`ಚಿತ್ರದುರ್ಗದಲ್ಲಿ ಒಂದು ಬಿಸ್ಕಿಟ್ ಫ್ಯಾಕ್ಟರಿ ಇತ್ತು. ಅಲ್ಲಿ ನಾನು ಬಿಸ್ಕಿಟ್ ಮಾಡಲು ಬೇಕಾದ ಕಚ್ಚಾ ಆಹಾರ ಪದಾರ್ಥಗಳ ವ್ಯವಸ್ಥೆ ನೋಡಿಕೊಳ್ಳುತ್ತಿದ್ದೆ. ಮೂಟೆ ಹೊರುವುದೂ ಸೇರಿದಂತೆ ಎಲ್ಲ ಬಗೆಯ ಕೆಲಸಗಳನ್ನೂ ಮಾಡುತ್ತಿದ್ದೆ. ಆಗ ನನಗೆ ಹಣದ ಅವಶ್ಯಕತೆ ತುಂಬಾ ಇತ್ತು. ಒಂದು ಶಿಫ್ಟಿಗೆ ೧೮ ರೂ. ಕೊಡ್ತಾ ಇದ್ದರು. ನಾನು ಕಾಲೇಜಿಗೆ ರಜೆ ಇದ್ದಾಗೆಲ್ಲ ನಿರಂತರವಾಗಿ ಮೂರು ಶಿಫ್ಟ್ ಕೆಲಸ ಮಾಡಲು ಮುಂದಾಗಿದ್ದೆ. ಆಗಿನ ಮ್ಯಾನೇಜರ್ ಮಂಜುನಾಥ್ ನನ್ನ ಸಮಸ್ಯೆಯನ್ನು ಅರ್ಥ ಮಾಡಿಕೊಂಡು ನನ್ನ ಶಿಫ್ಟ್‌ಗಳನ್ನು ವಾರದ ಇತರೆ ದಿನಗಳಿಗೂ ಹಂಚಿ ನೆರವಾದರು. ಸೆಕೆಂಡ್ ಪಿಯುಸಿಯಿಂದ ಶುರುವಾದ ಈ ಕೆಲಸದ ಮೂಲಕವೇ ನಾನು ಡಿಗ್ರಿ ಮುಗಿಸಿದೆ! ‘
ಹೀಗೆ ಚಿತ್ರದುರ್ಗದ ಕಾಲೇಜು ದಿನಗಳನ್ನು ನೆನಪಿಸಿಕೊಂಡು ಹೇಳಿದವರು ಈಗಷ್ಟೆ ಭಾರತೀಯ ಜನತಾ ಪಾರ್ಟಿಯ ರಾಜ್ಯ ಕಾರ್ಯದರ್ಶಿಯಾಗಿರುವ ಎನ್ ರವಿಕುಮಾರ್. ೧೯೯೧ರಿಂದ ೨೫ ವರ್ಷಗಳ ಕಾಲ ಅಭಾವಿಪದಲ್ಲಿ ಪೂರ್ಣಾವಧಿ ಕಾರ್ಯಕರ್ತರಾಗಿದ್ದ ರವಿಕುಮಾರ್‌ಗೆ ಅವರ ವಿದ್ಯಾರ್ಥಿ ಜೀವನ ವಿಶಿಷ್ಟ ಅನುಭವಗಳ ಸರಮಾಲೆ.
ಚಿತ್ರದುರ್ಗ ಜಿಲ್ಲೆಯ ಜಗಳೂರು ತಾಲೂಕಿನ ಬಿಳಿಚೋಡು ಹೋಬಳಿಯ ಉಚ್ಚಂಗಿ ಗ್ರಾಮದಲ್ಲಿ ಹುಟ್ಟಿದ ರವಿಕುಮಾರ್ ಅಲ್ಲೇ ನಾಲ್ಕನೇ ತರಗತಿವರೆಗೆ ಓದಿದರು. ಅನಂತರ ಹಸಗೋಡು ಮಾಧ್ಯಮಿಕ ಮತ್ತು ಪ್ರೌಢಶಾಲೆಯಲ್ಲಿ ಎಸೆಸೆಲ್ಸಿ ಮುಗಿಸಿದ ಉಚ್ಚಂಗಿಯ ಪ್ರಥಮ ಬ್ಯಾಚಿನ ವಿದ್ಯಾರ್ಥಿಯಾದರು. ಎಸೆಸೆಲ್ಸಿ ಮುಗಿದ ಮೇಲೆ ಚಿತ್ರದುರ್ಗದ ಬುರುಜನಹಟ್ಟಿಯಲ್ಲಿದ್ದ ಅಮ್ಮನ ಅಣ್ಣ ಶ್ಯಾಮಣ್ಣನವರ ಮನೆಯಲ್ಲಿ ಉಳಿದು ಪಿಯುಸಿ ಸೇರಿದರು. ಮೊದಲ ವರ್ಷದ ಪಿಯುಸಿ ನಂತರ ನಡೆದ ಕೆಲಸ-ಓದಿನ ಪಾಳಿಯ ದಿನಗಳನ್ನೇ ರವಿಕುಮಾರ್ ನೆನಪಿಸಿಕೊಂಡಿದ್ದು.
ಕಾಲೇಜು ದಿನಗಳಲ್ಲಿ ಅವರನ್ನು ಎಬಿವಿಪಿಗೆ ತಂದವರು ಅಲ್ಲೇ ಇಂಜಿನಿಯರಿಂಗ್ ಓದುತ್ತಿದ್ದ ಬಿ ವಿ ಅರುಣಕುಮಾರ್(ಈಗ ಮೈಸೂರಿನಲ್ಲಿ ಹಿರಿಯ ಸಿವಿಲ್ ಇಂಜಿನಿಯರ್). ಹಾಗೇ ಅಲ್ಲಿದ್ದ ಇನ್ನೊಬ್ಬ ಎಬಿವಿಪಿ ಕಾರ್ಯಕರ್ತ, (ಈಗ ಮೈಸೂರಿನ ಮಹಾರಾಜಾ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರು) ಬಿ ವಿ ವಸಂತಕುಮಾರ್ ಕೂಡಾ ರವಿಕುಮಾರ್‌ರ ಹಿರಿಯ ಸಹ ಕಾರ್ಯಕರ್ತ.
`ಬುರುಜನಹಟ್ಟಿ’ ರಕ್ಷಣೆ
`ಚಿತ್ರದುರ್ಗದಲ್ಲಿ ಆಗ ಡಿಎಸ್‌ಎಸ್ ಮತ್ತು ಹಲವು ಎಡಪಂಥೀಯ ವಿದ್ಯಾರ್ಥಿ ಸಂಘಟನೆಗಳು ಪ್ರಬಲವಾಗಿದ್ದವು. ನಾವು ಕಾರ್ಯಕ್ರಮ ಮಾಡಲು ಹೋದರೆ ಆಕ್ರಮಣ ಮಾಡಲು ಮುಂದಾಗುತ್ತಿದ್ದರು. ಆದರೆ `ಬುರುಜನಹಟ್ಟಿಯವನು’ ಎಂಬ ಹಣೆಪಟ್ಟಿಯಿಂದ ಬಚಾವಾದೆ!’ ಎಂದು ರವಿಕುಮಾರ್ ನಸುನಗುತ್ತಾರೆ. `ಆ ಕಾಲದಲ್ಲಿ ಎಬಿವಿಪಿಯಿಂದ ಯಾರೇ ಹಿರಿಯರು ಬಂದು ಭಾಷಣ ಮಾಡಿದರೂ ಅದನ್ನು ಬರೆದಿಟ್ಟುಕೊಂಡು ಅವೇ ಅಂಶಗಳನ್ನು ನನ್ನ ಭಾಷಣದಲ್ಲಿ ಸೇರಿಸಿ ಹೊಡೆಯುತ್ತಿದ್ದೆ. ಹಾಗೇ ನನ್ನ ಭಾಷಣ ಕಲೆ ಸುಧಾರಿಸಿತು’ ಎನ್ನುತ್ತಾರೆ ರವಿಕುಮಾರ್.
ಕೆಲಸಕ್ಕೆ ಸೇರಿ ವರಮಾನ ಪಡೆಯಬೇಕೆಂದೇ ರವಿಕುಮಾರ್ ಬಿ ಎಡ್ ಕೂಡಾ ಮಾಡಿದರು. ಆದರೆ ಎಬಿವಿಪಿಯ ವಿದ್ಯಾರ್ಥಿ ಹೋರಾಟದ ಆಕರ್ಷಣೆಯ ಮುಂದೆ ಗಳಿಕೆಯ ಕನಸು ನಿಲ್ಲಲಿಲ್ಲ. ೧೯೯೧ರಲ್ಲಿ ಶಿರಸಿಯಲ್ಲಿ ನಡೆದ ಪ್ರಾಂತ ಅಭ್ಯಾಸವರ್ಗದಲ್ಲಿ ಎಬಿವಿಪಿಯ ಪೂರ್ಣಾವಧಿ ಕಾರ್ಯಕರ್ತರಾಗಿ ಧಾರವಾಡ ಜಿಲ್ಲೆಯ ಹೊಣೆಗಾರಿಕೆ ಹೊತ್ತು ಹುಬ್ಬಳ್ಳಿಗೆ ಬಂದರು.
ಎಬಿವಿಪಿ ಆಗಿನ ದಿನಗಳಲ್ಲಿ ರಾಜ್ಯದಾದ್ಯಂತ ಪ್ರಭಾವಿ ಸಂಘಟನೆಯಾಗಿದ್ದರೂ ಅದಕ್ಕೇ ಸ್ವಂತ ಕಚೇರಿಗಳು ಇದ್ದ ಊರುಗಳು ಕಡಿಮೆ. ರವಿಕುಮಾರ್ ಹುಬ್ಬಳ್ಳಿಯಲ್ಲಿ ಆರೆಸೆಸ್ ಕಾರ್ಯಾಲಯದಲ್ಲೇ ಉಳಿದರು. ಆಗಲೇ ಅವರು ಸ್ವಯಂಸೇವಕರಾಗಿದ್ದು! (ಆರೆಸೆಸ್‌ನಿಂದ ಎಬಿವಿಪಿಗೆ ಬರುವವರೂ ಇದ್ದಾರೆ; ಆದರೆ ಎಬಿವಿಪಿಯಿಂದ ಆರೆಸೆಸ್ ಪರಿಚಯವಾದ ನಾಯಕರೂ ಇದ್ದಾರೆ. ಇವೆಲ್ಲ ಸಂಘಟನೆಯ ಒಳಗೆ ಇರುವವರಿಗೆ ಗೊತ್ತಾಗುವ ವ್ಯತ್ಯಾಸಗಳು!)
ಹುಬ್ಬಳ್ಳಿಯ ಮಧುಕುಂಜದಲ್ಲಿ ಆಗಲೂ ಇದ್ದ (ಈಗಲೂ ಇರುವ) ಆರೆಸೆಸ್ ಪ್ರಚಾರಕ ಶ್ರೀ ಮಂಗೇಶ ಭೇಂಡೆ ಮತ್ತು ಶ್ರೀ ಕಾಶಿನಾಥ್ ಮಿಸ್ಕಿನ್‌ರ ಸ್ನೇಹ ಮತ್ತು ಒಡನಾಟ ರವಿಕುಮಾರ್‌ಗೆ ಸಿಕ್ಕಿತು. ಇವರಿಬ್ಬರೂ ನನ್ನನ್ನು ತುಂಬಾ ಅಕ್ಕರೆಯಿಂದ ನೋಡಿಕೊಂಡರು ಎಂದು ರವಿಕುಮಾರ್ ಮೊನ್ನೆ ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿಯೂ ಸ್ಮರಿಸಿಕೊಂಡರು.
ಎರಡು ವರ್ಷ ಎಬಿವಿಪಿ ಕೆಲಸ ಮಾಡಿ ನಂತರ ಸ್ವಂತ ಉದ್ಯೋಗ ಮಾಡುವ ಉದ್ದೇಶ ಇದ್ದಿದ್ದೇನೋ ಹೌದು. ಆದರೆ ಆಗ ಹುಬ್ಬಳ್ಳಿಯ ಈದಗಾ ಮೈದಾನದಲ್ಲಿ ನಡೆದ ಸ್ವಾತಂತ್ರ್‍ಯ ಧ್ವಜ ಆರೋಹಣದ ಹೋರಾಟದಿಂದಾಗಿ ರವಿಕುಮಾರ್ ಎಬಿವಿಪಿಯಲ್ಲೇ ಮುಂದುವರೆದರು.
೧೯೯೩ರಲ್ಲಿ ಕಲಬುರಗಿಗೆ ಜಿಲ್ಲಾ ಸಂಘಟನಾ ಕಾರ್ಯದರ್ಶಿಯಾಗಿ ಹೋದ ರವಿಕುಮಾರ್ ಅನಂತರ ಅಲ್ಲೇ ವಿಭಾಗ ಸಂಘಟನಾ ಕಾರ್ಯದರ್ಶಿಯೂ ಆದರು. ಆಗ ಕಲಬುರಗಿಯಲ್ಲಿ ನಡೆದ ಪ್ರಾಂತ ಅಭ್ಯಾಸವರ್ಗದಲ್ಲಿ ಹಣ ಉಳಿಸಿ ಅದನ್ನೇ ಎಬಿವಿಪಿ ಕಚೇರಿಗಾಗಿ ಬಳಸಿದ ನೆನಪು ಅವರಲ್ಲಿ ಹಸಿರಾಗಿದೆ. ಆ ಕಾಲದಲ್ಲಿ ಮುಂಚೂಣಿ ವಿದ್ಯಾರ್ಥಿ ಸಂಘಟನೆಯಾಗಿದ್ದರೂ ಎಬಿವಿಪಿ ಸದಾ ಆರ್ಥಿಕ ಸಮಸ್ಯೆಗಳಲ್ಲೇ ಇರುತ್ತಿದ್ದ ಸಂಘಟನೆ. ಆದ್ದರಿಂದ ಈ ಪುಟ್ಟ ಉಳಿತಾಯವೂ ದೊಡ್ಡ ಘಟನೆ!
ಎಸ್‌ಸಿ ಎಸ್‌ಟಿ ಹಾಸ್ಟೆಲ್ ಹೋರಾಟ
ಕಲಬುರಗಿಯಲ್ಲಿ ಇದ್ದಾಗಲೇ ರವಿಕುಮಾರ್‌ಗೆ ಎಸ್‌ಸಿಎಸ್‌ಟಿ ವಿದ್ಯಾರ್ಥಿನಿಲಯಗಳ ಅವ್ಯವಸ್ಥೆಯ ಬಗ್ಗೆ ಅರಿವಾಯಿತು. ಅಲ್ಲಿ ರಕ್ಷಾಬಂಧನ ಕಾರ್ಯಕ್ರಮ ಮಾಡಲೆಂದು ಹೋದಾಗ ಅವಕಾಶ ಸಿಗಲಿಲ್ಲ. ಆದರೆ ಹಾಸ್ಟೆಲ್‌ನ್ನು ನೋಡಿ ರವಿಕುಮಾರ್ ಆಘಾತಗೊಂಡರು. ಎಲ್ಲೆಂದರಲ್ಲಿ ಬಿಸಾಡಿದ ತಟ್ಟೆಗಳು, ಚಾಪೆಯೂ ಇಲ್ಲದೆ ಮಲಗಿದ ವಿದ್ಯಾರ್ಥಿಗಳು, ಶೌಚಾಲಯವೇ ಇಲ್ಲದ ದುಸ್ಥಿತಿ. ಬೆಳಗಾದರೆ ಎಲ್ಲ ವಿದ್ಯಾರ್ಥಿಗಳೂ ಬಾಟಲಿಯಲ್ಲಿ ನೀರು ಹಿಡಿದುಕೊಂಡು ಬಯಲಿಗೆ ಹೋಗುತ್ತಿದ್ದರು.
`ರಕ್ಷಾಬಂಧನ ಕಾರ್ಯಕ್ರಮವಾದ ಹತ್ತೇ ದಿನಗಳಲ್ಲಿ ನಾವು ಅಲ್ಲಿ ಹಾಸ್ಟೆಲ್ ದುರವಸ್ಥೆ ಕುರಿತು ಪ್ರತಿಭಟನೆ ಸಂಘಟಿಸಿದೆವು. ಜಿಲ್ಲಾಧಿಕಾರಿಯೇ ಹಾಸ್ಟೆಲ್‌ಗೆ ಬರುವಂತೆ ಒತ್ತಡ ತಂದೆವು. ಅಲ್ಲಿಂದಲೇ ನಮ್ಮ ಹಾಸ್ಟೆಲ್ ಹೋರಾಟ ಆರಂಭವಾಯಿತು. ಇದು ಕ್ರಮೇಣ ಹುಬ್ಬಳ್ಳಿ, ಮತ್ತು ಎಲ್ಲ ನಗರಗಳಿಗೂ ಹಬ್ಬಿತು. ಎಲ್ಲಾ ಕಡೆಯೂ ಇದೇ ದುರವಸ್ಥೆ’ ಎಂದು ರವಿಕುಮಾರ್ ತಮ್ಮ ಹಾಸ್ಟೆಲ್ ಹೋರಾಟದ ಅಭಿಯಾನದ ಆರಂಭವನ್ನು ಗುರುತಿಸಿದರು.
ಎಬಿವಿಪಿಯು ಕೇವಲ ಹೋರಾಟಗಳಿಗೇ ಸೀಮಿತವಾಗಲಿಲ್ಲ. ೨೦೦೧ರಲ್ಲಿ ಎಸ್‌ಸಿಎಸ್‌ಟಿ ಹಾಸ್ಟೆಲ್‌ಗಳ ವ್ಯಾಪಕ ಸಮೀಕ್ಷೆಯನ್ನು ನಡೆಸಿತು. ನೂರಾರು ಹಾಸ್ಟೆಲ್‌ಗಳಿಗೆ ಭೇಟಿ ನೀಡಿ ಅಂಕಿ ಅಂಶ, ಛಾಯಾಚಿತ್ರಗಳನ್ನು ಸಂಗ್ರಹಿಸಲಾಯಿತು. ಈ ವರದಿಯು ಮಾಧ್ಯಮಗಳಲ್ಲಿ ವ್ಯಾಪಕ ಪ್ರಚಾರ ಪಡೆಯಿತು. ಕೊನೆಗೆ ೨೦೦೬ರಲ್ಲಿ ಬಿಜೆಪಿಯ ಯೆಡ್ಯೂರಪ್ಪನವರು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಹಾಸ್ಟೆಲ್ ವಿದ್ಯಾರ್ಥಿಗಳ ಮಾಸಿಕ ವೆಚ್ಚಪ್ರಮಾಣವನ್ನು ೬೦೦ ರೂ.ಗಳಿಂದ ೯೦೦ ರೂ.ಗಳಿಗೆ ಹೆಚ್ಚಿಸಿದರು. ಈಗ ಈ ಮೊತ್ತವು ೧೨೦೦ ರೂ.ಗಳಿಗೆ ಹೆಚ್ಚಿದೆ. ಈ ಹೆಚ್ಚಳದಲ್ಲಿ ಎಬಿವಿಪಿ ಹೋರಾಟವೇ ಪ್ರಮುಖ ಪಾತ್ರ ವಹಿಸಿದೆ ಎಂಬುದನ್ನು ಮರೆಯುವಂತಿಲ್ಲ.
ಎಸ್‌ಸಿಎಸ್‌ಟಿ ಹೋರಾಟದಿಂದಾಗಿ ಎಬಿವಿಪಿಯ ಜನಪ್ರಿಯತೆ ಹಾಸ್ಟೆಲ್‌ಗಳಲ್ಲೂ ಹೆಚ್ಚಿತು. ಈಗಿನ ಕಾಂಗ್ರೆಸ್ ಸರ್ಕಾರವು ಆರಂಭಿಸಿರುವ ವಿದ್ಯಾಪೋಷಕ ಕಾರ್ಯಕ್ರಮದಲ್ಲಿ ಹಾಸ್ಟೆಲ್ ಸೀಟು ಸಿಗದ ವಿದ್ಯಾರ್ಥಿಗಳಿಗೆ ವಾರ್ಷಿಕ ೧೫ ಸಾವಿರ ರೂ. ಕೊಡುತ್ತಾರೆ. ಈ ಯೋಜನೆಯನ್ನು ಜಾರಿಗೆ ತರುವಲ್ಲಿ ಎಬಿವಿಪಿಯ ಒತ್ತಡವೂ ಇತ್ತು ಎಂಬುದು ಗಮನಾರ್ಹ. ಸೈದ್ಧಾಂತಿಕ ಭಿನ್ನಾಭಿಪ್ರಾಯಗಳು ಏನೇ ಇದ್ದರೂ ಕಾಂಗ್ರೆಸಿನ ಸಚಿವ ಶ್ರೀ ಎಚ್ ಆಂಜನೇಯರವರು ಎಬಿವಿಪಿಯ ಈ ಕೆಲಸವನ್ನು ಮನಸಾರೆ ಮೆಚ್ಚಿಕೊಂಡಿದ್ದಾರೆ ಎಂದು ರವಿಕುಮಾರ್ ಹೇಳುತ್ತಾರೆ.
೧೯೯೯ರಲ್ಲಿ ಎಬಿವಿಪಿಯ ರಾಜ್ಯ ಕಾರ್ಯದರ್ಶಿಯಾದ ರವಿಕುಮಾರ್ ಹುಬ್ಬಳ್ಳಿಯ ಕಿತ್ತೂರು ಚೆನ್ನಮ್ಮ ವೃತ್ತದ ರಸ್ತೆ ದುರವಸ್ಥೆಯ ಬಗ್ಗೆ ಗಮನ ಸೆಳೆಯಲು ಎಬಿವಿಪಿ ಮೂಲಕ ಪ್ಲಾಸ್ಟಿಕ್ ಮೀನು ಹಿಡಿದು ಪ್ರತಿಭಟಿಸಿದ್ದು, ಕಸ ವಿಲೇವಾರಿಗಾಗಿ ಮಹಾನಗರಪಾಲಿಕೆಯ ಮುಂದೇ ಕಸ ಎಸೆದು ಪ್ರತಿಭಟಿಸಿದ್ದು – ಹೀಗೆ ಸಾರ್ವಜನಿಕ ಅಗತ್ಯದ ಹೋರಾಟಗಳನ್ನೂ ಮಾಡಿದೆವು ಎಂದು ನೆನಪಿಸಿಕೊಳ್ಳುತ್ತಾರೆ.
ದತ್ತಾಜಿ ಭಾಷಣದ ಪ್ರಭಾವ
ಅದೇ ಸುಮಾರಿಗೆ ದಾವಣಗೆರೆಯಲ್ಲಿ ನಡೆದ ಸಭೆಯೊಂದರಲ್ಲಿ ಶ್ರೀ ದತ್ತಾತ್ರೇಯ ಹೊಸಬಾಳೆಯವರು (ಈಗ ಆರೆಸೆಸ್‌ನ ಅಖಿಲ ಭಾರತ ಸಹ ಸರಕಾರ್‍ಯವಾಹರು) ಸಾಮಾಜಿಕ ಸಾಮರಸ್ಯದ ಬಗ್ಗೆ ಮಾಡಿದ ಭಾಷಣವು ತನ್ನ ಮೇಲೆ ಗಾಢ ಪರಿಣಾಮ ಬೀರಿತು ಎನ್ನುತ್ತಾರೆ ರವಿಕುಮಾರ್.
೨೦೦೧ರಲ್ಲಿ ರಾಜ್ಯ ಸಹ ಸಂಘಟನಾ ಕಾರ್ಯದರ್ಶಿ, ೨೦೦೪ರಲ್ಲಿ ರಾಜ್ಯ ಸಂಘಟನಾ ಕಾರ್ಯದರ್ಶಿ, ೨೦೦೮ರಲ್ಲಿ ರಾಷ್ಟ್ರೀಯ ಕಾರ್ಯದರ್ಶಿ, ೨೦೧೧ರಲ್ಲಿ ಕ್ಷೇತ್ರೀಯ ಸಂಘಟನಾ ಕಾರ್ಯದರ್ಶಿ – ಹೀಗೆ ಎಬಿವಿಪಿಯಲ್ಲಿ ಹಲವು ಹೊಣೆಗಾರಿಕೆಗಳನ್ನು ವಹಿಸಿದ ರವಿಕುಮಾರ್ ಒಂದೂವರೆವರ್ಷ ಭ್ರಷ್ಟಾಚಾರ ವಿರೋಧಿ ಯುವಸಮುದಾಯ (ವೈಎಸಿ)ರ ರಾಷ್ಟ್ರೀಯ ಸಹ ಸಂಚಾಲಕರಾಗಿಯೂ ಕೆಲಸ ಮಾಡಿದ್ದಾರೆ.
ಶಿಕ್ಷಣ ಶುಲ್ಕ: ರಾಷ್ಟ್ರಮಟ್ಟದ ಅಧ್ಯಯನ
ರವಿಕುಮಾರ್ ಮಾಡಿದ ಇನ್ನೊಂದು ಪ್ರಮುಖ ಚಟುವಟಿಕೆ ಎಂದರೆ ಭಾರತದ ಕಾಲೇಜುಗಳ ಶುಲ್ಕ ವ್ಯವಸ್ಥೆಯ ಅಧ್ಯಯನ. ಇರುವ ಸಂಪನ್ಮೂಲದಲ್ಲೇ ಪ್ರವಾಸ ಮಾಡುತ್ತಿದ್ದ ರವಿಕುಮಾರ್ ರಾಜ್ಯದ ಎಲ್ಲ ಕಾಲೇಜುಗಳ ಡೊನೇಶನ್ ಪಟ್ಟಿಯನ್ನು ಬಾಯಿಪಾಠ ಮಾಡಿಕೊಂಡಿದ್ದರು! ಹಾಗೇ ಅವರು ಇತರೆ ರಾಜ್ಯಗಳಲ್ಲಿ ಶುಲ್ಕ ವ್ಯವಸ್ಥೆ ಹೇಗಿದೆ ಎಂದು ಎಬಿವಿಪಿ ಜಾಲದ ಮೂಲಕ ತಿಳಿದುಕೊಂಡರು. ರವಿಕುಮಾರ್ ಮಾಡಿದ ಈ ಅಧ್ಯಯನದ ಒಂದು ಪ್ರಮುಖ ಫಲಿತಾಂಶ ಎಂದರೆ ಇದು: ಶಾಲಾ ಕಾಲೇಜುಗಳ (ನರ್ಸರಿ, ಪಿಯುಸಿಯನ್ನೂ ಸೇರಿಸಿಕೊಂಡು) ಡೊನೇಶನ್ ಹಾವಳಿಗೆ ಮೂಲಬೀಜ ಹಾಕಿದ್ದು ಕರ್ನಾಟಕವೇ! ಪ್ರಾಥಮಿಕ ಶಿಕ್ಷಣದಿಂದ ಹಿಡಿದು ಉನ್ನತ ಶಿಕ್ಷಣದವರೆಗೆ ಬಡವರಿಗೆ ಶೇ. ೫೦ ರಷ್ಟು ಸೀಟನ್ನು ಮೀಸಲಿಡಬೇಕು ಎಂಬುದು ರವಿಕುಮಾರ್ ಸೂತ್ರ. ಎಷ್ಟೆಲ್ಲ ಸರ್ಕಾರಗಳು ಬಂದರೂ ಶಿಕ್ಷಣದ ಬಗ್ಗೆ ಮಾತ್ರ ನಿಷ್ಕಾಳಜಿ ವ್ಯಕ್ತವಾಗಿದೆ ಎಂಬುದು ಅವರ ಬೇಸರ.
ದಮನಿತ ವರ್ಗದಲ್ಲಿ ಹುಟ್ಟಿ ಬೆಳೆದ ರವಿಕುಮಾರ್‌ಗೆ ಎಬಿವಿಪಿಯ ಮೂಲಕವೇ ದೇಶ, ಸಮಾಜ, ಸಾಮಾಜಿಕ ಸೇವೆಯ ನೈಜ ಅರಿವಾಗಿದೆ. ಇಷ್ಟು ಗೊತ್ತಾಗಿದ್ದೇ ನನ್ನ ಸಾರ್ಥಕತೆ. ಯಾಕೆಂದರೆ ನಾನು ಮೊದಲಿನಿಂದಲೂ ಕೀಳರಿಮೆ ಇಟ್ಟುಕೊಂಡಿದ್ದವ. `ಈಗ ನನಗೆ ಸಮಾಜದ ಸಮಸ್ಯೆಗಳ ಬಗ್ಗೆ, ಅವುಗಳನ್ನು ಪರಿಹರಿಸುವ ಬಗ್ಗೆ ದಿಕ್ಕು ಗೋಚರವಾಗುತ್ತಿದೆ. ಇಂಥ ಜ್ಞಾನೋದಯಕ್ಕೆ ಎಬಿವಿಪಿಯೇ ಕಾರಣ’ ಎಂದು ರವಿಕುಮಾರ್ ನಮ್ರವಾಗಿ ನುಡಿಯುತ್ತಾರೆ.
ಎಲ್ಲಾ ಜಾತಿಗಳಲ್ಲೂ ಬಡವರಿದ್ದಾರೆ. ಎಲ್ಲರನ್ನೂ ಮೇಲೆತ್ತಬೇಕು ಎನ್ನುವ ರವಿಕುಮಾರ್‌ಗೆ ಬುದ್ಧಿಪೂರ್ವಕವಾಗಿ ಜಾತಿಯನ್ನು ಬೆಳೆಸುವವರ ಬಗ್ಗೆ ವಿಷಾದವಿದೆ. ಮೇಲ್ವರ್ಗದ ಬಡಾವಣೆಗಳಿಗೆ ಡಾ|| ಅಂಬೇಡ್ಕರ್, ದೇವರಾಜ ಅರಸ್‌ರ ಹೆಸರು ಇಡುವ ದಿನ ಬರುತ್ತದೆಯೇ ಎಂಬುದು ಅವರ ಕಾಳಜಿಯುಕ್ತ ಪ್ರಶ್ನೆ.
ಎಬಿವಿಪಿಯಲ್ಲಿದ್ದಾಗ ಕುಡಿತ ಮತ್ತು ಮಾದಕದ್ರವ್ಯ ವ್ಯಸನದ ವಿರುದ್ಧ ಹದಿನೈದು ಲಕ್ಷ ವಿದ್ಯಾರ್ಥಿಗಳಲ್ಲಿ ಜಾಗೃತಿ ಉಂಟು ಮಾಡಿದ್ದೂ ಅವರ ಕಾಲದ ಇನ್ನೊಂದು ಮಹತ್ವದ ಕಾರ್ಯಕ್ರಮ.
ಸ್ವಾಮಿ ವಿವೇಕಾನಂದ, ಡಾ|| ಬಿ ಆರ್ ಅಂಬೇಡ್ಕರ್ ಆದರ್ಶ
ಭಾರತದ ಅಸ್ಮಿತೆಯನ್ನು ಎತ್ತಿಹಿಡಿದ ಸ್ವಾಮಿ ವಿವೇಕಾನಂದ, ಭಾರತದಲ್ಲಿ ಮೀಸಲಾತಿ ಜಾರಿಗೆ ತಂದು ದಮನಿತರಿಗೂ ಅವಕಾಶ ನೀಡಿದ ಭಾರತರತ್ನ ಡಾ|| ಬಿ ಆರ್ ಅಂಬೇಡ್ಕರ್ – ಇವರಿಬ್ಬರೂ ರವಿಕುಮಾರ್‌ರ ಆದರ್ಶ ವ್ಯಕ್ತಿತ್ವಗಳು.
ಹಳ್ಳಿಗಳಲ್ಲಿ ಶುದ್ಧ ಕುಡಿಯುವ ನೀರು ಸಿಗುವ ಬಗ್ಗೆ, ಕೆರೆಗಳ ಪುನಶ್ಚೇತನದ ಬಗ್ಗೆ ಕೊಳಚೆ ಪ್ರದೇಶಗಳ ಬಗ್ಗೆ, ಮಾಜಿ ರಾಷ್ಟ್ರಪತಿ ಡಾ|| ಎಪಿಜೆ ಅಬ್ದುಲ್ ಕಲಾಂರವರ ಪುರ (PURA)ಯೋಜನೆಯ ಬಗ್ಗೆ , ಸರ್ಕಾರಿ ಆಸ್ಪತ್ರೆಗಳ ಬಗ್ಗೆ – ಹೀಗೆ ಹತ್ತು ಹಲವು ಸಂಗತಿಗಳ ಬಗ್ಗೆ ಆರಂಭಿಕ ಅಧ್ಯಯನ ಮಾಡುವ ಆಶಯ ರವಿಕುಮಾರ್‌ದು. ಸಮಸ್ಯೆಗಳ ಬಗ್ಗೆ ಓದಿ, ಚರ್ಚಿಸಿ ತಿಳಿದುಕೊಳ್ಳುವ ಸಜ್ಜನಿಕೆ ರವಿಕುಮಾರ್‌ಗೆ ಇದೆ ಎನ್ನುವುದು ಸಂತಸದ ವಿಷಯ.
ತನ್ನ ಕಾಲದ ಎಲ್ಲ ಎಬಿವಿಪಿ ಕಾರ್ಯಕರ್ತರನ್ನೂ ನೆನಪಿಸಿಕೊಳ್ಳುವ ರವಿಕುಮಾರ್‌ಗೆ ವಿಶೇಷವಾಗಿ ಉಷಕ್ಕ (ಈಗ ಶಿವಮೊಗ್ಗ ಜಿಲ್ಲೆಯಲ್ಲಿ ಕೃಷಿಜೀವನ ಸಾಗಿಸಿದ್ದಾರೆ), ಸಿದ್ದಾಪುರ ಮಂಜುಳ (ಶಿವಮೊಗ್ಗದಲ್ಲಿ ಕರ್ನಾಟಕ ಶಾಸ್ತ್ರೀಯ ಗಾಯನ, ವಾದನ ನಡೆಸಿಕೊಂಡಿದ್ದಾರೆ), ವಿಶ್ವೇಶ್ವರ ಹೆಗಡೆ ಕಾಗೇರಿ (ಮಾಜಿ ಶಿಕ್ಷಣ ಸಚಿವರು), ಹೀರೇಂದ್ರ ಶಾ (ಈಗ ಬೆಂಗಳೂರಿನಲ್ಲಿ ಹಿರಿಯ ವಿಮಾ ಸಲಹೆಗಾರರು), ಬಿ ವಿ ಅರುಣಕುಮಾರ್, – ಇವರ ಸಹಚರ್ಯೆ ಮತ್ತು ಸ್ನೇಹವನ್ನು ಆತ್ಮೀಯವಾಗಿ ಸ್ಮರಿಸಿಕೊಳ್ಳುತ್ತಾರೆ. ಇನ್ನು ಆಗ ವಿದ್ಯಾರ್ಥಿ ಪರಿಷತ್ತಿನಲ್ಲಿದ್ದ ಈಗ ವಿದ್ಯಾಭಾರತಿಯಲ್ಲಿರುವ ಶ್ರೀ ಜಿ ಆರ್ ಜಗದೀಶ, ಶ್ರೀ ದತ್ತಾತ್ರೇಯ ಹೊಸಬಾಳೆ ಮತ್ತು ಆರೆಸೆಸ್‌ನ ಹಿರಿಯ ಪ್ರಚಾರಕ ಶ್ರೀ ಮೈ ಚ ಜಯದೇವರನ್ನು ರವಿಕುಮಾರ್ ತನ್ನ ಹಿರಿಯ ಆದರ್ಶ ಜೀವಿಗಳೆಂದು ಗುರುತಿಸುತ್ತಾರೆ. ಹಾಗೆ ನೋಡಿದರೆ ಈ ಹೆಸರು ಹೇಳಿದವರಷ್ಟೇ ಅಲ್ಲ, ಆ ಕಾಲದ ಎಲ್ಲರೂ ಅವರ ಮೇಲೆ ಪ್ರಭಾವ ಬೀರಿದವರೇ.
ರವಿಕುಮಾರ್ ತಂದೆ ನೀಲಪ್ಪನವರು ಕೃಷಿಕರು. ಮೊದಲು ಒಂದು ಕಿರಾಣಿ ಅಂಗಡಿ ಇಟ್ಟುಕೊಂಡಿದ್ದರೂ ಈಗ ಕೇವಲ ಕೃಷಿಯಲ್ಲೇ ಜೀವನ ಸಾಗಿಸುತ್ತಿದ್ದಾರೆ. ರವಿಕುಮಾರ್ ತಾಯಿ ಲಕ್ಷ್ಮಮ್ಮ ಕೂಡಾ ಮನೆ ನೋಡಿಕೊಂಡು ಕೃಷಿಗೆ ನೆರವಾಗುತ್ತಾರೆ. ರವಿಕುಮಾರ್ ತಮ್ಮ ಗಂಗಾಧರ್ ಬಿ ಕಾಂ ಓದಿದ ಮೇಲೆ ಕೃಷಿಜೀವನ ಸಾಗಿಸಿದ್ದಾರೆ. ಅವರ ಅಕ್ಕ ಮಾದಮ್ಮ ದಾವಣಗೆರೆಯಲ್ಲಿದ್ದಾರೆ. ರವಿಕುಮಾರ್‌ರ ಒಬ್ಬ ತಂಗಿ ಅಕಾಲಿಕವಾಗಿ ನಿಧನರಾದರು.
ಬೇಳೂರು ಸುದರ್ಶನ ಟಿಪ್ಪಣಿಗಳು
ನಾನು ೧೯೯೦ರಲ್ಲಿ ಎಬಿವಿಪಿ ಕೆಲಸ ಬಿಟ್ಟು ಸಂಸಾರ ಆರಂಭಿಸಿದ ಮರುವರ್ಷವೇ ರವಿಕುಮಾರ್ ಎಬಿವಿಪಿಯಲ್ಲಿ ತನ್ನ ಸಾಮಾಜಿಕ ಸೇವೆಯ ಸಂಸಾರ ಆರಂಭಿಸಿದವರು! ಆದ್ದರಿಂದ ಎಬಿವಿಪಿ ಲೆಕ್ಕದಲ್ಲಿ ನನಗೂ ಅವರಿಗೂ ಒಂದು ಪೀಳಿಗೆಯ ವ್ಯತ್ಯಾಸವೇ ಇದೆ ಎನ್ನಬಹುದು. ಆದರೆ ಬೆಂಗಳೂರಿನಲ್ಲಿ ನಾನಿರುವ ಇಪ್ಪತ್ತು ವರ್ಷಗಳಲ್ಲಿ ರವಿಕುಮಾರ್ ಜೊತೆಗೆ ಎಷ್ಟೋ ಸಲ ಚರ್ಚಿಸಿದ್ದೇನೆ. ಅವರಲ್ಲಿ ಎಲ್ಲರನ್ನೂ ಸಹೃದಯತೆಯಿಂದ ಕಾಣುವ ಮನಸ್ಸನ್ನು ಕಂಡಿದ್ದೇನೆ.
ಎಬಿವಿಪಿಯಿಂದ ರಾಜಕೀಯ ರಂಗಕ್ಕೆ ಬಂದಿರುವ ರವಿಕುಮಾರ್ ತಮ್ಮ ಸಹಜ ವರ್ತನೆಗಳನ್ನೇ ಉಳಿಸಿಕೊಂಡು ಹೋಗಬೇಕು ಮತ್ತು ಸಮಾಜಮುಖಿಯಾಗಿ ಹತ್ತು ಹಲವು ಹೊಣೆಗಾರಿಕೆಗಳನ್ನು ನಿಭಾಯಿಸಬೇಕು ಎಂದು ಮೊನ್ನೆ ಅವರನ್ನು ಅಭಿನಂದಿಸಲು ನಡೆದ ಕಾರ್ಯಕ್ರಮದಲ್ಲಿ ಅವರ ಮೊದಲ ಆರೆಸೆಸ್ ಸ್ನೇಹಿತ, ಆರೆಸೆಸ್‌ನ ಅಖಿಲ ಭಾರತ ವ್ಯವಸ್ಥಾ ಪ್ರಮುಖ ಶ್ರೀ ಮಂಗೇಶ್ ಭೇಂಡೆ ಆಶಿಸಿದ್ದಾರೆ. ಇಡೀ ಸಭೆಯಲ್ಲಿ ಧ್ವನಿತವಾಗಿದ್ದೂ ಇದೇ ಆಶಯ. ರವಿಕುಮಾರ್ ಸ್ನೇಹಜಾಲದ ಪರಿಣಾಮವಾಗಿಯೇ ಅಂದು ಮಿಥಿಕ್ ಸೊಸೈಟಿಯ (ರಾಜಕೀಯ ಸಭಿಕರಿಲ್ಲದೆಯೇ) ಸಭಾಂಗಣ ಕಿಕ್ಕಿರಿದಿತ್ತು.
ನಿಜವಾಗಿಯೂ ಕಡುಬಡತನದಲ್ಲೇ ಬೆಳೆದು, ಬಡತನದ ಸುಖದಲ್ಲೇ ಸಮಾಜಸೇವೆ, ವಿದ್ಯಾರ್ಥಿ ಚಳವಳಿಗಳಲ್ಲಿ ಭಾಗವಹಿಸಿದ ರವಿಕುಮಾರ್‌ಗೆ ಅವರ ರಾಜಕೀಯ ಪ್ರವೇಶದ ಹಂತದಲ್ಲಿ ಇದಕ್ಕಿಂತ ಹೆಚ್ಚು ತಲೆ ತಿನ್ನುವುದು ಬೇಡ! ಆದರೆ ರವಿಕುಮಾರ್‌ಗೆ ರಾಜಕೀಯ ರಂಗವು ಅವರ ಸಮಾಜಸೇವೆಯ ಹಸಿವನ್ನು ಹೆಚ್ಚಿಸಲಿ ಎಂದು ಹೇಳದೇ ಇರುವುದೂ ಬೇಡ!
ಈ ಬ್ಲಾಗನ್ನು ಬರೆಯಲು ಮುಖ್ಯ ಕಾರಣ: ಎಬಿವಿಪಿಯಿಂದ ರಾಜಕೀಯ ರಂಗ ಪ್ರವೇಶಿಸಿದ ಪ್ರಮುಖರೊಬ್ಬರನ್ನು ಮೊದಲ ಹೆಜ್ಜೆಗಳಿಂದಲೇ ಗುರುತಿಸುವ ಉದ್ದೇಶ. ಈ ಹಿಂದೆಯೂ ಹಲವರು ಎಬಿವಿಪಿಯಿಂದ ರಾಜಕೀ ರಂಗ ಪ್ರವೇಶಿಸಿದ್ದಾರೆ. ಅವರನ್ನೆಲ್ಲ ಹೀಗೆ ಸಂದರ್ಶನ ಮಾಡಿ ದಾಖಲಿಸುವ ಅವಕಾಶ ಸಿಕ್ಕಿರಲಿಲ್ಲ. ಇದು ಪ್ರಚಾರಕ್ಕೆ ಬರೆದಿದ್ದಲ್ಲ; ಹೊಣೆಗಾರಿಕೆಗಳನ್ನು, ಸಾಮಾಜಿಕ ಉತ್ತರದಾಯುತ್ವವನ್ನು ಡಿಜಿಟಲ್ ಆಗಿ ಖಾಯಮ್ಮಾಗಿ ದಾಖಲಿಸಲು!
ಅಭಿನಂದನೆಗಳು ರವಿಕುಮಾರ್! ನಿಮ್ಮ ಮೇಲೆ ಅಪಾರ ನಿರೀಕ್ಷೆ ಇದೆ; ಭರವಸೆಯೂ ಇದೆ. ರಾಜಕೀಯ ರಂಗದ ಆಮಿಷಗಳು ನಿಮ್ಮನ್ನು ಪರೀಕ್ಷಿಸಬಹುದೇ ಎಂಬ ಕುತೂಹಲ, ಆತಂಕವೂ ಇದೆ. ನಿಮ್ಮೆಲ್ಲ ರಚನಾತ್ಮಕ – ಸಮಾಜಮುಖಿ ಹೆಜ್ಜೆಗಳಿಗೆ ನಮ್ಮ ಬೆಂಬಲ ಇದೆ.