ಬಾಲ್ಯದ ದಿನಗಳನ್ನು ಹಳ್ಳಿಯಲ್ಲಿಯೇ ಕಳೆದು ಈಗ ನಗರವಾಸಿಗಳಾಗಿರುವ ನನ್ನಂಥ ಹಲವರಿಗೆ ಶೌಚಾಲಯ ಎಂದರೆ ಅಚ್ಚರಿ ಮತ್ತು ಲಕ್ಷುರಿ. ಮಳೆ – ಬೇಸಗೆ – ಚಳಿಯೆನ್ನದೆ ನಾವು ಚೊಂಬು ಹಿಡಿದು ಧರೆ (ಮನೆಯ ಹಿಂಬದಿಯ ಏರು ಹತ್ತಿದರೆ ಸಿಗುವ ಕಾಡುಸಹಿತದ ಪ್ರದೇಶ) ಹತ್ತಿದರೆ ಯಾವುದೋ ದೊಡ್ಡ ಮರದ ಬುಡದಲ್ಲೋ, ಗಿಡಗಂಟಿಗಳ ಸಂದಿಯಲ್ಲೋ ನಮ್ಮ ಮಲಬಾಧೆ ತೀರಿಸಿಕೊಂಡು ಬರುವುದು ನಿತ್ಯಸಹಜ ಕೃತ್ಯ. ಆಗಲೂ ಶೌಚಾಲಯ ಇದ್ದ ಮನೆಗಳಿದ್ದವು; ಆದರೆ ನಮ್ಮಂಥವರ ಮನೆಗಳಲ್ಲಿ ಕಾಡೆಂಬ ಬಯಲೇ ಶೌಚಾಲಯ! ಈಗ ಕಾಂಕ್ರೀಟು ಕಾಡಿನ ನಡುವೆ ಕಮೋಡುಗಳ ಕ್ರಾಂತಿಯ ನಡುವೆ ಬದುಕುತ್ತಿರುವ ನನ್ನಂಥವರಿಗೆ ಈ ಕೆಳಗಿನ ಸಂಗತಿಗಳು ಕುತೂಹಲ ಹುಟ್ಟಿಸುತ್ತವೆ:
- ಎರಡು ವರ್ಷಗಳ ಹಿಂದೆ ರಾಜಕಾರಣಿಯೊಬ್ಬರು ನಿರಂತರವಾಗಿ ಗೆದ್ದು ಬರುತ್ತಿರುವ ಜೇವರ್ಗಿ ಎಂಬ ತಾಲೂಕು ಕೇಂದ್ರವನ್ನು ಬಸ್ಸಿನಲ್ಲಿ ಪಯಣಿಸುತ್ತ ಕಂಡೆ. ಸಂಜೆ ನಾಲ್ಕರ ಆ ಹೊತ್ತಿನಲ್ಲಿ ನೂರಾರು ಮಹಿಳೆಯರು ಚೊಂಬು ಹಿಡಿದು ಬಯಲಿನತ್ತ ಸರಸರ ನಡೆಯುತ್ತಿದ್ದರು.
- ಇತ್ತೀಚೆಗಷ್ಟೆ (ಜೂನ್ 2014) ಉತ್ತರಪ್ರದೇಶದಲ್ಲಿ ಬಯಲು ಶೌಚಾಲಯಕ್ಕೆ ಹೋದ ಇಬ್ಬರು ಹೆಣ್ಣುಮಕ್ಕಳ ಮೇಲೆ ಅತ್ಯಾಚಾರ ಎಸಗಿ ಅವರನ್ನು ಮರಕ್ಕೆ ನೇತು ಹಾಕಿ ಸಾಯಿಸಿದ ಸುದ್ದಿ ನಮ್ಮೆಲ್ಲರನ್ನೂ ಆತಂಕಕ್ಕೆ ತಳ್ಳಿದೆ.
- ಶಾಲೆಗಳಲ್ಲಿ ಶೌಚಾಲಯಗಳಿರಬೇಕು; ಅದರಲ್ಲೂ 2015ರ ಆಗಸ್ಟ್ 15ರ ಹೊತ್ತಿಗೆ ವಿದ್ಯಾನಿಯರಿಗೆ ಶೌಚಾಲಯ ಇಲ್ಲದ ಶಾಲೆ ಇರಲೇಕೂಡದು ಎಂದು ಈಗಿನ ಪ್ರಧಾನಮಂತ್ರಿ ನರೇಂದ್ರ ಮೋದಿ ಘೋಷಿಸಿದ್ದಾರೆ.
- ಭಾರತದ ಜನಸಂಖ್ಯೆಯ ಅರ್ಧದಷ್ಟು ಜನರಿಗೆ ಶೌಚಾಲಯವೇ ಇಲ್ಲ ಎಂದು ಹಲವು ವರದಿಗಳು ಬಿತ್ತರಿಸಿವೆ.
- ಶೌಚಾಲಯ ಇಲ್ಲದ ಮನೆಯಲ್ಲ ಇರಲಾರೆ ಎಂದು ಪಟನಾ ಜಿಲ್ಲೆಯ ಬಬ್ಲಿದೇವಿ ಗಂಡನ ಮನೆಯನ್ನೇ ತೊರೆದಿದ್ದು 2014ರ ನವೆಂಬರ್ ಕಥೆ; ಶೌಚಾಲಯ ಎನ್ನುವುದು ಗೌರವ, ನತೆ ಮತ್ತು ನೈರ್ಮಲ್ಯದ ಸಂಕೇತ ಎಂಬುದು ಅವಳ ವಾದ. ಛತ್ತೀಸ್ಗಢದಲ್ಲಿ ಇಂಥದ್ದೇ ಮಹಿಳೆಯೊಬ್ಬಳು ಗಂಡನಿಗೆ ವಿಚ್ಛೇದನದ ನೊಟೀಸು ಕೊಟ್ಟಿರುವುದು 2014ರ ಆಗಸ್ಟ್ ತಿಂಗಳ ಸುದ್ದಿ; ಮದುವೆಯಾದ ಎರಡನೇ ದಿನವೇ ಶೌಚಾಲಯ ಇಲ್ಲವೆಂದು ಗಂಡನ ಮನೆಯನ್ನು ತೊರೆದ ಅನಿತಾ ನರ್ರೆ ಎಂಬ ಗುಡ್ಡಗಾಡು ವನಿತೆಯ ಕಥೆ ಮಧ್ಯಪ್ರದೇಶದ ಬೇತುಲ್ ಜಿಲ್ಲೆಯ ವರದಿಯಾಗಿದ್ದು 2012ರ ಫೆಬ್ರುವರಿಯಲ್ಲಿ. ಅವಳ ದಿಟ್ಟತೆಗೆ ಮೆಚ್ಚಿ ಸುಲಭ್ ಶೌಚಾಲಯದ ಬಿಂದೇಶ್ವರ ಪಾಠಕ್ರವರು ಐದು ಲಕ್ಷ ರೂ.ಗಳ ಬಹುಮಾನ ನೀಡಿದ್ದೂ ಈಗ ಇತಿಹಾಸ. ಅದೇ ರಾಜ್ಯದ ಚಿಂದ್ವಾರಾ ಜಿಲ್ಲೆಯ ಸರಿತಾ ದೆಹಾರಿಯಾಯ್ ಕೂಡಾ ಇದೇ ರೀತಿ ತವರು ಮನೆಗೆ ವಾಪಸಾಗಿದ್ದು, ಒಂದೇ ತಿಂಗಳ ಒಳಗೆ ಅವಳ ಗಂಡ – ಮಾವ ಸೇರಿ ಶೌಚಾಲಯ ಕಟ್ಟಿಸಿದ್ದು 2014ರ ಏಪ್ರಿಲ್ ತಿಂಗಳ ಕಥೆ. ಹೀಗೆ ವನಿತೆಯರು ನಿಧಾನವಾಗಿ ದನಿ ಎತ್ತಿದ್ದಾರೆ. ಕುಡುಕನಲ್ಲದ ಗಂಡನಷ್ಟೇ ಅಲ್ಲ, ಶೌಚಾಲಯವಿರುವ ಮನೆಯನ್ನೇ ಅವರು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ.
- ಈ ಮಧ್ಯೆ (ಸೆಪ್ಟೆಂಬರ್ 2014) ಇನ್ನೊಂದು ವರದಿಗಳ ಸಂಕಲನವೇ ಬಂದಿದೆ: ಭಾರತದಲ್ಲಿ ಮಹಿಳೆಯರಿಗಿಂತ ರುಷರೇ ಹೆಚ್ಚಾಗಿ ಬಯಲು ಶೌಚಾಲಯದ ವಿರುದ್ಧ ಮನಸ್ಸು ಮಾಡಿಲ್ಲವಂತೆ. ಅವರಿಗೆ ಈಗಲೂ ಬಯಲು ಶೌಚಾಲಯವೇ ಇಷ್ಟವಂತೆ!
- ಮಲಹೊರುವ ಪದ್ಧತಿಯನ್ನು ನಿಷೇಧಿಸಿದ ಕಾನೂನು ಹಲವೆಡೆ ಇದೆ; ಆದರೆ ಅದರ ಜಾರಿ ಮಾತ್ರ ಆಗುತ್ತಿಲ್ಲ; ಬಳ್ಳಾರಿಯ ಸರ್ಕಾರಿ ಕಚೇರಿಯಲ್ಲೇ ವ್ಯಕ್ತಿಯೊಬ್ಬ ಯಾವುದೇ ರಕ್ಷಣಾ ಉಡುಗೆ ಇಲ್ಲದೆ ಮಲದ ಗುಂಡಿಯನ್ನು ಸ್ವಚ್ಛಗೊಳಿಸಿದ ವರದಿ ಇದೇ ವರ್ಷ ಬಂದಿದೆ.
ಭಾರತದ ಹಳ್ಳಿಗಳಲ್ಲಿ ಶೇ. 60ರಷ್ಟು, ನಗರಗಳಲ್ಲಿ ಶೇ. 10ರಷ್ಟು ಮನೆಗಳಲ್ಲಿ ಶೌಚಾಲಯವೇ ಇಲ್ಲ. ಇದಕ್ಕಿಂತ ಇನ್ನೊಂದು ದುರಂತ ಇನ್ನೊಂದಿಲ್ಲ. ಅಂದರೆ ವಿಶ್ವಸಂಸ್ಥೆಯ ಅಂಕಿ ಅಂಶಗಳ ಪ್ರಕಾರ ಒಟ್ಟು 66.50 ಕೋಟಿ ಜನರಿಗೆ ಖಾಸಗಿ ಶೌಚಾಲಯದ ಸೌಲಭ್ಯ ಇಲ್ಲವೇ ಇಲ್ಲ. ಆದರೆ ಈ ದೇಶದ ಶೇ. 63.2 ಮನೆಗಳಲ್ಲಿ ಮೊಬೈಲ್ ನ್ ಇದೆ! ಹೀಗಿದ್ದೂ ಮಹಿಳೆಯ ಮಾನಕ್ಕೇ ಅಪಾಯ, ನೈರ್ಮಲ್ಯದ ಕೊರತೆ, ಪರಿಸರ ಕಾಳಜಿಹೀನತೆ, ರಾಜಕೀಯ ದೃಢತೆಯ ಏರಿಳಿತ, ಸಾಮಾಜಿಕ ಮೂಢನಂಬಿಕೆಗಳು, ಭ್ರಷ್ಟಾಚಾರದಿಂದ ಸಂಪನ್ಮೂಲ ಸೋರಿಕೆ, ಅಸ್ಪೃಶ್ಯತೆ, ಮಲಹೊರುವಿಕೆ, ನಗರೀಕರಣ – ಇಂಥ ಹತ್ತು ಹಲವು ಕಾರಣಗಳಿಂದ ಶೌಚಾಲಯ ಅಭಿಯಾನ ಎಂಬುದು ಗೋಜಲುಗಳ, ಸವಾಲುಗಳ ಕಂತೆಯಾಗಿದೆ. ಈ ಸಮಸ್ಯೆಯನ್ನು ಬಿಡಿಸಿದಷ್ಟೂ ಮತ್ತೊಂದಿಷ್ಟು ಗೊಂದಲಗಳು ಕಾಣಿಸುತ್ತವೆ. ಮುಳ್ಳಿನ ಕಂಟಿಯ ಮೇಲೆ ಬಿದ್ದ ಬಟ್ಟೆಯಂತೆ! ಬಿಡಿಸಿಕೊಳ್ಳುವುದಕ್ಕೆ ತುಂಬಾ ಜಾಗರೂಕತೆ ಬೇಕು.
ಮೊದಲು ಸಮಸ್ಯೆಯ ವಿವಿಧ ಕೋನಗಳನ್ನು ಅರಿಯೋಣ. ಆಮೇಲೆ ಪರಿಹಾರದ ಯತ್ನಗಳನ್ನು ಚರ್ಚಿಸೋಣ. ಶೌಚಾಲಯದ ಸಂಗತಿ ಅತ್ಯಂತ ಸಂಕೀರ್ಣ ಮತ್ತು ಗಂಭೀರ ಎಂಬ ಅರಿವು ನಮಗಿರಲಿ.
ಮಲಹೊರುವ ಕ್ರೂರ ವ್ಯವಸ್ಥೆ
ಮೇಲ್ವರ್ಗದವರು ಬಳಸುವ ಶೌಚಾಲಯವನ್ನು ಕೆಳವರ್ಗದವರು ಶುದ್ಧೀಕರಿಸುವ, ಗುಂಡಿಯಲ್ಲಿದ್ದ ಮಲವನ್ನು ಎತ್ತಿ ಹೊರಗೆ ಒಯ್ಯುವ ಜಾತಿ ಆಧಾರಿತ ವ್ಯವಸ್ಥೆ ನಮ್ಮಲ್ಲಿ ಶತಮಾನಗಳಿಂದ ಇತ್ತು ಎಂಬ ಕಟುಸತ್ಯವನ್ನು ನಾವು ಒಪ್ಪಿಕೊಳ್ಳಲೇಬೇಕು. ಈಗ ಕರ್ನಾಟಕವೂ ಸೇರಿದಂತೆ ಹಲವು ರಾಜ್ಯಗಳಲ್ಲಿ ಮಲಹೊರುವ ಪದ್ಧತಿ ನಿಷೇಧಿಸಿ ಕಾನೂನು ಹೊರಡಿಸಲಾಗಿದೆ. 50ರ ದಶಕದಲ್ಲಿ ಸ್ವಾತಂತ್ರ್ಯ ಹೋರಾಟಗಾರ ಜಿ.ಎಸ್. ಲಕ್ಷ್ಮಣನ್ ಅಯ್ಯರ್ರವರು ತಾವು ಅಧ್ಯಕ್ಷರಾಗಿದ್ದ ಗೋಬಿಚೆಟ್ಟಿಪಾಳ್ಯಂ ಮುನಿಸಿಪಾಲಿಟಿಯಲ್ಲಿ ಮಲಹೊರುವ ಪದ್ಧತಿ ನಿಷೇಧಿಸಿದ್ದರು. ಭಾರತೀಯ ಜನಸಂದ ನೇತೃತ್ವದಲ್ಲಿದ್ದ, ಡಾ|| ವಿ.ಎಸ್. ಆಚಾರ್ಯ ಅಧ್ಯಕ್ಷರಾಗಿದ್ದ ಉಡುಪಿ ನಗರಸಭೆಯು 60ರ ದಶಕದಲ್ಲೇ ಈ ಕಾಯ್ದೆಯನ್ನು ಮಾಡಿತ್ತು.
ಕೇಂದ್ರ ಸರ್ಕಾರವು 1993ರಲ್ಲಿ ಮಲಹೊರುವ ಪದ್ಧತಿ ನಿಷೇಧ ಮತ್ತು ಒಣಸೌಚಾಲಯಗಳ ನಿಷೇಧ ಕಾಯ್ದೆ ಜಾರಿಗೆ ಬಂದರೂ, ನಂತರದ 20 ವರ್ಷಗಳಲ್ಲಿ (ಇಂದಿನವರೆಗೆ) ಯಾವುದೇ ಒಂದು ಪ್ರಕರಣವನ್ನೂ ದಾಖಲಿಸಿಲ್ಲ; ಉಲ್ಲಂಿಸುವವರಿಗೆ ಶಿಕ್ಷೆ ನೀಡಲಿಲ್ಲ ಎಂದರೆ ನಮ್ಮ ದೇಶದ ಕಾಯ್ದೆ ಜಾರಿಯ ದಕ್ಷತೆಯನ್ನು ನೀವೇ ಊಹಿಸಿ! ವ್ಯಕ್ತಿಗಳು ಮಲಹೊರುವುದನ್ನು ನಿಷೇಧಿಸುವ ಮತ್ತು ಅವರಿಗೆ ನರ್ವಸತಿ ಕಲ್ಪಿಸುವ ಕೇಂದ್ರದ ಹೊಸ ಕಾಯ್ದೆಯು ಜಾರಿಯಾಗಿದ್ದು 2013ರ ಸೆಪ್ಟೆಂಬರಿನಲ್ಲಿ! ಪರಿಶಿಷ್ಟ ಜಾತಿ ಮತ್ತು ವರ್ಗದ ಜನರ ಶೋಷಣೆಯನ್ನು ತಪ್ಪಿಸಲು ಈ ಕಾಯ್ದೆಯು ಜಾರಿಯಾಯಿತು. ನೈರ್ಮಲ್ಯರಹಿತ ಶೌಚಾಲಯಗಳನ್ನೇ ಈ ಕಾಯ್ದೆಯು ನಿಷೇಧಿಸಿದೆ. ಅಲ್ಲದೆ ಇಂಥ ಶೌಚಾಲಯಗಳ ಶುದ್ಧೀಕರಣಕ್ಕಾಗಿ ಯಾರನ್ನೂ ನೇಮಿಸಿಕೊಳ್ಳುವಂತಿಲ್ಲ. ಇಂಥ ಮಲ ಹೊರುವವ ಜನಗಣತಿಯನ್ನೂ ಮುನಿಸಿಪಾಲಿಟಿಗಳು ಮಾಡಬೇಕು. ಅಂಥ ವ್ಯಕ್ತಿ ಮತ್ತು ಕುಟುಂಬಗಳಿಗೆ ಕೌಶಲ್ಯ ತರಬೇತಿ, ಉದ್ಯೋಗಾವಕಾಶ ನೀಡಬೇಕು; ಒಂದು ಮನೆ ಕಟ್ಟಿಕೊಡಬೇಕು; ಉದ್ಯಮಸಾಲ ನೀಡಬೇಕು; ಕಾನೂನಿನ ಮತ್ತು ಕಾರ್ಯಕ್ರಮಗಳ ನೆರವು ನೀಡಬೇಕು; ಮಲಹೊರುವ ವ್ಯವಸ್ಥೆಯನ್ನು ಹೊಂದಿರುವ ವ್ಯಕ್ತಿ ಮತ್ತು ಸಂಸ್ಥೆಗಳ ವಿರುದ್ಧ ಕಾನೂನು ಕ್ರಮ ಕೈಗೊಂಡು ಶಿಕ್ಷೆ ನೀಡಬೇಕು – ಹೀಗೆ ಈ ಕಾಯ್ದೆಯು ಹಲವು ಉತ್ತಮ ಅಂಶಗಳನ್ನು ಹೊಂದಿದೆ. ಈ ಕಾಯ್ದೆಯ ಉಲ್ಲಂನೆಯು ಶಿಕ್ಷಾರ್ಹ ಅಪರಾಧ; ಜಾಮೀನು ಇಲ್ಲ.
ಇಂಥ ಕ್ರೂರ ವ್ಯವಸ್ಥೆಯನ್ನು ಕಂಡೇ ಶ್ರೀ ಬಿಂದೇಶ್ವರ ಪಾಠಕ್ `ಸುಲಭ್ ಶೌಚಾಲಯ’ದ ಪರಿಕಲ್ಪನೆಯನ್ನು 1970ರ ದಶಕದಲ್ಲೇ ಆರಂಭಿಸಿದರು. ಸುಲಭ್ ಶೌಚಾಲಯಗಳಿ ಈಗ ಭಾರತದ ಎಲ್ಲೆಡೆ ಕಾಣುತ್ತವೆ. ಇಂಥ ಶೌಚಾಲಯಗಳನ್ನು ನಿರ್ವಹಿಸುವವರಿಗೆ ಕಿರುಶುಲ್ಕ ಕೊಟ್ಟು ಶೌಚಾಲಯಗಳನ್ನು ಬಳಸಬಹುದು. ಬಸ್ನಿಲ್ದಾಣಗಳಲ್ಲಿ, ಹೆದ್ದಾರಿಗಳಲ್ಲಿ, ನಗರಗಳ ಬಡಾವಣೆಗಳಲ್ಲಿ ಸುಲಭ್ ಶೌಚಾಲಯಗಳಿವೆ. ಶೌಚಾಲಯ ನಿರ್ವಹಣೆ ಸರ್ಕಾರದ ಹೊಣೆಗಾರಿಕೆಯಾದರೂ, ಸಾರ್ವಜನಿಕರ, ಸ್ವಯಂಸೇವಾ ಸಂಸ್ಥೆಗಳ ಭಾಗಿತ್ವ ಇಲ್ಲದೆ ಯಶಸ್ಸು ಅಸಾಧ್ಯ. ಆದ್ದರಿಂದ ಬಿಂದೇಶ್ವರ ಪಾಠಕ್ರವರ ಈ ಯತ್ನ ಶ್ಲಾನೀಯ. ತಮ್ಮ `ದಿ ರೋಡ್ ಟು ಫ್ರೀಡಂ’ (ಸ್ವಾತಂತ್ರ್ಯದ ಹಾದಿ) ಸ್ತಕದಲ್ಲಿ ಅವರು ಸುಲಭ್ ಶೌಚಾಲಯದ ಹಿಂದಿನ ಇತಿಹಾಸವನ್ನೇ ಸೂಕ್ಷ್ಮವಾಗಿ ಬಿಚ್ಚಿಟ್ಟಿದ್ದಾರೆ. 90ರ ದಶಕದಲ್ಲಿ ಬಂದ ಈ ಸ್ತಕದಲ್ಲಿ ಇರುವ ಅಂಕಿ ಅಂಶಗಳು ಹಳತಾದರೂ, ಪಾಠಕ್ ವಿವರಿಸಿದ ಸಾಮಾಜಿಕ ಸನ್ನಿವೇಶಗಳನ್ನು ಅಲ್ಲಗಳೆಯುವಂತೆಯೇ ಇಲ್ಲ; ಸುಲಭ್ ಶೌಚಾಲಯ ಕ್ರಾಂತಿಯ ನಂತರವೂ ಆಗಬೇಕಾದ ಶೌಚಾಲಯದ ಕೆಲಸಗಳು ಸಾಕಷ್ಟಿವೆ ಎಂಬುದು ಹೊಸ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ಕಾಳಜಿಯಿಂದಲೇ ಸ್ಪಷ್ಟವಾಗುತ್ತದೆ! ಶ್ರೀ ಬಿಂದೇಶ್ವರ ಪಾಠಕ್ ಹೇಳುವಂತೆ 2015ರ ಹೊಸ್ತಿಲಿನಲ್ಲಿರುವ ನಮ್ಮ ದೇಶಕ್ಕೆ ಇನ್ನೂ 12 ಕೋಟಿ ಶೌಚಾಲಯಗಳು ಬೇಕು. ಉತ್ತರಪ್ರದೇಶದ ಇಬ್ಬರು ಹೆಣ್ಣುಮಕ್ಕಳು ಶೌಚಕ್ಕೆಂದು ಬಯಲಿಗೆ ಹೋದಾಗಲೇ ಭೀಭತ್ಸ ಅತ್ಯಾಚಾರ, ಕೊಲೆ ನಡೆದಿದ್ದನ್ನು ಕಂಡು ಸ್ಪಂದಿಸಿದ ಪಾಠಕ್ ತಂಡ ಕತ್ರಾ ಸಾದತ್ಗಂಜ್ ಹಳ್ಳಿಯ 108 ಮನೆಗಳಲ್ಲಿ ಶೌಚಾಲಯ ಕಟ್ಟಿಸುವ ಕೆಲಸ ಆರಂಭಿಸಿದೆ.
ಶೌಚಾಲಯ ಯೋಜನೆಗಳ ಸರಣಿ
ಹಾಗಂತ ಭಾರತದಲ್ಲಿ ಶೌಚಾಲಯಗಳನ್ನು ಕಟ್ಟಿಸಿಕೊಡುವ, ನಿರ್ಮಾಣಕ್ಕೆ ನೆರವಾಗುವ ಯೋಜನೆಗಳು ಬಂದೇ ಇಲ್ಲ ಎಂದೇನಿಲ್ಲ. ಕರ್ನಾಟಕವನ್ನೇ ತೆಗೆದುಕೊಂಡರೆ, ನಿರ್ಮಲ ಶೌಚಾಲಯ ನಿರ್ಮಲ ಗ್ರಾಮ ಯೋಜನೆಗಳು ಬಂದಿದ್ದೇ ಶೌಚಾಲಯ ಕ್ರಾಂತಿಯನ್ನು ಹುಟ್ಟುಹಾಕಲು. ಧಾರವಾಡ ಜಿಲ್ಲೆಯ ನೂಲ್ವಿ ಗ್ರಾಮಪಂಚಾಯತ್ನಿಂದ ಹಿಡಿದು ರಾಜ್ಯದ ನೂರಾರು ಗ್ರಾಮಗಳನ್ನು ನಿರ್ಮಲ ಗ್ರಾಮಗಳೆಂದು ೋಷಿಸಲಾಗಿದೆ. ಇವುಗಳಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ರಸ್ಕಾರಗಳು, ಧನಸಹಾಯ ದೊರೆತಿದೆ. ಆದರೆ ಹೀಗೆ ನಿರ್ಮಲವಾದ ಗ್ರಾಮಗಳು ಮತ್ತೆ ಕೊಳಕಾದ ಉದಾಹರಣೆಗಳೂ ಇವೆ. ಇದಕ್ಕೆ ಮುಖ್ಯ ಕಾರಣ: ನಿರ್ಮಲ ಗ್ರಾಮವಾದ ಮೇಲೆ ಅದನ್ನು ನಿರ್ವಹಣೆ ಮಾಡುವಲ್ಲಿ ಇರುವ ಇಚ್ಛಾಶಕ್ತಿಯ ಕೊರತೆ. ಜೊತೆಗೇ ಮರುವರ್ಷ ಈ ನೈರ್ಮಲ್ಯವನ್ನು ಕಾಪಾಡಿಕೊಂಡು ಬರುವ ಹೊಣೆ ಅಲ್ಲಿಯ ನಿವಾಸಿಗಳದ್ದೇ. ಜನರಲ್ಲಿ ಜಾಗೃತಿ ತರದೇ ಕೇವಲ ಶೌಚಾಲಯಗಳನ್ನು ಕಟ್ಟಿಸುವುದರಿಂದ, ನತ್ಯಾಜ್ಯ ವ್ಯವಸ್ಥೆಯನ್ನು ರೂಪಿಸುವುದರಿಂದ ಏನೂ ಪ್ರಯೋಜನವಿಲ್ಲ ಎಂಬುದು ಖಚಿತ.
ನನ್ನ ಪುಟ್ಟ ಅನುಭವವನ್ನೇ ಹೇಳುತ್ತೇನೆ: ಖಾಸಗಿ ಸಂಸ್ಥೆಯೊಂದರ ಉದ್ಯೋಗಿಯಾಗಿದ್ದ ನಾನು ಬಳ್ಳಾರಿ ಜಿಲ್ಲೆಯ ಮೂರು ಹಳ್ಳಿಗಳ ನತ್ಯಾಜ್ಯ ನಿರ್ವಹಣೆಯ ಉಸ್ತುವಾರಿಯನ್ನು ವಹಿಸಿಕೊಂಡೆ. ಈ ಹಳ್ಳಿಗಳ ಸಮೀಕ್ಷೆಗಾಗಿ ಬೆಂಗಳೂರಿನಿಂದ ತಜ್ಞರ ತಂಡಗಳನ್ನು ಕರೆಸಿದೆ. ಹಳ್ಳಿಗಳಲ್ಲಿ ಇರುವ ಕಸದ ಪ್ರಮಾಣ, ಶೌಚಾಲಯಗಳ ಬಗ್ಗೆ ಮಾಹಿತಿ ಕಲೆ ಹಾಕಿಸಿದೆ. ಆಮೇಲೆ ಹಳ್ಳಿಗಳಲ್ಲಿ ಸಭೆ ನಡೆಸಿ ಅವರಿಗೆ ಕಸ ನಿರ್ವಹಣೆ ಮತ್ತು ನೈರ್ಮಲ್ಯದ ಪಾಠ ಹೇಳಿಸಿದೆ. ಇಷ್ಟೆಲ್ಲ ಆದಮೇಲೆ ಸ್ಥಳೀಯ ಯುವಕ ಮಂಡಳಿಗೆ ನತ್ಯಾಜ್ಯ ನಿರ್ವಹಣೆಯ ಹೊಣೆಗಾರಿಕೆಯನ್ನು ವಹಿಸಿದೆ. ಎಂಟು ವರ್ಷಗಳಾದ ಮೇಲೆ ಈ ಯೋಜನೆಯು ಹತ್ತು ಹಳ್ಳಿಗಳಿಗೆ ವಿಸ್ತರಿಸಿದೆ, ನೂರಾರು ಕುಟುಂಬಗಳಿಗೆ ಉದ್ಯೋಗ ಒದಗಿಸಿದೆ; ನೈರ್ಮಲ್ಯದ ಪ್ರಮಾಣವೂ ಗಮನಾರ್ಹವಾಗಿ ಹೆಚ್ಚಾಗಿದೆ ಎಂದು ತಿಳಿದುಬಂದಿದೆ. ಸ್ಥಳೀಯ ನಿರ್ವಹಣೆ, ಜನಭಾಗಿತ್ವ ಇಲ್ಲದಿದ್ದರೆ ಇಂಥ ಯಾವ ಯೋಜನೆಗಳೂ ಯಶ ಪಡೆಯಲಾರವು.
ಈಗ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು 2015ರ ಆಗಸ್ಟ್ ಹೊತ್ತಿಗೆ ದೇಶದ ಎಲ್ಲಾ ಶಾಲೆಗಳಲ್ಲೂ ಶೌಚಾಲಯ ಹೊಂದುವ ಗುರಿಯನ್ನು ದೇಶದ ಮುಂದೆ ಇಟ್ಟಿದ್ದಾರೆ. ಅಲ್ಲದೇ ಮಹಾತ್ಮಾ ಗಾಂಧೀಜಿಯವರ 150ನೇ ಜನ್ಮದಿನಾಚರಣೆಯ ವರ್ಷವಾದ 2019ರ ಹೊತ್ತಿಗೆ ಸ್ವಚ್ಛ ಭಾರತವನ್ನು ಹೊಂದುವ ಗುರಿಯನ್ನೂ ಮೋದಿ ಪ್ರಕಟಿಸಿ ಕಾರ್ಯೋನ್ಮುಖರಾಗಿದ್ದಾರೆ. ಅವರ ಸದಾಶಯಕ್ಕೆ ಎಲ್ಲ ರಾಜಕೀಯ ಪಕ್ಷಗಳಿಂದ ಆಯ್ಕೆಯಾದ ಜನಪ್ರತಿನಿಧಿಗಳು, ಸಾಮಾಜಿಕ ಕಾರ್ಯಕರ್ತರು ಬೆಂಬಲ ನೀಡಿ ಕಾರ್ಯೋನ್ಮುಖರಾಗಬೇಕಿದೆ. ಪ್ರಧಾನಮಂತ್ರಿಯವರು ಕೆಂಕೋಟೆಯಲ್ಲಿ ನಿಂತು ಇಡೀ ಜಗತ್ತಿಗೆ ಕೇಳಿಸುವ ಹಾಗೆ ಶೌಚಾಲಯದ ಬಗ್ಗೆ ಮಾತನಾಡಿದ್ದಾರೆ ಎಂದರೆ ಅವರ ಮಾತಿಗೆ ಗೌರವ ಕೊಡಬೇಡವೇ?ಅವರ ಮನದ ಮಾತಿಗೆ ಎಲ್ಲ ಸಂಸದರೂ, ಶಾಸಕರೂ ದನಿಗೂಡಿಸಬೇಕಿದೆ. ಅದಾಗದಿದ್ದರೆ ಮೋದಿ ಒಬ್ಬರೇ ಏನು ಮಾಡಿಯಾರು? ಆಡಳಿತ ನಡೆಸುವುದಷ್ಟೇ ಅಲ್ಲ, ಜನರ ಹೊಣೆಗಾರಿಕೆಯನ್ನು ನೆನಪಿಸುವುದೂ ಸರ್ಕಾರದ ಕೆಲಸ ಎಂಬುದನ್ನು ಹಲವು ದಶಕಗಳ ನಂತರ ಪ್ರಧಾನಿಯೊಬ್ಬರು ಮನದಟ್ಟು ಮಾಡುತ್ತಿದ್ದಾರೆ. ಇದನ್ನು ಧನಾತ್ಮಕವಾಗಿ ಸ್ವೀಕರಿಸಬೇಕಾದ್ದು ಜನರ ಹೊಣೆಗಾರಿಕೆಯಾಗಿದೆ.
ಕರ್ನಾಟಕದ ಹೊಸ ಯತ್ನಗಳು
ಆಡಳಿತಾರೂಢ ರಾಜ್ಯಸರ್ಕಾರದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಶ್ರೀ ಎಚ್.ಕೆ. ಪಾಟೀಲರು ರಾಜ್ಯದಲ್ಲಿ ಶೌಚಾಲಯ ಕ್ರಾಂತಿಗೆ ಮುಂದಾಗಿದ್ದಾರೆ. 2015ರ ಜನವರಿ 26ರ ಹೊತ್ತಿಗೆ ಒಂದು ಸಾವಿರ ಹಳ್ಳಿಗಳನ್ನು ಬಯಲು ಶೌಚಾಲಯ ಮುಕ್ತ ಮಾಡುವ ಗುರಿ ಅವರದು. ನಂತರದ ಆಗಸ್ಟ್ 15ರ ಹೊತ್ತಿಗೆ 10 ಸಾವಿರ, ಅಕ್ಟೋಬರ್ 2ರ ಹೊತ್ತಿಗೆ 20 ಸಾವಿರ ಹಳ್ಳಿಗಳನ್ನು ಮುಕ್ತಗೊಳಿಸುವ ಮಹತ್ವಾಕಾಂಕ್ಷೆಯ ಗುರಿಯನ್ನೂ ಅವರು ಹೊಂದಿದ್ದಾರೆ. ಒಟ್ಟಾರೆ 59 ಸಾವಿರ ಹಳ್ಳಿಗಳಲ್ಲಿ 5 ಲಕ್ಷ ಶೌಚಾಲಯಗಳನ್ನು ಕಟ್ಟಿಸುವುದಕ್ಕೆ ಸರ್ಕರ ಮುಂದಾಗಿದೆ. ಕೇಂದ್ರ ಸರ್ಕಾರವೂ ಶೌಚಾಲಯಗಳ ನಿರ್ಮಾಣಕ್ಕೆ ನೀಡುವ ಅನುದಾನದ ಮೊತ್ತವನ್ನು 12 ಸಾವಿರ ರೂ.ಗಳಿಗೆ ಹೆಚ್ಚಿಸಿದೆ. `ಪ್ರಧಾನಮಂತ್ರಿ ಇರಲಿ, ಮುಖ್ಯಮಂತ್ರಿ ಇರಲಿ, ಎಲ್ಲರೂ ಇಂಥ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲೇಬೇಕು; ಯಾರು ಮಾಡಿದರೇನು, ಎಲ್ಲವೂ ಸಮಾಜದ ಕೆಲಸಗಳೇ’ ಎಂದು ಅವರು ಹೇಳಿರುವುದು ಈ ಸಾಮಾಜಿಕ ಆಂದೋಲನದಲ್ಲಿ ಪಕ್ಷಭೇದಕ್ಕೆ ಅವಕಾಶವಿಲ್ಲ ಎಂಬುದರ ಸಂಕೇತ ಎನ್ನಬಹುದೆ?
ರಾಜ್ಯಸರ್ಕಾರದ ಶೌಚಾಲಯ, ಸ್ನಾನಗೃಹ ನಿರ್ಮಾಣದ ಯೋಜನೆಗಳೇನೋ ಒಳ್ಳೆಯದೇ. ಆದರೆ ಅವುಗಳನ್ನು ಇನ್ನಷ್ಟು ಪರಿಸರ ಸ್ನೇಹಿಯಾಗಿ ನಿರ್ಮಿಸುವ ಹೊಣೆಯನ್ನು ಮರೆಯಲಾಗದು. ಶೌಚತ್ಯಾಜ್ಯಗಳನ್ನು, ಸ್ನಾನದ ನೀರನ್ನು ಸಮರ್ಥವಾಗಿ ಮರುಬಳಕೆ ಮಾಡಿಕೊಳ್ಳುವ ತಂತ್ರಜ್ಞಾನ ಕೊಂಡಿಗಳನ್ನೂ ಈ ಯೋಜನೆಯಲ್ಲಿ ಅಳವಡಿಸದೇ ಇದ್ದರೆ ಇವು ಏಕೀಕೃತ ಪರಿಹಾರವಾಗಲಾರವು. ಸೌಲಭ್ಯ ಬೇರೆ, ಪರಿಸರ ಜಾಗೃತಿಯೇ ಬೇರೆ ಎಂದು ಪ್ರತ್ಯೇಕಿಸಿ ನೋಡುವ ದಿನಗಳು ಕಳೆದುಹೋಗಿವೆ. ಖಾಸಗಿ ಸಂಸ್ಥೆಯೊಂದಕ್ಕೆ ಶೌಚಾಲಯ ನಿರ್ಮಾಣದ ಗುತ್ತಿಗೆ ಕೊಟ್ಟು ಅಲ್ಲಿ ಪರಿಸರ ಚಿಂತನೆಯೇ ಇಲ್ಲದಿದ್ದರೆ ಅದು ದೊಡ್ಡ ಪಾರಿಸರಿಕ ದುರಂತಕ್ಕೆ ದಾರಿ ಮಾಡಿಕೊಡುತ್ತದೆ.
`ಇಂಥ ಫ್ಲಶ್ ಆಧಾರಿತ (ಮಲವಿಸರ್ಜನೆಯಾದ ಮೇಲೆ ಭಾರೀ ಪ್ರಮಾಣದ ನೀರನ್ನು ಹರಿಸಿ ಮಲವನ್ನು ಕಾಣದಂತೆ ಮಾಡುವ ಪಾಶ್ಚಾತ್ಯರ ಮಾದರಿ) ಶೌಚಾಲಯಗಳನ್ನು ಕಟ್ಟುವ ಬಗ್ಗೆ ಎಚ್ಚರಿಕೆ ವಹಿಸಬೇಕು’ ಎಂದು ದುಚೇರಿಯ ಸ್ವಯಂಸೇವಾ ಕಾರ್ಯಕರ್ತ ಎಸ್. ಪರಮಶಿವನ್ ಹೇಳಿದ್ದೂ ಇದೇ. 25 ವರ್ಷಗಳಿಂದ ಶೌಚಾಲಯಗಳನ್ನು ಕಟ್ಟುವ ಸೇವಾಕಾರ್ಯದಲ್ಲೇ ನಿರತರಾಗಿರುವ ಪರಮಶಿವನ್ ಹೇಳುವಂತೆ ಇಂಥ ಶೌಚಾಲಯಗಳ ತ್ಯಾಜ್ಯವು ಅಂತರ್ಜಲವನ್ನೇ ಮಲಿನ ಮಾಡುವ ಸಾಧ್ಯತೆಗಳಿವೆ. ನಾವು ಸಮುದಾಯಕ್ಕೆ ಅನುಕೂಲ ಮಾಡಲು ಹೋಗಿ ಅಪಾಯವನ್ನೇ ಎದುರುಹಾಕಿಕೊಳ್ಳಬೇಕೆ ಎಂದು ಅವರು ಪ್ರಶ್ನಿಸುತ್ತಾರೆ.ಅದಕ್ಕೆಂದೇ ಪರಮಶಿವನ್ 70 ಕಿಲೋ ತೂಗುವ 26500 ರೂ.ಗಳ ವೆಚ್ಚದ ಎಕೋಸ್ಯಾನ್ ಶೌಚಾಲಯಗಳನ್ನು ಸ್ಥಾಪಿಸುವ ಅಭಿಯಾನದಲ್ಲಿದ್ದಾರೆ.
ಏನೇ ಇದ್ದರೂ, ಮಂಡ್ಯ ಜಿಲ್ಲಾ ಪಂಚಾಯತ್ನಲ್ಲಿ ಈ ವರ್ಷವೇ 31 ಸಾವಿರಕ್ಕೂ ಹೆ ಚ್ಚು ಶೌಚಾಲಯಗಳನ್ನು ಕಟ್ಟಲಾಗಿದೆ; ಇನ್ನೂ 40 ಸಾವಿರ ಶೌಚಾಲಯಗಳನ್ನು ಕಟ್ಟುವ ಗುರಿ ಹೊಂದಲಾಗಿದೆ ಎಂಬ ಸುದ್ದಿ ಬಂದಿದೆ. ಇಂಥ ಸುದ್ದಿಗಳಿಂದ ಸರ್ಕಾರದ ಮೇಲೆ ನಂಬಿಕೆ ಹೆಚ್ಚಾಗುತ್ತದೆ. ಎಲ್ಲ ಜಿಲ್ಲೆಗಳಲ್ಲೂ ಮಂಡ್ಯ ಜಿ.ಪ. ಮುಖ್ಯ ಕಾರ್ಯಪಾಲಕ ಅಧಿಕಾರಿ ಶ್ರೀಮತಿ ರೋಹಿಣಿ ಸಿಂಧೂರಿಯಂಥ ಕ್ರಿಯಾಶೀಲೆ ಇರಬೇಕಿದೆ!
ಕರ್ನಾಟಕದಲ್ಲಿ ಶೌಚಾಲಯ ಲಭ್ಯತೆಯ ಹಕ್ಕು ಕಾಯ್ದೆಯೂ ಜಾರಿಯಾಗಲಿದೆ ಎಂಬ ಸುದ್ದಿ ಇದೆ. ಬಹುಶಃ ಇದು ಈ ದೇಶದಲ್ಲೇ ಇಂಥ ಮೊದಲ ಕಾಯ್ದೆ.
ಸ್ವಯಂಸೇವಾ ಯತ್ನಗಳು
ಮೈಸೂರು ಜಿಲ್ಲೆಯ ಹೆಗ್ಗಡದೇವನಕೋಟೆ ತಾಲೂಕಿನ ಸರಗೂರಿನಲ್ಲಿರುವ ಸ್ವಾಮಿ ವಿವೇಕಾನಂದ ಯುಥ್ ಮೂವ್ಮೆಂಟ್ನ ಆಸ್ಪತ್ರೆಯಲ್ಲೇ ವಿವಿಧ ಬಗೆಯ ಅಗ್ಗದ ಶೌಚಾಲಯಗಳ ಪ್ರಾತ್ಯಕ್ಷಿಕೆ ಇದೆ. ಊರಿನಲ್ಲಿ ನೈರ್ಮಲ್ಯ ಕಾಪಾಡಿಕೊಂಡರೆ ರೋಗ ಬರುವುದಿಲ್ಲ ಎಂದೇ ಈ ಸಂಟನೆಯ ಕಾರ್ಯಕರ್ತರು ಪ್ರಚಾರ ಮಾಡುತ್ತಾರೆ. ಯಾರಿಗಾದರೂ ಕಾಯಿಲೆ ಬಂದರೆ ಅವರ ಮನೆಗೇ ಹೋಗಿ ಸುತ್ತಮುತ್ತಲಿನ ವಾತಾವರಣವನ್ನು ಅಧ್ಯಯನ ಮಾಡುತ್ತಾರೆ. ಶೌಚಾಲಯದ, ಶುದ್ಧ ವಾತಾವರಣದ ಪಾಠ ಹೇಳುತ್ತಾರೆ. ಕಾಯಿಲೆಗೂ- ಕೊಳಕಿಗೂ ಸಂಬಂಧ ಇದೆ ಎಂದು ಗೊತ್ತಾದಾಗ ಜನರು ಸಹಜವಾಗಿಯೇ ಶೌಚಾಲಯ ಕಟ್ಟಿಸಲು ಮುಂದಾಗುತ್ತಾರೆ ಎನ್ನುವುದು ಈ ಕೇಂದ್ರದ ಮುಖ್ಯಸ್ಥರಾಗಿರುವ ಡಾ|| ಸೀತಾರಾಮ್ ಅವರ ಅಭಿಮತ. ಈ ಲೇಖನಕ್ಕಾಗಿ ಸರಗೂರಿಗೆ ಭೇಟಿ ನೀಡಿದಾಗ ಮಾಹಿತಿ ನೀಡಿದ ಅವರು `ಈಗ ಇಲ್ಲಿ ಒಂದು ಬಗೆಯ ಜಾಗೃತಿ ಮೂಡಿದೆ. ಜನರಿಗೆ ಶೌಚಾಲಯ ಯಾಕೆ ಬೇಕು ಎಂದು ವಿವರಿಸಿದೆಯೇ ಕಟ್ಟಿಸಿಕೊಟ್ಟರೆ ಏನೂ ಪ್ರಯೋಜನ ಇಲ್ಲ. ಅವರಾಗೇ ವಿಷಯ ಅರಿತರೆ ಮಾತ್ರ ನಿರ್ಮಲ ಗ್ರಾಮದ ಯೋಜನೆಗಳು ಯಶ ಕಾಣಬಹುದು. ಶೌಚಾಲಯಗಳನ್ನು ಕಟ್ಟುವುದು ಸುಲಭ. ನಿರ್ವಹಣೆ ಮಾಡುವುದು ತುಂಬಾ ಕಷ್ಟದ ಮತ್ತು ಸಮುದಾಯದ ಭಾಗಿತ್ವ ಬೇಡುವ ಕೆಲಸ’ ಎಂದು ಡಾ|| ಸೀತಾರಾಮ್ ವಿವರಿಸಿದರು. ಈ ಆಸ್ಪತ್ರೆಯ ಆವರಣದಲ್ಲೇ ಕಲಿಕೆಯ ತರಗತಿಯೂ ಇದೆ. ಅಲ್ಲಿನ ಗೋಡೆಗಳ ತುಂಬಾ ನೈರ್ಮಲ್ಯದ ಪಾಠಗಳನ್ನೇ ಚಿತ್ರಿಸಲಾಗಿದೆ. ಅನಕ್ಷರಸ್ತರೂ ಸುಲಭವಾಗಿ ತಿಳಿಯುವಂತೆ ಇಲ್ಲಿನ ಜಾಗೃತಿ ಕಾರ್ಯಕ್ರಮವನ್ನು ರೂಪಿಸಲಾಗಿದೆ.
ಬೆಂಗಳೂರಿನ ಅದಮ್ಯ ಚೇತನ ಸಂಸ್ಥೆಯು ದೂರದ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ರಾಮತೀರ್ಥದಲ್ಲಿ ಎಲ್ಲ ಮನೆಗಳಿಗೂ ಜೈವಿಕ ಅನಿಲ ಟಕಗಳನ್ನು ಮತ್ತು ಶೌಚಾಲಯಗಳನ್ನು ಸ್ಥಾಪಿಸಿಕೊಟ್ಟಿದೆ. ಇಲ್ಲಿ ಎಲ್ಲ ಶೌಚಾಲಯಗಳ ಹೊರಸುರಿ ಕೊಳವೆಯನ್ನು ಜೈವಿಕ ಅನಿಲದ ಟಕಕ್ಕೆ ಜೋಡಿಸಲಾಗಿದೆ. ಮೊದಮೊದಲು ಜನರು ಈ ಬಗ್ಗೆ ಕೊಂಚ ಸಂಕೋಚ ಹೊಂದಿದ್ದರು. ಆದರೆ ದನದ ಮತ್ತು ಮನುಷ್ಯರ ಮಲವೇ ಅನಿಲವಾಗಿ ಅಡುಗೆ ಮನೆಯಲ್ಲಿ ಬೆಂಕಿಯಾಯಿತೋ, ಅಲ್ಲಿಗೆ ಅವರ ಸಂಕೋಚ ಮುಗಿದಿದೆ!
ಮೈಸೂರಿನ ನ್ಯಾಶನಲ್ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ನ `ಕ್ರೆಸ್ಟ್’ (ಸೆಂಟರ್ ಫಾರ್ ರಿನ್ಯೂವಬಲ್ ಎನರ್ಜಿ ಸಸ್ಟೈನಬಲ್ ಟೆಕ್ನಾಲಜೀಸ್)ನ ನಿರ್ದೇಶಕ ಡಾ|| ಶ್ಯಾಮಸುಂದರ್ ಕರ್ನಾಟಕದ ನೂರಾರು ಕಡೆಗಳಲ್ಲಿ ಅಡುಗೆ ತ್ಯಾಜ್ಯ ಆಧಾರಿತ ಜೈವಿಕ ಅನಿಲ ಟಕಗಳನ್ನು ಸ್ಥಾಪಿಸಿ
ಇಂಥ ಹಲವು ಯತ್ನಗಳನ್ನು ಅಲ್ಲಲ್ಲಿ ಸ್ವಯಂಸೇವಾ ಸಂಸ್ಥೆಗಳು ಮಾಡಿದ್ದಿದೆ. ಆದರೆ ಎಲ್ಲೆಡೆಯೂ ಎಲ್ಲ ಶೌಚಾಲಯಗಳೂ ಬಳಸುವ ಸ್ಥಿತಿಯಲ್ಲೇ ಇವೆ ಎಂದು ಹೇಳುವುದು ಕಷ್ಟ.
ಎಕೋಸ್ಯಾನ್: ನೈರ್ಮಲ್ಯಕ್ಕೆ ಸೈ, ಕೃಷಿಗೂ ಜೈ!
ಶೌಚಾಲಯಗಳಲ್ಲಿ ಮನುಷ್ಯರು ವಿಸರ್ಜಿಸುವ ಮಲ ಮೂತ್ರ – ಎರಡೂ ಇಂಧನಗಳೇ! ಆದ್ದರಿಂದ ಮಲಮೂತ್ರಗಳನ್ನು ಬಳಸುವ ಬಗ್ಗೆ ಈಗ ಹೆಚ್ಚಿನ ಜಾಗೃತಿ ಮೂಡುತ್ತಿದೆ. ಮಲವಂತೂ ನತ್ಯಾಜ್ಯ. ಅದನ್ನು ಕೆಲವು ಜೈವಿಕ ಕ್ರಮಗಳಿಂದ ಗೊಬ್ಬರವಾಗಿ ಮಾಡುವುದು ಅತಿ ಸುಲಭದ ಕೆಲಸ. ಆದರೆ ಮೂತ್ರವನ್ನೂ ಬಳಸಬಹುದೇ? ಈ ಪ್ರಶ್ನೆಯನ್ನು ಕೇಳುವವರು ಈಗಲೂ ಇದ್ದಾರೆ.
ಹೀಗೆ ಮಲ ಮತ್ತು ಮೂತ್ರವನ್ನು ಪ್ರತ್ಯೇಕವಾಗಿ ಶೌಚಾಲಯದಲ್ಲೇ ಸಂಗ್ರಹಿಸಿ ಅದನ್ನು ವ್ಯವಸ್ಥಿತವಾಗಿ ಬಳಸುವ ವಿಧಾನವೇ `ಎಕೋಸ್ಯಾನ್’. ಅಂದರೆ ಪರಿಸರ ಆಧಾರಿತ ನೈರ್ಮಲ್ಯದ ವಿಧಾನ. ಇಂಥ ಶೌಚಾಲಯಗಳಲ್ಲಿ ಮಲ ಮತ್ತು ಮೂತ್ರವನ್ನು ಪ್ರತ್ಯೇಕವಾಗಿ ಸಂಗ್ರಹಿಸಸುವ ಕೋಠಿಗಳಿರುತ್ತವೆ. ಆದ್ದರಿಂದ ಈ ಶೌಚಾಲಯಗಳನ್ನು ಕೊಂಚ ಎತ್ತರದಲ್ಲಿ ನಿರ್ಮಿಸಿರುತ್ತಾರೆ (ನೆಲಮಟ್ಟದಲ್ಲೇ ತ್ಯಾಜ್ಯವನ್ನು ಸಂಗ್ರಹಿಸುವುದಕ್ಕಾಗಿ. ನೆಲದ ಮಟ್ಟಕ್ಕಿಂತ ಕೆಳಗೆ ತ್ಯಾಜ್ಯ ಸಂಗ್ರಹವಾದರೆ ಮತ್ತೆ ಮಾನವಶ್ರಮ ಬೇಕಲ್ಲವೆ? ಅದನ್ನು ತಪ್ಪಿಸಲು ಈ ಕ್ರಮ). ಮಲವು ನವಾಗಿಯೇ ಸಂಗ್ರಹವಾಗುತ್ತದೆ. ಕುಂಡೆ ತೊಳೆದ ನೀರೂ ಮೂತ್ರದೊಂದಿಗೆ ಸಂಗ್ರಹವಾಗುತ್ತದೆ.
ಬೆಂಗಳೂರಿನ ಗಾಂಧಿ ಕೃಷಿ ವಿಜ್ಞಾನ ಕೇಂದ್ರದಲ್ಲಿರುವ (ಜಿಕೆವಿಕೆ) ಕೃಷಿ ವಿಶ್ವವಿದ್ಯಾಲಯದ ಮಣ್ಣು ವಿಜ್ಞಾನ ಮತ್ತು ಕೃಷಿ ರಾಸಾಯನ ಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ|| ಸಿ.ಎ. ಶ್ರೀನಿವಾಸಮೂರ್ತಿ ನೇತೃತ್ವದ ಜಿ. ಶ್ರೀದೇವಿ, ಎಸ್. ಭಾಸ್ಕರ್ ಮತ್ತು ಎಸ್. ವಿಶ್ವನಾಥ್ – ಈ ವಿಜ್ಞಾನಿಗಳ ತಂಡವು ಈ ಕುರಿತು ಮಹತ್ವದ ಸಂಶೋಧನೆಗಳನ್ನು ಮಾಡಿದೆ. ಏಲಕ್ಕಿ ಬಾಳೆ ಕೃಷಿಯಲ್ಲಿ ಮಾನವ ಮೂತ್ರದ ಬಳಕೆಯ ಬಗ್ಗೆ ಸಂಶೋಧನೆ ಮಾಡಿದ ಈ ತಂಡವು `ಇಂಥ ಮೂತ್ರ ಪ್ರಯೋಗದಿಂದ ರಸಗೊಬ್ಬರಗಳ ಬಳಕೆಯ ಖರ್ಚು ಕಡಿಮೆಯಾಗುತ್ತದೆ; ಆದರೆ ಇಳುವರಿಯಲ್ಲಿ ಯಾವುದೇ ಕುಸಿತ ಕಂಡಿಲ್ಲ’ ಎಂದು ಅಭಿಪ್ರಾಯಪಟ್ಟಿದೆ. ಮಾನವ ಮೂತ್ರದ ವಾಸನೆ ಎಲ್ಲಿ, ಏಲಕ್ಕಿ ಬಾಳೆಯ ಮ ಎಲ್ಲಿ ಎಂದು ಪ್ರಶ್ನಿಸುವವರಿಗೆ ಇಲ್ಲಿ ಉತ್ತರವಿದೆ.
ಮೂತ್ರವೆಂಬ ಐಸಿರಿ
ಮೂತ್ರದಲ್ಲಿ ಶೇ. 95ರಷ್ಟು ನೀರೇ ಇರುತ್ತದೆ. ಇದರಲ್ಲಿ ಯೂರಿಯಾ ಮುಖ್ಯ ಅಂಶ. ಆಫ್ರಿಕಾ, ಉತ್ತರ ಯುರೋಪ್, ಭಾರತ, ಮಧ್ಯ ಅಮೆರಿಕಾ, ಅಮೆರಿಕಾಗಳಲ್ಲಿ ಮಾನವ ಮೂತ್ರವನ್ನು ಕೃಷಿಗಾಗಿ ಬಳಸುತ್ತಲೇ ಇದ್ದಾರೆ. ಪ್ರತಿಯೊಬ್ಬ ವ್ಯಕ್ತಿಯೂ ದಿನಕ್ಕೆ 1-2 ಲೀಟರ್ ಮೂತ್ರ ವಿಸರ್ಜನೆ ಮಾಡುವ ಅಂದಾಜಿದೆ. ಇದು ವರ್ಷದ ಲೆಕ್ಕದಲ್ಲಿ 300-400 ಚದರ ಮೀಟರ್ ಹೊಲಕ್ಕೆ ಸಾಕು ಎನ್ನುತ್ತದೆ ಸ್ಟಾಕ್ಹೋಮ್ ಎನ್ವಿರಾನ್ಮೆಂಟ್ ಇನ್ಸ್ಟಿಟ್ಯೂಟ್. `ನನಗಂತೂ ನನ್ನ ಹೂತೋಟದಲ್ಲಿ ಮೂತ್ರ ವಿಸರ್ಜನೆ ಮಾಡುವುದಕ್ಕೆ ಬೇಜಾರಿಲ್ಲ’ ಎಂದು ಸಾರಾ ಸ್ಟೀವ್ ಮೋಸ್ಕೋ ಎಂಬ ಕ್ಯಾಲಿರ್ನಿಯಾ ನಿವಾಸಿ ತಮ್ಮ ಬ್ಲಾಗಿನಲ್ಲಿ ಬರೆಯುತ್ತಾರೆ.
ಎಕೋಸ್ಯಾನ್ ಕುರಿತಂತೆ ಎಕೋಸ್ಯಾನ್ ಸರ್ವಿಸಸ್ ಫೌಂಡೇಶನ್ ಸಂಸ್ಥೆಯು ಮೂರು ದಿನಗಳ ತರಬೇತಿ ಶಿಬಿರವನ್ನು 2015ರ ಜುಲೈನಲ್ಲಿ ಸಂಟಿಸಿತ್ತು. ಅದಿರಲಿ, 2015 ಜನವರಿಯಲ್ಲಿ ಹನಾಯ್ನಲ್ಲಿ ಶೌಚಾಲಯ ಕೊಳೆನೀರಿನ ಕುರಿತಂತೆ ಅಂತಾರಾಷ್ಟ್ರೀಯ ಸಂಕಿರಣ ನಡೆಯಲಿದೆ.
ತಮಿಳುನಾಡು ಜಿಲ್ಲೆಯ ಕೃಷ್ಣಗಿರಿ ಜಿಲ್ಲೆಯ ಂಗವನಂತನಗರ ಗ್ರಾಮದಲ್ಲಿ ಯುನಿಸೆಫ್ ಬೆಂಬಲಿತ ಎಕೋಸ್ಯಾನ್ ಯೋಜನೆ ಜಾರಿಯಾಗಿದೆ. ಅಲ್ಲೀಗ ಬಯಲು ಶೌಚವೇ ಇಲ್ಲವಂತೆ. 2008ರಲ್ಲಿ ಆರಂಭವಾದ ಎಕೋಸ್ಯಾನ್ ಯೋಜನೆಯಿಂದ ಎಲ್ಲರಿಗೂ ಲಾಭ. ಶೌಚಾಲಯದಿಂದಾಗಿ ಕುಟುಂಬಗಳ ಖಾಸಗಿತನಕ್ಕೆ ರಕ್ಷಣೆ; ಮಲಮೂತ್ರಗಳ ಸೂಕ್ತ ಬಳಕೆಯಿಂದಾಗಿ ಮಲ್ಲಿಗೆ ಹೂವಿನ ಇಳುವರಿಯಲ್ಲಿ ಹೆಚ್ಚಳ! ಇಂಧನದ ಮೂಲ ಯಾವುದಾದರೇನು, ಮಲ್ಲಿಗೆ ಸೂಸುವುದು ಸುಗಂಧವನ್ನೇ ತಾನೆ?! ತಿಮ್ಮಾರ ಗ್ರಾಮ ಪಂಚಾಯತ್ನಲ್ಲಿ ಮೊದಲು ಮಕ್ಕಳೇ ಎಕೋಸ್ಯಾನ್ ಶೌಚಾಲಯಗಳನ್ನು ಬಳಸಿ ತಮ್ಮ ತಾಯ್ತಂದೆಯರಿಗೆ ತಿಳಿಹೇಳಿದರು.
ಉತ್ತರರಪ್ರದೇಶದ ಇಟಾವಾ ಜಿಲ್ಲೆಯ ಪಚ್ನಾದಾದ ಕಥೆ ಬೇರೆಯೇ. ಇಲ್ಲಿ ಯಮುನೆಯಲ್ಲದೆ ಚವಂಬಲ್, ಸಿಂಧ್, ಕುನ್ವರಿ, ಪಹುಜ್ ನದಿಗಳು ಹರಿಯುತ್ತವೆ. ಚಂಬಲ್ ಎಂದರೆ ಗೊತ್ತಲ್ಲ? ಡಕಾಯಿತರೇ ತುಂಬಿದ್ದ ಕಾಲವೂ ಇತ್ತು. ಈ ಪ್ರದೇಶದಲ್ಲಿ ಎಕೋಸ್ಯಾನ್ ಶೌಚಾಲಯಗಳ ಅಭಿಯಾನ ಆರಂಭವಾಯಿತು. ಅನಕ್ಷರತೆಯೇ ಹೆಚ್ಚಾಗಿರುವ ಇಲ್ಲಿ ಬದಲಾವಣೆ ನಿಧಾನವಾಗಬಹುದು ಎಂಬ ನಿರೀಕ್ಷೆಯೇ ಹುಸಿಯಾಯ್ತು ಎಂದು ಯಮುನಾ ಜಿಯೇ ಅಭಿಯಾನದ ಮನೋಜ್ ಮಿಶ್ರಾ ಬರೆದಿದ್ದಾರೆ. ಹಳ್ಳಿಯ ಮುಖ್ಯಸ್ಥ ಮುನ್ನಾ ಲಾಲ್ ಮೊದಲ ಶೌಚಾಲಯ ಕಟ್ಟಲು ಮುಂದಾಗಿದ್ದೇ ತಡ, ಅವರ ಹಾದಿಯನ್ನೇ ಎಲ್ಲರೂ ತುಳಿದರು. ಸ್ವಚ್ಛ ಭಾರತ ಅಭಿಯಾನ ನಡೆದಿರುವ ಈ ಹೊತ್ತಿನಲ್ಲಿ ಅನಕ್ಷರಸ್ತರ ಈ ಕ್ರಮ ಶ್ಲಾನೀಯ ಎಂದು ಮಿಶ್ರಾ ಹೇಳುತ್ತಾರೆ.
ಮಾನವ ಮೂತ್ರದ ಕುರಿತು 2010ರ ಜುಲೈನಲ್ಲೇ ಸೈಂಟಿಫಿಕ್ ಅಮೆರಿಕನ್ ಪತ್ರಿಕೆಯಲ್ಲಿ ಬಂದ ಸುದ್ದಿ ಇದು: ಫಿನ್ಲೆಂಡ್‌ನ ಪರಿಸರ ವಿಜ್ಞಾನಿಗಳಾದ ಪ್ರಧಾನ್ ಮತ್ತು ಹೀನೋನೆನ್ ತಾನ್ಸ್ಕಿಯವರು ಮಾನವ ಮೂತ್ರವನ್ನು ಮರದ ಬೂದಿಯೊಂದಿಗೆ ಬೆರೆಸಿ ಗೊಬ್ಬರವಾಗಿ ಬಳಸಿದರು; ಇದರಿಂದ ಸೌತೆಕಾಯಿ, ಎಲೆಕೋಸು ಮತ್ತು ಟೊಮ್ಯಾಟೋ ಬೆಳೆಯುವುದು ಲಾಭಕರ ಎಂದು ಖಚಿತಪಡಿಸಿಕೊಂಡರು. ಗಗನಯಾತ್ರಿಗಳು ಅಂತಾರಾಷ್ಟ್ರೀಯ ವ್ಯೋಮಕೇಂದ್ರದಲ್ಲಿ ತಮ್ಮ ಮೂತ್ರವನ್ನೇ ಶುದ್ಧೀಕರಿಸಿ ಕುಡಿಯುತ್ತಾರೆ ಎಂದಮೇಲೆ ಇದೇನು ಮಹಾ ಎಂದು ಅವರು ಪ್ರಶ್ನಿಸುತ್ತಾರೆ. ಈ ಬಗೆಯಲ್ಲಿ ಬೆಳೆಸಿದ ಬೀಟ್ರೂಟ್ಗಳು ಸಾಮಾನ್ಯ ಬೀಟ್ರೂಟ್ಗಳಿಗಿಂತ ದೊಡ್ಡದಾಗಿದ್ದವು.
ಶೌಚಾಲಯ ಕ್ರಾಂತಿಗೆ ಏನು ಮಾಡಬೇಕು?
ಹೀಗೆ ಶೌಚಾಲಯ ಎನ್ನುವುದು ತ್ಯಾಜ್ಯವನ್ನು ಎಸೆಯುವ ಸ್ಥಳ ಎಂದು ತಿಳಿಯುವ ಬದಲು ಶಕ್ತಿಯನ್ನು ಸಂಗ್ರಹಿಸುವ ಕೇಂದ್ರ ಎಂದು ಬಗೆದರೆ, ರಾಜಕೀಯ ದೃಢತೆಯಿಂದ ಹೆಜ್ಜೆ ಇಟ್ಟರೆ ಕ್ರಾಂತಿ ಸಂಭವನೀಯ. ಈ ಕ್ರಾಂತಿಯನ್ನು ಮಾಡುವ ಬಗೆಯನ್ನು ಹೀಗೆ ಪಟ್ಟೀಕರಿಸಬಹುದು:
- ಗ್ರಾಮಗಳಲ್ಲಿ ಶೌಚಾಲಯವೇ ಮುಖ್ಯ ಸಮಸ್ಯೆ. ಅಲ್ಲಿ ಗೊಬ್ಬರದ ಸಮಸ್ಯೆಯು ಎರಡನೇ ಸ್ಥಾನ ಪಡೆಯುತ್ತದೆ. ಆದ್ದರಿಂದ ಹಳ್ಳಿಗಳಲ್ಲಿ ಶೌಚಾಲಯಗಳನ್ನು ಸ್ಥಾಪಿಸುವ ಅಭಿಯಾನಕ್ಕೆ ಮಹತ್ವ ನೀಡಬೇಕು. ಆದರೆ ಇಂಥ ಶೌಚಾಲಯಗಳನ್ನು ಸ್ಥಾಪಿಸುವಾಗ ಮಲ-ಮೂತ್ರದ ಸಮರ್ಥ ಸದುಪಯೋಗಕ್ಕಾಗಿ ಎಚ್ಚರಿಕೆ ವಹಿಸಿ ಎಕೋಸ್ಯಾನ್ಗಳನ್ನು ್ರತ್ಸಾಹಿಸಬೇಕು. ನೆಲದಲ್ಲೇ ಗುಂಡಿ ತೋಡಿದರೆ ಎಕೋಸ್ಯಾನ್ಗಳ ಖರ್ಚು ತಗ್ಗುತ್ತದೆ. ಹಳ್ಳಿಗಳಲ್ಲಿ ನೀರು ಸಿಗುವುದೂ ದೊಡ್ಡ ಸಮಸ್ಯೆಯೇ. ಆದ್ದರಿಂದ ಎಕೋಸ್ಯಾನ್ ಶೌಚಾಲಯಗಳಿಂದ ನೀರಿನ ಸಮಸ್ಯೆಗೂ ಪರಿಹಾರ (ಫ್ಲಶ್ ಮಾಡಬೇಕಿಲ್ಲ); ಗೊಬ್ಬರಕ್ಕೂ ಪರ್ಯಾಯ; ಕುಟುಂಬದ ಮಾನರಕ್ಷಣೆಯೂ ಆಗುತ್ತದೆ.
- ನಗರಗಳಲ್ಲಿ ಅಪಾರ ಪ್ರಮಾಣದಲ್ಲಿ ಶೌಚತ್ಯಾಜ್ಯವು ವ್ಯರ್ಥವಾಗುತ್ತಿದೆ. ಇನ್ನು ಹಸಿ ನತ್ಯಾಜ್ಯದ ಬಗ್ಗೆಯಂತೂ ಹೇಳುವುದೇ ಬೇಡ. ಬೆಂಗಳೂರಿನ ಮಂಡೂರಿನಲ್ಲಿ ಲಕ್ಷಗಟ್ಟಳೆ ಟನ್ ತ್ಯಾಜ್ಯವನ್ನು ನಿರ್ವಹಿಸಲಾಗದ ಬೇಜವಾಬ್ದಾರಿ ಆಡಳಿತ ನಮ್ಮದು! ಆದ್ದರಿಂದ ನಗರಗಳಲ್ಲಿ ಎಕೋಸ್ಯಾನ್ ಪರಿಕಲ್ಪನೆಯನ್ನು ಜಾರಿಗೆ ತರಬೇಕು; ಅಗತ್ಯ ಬಿದ್ದರೆ ಕಾನೂನು ರೂಪಿಸಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಈ ಕುರಿತು ಗಂಭೀರವಾಗಿ ಯೋಚಿಸಬೇಕಿದೆ. ಕಾವೇರಿಯಿಂದ ತರುವ ನೀರನ್ನು ಕಮೋಡ್ಗಳಲ್ಲಿ ಫ್ಲಶ್ ಮಾಡಿಯೇ ಖರ್ಚು ಮಾಡುವ ಬೇಜವಾಬ್ದಾರಿತನಕ್ಕೆ ಕೊನೆ ಹೇಳಬೇಕಿದೆ. ಮಳೆನೀರು ಸಂಗ್ರಹಿಸಿ ಅದನ್ನೇ ಶೌಚಕ್ಕೆ ಬಳಸಿ ಎಂದು ಕಾನೂನು ಮಾಡಿದರೂ ತಪ್ಪಿಲ್ಲ. (`ಮಾನವ ಮೂತ್ರವನ್ನು ನಗರ ಕೃಷಿಯಲ್ಲಿ ಬಳಸುಬ ಪ್ರಾತ್ಯಕ್ಷಿಕೆ’ ಎಂದು ಸಸ್ಟೈನಬಲ್ ವಾಟರ್ ಮ್ಯಾನೇಜ್ಮೆಂಟ್ ಇನ್ ದಿ ಸಿಟಿ ಆಫ್ ದಿ ್ಯಚರ್ ಎಂಬ ವಿಷಯಾಧಾರಿತ ಯೋಜನೆಯ 119 ಟಗಳ ವೈಜ್ಞಾನಿಕ ವರದಿಯನ್ನು ಓದಿದರೆ ಈ ಸಲಹೆ ನಿಜಕ್ಕೂ ವಾಸ್ತವಿಕ ಎಂಬುದು ನಿಮಗೇ ಖಚಿತವಾಗುತ್ತದೆ!)
- ಎಕೋಸ್ಯಾನ್ ಮೂಲಕ ಮಲಮೂತ್ರಗಳನ್ನು ಗೊಬ್ಬರವಾಗಿ ಬಳಸುವ ಅಭಿಯಾನವನ್ನು ಸೂಕ್ತವಾಗಿ ಸಂಟಿಸಬೇಕು. ಸ್ಥಳೀಯ ಕೃಷಿಗೇ ಅದು ಬಳಕೆಯಾಗಬೇಕು; ಇಲ್ಲಿ ನೈರ್ಮಲ್ಯದ ಬಗ್ಗೆ ಗಮನ ಕೊಡಬೇಕು.
- ಮಲಹೊರುವ ಪದ್ಧತಿಯನ್ನು ಸಂರ್ಣವಾಗಿ ನಿಷೇಧಿಸಬೇಕು. ಆದರೆ ಮಲವನ್ನು ಗೊಬ್ಬರವಾಗಿ ಪರಿವರ್ತಿಸುವ ಕಾರ್ಯಕರ್ತರಿಗೆ, ಸ್ವಯಂಸೇವಾ ಸಂಸ್ಥೆಗಳಿಗೆ ಉತ್ತೇಜಕಗಳನ್ನು ನೀಡಬೇಕು.
- ಸಮುದಾಯ ಶೌಚಾಲಯಗಳನ್ನು ಸ್ಥಾಪಿಸಿದರೆ ಅದರ ಸಂರ್ಣ ಹೊಣೆಯನ್ನು ಸಮುದಾಯಕ್ಕೇ ಕೊಡಬೇಕು. ಈ ಕುರಿತ ನೀತಿಸೂತ್ರಗಳನ್ನು ಪಟ್ಟೀಕರಿಸಿ ರಾಷ್ಟ್ರೀಯ ಸಮುದಾಯ ಯೋಜನೆಯನ್ನು ರೂಪಿಸಬೇಕು. ಪ್ರತಿವರ್ಷವೂ ಶೌಚಾಲಯಗಳ ನಿರ್ಮಾಣ ಮಾಡುವ ಬಗ್ಗೆ ನಾಗರಿಕ ಮೇಲ್ವಿಚಾರಣಾ ಸಮಿತಿಗಳನ್ನು ರಚಿಸಬೇಕು.
- ಶೌಚಾಲಯಗಳು, ಎಕೋಸ್ಯಾನ್, ನೀರಿನ ಮಿತಬಳಕೆ, ತ್ಯಾಜ್ಯ ನಿರ್ವಹಣೆ, ಗ್ರಾಮೀಣ ಬದುಕಿನ ಸಂಕಷ್ಟಗಳು – ಇವೆಲ್ಲವನ್ನೂ ತಿಳಿಹೇಳುವ ಪಾಠಗಳನ್ನು, ಮಲ್ಟಿಮೀಡಿಯಾ ಕೃತಿಗಳನ್ನು ಮಕ್ಕಳಿಗೆ ತಲುಪಿಸಬೇಕು. ಮುಂದಿನ ಜನಾಂಗಕ್ಕೆ ಮಾಹಿತಿ ನೀಡುವ ಈ ಕಾರ್ಯ ತುಂಬಾ ಮುಖ್ಯ.
- ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಆರಂಭಿಸಿರುವ `ಸ್ವಚ್ಛ ಭಾರತ ಅಭಿಯಾನ’ದಲ್ಲಿ ನಾವೂ ಪಾಲ್ಗೊಳ್ಳಬೇಕು; ನಮ್ಮ ನೆರೆಹೊರೆಯವರನ್ನೂ ಸೇರಿಸಲು ಮುಂದಾಗಬೇಕು.
ಈಗಾಗಲೇ ಡೆಡ್‌ಲೈನ್ (ಕೆಲಸ ಮುಗಿಸುವ ಕಾಲಾವಕಾಶ) ಮುಗಿದಿದೆ. ಆದ್ದರಿಂದ ಮತ್ತೊಂದು ಕಾಲಮಿತಿ ನಿಗದಿ ಮಾಡುವುದರಲ್ಲಿ ಅರ್ಥವಿಲ್ಲ. ಇಷ್ಟಾಗಿಯೂ ನಮ್ಮ ದೇಶವು 2019ರ ಹೊತ್ತಿಗೆ ಸ್ವಚ್ಛ ಭಾರತವಾಗಿ ಮಿನುಗಬೇಕೆಂದರೆ ಕಾರ್ಯೋನ್ಮುಖರಾಗಲು ಇದೇ ತಕ್ಕ ಸಮಯ. ಕೂಡಲೇ ಅಭಿಯಾನದ ರೂಪದಲ್ಲಿ ಈ ಕಾರ್ಯಗಳನ್ನು ಕೈಗೆತ್ತಿಕೊಳ್ಳಬೇಕು.
ಮಾದರಿ: ಸುಲಭ್ ಇಂಟರ್ನ್ಯಾಶನಲ್ ಯಶಸ್ಸು
ಈಗ ಸುಲಭ್ ಇಂಟರ್ನ್ಯಾಶನಲ್ ಎಂದೇ ಖ್ಯಾತವಾಗಿರುವ ಸಂಸ್ಥೆಯ ಸ್ಥಾಪಕ ಬಿಂದೇಶ್ವರ ಪಾಠಕ್ ಬಿಹಾರದ ರಾಂರದವರು. 1968ರಲ್ಲಿ ಬಿಹಾರದ ಗಾಂಧಿ ಜನ್ಮಶತಾಬ್ದಿ ಆರಣಾ ಸಮಿತಿಯ ಭಾಂಗ್ ಮುಕ್ತಿ (ಮಲಹೊರುವವರ ವಿಮುಕ್ತಿ) ಟಕವನ್ನು ಸೇರಿಕೊಂಡ ಅವರಿಗೆ ಆಗ 25ರ ಹರೆಯ. ಈ ಸಮಸ್ಯೆಯ ಬಗ್ಗೆ ಅತೀವ ಕಾಳಜಿ ಬೆಳೆಸಿಕೊಂಡ ಪಾಠಕ್ ಭಾರತದ ಎಲ್ಲೆಡೆ ಪ್ರವಾಸ ಮಾಡಿ ಮಲಹೊರುವ ಕುಟುಂಭಗಳ ಜೊತೆಗೇ ವಾಸ ಮಾಡಿ ಅವರ ಕಷ್ಟ ಸುಖಗಳನ್ನು ಅರಿತರು.
ಮಲಹೊರುವ ಪದ್ಧತಿ ಹೀಗೇ ಮುಂದುವರಿದರೆ ಅದಕ್ಕಿಂತ ೋರ ಅಪಚಾರ ಇನ್ನೊಂದಿಲ್ಲ ಎಂಬುದು ಅವರಿಗೆ ಖಚಿತವಾಯಿತು. ತನ್ನ ಸಾಮಾಜಿಕ ಚಳವಳಿಗೆ ಸಾಂಸ್ಥಿಕ ರೂಪ ಕೊಡಲು ಅವರು 1970ರಲ್ಲಿ ಸುಲಭ್ ಇಂಟರ್ನ್ಯಾಶನಲ್ ಸಮಾಜ ಸೇವಾ ಸಂಟನೆಯನ್ನು ಆರಂಭಿಸಿದರು. ಶೌಚಾಲಯದ ಮಲದಿಂದ ಜೈವಿಕ ಅನಿಲ ಉತ್ಪಾದನೆಗೂ ಮುಂದಾದರು. ಮೂರು ದಶಕಗಳ ಹಿಂದೆ ಅವರು ಹಿಡಿದ ಈ ಹಾದಿ ಈಗ ವ್ಯಾಪಕ ಅಳವಡಿಕೆಗೆ, ಶ್ಲಾನೆಗೆ ಪಾತ್ರವಾಗಿದೆ. ಅವರ ಅನಿಲ ಟಕಗಳಿಂದ ಹೊರಬರುವ ನೀರು ಕೂಡಾ ಅತ್ಯುತ್ತಮ ಕೃಷಿ ಒಳಸುರಿ! 71ರ ಹರೆಯದಲ್ಲಿರುವ (ಜನನ 1943) ಶ್ರೀ ಬಿಂದೇಶ್ವರ ಪಾಠಕ್ ಪದ್ಮಭೂಷಣ ಪುರಸ್ಕಾರವಲ್ಲದೆ ಹಲವು ದೇಶ ವಿದೇಶಗಳ, ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಈಗೂ ಅವರು ಕೇಂಬ್ರಿಜ್ ವಿಶ್ವವಿದ್ಯಾಲಯದ ಅತಿ ಹಿರಿಯ ಚರ್ಚಾಪಟು!
ಶೌಚಾಲಯಗಳ ಮಾಹಿತಿಗಾಗಿ ನೀವು ಭೇಟಿ ನೀಡಬಹುದಾದ ಇಂಟರ್ನೆಟ್ ಕೊಂಡಿಗಳು
- https://www.youtube.com/watch?v=BFvfKMfSfew
- http://indiasanitationportal.org
- https://toilettrail.wordpress.com/tag/karnataka/
- http://www.thealternative.in/business/10-toilet-designs-for-rural-india/
- http://www.unicef.org/india/reallives_8562.htm
- http://datastories.in/blog/2013/09/09/a-toilet-map-of-india-2/
- http://data.gov.in/community-application/great-indian-toilet-tracker