(೧೯೮೭ ನವೆಂಬರ್ ಉತ್ಥಾನ ಪತ್ರಿಕೆಯಲ್ಲಿ ಪ್ರಕಟಿತ ಈ ಲೇಖನವನ್ನು ತಮಾಶೆಗಾಗಿ ಪ್ರಕಟಿಸುತ್ತಿದ್ದೇನೆ. ೨೮ ವರ್ಷಗಳ ಹಿಂದೆಯೂ ನಾನು ಇಂಧನದ ಬಗ್ಗೆಯೇ ನನ್ನ ಆಸಕ್ತಿ ಬೆಳೆಸಿಕೊಂಡಿದ್ದೆ ಎನ್ನುವುದು ಅಚ್ಚರಿಯ ವಿಷಯ! ಇದರಲ್ಲಿ ಇರಬಹುದಾದ ಬಾಲಿಶತನಕ್ಕೆ, ಲೋಪಗಳಿಗೆ ನಾನೇ ಹೊಣೆ.)
ಅದೊಂದು ಶತಮಾನಗಳ ಕನಸು. ಮನುಷ್ಯ ಚಿರಂತನ ಶಕ್ತಿಯನ್ನು ಪಡೆಯಲು ಶ್ರಮಿಸಿದ ಕಥೆ – ವ್ಯಥೆಗಳು ಇತಿಹಾಸದಲ್ಲಿನ ವೀರಗಾಥೆಗಳು . ಎಲ್ಲೋ ಯಾರೋ ನಿರಂತರವಾಗಿ ಶಕ್ತಿಯನ್ನು ‘ಹುಟ್ಟಿಸುವ’ ಪ್ರಯತ್ನದಲ್ಲಿ ಯಶ ಪಡೆದರೆಂಬ ಸುದ್ದಿಗಳು. ಆದರೆ ಯಾವುದೂ ಈಗ ಲಭ್ಯವಿಲ್ಲ, ಚಿಂತೆಯಿಲ್ಲ.
ಭಾರತೀಯರೇ ಆದ , ಸಾಗರ ವಿಜ್ಞಾನಿ ಜಿ. ಶ್ರೀನಿವಾಸನ್ ಮತ್ತು ಅವರ ಮಗ ಆದಿತ್ಯ (ಎಲೆಕ್ಟ್ರಿಕಲ್ ಇಂಜಿನಿಯರ್) – ಚಿರಂತನ ಶಕ್ತಿಯನ್ನೇನೂ ಹೊಂದದಿದ್ದರೂ, ಆ ಕನಸನ್ನು ನನಸಾಗಿಸುವ ಪ್ರಯತ್ನದಲ್ಲಿ ದೈತ್ಯ ಹೆಜ್ಜೆಯನ್ನಿಟ್ಟಿದ್ದಾರೆ. ‘ಚಿಮ್ಮುಕಣಗಳ ಮೋಟರ್’ (ಚಾಲಕ ಯಂತ್ರ) ಮತ್ತು ‘ನಿಷ್ಟ್ರತಿಕ್ರಿಯಾತ್ಮಕ ವಿದ್ಯುತ್ ಉತ್ಪಾದಕ ಯಂತ್ರ’ – ಇವೆರಡೂ ನಮ್ಮ ಹೆಮ್ಮೆಯ ವಿಜ್ಞಾನಿಗಳು ಕಂಡುಹಿಡಿದಿರುವ ಕ್ರಾಂತಿಕಾರಿ ಯಂತ್ರಗಳು. ಇತ್ತೀಚೆಗಷ್ಟೇ ಪಶ್ಚಿಮ ಜರ್ಮನಿಯ ಹಾನೋವರ್ ನಲ್ಲಿ ನಡೆದ ಗುರುತ್ವ ಶಕ್ತಿ ಕುರಿತ ಅಂತರರಾಷ್ಟ್ರೀಯ ಕಾಂಗ್ರೆಸ್ ನಲ್ಲಿ ಈ ಯಂತ್ರಗಳು ಪ್ರದರ್ಶಿತಗೊಂಡು ಎಲ್ಲರನ್ನು ಸಂತಸದ ಕಡಲಲ್ಲಿ ಮುಳುಗಿಸಿವೆ – ಕ್ಷಮಿಸಿ – ತಿರುಗಿಸಿವೆ..!
ಸಂಪ್ರದಾಯ ಮುರಿದ ಹೊಸ ಸಿದ್ಧಾಂತ
ಸಾಂಪ್ರದಾಯಿಕ ಮೋಟರ್ ಗಳಲ್ಲಿ ಚೋದಕ ಅಯಸ್ಕಾಂತ ಕ್ಷೇತ್ರದ ಅಗತ್ಯ ನೂರಕ್ಕೆ ನೂರರಷ್ಟು. ಈ ಚೋದಕ ಕ್ಷೇತ್ರದಿಂದ ಭ್ರಾಮಕ ಶಕ್ತಿ (Torque) ಯನ್ನು ಪಡೆದ ಮೋಟರ್ ನ ಅಕ್ಷಯಭಾಗ ತಿರುಗುತ್ತದೆ. ಇಲ್ಲಿ ಸಾಕಷ್ಟು ಪ್ರಮಾಣದ ಅಭಿಮುಖ ‘ವಿದ್ಯುತ್ ಪ್ರವಾಹ ಪ್ರಚೋದಿತ ಬಲ’ (Electro motive force ) ವೂ ಉತ್ಪತ್ತಿಯಾಗುವುದರಿಂದ ಶಕ್ತಿಯ ಒಟ್ಟಾರೆ ಉತ್ಪಾದನೆಯಲ್ಲಿ ಕಡಿತವಾಗುವುದು ಸಹಜ. ಆದರೆ ಶ್ರೀನಿವಾಸನ್, ಆದಿತ್ಯರು ತಯಾರಿಸಿದ ಮೋಟರ್ ನಲ್ಲಿ ಈ ಭ್ರಾಮಕ ಶಕ್ತಿಯಾಗಲಿ, ಅಭಿಮುಖ e.m.f. ಆಗಲೀ ನಾಪತ್ತೆ! ಯಾಕೆಂದರೆ ಇವುಗಳಲ್ಲಿ ಉಪಯೋಗಿಸಿರುವ ತಂತ್ರವೇ ಹೊಸತು.
ಸಾಮಾನ್ಯವಾಗಿ ವಿದ್ಯುತ್ ಉತ್ಪಾದಿಸುವ ಆಂತರ್ಯದಲ್ಲಡೆಗಿದ ಶಕ್ತಿಯನ್ನು ಯಾರೂ ಹೊರತೆಗೆಯುವದಿಲ್ಲ. ಗರಗರ ತಿರುಗುವ (ಕೇಂದ್ರಾಪಗಾಮಿ) ತಟ್ಟೆಯೊಳಗಿನ ವಿದ್ಯುತ್ ಉತ್ಪಾದನಾ ಸಾಮರ್ಥ್ಯವುಳ್ಳ ಕಣಗಳಿಗೆ ವಿದ್ಯುತ್ ಸಹಾಯದಿಂದ ಪ್ರಚೋದನೆ ಒದಗಿಸಿದರೆ ಅವೂ ತಮ್ಮಲ್ಲಿ ಸಂಗ್ರಹವಾದ ಶಕ್ತಿಯನ್ನು ಹೊರಗೆಡವುತ್ತದೆ. ಇಲ್ಲಿ ವಿದ್ಯುತ್ ಉತ್ಪಾದಕ ವಸ್ತುಗಳೇ ಪ್ರಚೋದನಾ ಕ್ರಿಯೆಯನ್ನೂ ತಮಗೆ ತಾವೇ ಸೃಜಿಸಿಕೊಳ್ಳುವುದರಿಂದ ಅಭಿಮುಖ e.m.f ಉಂಟಾಗಲು ಸಾಧ್ಯವೇ ಇಲ್ಲ. ಹೀಗೆ ಶಕ್ತಿ ಚಿಮ್ಮುವ ಕಣಗಳ ಬಗ್ಗೆ ಒಂದು ತತ್ವಅಡಗಿದೆ. ಅತಿ ಹೆಚ್ಚು ಸಾಂದ್ರತೆಯ ವಿದ್ಯುತ್ ಪ್ರೇರೇಪಿತ ಕಣಗಳನ್ನು ಅರಳಿಸಿದರೆ, ಕಣಸಾಮರ್ಥ್ಯದಲ್ಲಿ ಇಳಿತವಾಗಿ ಹೆಚ್ಚಳ ಸಾಧಿಸಿ ರಭಸದಿಂದ ಹೊರಚಿಮ್ಮುತ್ತದೆ.
ನಾಪತ್ತೆ : ಗರಿಷ್ಠ ಅದ್ವೈತ
ಇಲ್ಲೇ ಸಾಧನೆ ಅಡಗಿರುವುದು. ಇದುವರೆಗೆ ಕುಂಡ ಹಿಡಿದ ಎಲ್ಲಾ ಯಂತ್ರಗಳೂ ತಮಗೆ ಪೂರೈಕೆ ಒಂದು ರೂಪದ ಶಕ್ತಿಗಿಂತ ಕಡಿಮೆ ಪ್ರಮಾಣದಲ್ಲಿ ಇನ್ನೊಂದು ರೂಪದ ಶಕ್ತಿಯನ್ನು ಉತ್ಪಾದಿಸುತ್ತಿದ್ದವು. ಅಂದರೆ ಇವುಗಳ ಸಾಮರ್ಥ್ಯವನ್ನು ಅನುಪಾತದಲ್ಲಿ ಹೇಳುವುದಾದರೆ ಒಂದು: ಒಂದಕ್ಕಿಂತ ಕಡಿಮೆ (1:<1 ) ಹೀಗಾಗಿ ಶೇಕಡಾ ೧೦೦ರಷ್ಟು ಶಕ್ತಿಯನ್ನು ಹೊರ ತೆಗೆಯುವುದೇ ಕಷ್ಟವಾಗಿರುವಾಗ, ಈ ವಿಜ್ಞಾನಿಗಳು ಹೇಳುವುದೇನು ಗೊತ್ತೇ..? ಅವರು ತಯಾರಿಸಿದ ಯಂತ್ರಗಳ ಸಾಮರ್ಥ್ಯ ಈ ‘ಗರಿಷ್ಠ ಅದ್ವೈತ ಸಿದ್ಧಾಂತ’ ದ ಪ್ರಕಾರ (Theory of over unity) 1:1 ಕ್ಕಿಂತ ಜಾಸ್ತಿ, ಅಂದರೆ ಒಳಬಿಟ್ಟ ಶಕ್ತಿಗಿಂತ ಹೆಚ್ಚು ಪಾಲು ಶಕ್ತಿ ಹೊರಬರುತ್ತದೆ.! ಅವರ ಅಂದಾಜಿನಂತೆ ಈ ಹೊಸ ಸಂಶೋಧನೆಗಳು ತಕ್ಷಣ ಜೀವನವಿಧಾನಗಳಲ್ಲಿ ಅಳವಡಿಸಲ್ಪಟ್ಟರೆ ಇಂದಿನ ಶಕ್ತಿ ಸಮಸ್ಯೆಯ ಗಡಿ ಮೂರುಪಟ್ಟು ದೂರವಾಗುತ್ತದೆ.
ಹಾಗಾದರೆ ಈ ಯಂತ್ರಗಳು ಎಷ್ಟರ ಮಟ್ಟಿಗೆ ನಮ್ಮ ನಿತ್ಯ ಉಪಯೋಗಿ ಪರಿಕರಗಳಿಗೆ ಸಹಾಯ ಮಾಡುತ್ತವೆಂದು ನೋಡೋಣ.
ಸೋವಿ ಪ್ರಯಾಣ
ಉದಾಹರಣೆಗೆ ‘ಕಾರು’ ನಮ್ಮದಾಗಲಿ ಕಾರು ಚಲಿಸಲು ಬೇಕಾದ ಬ್ಯಾಟರಿಯ ಸಾಮರ್ಥ್ಯವನ್ನು ಮೂರುಪಟ್ಟು ಹೆಚ್ಚಿಸುವ ಚಿಮ್ಮುಕಣಗಳ ಮೋಟರ್ (Charge Impulse Motor ) ನ್ನು ಕಾರಿಗೆ ಜೋಡಿಸೋಣ. ಹೀಗೆ ಚಾಲನೆಗೊಂಡ ಕಾರು ಘಂಟೆಗೆ ೪೦ ಕಿಲೋಮೀಟರುಗಳಷ್ಟು ವೇಗದಲ್ಲಿ ಸಾಗುತ್ತಿದೆಯೆನ್ನಿ. ಚಲಿಸುವ ಕಾರಿನ ‘ಚಲನ’ದ ಆಧಾರದಿಂದ ಯಾಂತ್ರಿಕ ಬಲ ಪಡೆದುಕೊಳ್ಳುವ ‘ನಿಷ್ಟ್ರತಿಕ್ರಿಯಾತ್ಮಕ ವಿದ್ಯುದುತ್ಪಾದಕ’ (RE-actionless genrater) ವು ಬ್ಯಾಟರಿಯನ್ನು ಮತ್ತೆ ವಿದ್ಯುತ್ ಕಣಗಳಿಂದ (charge ) ತುಂಬುತ್ತದೆ. ಇಲ್ಲಿ ಬ್ಯಾಟರಿಯು ಕಳೆದುಕೊಳ್ಳುವ ವೇಗಕ್ಕಿಂತ ಬ್ಯಾಟರಿಯಲ್ಲಿ ಸಂಗ್ರಹವಾಗುವ ವಿದ್ಯುತ್ ಠೇವಣಿಯ ವೇಗ ಮೂರುಪಟ್ಟು ಹೆಚ್ಚು! ಅರ್ಥಾತ್ ಕಾರು ಸಲಿಲವಷ್ಟೇಅಲ್ಲ .ಸರ್ವ ತಂತ್ರ ಸ್ವತಂತ್ರ; ಸೂರ್ಯ ಚಂದ್ರರವರೆಗೆ ಸೋವಿ ಪ್ರಯಾಣ! ಕಡಿಮೆ ವೋಲ್ಟೇಜ್ ಇರುವ ಹೆಚ್ಚು ವಿದ್ಯುತ್ ಶಕ್ತಿ ಹೊಂದಿರುವ ವ್ಯವಸ್ಥೆಯನ್ನೂ ಈ ಯಂತ್ರಗಳಿಂದ ಪಡೆಯಬಹುದು. ಇಂತಹ ಸುವ್ಯವಸ್ಥಿತ ಪರಿಕರಗಳಿಂದ ಒಟ್ಟಾರೆ ಶೇ. ೪೦ರಷ್ಟು ವಿದ್ಯುತ್ತನ್ನು ಪುನರುತ್ಪಾದಿಸಬಹುದು.
ಇತ್ತೀಚಿಗೆ ಜಲಜನಕವನ್ನು ಇಂಧನವನ್ನಾಗಿ ಉಪಯೋಗಿಸುವ ಬಗ್ಗೆ ಹೆಚ್ಚಿನ ಸಂಶೋಧನೆಗಳಾಗುತ್ತಿದೆ. ಆದರೆ ಜಲಜನಕವನ್ನು ನೀರಿನ, ವಿದ್ಯುತ್ ವಿಭಜನಾಕ್ರಿಯೆಯಿಂದ ಪಡೆಯುವುದು ದುಬಾರಿಯಾಗಿತ್ತು. ಈಗ ಈ ಶೇಕಡಾ ೬೬ರ ಸೋಡಿ ಸೋವಿಯಾಗಲು ಸಹಕರಿಸುತ್ತದೆ. ಅಂದರೆ ಇಂಧನ ಸಮಸ್ಯೆಗೆ ಪರೋಕ್ಷವಾಗಿ ಸಹಾಯ ಹಸ್ತ ನೀಡುವ ಪ್ರತ್ಯಕ್ಷ ಅವತಾರಗಳೇ ಈ ಮೋಟರ್ – ಜನರೇಟರುಗಳು ಎಂದಾಯಿತು.
ಸಬ್ ಮೆರೀನ್ ಗಳಲ್ಲಿ ಇರಲೇಬೇಕಾದ ಆಮ್ಲಜನಕದ ಉತ್ಪಾದನೆಯೂ ಈ ಯಂತ್ರಗಳಿಂದ ಸರಳಗೊಳಿಸಲ್ಪಟ್ಟಿದೆ. ಡೀಸೆಲ್ ಇಂಜಿನ್ ನಿಂದ ಬ್ಯಾಟರಿಗಳನ್ನೂ ಚಾರ್ಜ್ ಮಾಡಬೇಕಾಗುವ ಈ ಸಂದರ್ಭದಲ್ಲಿ ಇಂಜಿನ್ ಗಳಿಗೆ ಆಮ್ಲಜನಕ ತೀರಾ ಅವಶ್ಯಕ. ಆದರೆ ಸಮುದ್ರತಳದಲ್ಲಿ ಆಮ್ಲಜನಕ ಸಿಗುವುದಾದರೂ ಎಲ್ಲಿ? ನೀರಿನ ವಿಭಜನೆಯೇ ಗತಿ. ಇದು ಈ ಮೋಟರ್ – ಜನರೇಟರ್ ಗಳಿಂದ ತೀರಾ ಸುಲಭ. ಯಂತ್ರಗಳ ಭಾರಿ ಪ್ರಮಾಣವೂ ಕುಗ್ಗಿ ಸಬ್ ಮೆರೀನ್ ಇನ್ನಷ್ಟು (ಶೇ. ೪೦ರಷ್ಟು ಹೆಚ್ಚು) ಆರಾಮದಾಯಕವಾಗಿರುತ್ತದೆ. ಗರಿಷ್ಠ ೩೦ಗಂಟೆಗಳು ಮಾತ್ರ ನೀರಿನೋಳಗದೆ ಇರಬಹುದೆಂಬ ನಿಯಮ ಸಬ್ ಮೇರಿನ್ ಗಳಿಗೆ ಸಲ್ಲುವುದಿಲ್ಲ. ಯಾನದ ಸಮಯ ಸುಖವಾಗಿದೆ!
ನವೋನ್ವೇಷ
ಈಗ ಅಮೇರಿಕಾದ ಕ್ಯಾಲಿಫೋರ್ನಿಯಾದಲ್ಲಿ ಮೂರು ಕೋಟಿ ರೂಪಾಯಿಗಳ ವೆಚ್ಚದ ಕೈಗಾರಿಕೋಪಯೋಗಿ ಮೋಟರ್ – ಜನರೇಟರ್ ಗಳನ್ನೂ ತಯಾರಿಸಲು ಶ್ರೀನಿವಾಸನ್, ಆದಿತ್ಯ ಶ್ರಮಿಸುತ್ತಿದ್ದಾರೆ. ಹಾಗಂತ ಗುರುತ್ವ ಕೇಂದ್ರ ಬಲವನ್ನು ಶಕ್ತಿಯಾಗಿ ಪರಿವರ್ತಿಸುವುದು ಭಾರತೀಯರಿಗೆ ಹೊಸದೇನಲ್ಲ . ಮಹಾರಾಷ್ಟ್ರದ ಘಟ್ಟ ಪ್ರದೇಶಗಳಲ್ಲಿ ರೈಲು ಬಂಡಿಗಳು ಕೆಳಮುಖವಾಗಿ ಸಾಗುವ ಸಮಯದಲ್ಲಿ ಗಾಲಿಗಳಿಗೆ ವಿದ್ಯುದುತ್ಪಾದಕಗಳನ್ನು ಜೋಡಿಸಿ ವಿದ್ಯುತ್ ಉತ್ಪಾದಿಸಿ ಅದು ನೆತ್ತಿಯಂಚಿಗೇ ಸಾಗಿದ ತಂತಿಗಳ ಮೂಲಕ- ಊರು -ಮನೆ -ಕೇರಿ ಶಾಲೆಗಳಿಗೆ ರವಾನಿಸಲಾಗುತ್ತಿದೆ!
‘ಚಿರಂತನ ಶಕ್ತಿ’ಯನ್ನು ಪಡೆಯುವ ದುಸ್ಸಾಹಸದಲ್ಲಿ ಹೊಸ ಹೆಜ್ಜೆಗಳಿಟ್ಟ ಶ್ರೀನಿವಾಸನ್ , ಆದಿತ್ಯರಿಂದ ನಮ್ಮೆಲ್ಲ ಸಮಸ್ಯೆಗಳೂ ಬಗೆಹರಿವುದೇ? -ಎಂಬ ಪ್ರಶ್ನೆ ಮಾತ್ರ ಚಿರಂತವಲ್ಲ .
ಅವರು ಈಗಾಗಲೇ ಉತ್ತರವನ್ನು ಹುಡುಕಿ ತೆಗೆಯುತ್ತಿದ್ದಾರೆ.