ನೀವು ಮೊಬೈಲ್ ಖರೀದಿಸಿದ ಒಂದೇ ವಾರದಲ್ಲಿ ಅದಕ್ಕಿಂತ ಸುಧಾರಿತ ಮೊಬೈಲ್ ಬಂದಿದೆಯಂತೆ, ಇನ್ನೂ `ಕಡಿಮೆ’ ದರವಂತೆ ಎಂಬ ಸುದ್ದಿ ನಿಮ್ಮನ್ನು ಅಪ್ಪಳಿಸುತ್ತದೆ. ಕಳೆದ ವರ್ಷ ಕೊಂಡಿದ್ದ ಮೊಬೈಲ್‌ನಲ್ಲಿ ಇಲ್ಲದ ಯಾವುದೋ ಫೀಚರ್ ನಿಮ್ಮ ಸ್ನೇಹಿತರ ಮೊಬೈಲಿನಲ್ಲಿ ಕಾಣಿಸುತ್ತದೆ. ನೀವು ಪೆಚ್ಚಾಗುತ್ತೀರಿ. ಅಥವಾ ನೀವು ಪ್ರವಾಸ ಹೋದಾಗ ಮೊಬೈಲ್‌ನ ಮೆಮೊರಿ ಕಾರ್ಡ್ ಸಾಮರ್ಥ್ಯ ಕಡಿಮೆ ಎಂದು ಗೊಣಗುತ್ತೀರಿ. ಕ್ಯಾಮೆರಾದ ಮೆಗಾ ಪಿಕ್ಸೆಲ್ ಹೆಚ್ಚಾಗಬೇಕೆಂದರೆ ಮೊಬೈಲನ್ನೇ ಬದಲಿಸಬೇಕು ಎಂದು ನಿಮ್ಮ ಮೊಬೈಲ್ ಅಂಗಡಿಯಲ್ಲಿ ಸಲಹೆ ಕೇಳಿಬರುತ್ತದೆ. ಅಥವಾ ಮೊಬೈಲ್‌ನ ಹೆಡ್‌ಸೆಟ್‌ನ ಪಿನ್ ಬದಲಿಸಬೇಕಿದೆ; ಅಥವಾ…
ಹೀಗೆ ಮೊಬೈಲ್‌ನ ಅಲ್ಲ ಅಂಗಾಂಗಗಳನ್ನೂ ಬೇಕೆಂದಾಗ ಬದಲಿಸಬೇಕು ಎಂಬ ಕನಸು ನಿಮ್ಮದೊಬ್ಬರದೇ ಅಲ್ಲ. ಕೋಟಿ ಕೋಟಿ ಮೊಬೈಲ್ ಬಳಕೆದಾರರದು. ಅದನ್ನೀಗ ನನಸು ಮಾಡಲು ನೆದರ್‌ಲ್ಯಾಂಡಿನ ಡೇವ್ ಹಕೆನ್ಸ್ ಮುಂದಾಗಿದ್ದಾರೆ. ತನ್ನ `ಫೋನ್ ಬ್ಲಾಕ್’ ವಿನ್ಯಾಸವನ್ನು ಸಾರ್ವಜನಿಕರಿಗೆ ಬಿಡುಗಡೆ ಮಾಡಿ ಎಲ್ಲ ಮೊಬೈಲ್ ಕಂಪೆನಿಗಳೂ ಈ ಹೊಸ ವಿಧಾನವನ್ನೇ ಅನುಸರಿಸಬೇಕೆಂದು ಅವರು ಚಳವಳಿ ಆರಂಭಿಸಿದ್ದಾರೆ. ೨೯ರ ಹರೆಯದ ವಿನ್ಯಾಸಗಾರ ಡೇವ್ ಹಕೆನ್ಸ್‌ಗೆ ಸಿಕ್ಕಿದ ಪ್ರತಿಕ್ರಿಯೆಯನ್ನೇ ನೋಡಿ: ಯುಟ್ಯೂಬ್‌ನಲ್ಲಿ ಅವರು ಹಾಕಿದ ಫೋನ್‌ಬ್ಲಾಕ್ ವಿಡಿಯೋವನ್ನು ಒಂದೇ ದಿನದಲ್ಲಿ ಒಂದು ಲಕ್ಷ ಜನ ನೋಡಿದ್ದಾರೆ. ಫೇಸ್‌ಬುಕ್‌ನಲ್ಲಿ ಅವರ ಪ್ರಕಟಣೆಗೆ ಒಂದು ಕೋಟಿ ಜನ ಸ್ಪಂದಿಸಿದ್ದಾರೆ!
ಏನಿದು ಫೋನ್ ಬ್ಲಾಕ್?
ಮೊಬೈಲ್‌ನ ವಿವಿಧ ಅಂಗಗಳನ್ನು ಬೇಕೆಂದಾಗ ಬಿಡಿಸಿ, ಮತ್ತೆ ಜೋಡಿಸಬಹುದಾದ ವಿನ್ಯಾಸವೇ ಮೊಬೈಲ್ ಬ್ಲಾಕ್. ಈ ಬ್ಲಾಕಿನ ಮುಖ್ಯಾಧಾರವಾಗಿರೋದು ಎಲೆಕ್ಟ್ರಾನಿಕ್ ಸರ್ಕೂಟ್‌ಗಳಿರುವ ಒಂದು ಬಿಲ್ಲೆ. ಅದರ ಮೈಯೆಲ್ಲ ರಂಧ್ರಗಳು. ಈ ರಂಧ್ರಗಳಿಗೆ ಪರಸ್ಪರ ಸಂಪರ್ಕಗಳಿವೆ. ಈ ರಂಧ್ರಗಳ ಮೇಲೆ ವಿವಿಧ ಭಾಗಗಳನ್ನು ಜೋಡಿಸಿ ಎಲ್ಲವನ್ನೂ ಸ್ಕ್ರೂಗಳಿಂದ ಒಮ್ಮೆ ಬಿಗಿದರಾಯಿತು. ಬೇಡ, ಬದಲಿಸಬೇಕು ಎಂದರೆ, ಅದನ್ನೆಲ್ಲ ಅತ್ತ ಇತ್ತ ಜಾರಿಸಿದರೆ ಹೊರಬರುತ್ತವೆ; ಹೊಸ ಭಾಗವನ್ನು ಮತ್ತೆ ಅದೇ ಜಾಗದಲ್ಲಿ ಜೋಡಿಸಿದರೆ ಮುಗಿಯಿತು!
ಇಷ್ಟು ಸರಳವಾದ ವಿನ್ಯಾಸವನ್ನು ಅರ್ಥ ಮಾಡಿಕೊಳ್ಳುವುದು ಎಷ್ಟು ಸುಲಭ; ಆದರೆ ಇದನ್ನು ಮೊಬೈಲ್‌ಕಂಪನಿಗಳಿಗೆ ಬಿಡಿಸಿ ಹೇಳುವುದಕ್ಕೆ ಡೇವ್ ಹಕೆನ್ಸ್ ಬರಬೇಕಾಯ್ತು! ಇಲ್ಲಿರುವ ಚಿತ್ರಗಳನ್ನು ನೋಡಿದರೆ ಸಾಕು, ನಿಮಗೆ ಡೇವ್‌ನ ಚಿಂತನೆಗಳೆಲ್ಲವೂ ನಿಚ್ಚಳವಾಗುತ್ತವೆ ತಾನೆ?
ಈಗ ಡೇವ್ ವಿನ್ಯಾಸವನ್ನು ಕಂಡ ಮೋಟೋರೋಲಾ ಸಂಸ್ಥೆಯು (ನಿಮಗೆ ಗೊತ್ತಿರಬೇಕು, ಅದನ್ನೀಗ ಗೂಗಲ್ ಸಂಸ್ಥೆಯು ಖರೀದಿಸಿ ಹೊಸ ಬಗೆಯ ಮೊಬೈಲ್‌ಗಳನ್ನು ರೂಪಿಸಲು ಮುಂದಾಗಿದೆ) ಅವರನ್ನೇ ನೇರವಾಗಿ ಸಂಪರ್ಕಿಸಿದೆ. `ಬನ್ನಿ, ನೀವೂ ನಾವೂ ಸೇರಿ ಈ ಕ್ರಾಂತಿಗೆ ಮುಂದಾಗೋಣ’ ಎಂದು ಘೋಷಿಸಿದೆ. ಮಾತುಕತೆಗಳು ನಡೆದಿವೆ. ಎಲ್ಲವೂ ಸರಿಯಾಗಿ ಮುನ್ನಡೆದರೆ, ಎರಡೇ ವರ್ಷಗಳಲ್ಲಿ ಫೋನ್‌ಬ್ಲಾಕ್ ಮಾದರಿಯ ಮೊಬೈಲ್‌ಗಳು ನಿಮ್ಮ ಕೈಗೆ ಬರುವುದಂತೂ ಖಂಡಿತ.
ಇಂಥದ್ದೊಂದು ಕ್ರಾಂತಿಕಾರಕ ವಿನ್ಯಾಸಕ್ಕೆ ಡೇವ್‌ಗೆ ಪ್ರೇರಣೆಯಾಗಿದ್ದು ಹೇಗೆ ಅಂತೀರ? ಅವರ ಹತ್ರ ಒಂದು ಕ್ಯಾನನ್ ಕಾಂಪಾಕ್ಟ್ ಕ್ಯಾಮೆರಾ ಇತ್ತು. ಅದರ ಲೆನ್ಸ್ ಹಾಳಾಯ್ತು. ಆದ್ರೆ ಅದರ ಫ್ಲಾಶ್, ಬ್ಯಾಟರಿ ಎಲ್ಲವೂ ಚೆನ್ನಾಗೇ ಇದ್ದವು. ಆದರೆ ಲೆನ್ಸ್ ಬದಲಿಸಬೇಕು ಅನ್ನೋದಾದ್ರೆ ಕ್ಯಾಮೆರಾ ಬದಲಿಸಬೇಕು ಎಂದು ಗೊತ್ತಾಯ್ತು. ಆಗ ಡೇವ್‌ಗೆ ಜ್ಞಾನೋದಯ ಆಯ್ತಂತೆ: ಎಲೆಕ್ಟ್ರಾನಿಕ್ ಸಾಧನಗಳು ಅಂದ್ರೆ ಬಳಸಿ ಎಸೆಯೋ ಸಾಧನಗಳಾಗಿವೆ. ಬೈಕ್‌ನ ಟ್ಯೂಬ್ ಪಂಕ್ಚರ್ ಆದ್ರೆ ಅದನ್ನು ಸರಿಪಡಿಸೋಹಾಗೆ ಎಲೆಕ್ಟ್ರಾನಿಕ್ ಸಾಧನಗಳೂ ಇರಬೇಕು ಎಂಬ ಆಸೆ ಅವರಿಗೆ ಬಲವಾಯ್ತು. ಹೀಗೇ ಎಸೆದು ಬಳಸುವ ಸಂಸ್ಕೃತಿಯಿಂದ ಸಾಕಷ್ಟು ಇ-ವೇಸ್ಟ್ ಆಗುತ್ತೆ ಎಂಬುದೂ ಡೇವ್‌ರನ್ನು ಕಾಡಿತು. ಅದೆಲ್ಲದರ ಫಲವೇ ಫೋನ್‌ಬ್ಲಾಕ್. ಫೋನ್‌ಬ್ಲಾಕ್ ವಿನ್ಯಾಸವನ್ನು ಅವರು ೨೦೧೩ರ ಸೆಪ್ಟೆಂಬರ್ ೧೦ರಂದು ಅಂತರಜಾಲದಲ್ಲಿ ಬಿಡುಗಡೆ ಮಾಡಿದರು. ಅಲ್ಲಿಂದ ಮುಂದೆ ನಡೆದಿದ್ದೆಲ್ಲ ಇತಿಹಾಸ. ಲಕ್ಷಗಟ್ಟಳೆ ಜನ ಈಗ ಫೋನ್‌ಬ್ಲಾಕ್ ವಿನ್ಯಾಸವನ್ನು ಮೆಚ್ಚಿ ಮೊಬೈಲ್ ಕಂಪೆನಿಗಳನ್ನು ಒತ್ತಾಯಿಸಿದ್ದಾರೆ. ಥಂಡರ್‌ಕ್ಲಾಪ್ ಎಂಬ ತಾಣದಲ್ಲಿ ಒಂಬತ್ತು ಲಕ್ಷ ಜನ ಈ ವಿನ್ಯಾಸವನ್ನು ಅನುಮೋದಿಸಿದ್ದಾರೆ. ಎಲ್ಲ ಮೊಬೈಲ್ ಕಂಪೆನಿಗಳೂ ಈ ವಿನ್ಯಾಸವನ್ನು ಅನುಸರಿಸಬಹುದೇ ಎಂದು ತಲೆ ಕೆಡಿಸಿಕೊಳ್ಳುತ್ತಿವೆ.
ಹಾಗಂತ ಇಲ್ಲಿಯೂ ಸಮಸ್ಯೆಗಳಿವೆ. ಫೋನ್‌ಬ್ಲಾಕ್‌ನಲ್ಲಿ ಎಲ್ಲವೂ ಬಿಡಿ ಭಾಗಗಳಾಗಿರುವುದರಿಂದ ಮಾಹಿತಿಯ ಹರಿವು ಎಂದಿನಂತೆ ಕ್ಷಣಮಾತ್ರದಲ್ಲಿ ಆಗುವುದೆ ಎಂಬುದನ್ನು ಖಚಿತಪಡಿಸಿಕೊಳ್ಳಬೇಕಿದೆ. ಸಂಕೇತಗಳನ್ನು ರವಾನಿಸುವ ದೂರ ಹೆಚ್ಚಾಗಿರುವುದು ಎಲೆಕ್ಟ್ರಾನಿಕ್ ಸಾಧನಗಳ ದೊಡ್ಡ ಸವಾಲಂತೂ ಹೌದು. ಇದಲ್ಲದೆ ಅಂತಿಮ ವಿನ್ಯಾಸವು ಈಗಿರುವ ಮೊಬೈಲ್‌ಗಳಿಗಿಂತ ದಪ್ಪವೂ, ಹೆಚ್ಚು ತೂಕದ್ದೂ ಆಗಿರಬಹುದು. ಇದೆಲ್ಲಕ್ಕಿಂತ ದೊಡ್ಡ ಅನುಮಾನ ಇನ್ನೊಂದಿದೆ: ಮೊಬೈಲನ್ನು ಖರೀದಿಸಿ, ಬಳಸಿ ಎಸೆಯುವ ಚಾಳಿ ಮುಕ್ತಾಯಗೊಂಡು ಮೊಬೈಲ್ ಬಿಡಿಭಾಗಗಳನ್ನು ಬೇಕಾಬಿಟ್ಟಿ ಬಳಸಿ ಎಸೆಯುವ ಹೊಸ ಚಾಳಿ ಶುರುವಾಗುವುದಿಲ್ಲವೆ? ಹಾಗಾದಾಗ ಇ-ವೇಸ್ಟ್ ಕಡಿಮೆ ಆಗುವುದರ ಬದಲು ಹೆಚ್ಚಾಗುವುದಿಲ್ಲವೆ? – ಇವೆಲ್ಲ ಪ್ರಶ್ನೆಗಳಿಗೂ ಡೇವ್ ಉತ್ತರ ಕಂಡುಕೊಳ್ಳಬೇಕಿದೆ.
ಅವರು ಖಂಡಿತ ಉತ್ತರ ಕಂಡುಕೊಳ್ಳುತ್ತಾರೆ ಎಂಬ ದೃಢವಿಶ್ವಾಸ ನನಗಿದೆ. ಏಕೆಂದರೆ ಅವರು ಕೇವಲ ಮೊಬೈಲ್ ಫೋನ್ ಬ್ಲಾಕ್‌ಗಳನ್ನಷ್ಟೇ ವಿನ್ಯಾಸ ಮಾಡಿದವರಲ್ಲ. ಪ್ಲಾಸ್ಟಿಕ್ ಮರುಬಳಕೆಯ ಬಗ್ಗೆ ವಿಶೇಷ ಸಂಶೋಧನೆ ನಡೆಸಿದ್ದಾರೆ; ಚಿಕ್ಕದಾದ ಪ್ಲಾಸ್ಟಿಕ್ ಮರುಬಳಕೆ ಘಟಕವನ್ನೇ ತಯಾರಿಸಿದ್ದಾರೆ. ಸಾಮಾಜಿಕ ವಿನ್ಯಾಸಕ್ಕಾಗಿ ವಿಶೇಷ ಬಹುಮಾನ ಪಡೆದಿದ್ದಾರೆ. ಕಚೇರಿ ಟಿಪ್ಪಣಿಗಳನ್ನು ಬರೆದುಕೊಳ್ಳುವ ಹೊಸ ಬಗೆಯ ಮೇಜುಕಲ್ಲುಗಳನ್ನು ಮರುಬಳಕೆ ವಸ್ತುಗಳಿಂದ ರೂಪಿಸಿದ್ದಾರೆ. ಯೋಚಿಸುತ್ತ ಬರೆಯುತ್ತ ವಸ್ತುಶಃ ತಿನ್ನಬಹುದಾದ ಪೆನ್ನುಗಳನ್ನು ರೂಪಿಸಿದ್ದಾರೆ. ದಿನವೂ ಬಳಸಬಹುದಾದ, ಆದರೆ ಇಡೀ ಸಾಬೂನನ್ನೇ ಮುಟ್ಟದ ಹಾಗೆ ಸಾಬೂನಿನ ಪುಟ್ಟ ಬಿಲ್ಲೆಗಳ ಕಟ್ಟನ್ನು ರೂಪಿಸಿದ್ದಾರೆ. ಅವರಿಗೆ ಹಿತ್ತಲಿನಲ್ಲಿ ಬೀನ್ಸ್ ಬೆಳೆಯುವುದೂ ಗೊತ್ತು! ಇಂಥ ವೈವಿಧ್ಯಮಯ ಚಿಂತನೆಯ ಡೇವ್‌ಗೆ ಈ ಸಮಸ್ಯೆಗಳೇನೂ ಹೊಸದಲ್ಲ. ತಮ್ಮ ತುರ್ತಿನ ಕೆಲಸಗಳ ನಡುವೆಯೂ `ಮಿತ್ರಮಾಧ್ಯಮ’ ದಲ್ಲಿ ಈ ಲೇಖನ ಬರೆಯುವ ಬಗ್ಗೆ ಈಮೈಲ್ ಮೂಲಕ ತಿಳಿದುಕೊಂಡ ಡೇವ್ ಅತ್ಯಂತ ಖುಷಿಯಿಂದ ಸಾರ್ವಜನಿಕರಿಗೆ ಮತ್ತು ಮಂಡಳಿಗೆ ಶುಭಾಶಯ ಹೇಳಿದ್ದಾರೆ! ಅಂದಮೇಲೆ ಅವರ ಕ್ರಿಯಾಶೀಲತೆಯನ್ನು ನೀವೇ ಊಹಿಸಿಕೊಳ್ಳಿ.
ಇನ್ನೊಂದು ಉದಾಹರಣೆ ಕೊಡುವುದಾದರೆ ಓದಿ: ತಮ್ಮ ಹೊಲದಲ್ಲಿ ಅವರೊಂದು ಗಾಳಿ ಗಿರಣಿ ಸ್ಥಾಪಿಸಿದ್ದಾರೆ. ಅದರಿಂದ ತಮಗೆ ಬೇಕಾದ ಬೀಜಗಳನ್ನು ಜಜ್ಜಿ ಎಣ್ಣೆ ಮಾಡಿಕೊಳ್ಳುತ್ತಾರೆ!
ಬಹುಶಃ ಮೊಬೈಲ್‌ಗಳು ಸ್ಮಾರ್ಟ್‌ಫೋನ್ ಆದಮೇಲೆ ಅದರ ವಿನ್ಯಾಸದ ಬಗ್ಗೆ ಇಷ್ಟೆಲ್ಲ ಜಾಗತಿಕ ಸುದ್ದಿ ಆಗ್ತಾ ಇರೋದು ಇದೇ ಮೊದಲು. ಡೇವ್‌ನಂಥ ಚುರುಕಿನ, ಸಮಾಜಪ್ರೇಮಿ, ಮರುಬಳಕೆ ವ್ಯಕ್ತಿತ್ವದಿಂದಾಗಿ ಫೋನ್‌ಬ್ಲಾಕ್ ಪರಿಕಲ್ಪನೆಗೆ ಜೀವ ಬಂದಿದೆ. ಅವರೀಗ ಎಲ್ಲ ಮೊಬೈಲ್ ಕಂಪೆನಿಗಳ ಗಮನಕ್ಕೆ ತುತ್ತಾಗಿದ್ದಾರೆ. ತಮ್ಮ ವಿನ್ಯಾಸವನ್ನು ಅವರು ಸುಧಾರಿಸಿ ಮನುಕುಲಕ್ಕೆ ಹೊಸ ಮೊಬೈಲ್ ರಚನಾ ವಿನ್ಯಾಸವನ್ನು ಕೊಡುತ್ತಾರೆ; ಇ-ಕಸವನ್ನು ತಗ್ಗಿಸುತ್ತಾರೆ ಎಂದು ಆಶಿಸೋಣ.
ನೀವೂ ಈ ಯೋಜನೆಯಲ್ಲಿ ನಿಮಗೇನು ಬೇಕು ಎಂದು ಸೂಚಿಸಬೇಕೆ? ಹಾಗಾದರೆ https://discuss.phonebloks.com/home ಈ ವೆಬ್‌ಸೈಟ್‌ಗೆ ಭೇಟಿ ನೀಡಿ.
ಡೇವ್ ಹಕೆನ್ಸ್ ವೆಬ್‌ಸೈಟ್ ಇಲ್ಲಿದೆ: http://www.davehakkens.nl