ಭರಮಸಾಗರ ಭರಮಸಾಗರ ಮರೆವೆನೇ ನಾ ನಿನ್ನನು ಎಂದು ತನ್ನೂರಿನ ಬಗ್ಗೆಯೇ ನಗರೀಕರಣದ ಹಾಡು ಬರೆದ ಅರಾಸೇಯವರನ್ನು ನಾನು ನೋಡಿದ್ದೂ ಭರಮಸಾಗರದಲ್ಲೇ. ನನ್ನ ಆಗಿನ ಹಿರಿಯ ಮಿತ್ರ, ಕವಿ ಶ್ರೀ ಕಣಜನಹಳ್ಳಿ ನಾಗರಾಜರ ಆಧ್ಯಾತ್ಮಿಕ ಗುರುವಾಗಿದ್ದ ಅರಾಸೇಯವರನ್ನು ಭೇಟಿಯಾದ ದಿನ ನನಗೆ ಇನ್ನೂ ಚೆನ್ನಾಗಿ ನೆನಪಿದೆ. ದಾವಣಗೆರೆಯಲ್ಲಿ ಒಬ್ಬ ಅನಾಥನಂತೆ ಬದುಕುತ್ತಿದ್ದ ನನ್ನನ್ನು ಕಣಜಹಳ್ಳಿ ನಾಗರಾಜ್ ಕರೆದು ಸಾಂತ್ವನ ಹೇಳಿದ್ದರು. ಬದುಕಿನ ಮೂಲಸೂತ್ರಗಳ ಬಗ್ಗೆ ನನಗೆ ಕಲಿಸಿಕೊಟ್ಟು, ನನ್ನನ್ನು ಮನೆಯಲ್ಲೇ ಮೂರ್‍ನಾಲ್ಕು ದಿನ ಇಟ್ಟುಕೊಂಡಿದ್ದರು. ಅವರ ಹಳ್ಳಿಯ ಊಟ, ವಾತಾವರಣದಲ್ಲಿ ನಾನು ನನ್ನ ಅಶಾಂತ ಮನಸ್ಸನ್ನು ಸರಿಮಾಡಿಕೊಂಡಿದ್ದೆ.
ಅದಾಗಿ ಅರಾಸೇ ಪರಿಚಯವಾದ ಮೇಲೆ ಕೇಳಬೇಕೆ? ಆಗಾಗ ಅವರ ಮೆನೆಗೆ ಹೋಗುತ್ತಿದ್ದೆ. ಇಬ್ಬರೂ ಸಂಜೆ ಹೆದ್ದಾರಿಗುಂಟ ವಾಕಿಂಗ್ ಹೋಗುತ್ತಿದ್ದೆವು. ಒಂದು ದಿನ ಅವರು ಸಿಗರೇಟ್ ಎಳೆಯುತ್ತ `ನಿನ್ನ ಹೃದಯ ಬೆಣಚುಕಲ್ಲಿನದೆ?’ ಎಂದು ಪ್ರಶ್ನಿಸಿದರು. `ಇಲ್ಲವಲ್ಲ ಸರ್, ಯಾಕೆ?’ ಎಂದು ಕೇಳಿದೆ. ಒಂದು ದಮ್ ಎಳೆದ ಮೇಲೆ `ನಿನ್ನಂಥ ಯುವಕರ ಹೃದಯಗಳು ಹೆಚ್ಚಾಗಿ ಬೆಣಚುಕಲ್ಲಿನಿಂದ ಆಗಿರುವುದನ್ನು ನಾನು ಕಂಡಿದ್ದೇನೆ. ಯಾವುದೋ ಪ್ರೇಮ ಪ್ರಕರಣದಲ್ಲಿ ಸಿಲುಕಿ ಅದು ವಿಫಲವಾದರೆ ಅವರ ಹೃದಯ ಬೇಗ ಒಡೆದುಹೋಗುತ್ತದೆ. ಅಂಥ ಹೃದಯಗಳೆಲ್ಲ ಬೆಣಚುಕಲ್ಲಿನದೇ ಇರಬೇಕು !’ ಎಂದು ಅವರು ಗಂಭೀರವಾಗಿ ಉತ್ತರಿಸಿದ್ದರು.
ಅದಾಗಿ ಹಲವು ವರ್ಷಗಳ ಕಾಲ ನಾನು ಅವರ ಸ್ನೇಹವನ್ನು ಮುಂದುವರಿಸಿದೆ; ಶಿರಸಿಯಲ್ಲಿದ್ದಾಗ ಅವರಿಂದ ಲೇಖನಗಳನ್ನು ಬರೆಯಿಸಿ ತರಿಸಿ ಪ್ರಕಟಿಸಿದೆ. ಮುದ್ದಾದ ಅಕ್ಷರಗಳಲ್ಲಿ ಅವರು ಬರೆಯುತ್ತಿದ್ದ ಲೇಖನಗಳು ಕೇವಲ ಹಾಸ್ಯವಲ್ಲ, ಬದುಕಿನ ಇತರೆ ಆಯಾಮಗಳನ್ನೂ ನವಿರಾಗಿ ಬಿಡಿಸುತ್ತಿದ್ದವು.
ಅರಾಸೇ ಒಬ್ಬ ವೇದಾಂತಿ. ಅವರು ವೇದ, ಉಪನಿಷತ್, ಭಗವದ್ಗೀತೆಗಳನ್ನು ಆಳವಾಗಿ ಓದಿ ಅರಿತಿದ್ದ ಮಹಾನ್ ಆಧ್ಯಾತ್ಮಿಕ ವ್ಯಕ್ತಿ. ಮನೆಯ ಆರ್ಥಿಕ ಸಂಕಷ್ಟಗಳ ಬಗ್ಗೆ ಎಂದೂ ವ್ಯಥಿಸದೆ, ಬಂದವರಿಗೆ ಪುಷ್ಕಳ ಊಟ ಹಾಕಿ ಕಳಿಸುತ್ತಿದ್ದ ಅವರು ನನ್ನನ್ನು ತಮ್ಮ ಮಗನಂತೆ ಕಂಡು, ಮಾರ್ಗದರ್ಶನ ಮಾಡಿದ್ದರು. ಒಂದೊಮ್ಮೆ ರಂಗನಾಥಸ್ವಾಮಿ ದೇಗುಲವಿರುವ ಕೋಮಾರನಹಳ್ಳಿಯ ದತ್ತಪೀಠದಲ್ಲಿ ನಾನೂ (೧೯೭೬) ಕೆಲ ಕಾಲ ಇದ್ದೆ. ಅವರೂ ಇದೇ ದತ್ತಪೀಠದ ಅನುಯಾಯಿ ಎಂದು ತಿಳಿದು ನನಗೆ ತುಂಬಾ ಖುಷಿಯಾಗಿತ್ತು.
ನನ್ನ ದಾವಣಗೆರೆಯ ಕಷ್ಟದ ದಿನಗಳನ್ನು ಸಹನೀಯವಾಗಿಸಿದ, ಎಷ್ಟೇ ದೂರದಲ್ಲಿದ್ದರೂ ನಾನಿದ್ದೀನಿ ಎಂಬ ಭರವಸೆಯನ್ನು ಮೂಡಿಸಿದ ಅರಾಸೇಯವರ ಚರಣಗಳಿಗೆ ನನ್ನ ಅಂತಿಮ ನಮನ.