ಪ್ರಧಾನಮಂತ್ರಿ, ಮುಖ್ಯಮಂತ್ರಿಯವರ ಕಚೇರಿಗಳಲ್ಲಿ ಕೆಲಸ ಮಾಡುವವರು ಅತ್ಯಂತ ಗರಿಷ್ಠ ಪ್ರಮಾಣದ ಕರ್ತವ್ಯನಿಷ್ಠೆ ಮತ್ತು ವಿಧೇಯತೆಯನ್ನು ತೋರಬೇಕು ಎನ್ನುವುದು, ನನ್ನ ಪುಟ್ಟ ಅನುಭವ. ಗೌಪ್ಯತೆಯ ಬಗ್ಗೆ ಬೇರೆ ಹೇಳಬೇಕೆ? ಇಂಥ ಸೇವೆಗಳಲ್ಲಿ ಇದ್ದಾಗ ವ್ಯಕ್ತಿಗಳನ್ನು ಹತ್ತಿರದಿಂದ ನೋಡುವ ಅವಕಾಶ ಸಿಕ್ಕಿರುತ್ತದೆ. ಅದನ್ನೇ ನಮ್ಮ ಹೆಚ್ಚುಗಾರಿಕೆ ಎಂದು ತಿಳಿದುಕೊಳ್ಳುವುದು ಸರಿಯಲ್ಲ. ಹೀಗೆ ವ್ಯವಸ್ಥೆಯ ಮೇಲ್ಪದರದಲ್ಲಿ ಇರುವ ಉದ್ಯೋಗಿಗಳೂ ಗೌಪ್ಯತೆಗೆ ಬದ್ಧರು.
ಆದರೆ ನೀವು `ದಿ ಆಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್’ ಎಂಬ ಡಾ|| ಮನಮೋಹನ್ ಸಿಂಗ್ ಕುರಿತ ಪುಸ್ತಕ ಬರೆದ ೨೦೦೪-೦೮ರಲ್ಲಿ ಅವರ ಮಾಧ್ಯಮ ಸಲಹೆಗಾರರಾಗಿದ್ದ ಸಂಜಯ ಬಾರು ಮಾತು ಕೇಳಿ ನೋಡಿ: ನಾನು ಗೌಪ್ಯತೆಯ ಪ್ರತಿಜ್ಞೆಗೆ ಹೊರತಾದ ಮಾಹಿತಿಗಳನ್ನು ಮಾತ್ರ ಹೊರಗೆಡಹಿದ್ದೇನೆ; ಸರ್ಕಾರದ ನೀತಿಗಳನ್ನು ಉಲ್ಲಂಘಿಸಿಲ್ಲ ಎಂದು ಕೇವಿಯೆಟ್ ಹಾಕಿಯೇ ಶುರು ಹಚ್ಚಿಕೊಳ್ಳುತ್ತಾರೆ. ೨೦೦೪ರಲ್ಲಿ ಸಿಂಗ್ ಕೋರಿಕೆಯ ಮೇರೆಗೇ ಬಂದು ತನಗೆ ಬೇಕಾದ ಸ್ಥಾನಮಾನದ ಹುದ್ದೆಯನ್ನೇ ಕೇಳಿ ಪಡೆದು, ೨೦೦೮ರಲ್ಲಿ ತಾನೇ ವೈಯಕ್ತಿಕ ಕಾರಣಗಳಿಗೆ ಕೆಲಸ ಬಿಟ್ಟು ಸಿಂಗಾಪುರಕ್ಕೆ ಹೋದ ಸಂಜಯ ಬಾರು ಮತ್ತೆ ಸಿಂಗ್‌ರ ಎರಡನೇ ಅವಧಿಗೆ ಆಹ್ವಾನ ಪಡೆಯುತ್ತಾರೆ. ಆದರೆ ಮತ್ತೆ ಅದೇ ಹುದ್ದೆ (ಸಂಜಯ ಇನ್ನೂ ಮೇಲ್‌ಮಟ್ಟದ ಸ್ಥಾನಮಾನಕ್ಕೆ ಟವಲ್ ಹಾಕಿದ್ದರು) ದಕ್ಕದೆ, ಸಿಂಗ್ ಅವರ ಮೇಲೆ ಕೆಂಡಾಮಂಡಲವಾದರು; ಯೋಜನಾ ಆಯೋಗದ ಸದಸ್ಯರಾಗಿ ಎಂಬ ಸಿಂಗ್‌ರ ಮನವಿಯೂ ಅವರಿಗೆ ರುಚಿಸಲಿಲ್ಲ.
ಪರಿಣಾಮ: ಡಾ|| ಮನಮೋಹನ್ ಸಿಂಗ್ ಎಂಥ ಆಕಸ್ಮಿಕದ ಪ್ರಧಾನಮಂತ್ರಿ ಎಂದು ಹಿಗ್ಗಾಮುಗ್ಗಾ ಹೀಗಳೆಯುವ ಪುಸ್ತಕ! ಜಾಣತನ ಎಂದರೆ ಇದೇ. ಅಧಿಕಾರದಲ್ಲಿ ಇದ್ದಾಗ ಅಧಿಕೃತ ಮಾಹಿತಿಗಳಲ್ಲದೆ, ಅನಧಿಕೃತ ಮಾಹಿತಿಗಳೂ ಸಿಕ್ಕೇ ಸಿಗುತ್ತವೆ; ಕಾಣುತ್ತವೆ. ಅವು ಅಫಿಶಿಯಲ್ ಸೀಕ್ರೆಟ್ಸ್ ಕಾಯ್ದೆ ವ್ಯಾಪ್ತಿಯಲ್ಲಿಲ್ಲ ಎಂದ ಮಾತ್ರಕ್ಕೆ ಬರೆಯಬಹುದು ಎಂದಲ್ಲ; ಪರಿಸ್ಥಿತಿ ಹಾಗೇನಾದರೂ ಇದ್ದಿದ್ದರೆ, ಅವರೇ ಮೆಚ್ಚಿಕೊಳ್ಳುವ ಎಚ್ ವೈ ಶಾರದಾಪ್ರಸಾದ್ ರಿಂದ ಹಿಡಿದು ಹಲವು ಪತ್ರಕರ್ತರು ಏನೂ ಬರೆಯದೆ ಸುಮ್ಮನಿರುತ್ತಿರಲಿಲ್ಲ. ಸಂಜಯ ಬಾರುಗೆ ಈ ಸೌಜನ್ಯವೂ ಇಲ್ಲ; ತನ್ನ ಒಂದು ಕಣ್ಣು (ಸಿಂಗಾಪುರದ ಹುದ್ದೆ) ಹೋದರೇನು, ಸಿಂಗ್‌ರ ತಲೆದಂಡವೇ ಆಗಲಿ ಎಂಬ ಹುನ್ನಾರದಿಂದಲೇ ಈ ಪುಸ್ತಕ ಬರೆದಿದ್ದಾರೆ ಎಂಬುದನ್ನು ಪುಟ ಪುಟದಲ್ಲೂ ಓದಬಹುದು.
ಈ ಪುಸ್ತಕದಲ್ಲಿ ಬಹುತೇಕ ಸಂಗತಿಗಳನ್ನು ನೆನಪಿನ ಆಧಾರದಲ್ಲೇ ಸಂಜಯ ಬಾರು ಬರೆದಿದ್ದಾರಂತೆ; ಅದಕ್ಕೆ ಪತ್ರಿಕಾ ತುಣುಕುಗಳ ಸಹಾಯ ಪಡೆದಿದ್ದಾರಂತೆ; ಜೊತೆಗೆ ಘಟನೆಗಳನ್ನು ಕೆದಕಲೆಂದು ಹಲವು ಪಾತ್ರಧಾರಿಗಳ ಜೊತೆ ಮಾತನಾಡಿದ್ದಾರಂತೆ; ಆದರೆ ಅವರ ಹೆಸರುಗಳನ್ನು ಮಾತ್ರ ಹೇಳಲಾರ! ಡಾ|| ಸಿಂಗ್ ಒಬ್ಬರೇ ಕೂತು ಕಣ್ಣೀರು ಹಾಕಿದ್ದನ್ನೂ ದಾಖಲಿಸುವ ಈ ನಿರ್ದಯಿ ಸಿಬ್ಬಂದಿ ಸಂಜಯ ಬಾರುವಿಗೆ ಮಾಹಿತಿ ಮೂಲಗಳನ್ನು ಬರೆಯಲು ಭಯ: ಏಕೆಂದರೆ ಹಾಗೆ ಬರೆದರೆ, ತನ್ನ ಮತ್ತು ಹಲವರ ನಡುವಣ `ನೆಕ್ಸಸ್’ ಬಯಲಾಗಿಬಿಡುತ್ತಲ್ಲ? ಅಕ್ಕಿ ಮೇಲೆ ಆಸೆ, ನೆಂಟರ ಮೇಲೆ ಪ್ರೀತಿ!
ನಿಮಗೆ ಸಂಜಯ ಬಾರು ತನ್ನ ಹುದ್ದೆಗೆ ನ್ಯಾಯ ಒದಗಿಸಲು ಏನೇನು ಕೆಲಸ ಮಾಡಿದರು ಎಂಬ ಸುಳಿವು ಸಿಗುವುದೇ ೧೩೦ ಚಿಲ್ಲರೆ ಪುಟಗಳನ್ನು ದಾಟಿದ ಮೇಲೆ. ಪ್ರಧಾನಮಂತ್ರಿಯವರ ಒಂದು ಪತ್ರಿಕಾ ಗೋಷ್ಠಿ ಏರ್ಪಡಿಸು ಎಂದು ಶಾರದಾ ಪ್ರಸಾದ್ ಕೊಟ್ಟ ಸಲಹೆ (ಪ್ರಧಾನಮಂತ್ರಿಯ ಮಾಧ್ಯಮ ಸಲಹೆಗಾರನಾದ ಮೇಲೆ ಈ ಸಹಜ ಕೆಲಸಕ್ಕೂ ಶಾರದಾಪ್ರಸಾದರೇ ಸಲಹೆ ನೀಡಬೇಕಾಗಿ ಬಂದಿರುವುದು ದುರಂತ!)ಯಂತೆ ನಡೆದುಕೊಂಡಿದ್ದೇ ಇವರ ಇಡೀ ಕಾಲಾವಧಿಯ ಮಹಾನ್ ಸಾಧನೆ ಎಂದೇ ತೋರುತ್ತದೆ. ಆಗೀಗ ಮಾಧ್ಯಮದ ಪ್ರತಿನಿಧಿಗಳ ಜೊತೆಗೆ ಲಾಬಿ ಮಾಡಿದ್ದೂ ಇದೆ ಎನ್ನಿ. ಒಟ್ಟಾರೆ ತಾನೇನು ಘನಂದಾರಿ ಕೆಲಸಗಳನ್ನು ಮಾಡಿದೆ ಎಂದು ಆಗಾಗ ಕೊಚ್ಚಿಕೊಳ್ಳುತ್ತ, ಪ್ರಧಾನಿಗೇ ಹೇಗೆ ಸಲಹೆ ಕೊಟ್ಟೆ ಎಂದು ಅಲ್ಲಲ್ಲಿ ಘಟನೆಗಳನ್ನು ಉದುರಿಸುತ್ತ, ತಾನೇನು ಪ್ರಮಾದ ಎಸಗಿದೆ ಎಂದು ಪುಸ್ತಕಕ್ಕೆ ನ್ಯಾಯ ತೋರಿಸುವ ರೀತಿಯಲ್ಲಿ ಒಪ್ಪಿಸುತ್ತ, ಎಲ್ಲರಿಗೂ ರೋಚಕವಾಗುವ ಪುಸ್ತಕ ಬರೆದಿದ್ದಾರೆ ಸಂಜಯ ಬಾರು. ಇವೆಲ್ಲ ಸಂಜೆಯ ಬಾರಿನಲ್ಲಿ ಕೂತು ಹಂಚಿಕೊಳ್ಳಲು ಅರ್ಹವಾದ ಎಲ್ಲ ಸಂಗತಿಗಳನ್ನೂ ಸಂಜಯ ಬಾರು ಬರೆದು ಡಾ|| ಸಿಂಗರ ಮಾನ ಹರಾಜು ಮಾಡಿದ್ದಾರೆ.
ಇನ್ನು ಯುಪಿಎ ೨ರಲ್ಲಿ ಬಹಿರಂಗವಾದ ಹಗರಣಗಳು ಯುಪಿಎ ೧ರಲ್ಲೇ ಮೊಳಕೆ ಒಡೆದಿದ್ದನ್ನೂ ಕಂಡಿದ್ದ ಸಂಜಯ ಬಾರು Since I was not privy to government files and the issue never became public in my time, I was blissfully ignorant of the goings-on with regard to telecom licences that have since come to light ಎಂದು ಬರೆದು ಹಗರಣಗಳಿಂದ ಬಚಾವಾಗಿಬಿಡುತ್ತಾರೆ! ಒಳ್ಳೆಯ ಘಟನೆಗಳು ನಡೆದಿದ್ದರೆ ನಾನೇ ಹೊಣೆ, ಕೆಟ್ಟದಾಗಿದ್ದರೆ ಸಿಂಗ್ ಹೊಣೆ ಎಂಬ ನ್ಯಾಯ ಇವರದು. ಹೇಳಿಕೇಳಿ ಯುಪಿಎ ಸರ್ಕಾರದ ಅವಧಿಯಲ್ಲಿ ನಡೆದ ಹಗರಣಗಳು (ಲೋಕಸಭಾ ಚುನಾವಣೆಯ ಈ ಕಾಲದಲ್ಲಿ ಈ ಬಗ್ಗೆ ಬೇಕಾದ್ಟು ಮಾಹಿತಿ ಇರುವುದರಿಂದ ನಾನು ಈ ಬಗ್ಗೆ ಉಲ್ಲೇಖಿಸಿ ನಿಮ್ಮ ಸಮಯ ವ್ಯರ್ಥ ಮಾಡಲಾರೆ) ಡಾ|| ಮನಮೋಹನ್ ಸಿಂಗ್ ಸೇರಿದಂತೆ ಇಡೀ ಸರ್ಕಾರದ ಸಾಮೂಹಿಕ ಮತ್ತು ಹಲವರ ವೈಯಕ್ತಿಕ ಹೊಣೆಗಾರಿಕೆ ವ್ಯಾಪ್ತಿಯಲ್ಲೇ ಬರುತ್ತವೆ. ಸಂಜಯ ಬಾರುಗೆ ಈ ಹಗರಣಗಳ ಬಗ್ಗೆ ವಾಸನೆ ಹೊಡೆಯುತ್ತೆ; ಅವರು ಬ್ಲಿಸ್‌ಫುಲಿ `ತನಗೇನೂ ಗೊತ್ತಿಲ್ಲ’ ಎಂದು ಹಾಯಾಗಿ ಇರುತ್ತಾರೆ! ತಾನು ಆಕ್ಸಿಡೆಂಟಲ್ ಪ್ರಧಾನಿ ಎಂದು ಗೊತ್ತಿದ್ದೇ ಡಾ|| ಸಿಂಗ್ ಸಂಜಯ ಬಾರುವನ್ನು`ನೀನು ನನ್ನ ಕಣ್ಣು, ಕಿವಿ ಆಗಿರಬೇಕು’ ಎಂದು ನೇಮಿಸಿದ್ದು; ಹಾಗಂತ ಬಾರು ಬರೆದಿದ್ದಾರೆ. ಆದರೆ ೨೦೧೪ರಲ್ಲಿ ಡಾ|| ಸಿಂಗ್‌ರ ವೈಯಕ್ತಿಕ ವಿಫಲತೆಗಳನ್ನೆಲ್ಲ ಪಟ್ಟಿ ಮಾಡಿ ಪುಸ್ತಕ ಬರೆದರು; ಪ್ರಧಾನಮಂತ್ರಿಯ ಖಾಸಗಿ ನಡತೆಗಳಿಗೇ ಕಣ್ಣು ಕಿವಿಯಾಗಿ ಅದನ್ನೀಗ ಸಾರ್ವಜನಿಕಗೊಳಿಸಿದ್ದಾರೆ.
ಈ ಹುದ್ದೆಗೆ ಬರುವ ಎಷ್ಟೋ ವರ್ಷಗಳ ಮೊದಲು ಡಾ|| ಸಿಂಗ್‌ರ ಸಂದರ್ಶನವನ್ನು ಅವರ ತಿದ್ದುಪಡಿಗಳನ್ನು ಸೇರಿಸದೆಯೇ ಪ್ರಕಟಿಸಿದ ತಪ್ಪನ್ನು ಸಂಜಯ ಬಾರು ಒಪ್ಪಿಕೊಳ್ಳುತ್ತಾರೆ; ಆದರೆ ಅದಕ್ಕೆ ಪತ್ರಿಕೆಯ ಪೇಜಿನೇಟರ್‌ನನ್ನು ಹೊಣೆ ಮಾಡಿಬಿಡುತ್ತಾರೆ. ಅದಕ್ಕೇ ಹೇಳಿದ್ದು: ಸಂಜಯ ಬಾರು ಬಲು ಶಾಣ್ಯಾ. ಡಾ|| ಸಿಂಗ್ ಭಾರೀ ಭೋಳ್ಯಾ. ಆಯ್ತು, ಡಾ|| ಸಿಂಗ್ ಭೋಳ್ಯಾ. ಆದರೆ ಸೋನಿಯಾ ಗಾಂಧಿ ಬಗ್ಗೆ? ಇಷ್ಟೆಲ್ಲ ಅನಧಿಕೃತ ಮಾಹಿತಿಗಳನ್ನು ಪಟ್ಟಿ ಮಾಡಿ ದಾಖಲಿಸುವ ಸಂಜಯ ಬಾರುವಿಗೆ ಸೋನಿಯಾ, ರಾಹುಲ್ ಬಗ್ಗೆ ಅವರ ಖಾಸಗಿ ಸಂಗತಿಗಳ ಬಗ್ಗೆ ಬರೆಯುವ ತಾಕತ್ತೂ ಇಲ್ಲ; ದಮ್ಮೂ ಇಲ್ಲ ಎಂಬುದು ಈ ಪುಸ್ತಕದಿಂದಲೇ ಸಾಬೀತಾಗುತ್ತದೆ.
ಈ ಪುಸ್ತಕದ ಇನ್ನೊಂದು ಹೈಲೈಟ್ ಎಂದರೆ ಸಂಜಯ ಬಾರುವಿನಿಂದ ಭೋಳ್ಯಾ ಆಗಿರುವ (ಜನತೆಯೂ ಪಾಪ, ಅವರನ್ನು ಹಾಗೇ ಕರೆಯುತ್ತದೆ; ಅದು ದೇಶದ ಅಭಿಮತ) ಡಾ|| ಸಿಂಗ್ ಸಂಜಯ ಬಾರುವನ್ನು ತುಂಬಾ ಪ್ರೀತಿಯಿಂದ ನೋಡಿಕೊಂಡಿದ್ದಾರೆ ಎಂದು ತಿಳಿಯುತ್ತದೆ. ಅದಿಲ್ಲದೇ ಹೋಗಿದ್ದರೆ ಅವರು ಹಠಾತ್ತಾಗಿ ಬಿಟ್ಟುಹೋದ ಸಂಜಯ ಬಾರುವನ್ನು ಮತ್ತೆ ಕರೆಯುತ್ತಿರಲಿಲ್ಲ; `ಪ್ರಧಾನಮಂತ್ರಿಯ ಸಲಹೆಗಾರ’ ಎಂದು ಸಂಜಯ ಬೇಡಿಕೆಯಂತೆಯೇ ನಡೆಯಲಾಗದಿದ್ದರೂ ಯೋಜನಾ ಆಯೋಗಕ್ಕೆ ಆಹ್ವಾನಿಸುತ್ತಾರೆ; ಅದೇನು ಮೂರನೇ ದರ್ಜೆ ಹುದ್ದೆ ಆಗಿರಲಿಲ್ಲ. ಸಂಜಯ ಬಾರು ಪಿತ್ಥ ನೆತ್ತಿಗೇರಿತು. ಪುಸ್ತಕ ಹೊರಬಂತು!
ನಾನೇನೂ ಡಾ|| ಸಿಂಗ್‌ರನ್ನು ಬೆಂಬಲಿಸುತ್ತಿಲ್ಲ; ನನಗೆ ಅವರ ನಿಕಟತೆಯೂ ಇಲ್ಲ. ಆದರೆ ಸಂಜಯ ಬಾರುವಿನಂಥವರು ಮುಂದಿನ ದಿನಗಳಲ್ಲಿ ಇಂಥದ್ದೇ ಹುದ್ದೆಗಳನ್ನು ಅಲಂಕರಿಸಿದರೆ ದುರಂತವೇ ಹೌದು. ಅಧಿಕಾರದ ನಾತೆಯಲ್ಲಿ ದಕ್ಕಿದ ಉನ್ನತ ಅನುಭವಗಳನ್ನು ವೈಯಕ್ತಿಕ ದ್ವೇಷ ಸಾಧಿಸಲು ಬಳಸುವುದು ಅಲಿಖಿತ ನಿಯಮಗಳಿಗೆ ವಿರುದ್ಧ ಎಂದೇ ನಾನು ಹೇಳುತ್ತೇನೆ. ಸಿಕ್ಕಾಪಟ್ಟೆ ಹುಡುಕಿ ಖರೀದಿಸಿದ ಹವಾಯಿ ಸಿಗಾರ್ ಸೇದುತ್ತಿದ್ದಾಗಲೇ ಡಾ|| ಸಿಂಗ್ ಕರೆ ಬಂದಾಗ ಮೌತ್ ವಾಶನರ್ ಹಾಕಿಕೊಂಡು ಧಾವಿಸಿದ (ಎಂಥ ಪ್ರಾಮಾಣಿಕತೆ ಅಬ್ಬಬ್ಬಾ) ಸಂಜಯ ಬಾರು ಸಂಜೆಯ ಹೊತ್ತು ಇನ್ನೇನು ಅನಧಿಕೃತ ಕೆಲಸಗಳನ್ನು ಮಾಡುತ್ತಿದ್ದರೋ, ದಾಖಲಾಗಿಲ್ಲ.
ಸಾರ್ವಜನಿಕ ವ್ಯಕ್ತಿಗಳು ವಿಫಲರಾಗಿರಬಹುದು; ಚಟಭಯಂಕರರಾಗಿರಬಹುದು; ಆದರೆ ಅವರು ತಮ್ಮ ನಿಕಟವರ್ತಿಗಳನ್ನು ಅವರ ವಿಧೇಯತೆಗಾಗಿಯೇ ಮೆಚ್ಚುತ್ತಾರೆ; ಹೊರತು ಕೇವಲ ಕರ್ತವ್ಯಪಾರಾಯಣತೆಗೆ ಅಲ್ಲ ಎಂದೂ ನಾನು ಅಧಿಕಾರದ ಮೊಗಸಾಲೆಯಲ್ಲಿ ಆಗಾಗ ಎಡತಾಕಿ ತಿಳಿದುಕೊಂಡಿದ್ದೇನೆ. ಆದರೆ ಸಂಜಯ ಬಾರುವಿಗೆ ವಿಧೇಯತೆಯೂ ಇಲ್ಲ. ಕರ್ತವ್ಯ ಪಾರಾಯಣತೆಯೂ ಇಲ್ಲ. ಹಾಗೇನಾದರೂ ಆತ ಸಫಲನಾಗಿದ್ದರೆ ಪ್ರಧಾನಿಯೊಬ್ಬ ಆಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್ ಅಲ್ಲ ಎಂದೇ ಸಾಬೀತುಪಡಿಸಬಹುದಿತ್ತು; ಅವರಿದ್ದ ನಾಲ್ಕು ವರ್ಷಗಳು ಇದಕ್ಕೆ ಸಾಕಾಗಿತ್ತು. ಇಲ್ಲಿ ಗಮನಿಸಿ: ಯುಪಿಎ ೧ ಕಾಲದಲ್ಲೇ ಡಾ|| ಸಿಂಗ್ ಹೀಗಿದ್ದರು ಎಂದು ಸಂಜಯ ಬರೆದಿದ್ದಾರೆ; ಯುಪಿಎ ೨ ತನಗೆ ಗೊತ್ತಿಲ್ಲ ಎಂದು ಶಾಣ್ಯಾತನ ತೋರಿದ್ದಾರೆ. ಇದರರ್ಥ: ಯುಪಿಎ ೧ರಲ್ಲೇ ಪ್ರಧಾನಿಗೆ ತಕ್ಕ ಮಾಧ್ಯಮ ಪೊಸಿಶನಿಂಗ್ ಕೊಡಲು ಸಂಜಯ ಬಾರು ವಿಫಲರಾದರು. ಅವರು ಕೊಟ್ಟ ಒಂದೆರಡು ಸಲಹೆಗಳನ್ನು ಡಾ|| ಸಿಂಗ್ ಒಪ್ಪದೇ ಇರಬಹುದು; ಆದರೆ ಡಾ|| ಸಿಂಗ್‌ರ ವರ್ತನೆಯ ಹೊರತಾಗಿಯೂ ಮಾಧ್ಯಮದಲ್ಲಿ ಇಮೇಜ್ ಕೂಡ್ರಿಸಬೇಕಾದ್ದು ಸಂಜಯ ಬಾರು ಕೆಲಸವಾಗಿತ್ತು; ಅದಕ್ಕೇ ಅವರಿಗೆ ಸಂಬಳ, ಸಾರಿಗೆ ಕೊಟ್ಟಿತ್ತು.
‘Public office offers the opportunity to be educated at public expense.’ ಹಾಗಂತ ಡಾ|| ಸಿಂಗ್ ಹೇಳಿದ್ದಾರಂತೆ. ವಾಸ್ತವದಲ್ಲಿ ಸಂಜಯ ಬಾರು ಸಾರ್ವಜನಿಕ ವೆಚ್ಚದಲ್ಲಿ ಖಾಸಗಿ ಅನುಭವಗಳನ್ನು ಪಡೆದು ಪುಸ್ತಕ ಬರೆದಿದ್ದಾರೆ. ಇದನ್ನು ನಾವು ಕೆಲವರು `ಪೇಡ್ ಮಜಾ’ (PAID FUN) ಎಂದು ಕರೆಯುತ್ತೇವೆ. ಸಂಬಳ ಪಡೆದು ಮಜಾ ಅನುಭವಿಸುವುದು. ಸಂಜಯ ಬಾರು ನಿಜಕ್ಕೂ ಹಲವು ಘನಂದಾರಿ ಕೆಲಸಗಳನ್ನು ಮಾಡಿರಬಹುದು; ಆದರೆ ಈ ಪುಸ್ತಕದಲ್ಲಿ ನನಗೆ ಕಂಡಿದ್ದು ಅವರ ಅಪ್ಪಟ ಶಾಣ್ಯಾತನ ಮತ್ತು ಡಾ|| ಸಿಂಗ್‌ರ ಭೋಳ್ಯಾತನ. ದೇಶವನ್ನು ಸಮರ್ಥವಾಗಿ ನಡೆಸುವಲ್ಲಿ ಡಾ|| ಸಿಂಗ್ ಕರ್ತವ್ಯಚ್ಯುತಿ ಎಸಗಿದರು. ಸಂಜಯ ಬಾರು ಕರ್ತವ್ಯದ್ರೋಹ ಮಾಡಿದ್ದಾರೆ.
ಚುನಾವಣಾ ಫಲಿತಾಂಶಕ್ಕೆ ಕಾಯುತ್ತಿರುವ ನಿಮಗೆ ಇದೊಂದು ಚಹಾದ ಜೋಡಿ ಚೂಡಾ ಇದ್ದಹಾಗೆ. ಓದಿ. ಪುಸ್ತಕವನ್ನು ಖರೀದಿ ಮಾಡುವ ತಪ್ಪು ಮಾಡಬೇಡಿ.
1 Comment
Reblogged this on sandeshrbht and commented:
Really a nice review