ದೇನೆ. ಬೇರೊಬ್ಬನನ್ನು ಮದುವೆಯಾದ ಪ್ರೇಯಸಿಯನ್ನು ಬೆದರಿಸುತ್ತಿದ್ದ ಭಗ್ನಪ್ರೇಮಿಯನ್ನು ಕರೆದು ಮಾತಾಡಿಸಿ ಸಮಾಧಾನಿಸಿದ್ದೇನೆ; ಅಮಾಯಕನೆಂಬ ಮುಖವಾಡ ಹೊತ್ತ ವ್ಯಕ್ತಿಗಳನ್ನು ಬಯಲಿಗೆ ಎಳೆದಿದ್ದೇನೆ. ಬ್ಯಾಂಕಿನ ದತ್ತಾಂಶಗಳು ಸೋರಿದ್ದನ್ನು ಹುಡುಕಿಕೊಟ್ಟಿದ್ದೇನೆ; ಮೂಲ ವಿಜ್ಞಾನಿ-ಸಂಶೋಧಕರನ್ನು ಸಂಪರ್ಕಿಸಿಯೇ ಬ್ಲಾಗ್‌ಗಳನ್ನು ಬರೆದಿದ್ದೇನೆ. ಇವೆಲ್ಲವನ್ನೂ ನಾನು ನನ್ನದೇ ಆದ್ಯತೆ ಮತ್ತು ಅಗತ್ಯಗಳಿಗಾಗಿ ಮಾಡಿರುವುದರಿಂದ ಸಾರ್ವಜನಿಕ ಪ್ರಕಟಣೆ ಮಾಡಿಲ್ಲ, ಅಷ್ಟೆ! ಬಹುಶಃ ಈ ಮುನ್ನುಡಿಯಲ್ಲಿ ಇವೆಲ್ಲ ಬೀಜವಾಕ್ಯಗಳಂತೆ ಕಾಣಬಹುದು. ಹಾಗೇ ಓದಿ ಮರೆತುಬಿಡಿ! ಸುದ್ದಿಮನೆಯಲ್ಲಿ ಕುಳಿತು ಪತ್ರಿಕಾವೃತ್ತಿಯಲ್ಲಿ ತೊಡಗಿರುವ ಚರಣ್, ನಾನು ಅನುಭವಿಸಿದಂಥ ಹತ್ತು ಹಲವು ಸಂದರ್ಭಗಳನ್ನು ಕಥೆಗಳ ಮೂಲಕ ಹೆಣೆದಿರುವುದರಿಂದಲೇ ನನಗೆ ಮುನ್ನುಡಿ ಬರೆಯುವ ಅರ್ಹತೆ ಬಂದಿದೆ ಎಂದುಕೊಂಡಿದ್ದೇನೆ.
ಈ ಹಿನ್ನೆಲೆಯಲ್ಲಿ ನೋಡಿದಾಗ ಚರಣ್ ಬರೆದ ಕಥೆಗಳು ಭಾರತೀಯ ಸಮಾಜವು ದಾಟುತ್ತಿರುವ ಆಧುನಿಕತೆಯ ಹೊಸ್ತಿಲಿನ ಈಚೆಯ ಸನ್ನಿವೇಶಗಳಂತೆ ಕಾಣುತ್ತವೆ. ಪ್ರತಿಯೊಂದು ಕಥೆಯೂ ಒಂದಿಲ್ಲೊಂದು ಬಗೆಯ ಡಿಜಿಟಲ್ ಅವತಾರಗಳನ್ನು ಬೆಸೆದುಕೊಂಡೇ ಬೆಳೆಯುತ್ತದೆ. ಈ ಕಥೆಗಳಲ್ಲಿ ಡಿಜಿಟಲ್ ಬದುಕಿನ ದೃಶ್ಯಗಳಿವೆ; ಐಟಿ ರಂಗದ ತುಮುಲಗಳಿವೆ; ಯಾಂತ್ರಿಕವಾದ ಸಂಬಂಧಗಳಿವೆ; ಚಾಟ್‌ಗಳಿವೆ; ಬಿರುಕುಬಿಟ್ಟ ಮನೆಗಳಿವೆ, ಮನಗಳಿವೆ.
ಈ ಸಂಕಲನದಲ್ಲಿ ಇರುವ ಅತಿ ಹಳೆಯ ಕಥೆ `ಕೈನಿ, ಸ್ಕೂಟಿ ಮತ್ತು ಸ್ಯಾಮ್.’ ಉಳಿದ ಕಥೆಗಳೆಲ್ಲವೂ ೨೦೧೦ರಿಂದೀಚೆಗೆ ಬರೆದವು. `ಕೈನಿ…’ ಕಥೆಯು ಇಂಟರ್‌ನೆಟ್ ಆರಂಭದ ದಿನಗಳ ಕಥೆಯಾಗಿದ್ದರಿಂದ ಎಸ್‌ಟಿಡಿ ಬೂತಿನಲ್ಲಿ ಆರಂಭವಾಗುತ್ತದೆ. ದೂರವಾಣಿಯನ್ನು ಆಧರಿಸಿದ ಈ ಕಥೆಯಲ್ಲಿ ಸಂಕೀರ್ಣತೆಯ ಸುಳಿವೂ ಇಲ್ಲ. ಒಂದು ಚಿಕ್ಕ ತಮಾಷೆಯಂತೆ ಕಥೆ ನಡೆಯುತ್ತದೆ. `ಸಮಯ ಸಾಧಕ’ ಕಥೆಯೂ ಇದೇ ರೀತಿ ಬ್ಯಾಂಕಿನಲ್ಲಿ ಕ್ಯೂ ನಿಲ್ಲಲು ಪಡೆಯಬೇಕಾದ ಟೋಕನ್‌ನ ಸುತ್ತಮುತ್ತ ನಡೆಯುತ್ತದೆ. `ಐದು ಯೆಸ್, ಒಂದು ನೊ’ ಕಥೆಯು ಜಪಾನೀ ಶಿಸ್ತಿನ ಪಂಚಸೂತ್ರಗಳನ್ನು ತಪ್ಪು ಸನ್ನಿವೇಶಕ್ಕೆ ಅಳವಡಿಸಿದರೆ ಉಂಟಾಗುವ ಅಪಾಯಗಳನ್ನು ಬಿಂಬಿಸುತ್ತದೆ. ಅದೇ ಪಂಚಸೂತ್ರದ ‘ಸೀಟನ್ – ಎ ಪ್ಲೇಸ್ ಫಾರ್ ಎವೆರಿಥಿಂಗ್, ಎಂಡ್ ಎವೆರಿಥಿಂಗ್ ಇನ್ ಇಟ್ಸ್ ಪ್ಲೇಸ್’ ಎಂಬ ಸೂತ್ರವನ್ನು ಅರಿತರೆ ಇಂಥ ಅಪಾಯಗಳನ್ನು ತಪ್ಪಿಸಿಕೊಳ್ಳಬಹುದು ಎಂಬಲ್ಲಿಗೆ ಕಥೆ ಮುಗಿಯುತ್ತದೆ.
ಇಡೀ ಸಂಕಲನದಲ್ಲಿ ತುಂಬಾ ಗಮನ ಸೆಳೆಯುವ ಮತ್ತು ಭಾವುಕ ಕ್ಷಣಗಳನ್ನು ಹೆಚ್ಚುಪ್ರಮಾಣದಲ್ಲಿ ದಾಖಲಿಸಿರುವ ಕಥೆ `ಆಂಟಿ ಕ್ಲಾಕ್’. ಅಪಾರ್ಟ್‌ಮೆಂಟ್‌ಗಳ ನಡುವೆಯೇ ಸ್ವಂತಿಕೆಯಿಂದ ತನ್ನ ಮನೆಯನ್ನು ಉಳಿಸಿಕೊಂಡಿದ್ದ ಜಾಕ್ವೆಲಿನ್ ಎಂಬ ಅಜ್ಜಿಯ ಒಂಟಿ ಬಾಳಿನಲ್ಲಿ ರಘು ಮತ್ತು ಜ್ಯೋತಿ ದಂಪತಿಯ ಪ್ರವೇಶ ತರುವ ಬದಲಾವಣೆಗಳನ್ನು ಕಥೆ ತುಂಬಾ ಸರಳವಾಗಿ ಚಿತ್ರಿಸಿದೆ. ಇಲ್ಲಿ ಬರುವ ಉಲ್ಟಾಪಲ್ಟಾ ತಿರುಗುತ್ತಲೇ ಸರಿಯಾದ ಸಮಯ ತೋರಿಸುವ ಗಡಿಯಾರದ ಕಲ್ಪನೆಯು ವಾಸ್ತವವೂ ಹೌದು, ರಮ್ಯ ಕಲ್ಪನೆಯೂ ಹೌದು. ಹೀಗೆ ಚಿಕ್ಕ ತಾಂತ್ರಿಕ ಬದಲಾವಣೆಯು ಬದುಕಿನ ಘಟನೆಗಳನ್ನೇ ಬದಲಿಸುತ್ತಿದೆಯೇ ಎಂಬಂತೆ ಬೆಳವಣಿಗೆಗಳು ನಡೆಯುವುದು ಇಡೀ ಕಥೆಯ ಸ್ವಾರಸ್ಯವನ್ನು ಚೆನ್ನಾಗಿ ಉಳಿಸಿಕೊಂಡು ಹೋಗಿದೆ. ಸರ್ರಿಯಲಿಸಂನ ಅಂಶಗಳ ನಡುವೆಯೂ ವಾಸ್ತವದಿಂದ ಬೇರೆಯಾಗದ ಈ ಕಥೆಯನ್ನು ಸಂಕಲನದ ಅತ್ಯುತ್ತಮ ಕಥೆ ಎಂದು ಭಾವಿಸಿದ್ದೇನೆ.
ನಾನು ಮೊದಲೇ ಹೇಳಿದ ಡಿಜಿಟಲ್ ಫುಟ್‌ಪ್ರಿಂಟ್‌ನಿಂದ ಮನುಷ್ಯರನ್ನು ಅಳೆಯುವ ಕಥೆಯೂ ಇಲ್ಲಿದೆ. `ತ್ರಿಪದಿ’ ಕಥೆಯಲ್ಲಿ ಒಂದೇ ಹೆಸರಿನ ಮೂರು ಐಡೆಂಟಿಟಿಗಳು ಪರಸ್ಪರ ಸಂಪರ್ಕಕ್ಕೆ ಬಂದು ನಡೆಯುವ ಘಟನೆಗಳು ಮಜಾ ಕೊಡುತ್ತವೆ. ಇಲ್ಲಿ ವಸ್ತುಶಃ `ಫುಟ್‌ಪ್ರಿಂಟ್’ (ಪಾದದ ಫೋಟೋ) ಕಥಾವಸ್ತು ಆಗಿರುವುದು ವಿಶೇಷ. ಇಲ್ಲಿ ಸೈಕಾಲಜಿ, ಆನ್‌ಲೈನ್ ಚಹರೆ, ನೈಜ ಪಾತ್ರಗಳ ಸಂಭಾಷಣೆ, ಆನ್‌ಲೈನ್ ಚಾಟ್ ಎಲ್ಲವೂ ಮಿಶ್ರಣಗೊಂಡು ಕಥೆಗೊಂದು ಸಂಕೀರ್ಣತೆ ತಂದುಕೊಟ್ಟಿವೆ. ಆಂಟಿ ಕ್ಲಾಕ್‌ನ ದುರಂತ ಅಂತ್ಯದ ಬದಲು ಇಲ್ಲಿ ಕುತೂಹಲ ಕೆರಳಿಸುವ ಕೊನೆಯಿದೆ.
`ಮದ್ರಾಸಿನಸಿದ್ರಾಮ’ (ಹಿಂದುಮುಂದಾಗಿ ಓದಿದರೂ ಅದೇ!) ಕಥೆಯು ಶೀರ್ಷಿಕೆಯಿಂದಲೇ ಕಥಾಸೂತ್ರವನ್ನು ಬಿಚ್ಚಿಡುತ್ತದೆ. ಗಣಿತದ ಮೇಸ್ಟ್ರು ನೀಡಿದ ಸವಾಲನ್ನು ಎದುರಿಸಲು ಮದ್ರಾಸಿಗೆ ಹೋಗುವ ಸಿದ್ರಾಮನ ಪಾಡು ಮತ್ತು ಮೇಸ್ಟ್ರು ಕೊನೆಯಲ್ಲಿ ನೀಡುವ ಸಿಮಿಟ್ರಿಯ ಶಾಕ್ – ಇದು ಕಥೆಯ ವಿಶೇಷ.
ಇನ್ನುಳಿದ ಕಥೆಗಳೂ ಹೀಗೆಯೇ ಹಲವು ತಾಂತ್ರಿಕ ಸನ್ನಿವೇಶಗಳ ಸುತ್ತ ಬೆಳೆಯುತ್ತವೆ. ಈ ಕಥೆಗಳನ್ನು ನಾನು ಪರಿಚಯಿಸುವುದಕ್ಕಿಂತ ನೀವೇ ಓದಿ, ಆನಂದಿಸಿ!
ಚರಣ್ ವೃತ್ತಿಯಲ್ಲಿ ಪತ್ರಕರ್ತರು; ಪ್ರವೃತ್ತಿಯಲ್ಲಿ ಬೈಸಿಕಲ್ ಯಾನಿ-ಅಭಿಯಾನಿ. ಅವರ ಬದುಕಿನ ಈ ಅಂಶಗಳು ಕಥೆಗಳಲ್ಲಿ ಕಾಣಬರುವುದಿಲ್ಲ. ಕಥೆಗಳನ್ನು ಕೇವಲ ಕಥೆಗಳಾಗಿಯೇ ಬರೆಯಬೇಕು ಎಂಬ ಉದ್ದೇಶ ಅವರಿಗೆ ಇರಬಹುದು. ಇದು ತಪ್ಪೇನಲ್ಲ; ಜಪಾನೀ ಭಾಷೆಯ ಖ್ಯಾತ ಲೇಖಕ ಹರೂಕಿ ಮುರಾಕಾಮಿ ಒಬ್ಬ ಮ್ಯಾರಥಾನ್ ಓಟಗಾರ ಎಂದು ನನಗೆ ಗೊತ್ತಾಗಿದ್ದೇ ಇತ್ತೀಚೆಗೆ! ಅವರು ಮ್ಯಾರಥಾನ್ ಓಟದ ಬಗ್ಗೆ ಪ್ರತ್ಯೇಕ ಪುಸ್ತಕ ಬರೆದಿದ್ದಾರೆಯೇ ಹೊರತು, ಕಥೆಗಳಲ್ಲಿ ಅದನ್ನು ತಂದಿಲ್ಲ (ಆದರೆ ಕಥೆಗಾರನಾಗಿ ಕಥೆಗಾರ ಇರುವ ಪಾತ್ರಗಳನ್ನೂ ಸೃಷ್ಟಿಸಿದ್ದಾರೆ).
ಇಲ್ಲಿನ ಕಥೆಗಳು ಅಚ್ಚುಕಟ್ಟಾದ ಕಥಾಹಂದರವನ್ನು ಹೊಂದಿವೆ. ಮೊದಲ ಸನ್ನಿವೇಶದಿಂದ ಹಿಡಿದು ಕೊನೆಯವರೆಗೆ ಕಥೆ ಹೀಗೆಯೇ ನಡೆಯಬೇಕು ಎಂದು ಲೇಖಕರು ಮೊದಲೇ ನಿರ್ಧರಿಸಿರುವುದರಿಂದ ಹಲವು ಕಥೆಗಳಿಗೆ ಸುಖಾಂತ್ಯವೇ ಇರಬಹುದು ಎಂದು ಊಹಿಸುವುದು ಸುಲಭ. ಹೀಗಿದ್ದೂ, ತಂತ್ರಜ್ಞಾನದ ಇನ್ನೊಂದು ಹರಿವೂ ಈ ಕಥೆಗಳಿಗೆ ಇರುವುದರಿಂದ, ಸಮಸ್ಯೆಯು ಪರಿಹಾರವಾಗುವುದು ಹೇಗೆ ಎಂಬ ಕುತೂಹಲ ಯಾವಾಗಲೂ ಉಳಿದುಕೊಳ್ಳುತ್ತದೆ. `ವಿಂಡೋ ಶಾಪಿಂಗ್’ ಶೀರ್ಷಿಕೆಯೇ ವಾಚ್ಯವಾಗಿದ್ದರೂ ಕಥೆಯ ಕೊನೆ ಹೇಗಾಗಬಹುದು ಎಂದು ಊಹಿಸಲು ಕಷ್ಟವಾಗುತ್ತದೆ.
ಚರಣ್‌ಗೆ ಆಧುನಿಕ ತಂತ್ರಜ್ಞಾನ ಸಾಧನಗಳು ಪರಿಚಯ ನಿಕಟವಾಗಿದೆ; ಬೆಂಗಳೂರಿನಂಥ ಮಹಾನಗರದಲ್ಲಿ ನಡೆಯುವ ಮನೆಮನೆಯ ಹೊಸ ಕಥೆಗಳನ್ನು ಕಲ್ಪಿಸಿಕೊಳ್ಳುವುದರಲ್ಲಿ ಅವರು ಸಮರ್ಥರು. ಆದ್ದರಿಂದ ಈ ಸಂಕಲನದ ಎಲ್ಲ ಕಥೆಗಳೂ ಸರಿಸುಮಾರು ಒಂದು ಚೌಕಟ್ಟಿನ ಒಳಗೇ ಹೆಣೆದುಕೊಂಡ ನಿರೂಪಣೆಗಳಾಗಿವೆ. ಇಲ್ಲಿ ಕಥೆಯಿದೆ, ಪಾತ್ರಗಳಿ, ಹಂದರವೂ ಇದೆ.
ಈ ಕಥೆಗಳ ಕುರಿತು ರಚನಾತ್ಮಕ ಟೀಕೆಯನ್ನೂ ಮಾಡುವ ಸ್ವಾತಂತ್ರ್ಯವನ್ನು ಹೊಂದಿ ಹೇಳುವುದಾದರೆ: ಚರಣ್‌ರ ಮೊದಲ ಕಥಾ ಸಂಕಲನ ಎಂಬುದು ಈ ಕಥೆಗಳಿಂದಲೇ ಖಚಿತವಾಗುತ್ತದೆ. ಇವರ ಕಥೆಗಳ ಹಲವು ಅಂತ್ಯಗಳು ಕೊಂಚ ಸಿನಿಮೀಯವಾಗಿವೆ. ದೃಶ್ಯಮಾಧ್ಯಮದಲ್ಲಿ ನಿರೀಕ್ಷಿಸುವ ಚಲನೆಗಳೂ ಅಲ್ಲಲ್ಲಿ ಇಣುಕಿವೆ. ಕಥೆಗಳಲ್ಲಿ ಎಲ್ಲ ಮಾಹಿತಿಗಳನ್ನೂ ಹೇಳಬೇಕೆಂಬ ಧಾವಂತದಲ್ಲಿ ಕೆಲವೊಮ್ಮೆ ಕಥೆಗಿಂತ ಮಾಹಿತಿಯೇ ವಿಜೃಂಭಿಸಿದೆ. ಮಾಹಿತಿಯುಗದ ಮಹಿಮೆಯೇ ಇದು! ಹೀಗಾಗಿ ಸಮಕಾಲೀನ ಕಥಾ ನಿರೂಪಣೆಗಳಲ್ಲಿ ಕೆಲವೆಡೆ ನಾವು ನಿರೀಕ್ಷಿಸುವ ಭಾವಸ್ಫುರಣವನ್ನು ಇಲ್ಲಿ ಕಾಣುವುದಿಲ್ಲ. ಹಾಗಂತ ಇದರಿಂದ ಕಥೆಗಳ ಓಟಕ್ಕೇನೂ ಧಕ್ಕೆಯಾಗಿಲ್ಲ.
ಚರಣ್ ಸುದ್ದಿಮನೆಯ ಕಾಯಕದಲ್ಲೇ ಹಲವು ವರ್ಷಗಳನ್ನು ಕಳೆದಿರುವವರು. ಆದ್ದರಿಂದ ಅವರ ಪಾತ್ರಗಳು ದಿನಪತ್ರಿಕೆಗಳಲ್ಲಿ ಬರುವ, ಕಲ್ಪನೆಗಿಂತ ಎಷ್ಟೋ ಪಾಲು ಶಕ್ತಿಯುತವಾದ, ಕೆಲವೊಮ್ಮೆ ಭೀಕರವೂ ಆದ ವಾಸ್ತವವನ್ನು ಹೊಂದುವ ಸಾಧ್ಯತೆಗಳಿದ್ದವು. ಆದರೆ ಯಾಕೋ, ಅವರು ಅಂಥ ಅಸೀಮ ಸಾಧ್ಯತೆಗಳನ್ನು ಪೂರ್ತಿಯಾಗಿ ಬಳಸಿಲ್ಲ. ಇದಕ್ಕೆ ಅವರು ಹಾಕಿಕೊಂಡಿರುವ ಬರವಣಿಗೆಯ ಸಂಯಮದ ಸೂತ್ರಗಳೇ ಕಾರಣ ಎಂದುಕೊಂಡಿದ್ದೇನೆ.
ಡಿಜಿಟಲ್ ಬದುಕು ತಂದ ಬದಲಾವಣೆಯ ಪ್ರವಾಹದಲ್ಲಿ ನಾವೆಲ್ಲರೂ ಈಜುತ್ತಿದ್ದೇವೆ. ಬದುಕಿನ ಗತಿ ನಾವು ನಿರೀಕ್ಷಿಸಿದ್ದಕ್ಕಿಂತ ಹೆಚ್ಚಿನ ರಭಸ ಪಡೆದುಕೊಂಡಿದೆ. ಇಂಥ ಸಂದರ್ಭದಲ್ಲಿ ಚರಣ್ ಕೆಲವು ಚಿತ್ರಣಗಳನ್ನು ಕ್ಲಿಕ್ ಮಾಡಿದ್ದಾರೆ. ಖಾಸಗಿ ಬದುಕೆಲ್ಲವೂ ರಿಯಲ್‌ಟೈಂ ಸಾರ್ವಜನಿಕ ಪ್ರಕಟಣೆಯ ಅಂಶಗಳಾಗಿರುವ ಈ ದಿನಗಳಲ್ಲಿ ಇಂಥ ಕಥೆಗಳ ಹಿಂದಿನ ಆಶಯವನ್ನು ಗಂಭೀರವಾಗಿ ಪರಿಗಣಿಸಬೇಕಿದೆ. ಬದುಕೆಂದರೆ ಬರೀ ಅರ್ಬನ್ ದಿನಚರಿಯೆ? ಕೇವಲ ಕೆಲಸವೆ? ಆನ್‌ಲೈನ್ ಚಾಟೆ? ಸಂಬಂಧಗಳೆಂದರೆ ಕೇವಲ ಹಣಕಾಸಿಗೆ ಸಂಬಂಧಿಸಿದ್ದೆ? – ಹೀಗೆ ಹಲವು ಪ್ರಶ್ನೆಗಳನ್ನು ಈ ಕಥೆಗಳು ಎತ್ತುತ್ತವೆ.
ಮೊದಲ ಕಥಾ ಸಂಕಲನದಲ್ಲಿ ಇರಬಹುದಾದ ಎಲ್ಲ ಒಳಿತು ಕೆಡುಕುಗಳನ್ನು ಅರಿತೇ ಸಾರ್ವಜನಿಕ ಪ್ರಕಟಣೆಗೆ ಮುಂದಾಗಿರುವ ಚರಣ್‌ಗೆ ಅಭಿನಂದನೆಗಳು. ಕನ್ನಡ ಮತ್ತು ಇಂಗ್ಲಿಷ್ ಭಾಷೆಯ ಮೇಲೆ ಹಿಡಿತ ಹೊಂದಿರುವ ಚರಣ್ ಮುಂದಿನ ದಿನಗಳಲ್ಲಿ ಇನ್ನಷ್ಟು ಗಾಢ ಅನುಭವ ಕೊಡುವ ಕಥೆಗಳನ್ನು ಬರೆಯುತ್ತಾರೆ, ಅವುಗಳಲ್ಲಿ ಚೊಚ್ಚಲ ಪುಸ್ತಕದ ಋಣಾತ್ಮಕ ಅಂಶಗಳಿರುವುದಿಲ್ಲ ಎಂಬ ನಿರೀಕ್ಷೆಯನ್ನು ಇಟ್ಟುಕೊಳ್ಳಬಹುದು.
– ಬೇಳೂರು ಸುದರ್ಶನ
ಜೂನ್ ೨೦೧೫
ಬೆಂಗಳೂರು