ಮಲೆನಾಡಿನ ಜಡಿಮಳೆಯ ಮುಂಜಾನೆ. ಮುಂಜಾನೆಯ ಒಂದೇ ಗಂಟೆಯಲ್ಲಿ ೨೬ ಸಾವಿರ ಜೈವಿಕ ಇಂಧನ ಸಸಿಗಳ ನಾಟಿ. ಇಂಥದ್ದೊಂದು ದಾಖಲೆ ಸಾಧಿಸಿದ ಕೀರ್ತಿ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡಿನ ತಟ್ಟಿಹಳ್ಳ ಟಿಬೆಟನ್ ಸೆಟಲ್‌ಮೆಂಟ್‌ನ ಲಾಮಾಗಳದ್ದು.
೨೦೧೦ರ ಜುಲೈ ೬ರಂದು ನಡೆದ ಈ ಘಟನೆ ಕಜೈಕಾದ ವಿನಂತಿಯ ಮೇರೆಗೆ ಧಾರವಾಡ ಕೃಷಿ ವಿಶ್ವವಿದ್ಯಾಲಯದ ಮಗದ್‌ನಿಂದ ಮುಂಜಾನೆಯೇ ಲಾರಿಗಳಲ್ಲಿ ಸಸಿಗಳು ಬಂದವು. ಭರ್ಜರಿ ಮಳೆ. ದೇಶಭ್ರಷ್ಟರಾಗಿ ಭಾರತದಲ್ಲಿ ಆಸರೆ ಪಡೆದ ಟಿಬೆಟನ್ನರಿಗೆ ಅವರದೇ ಸರ್ಕಾರವಿದೆ. ಇಡೀ ಪ್ರದೇಶಕ್ಕೊಬ್ಬ ಅಧಿಕಾರಿ ಇದ್ದಾರೆ. ಅವರ ಆದೇಶದಂತೆ ಧಾರ್ಮಿಕ ತರಬೇತಿಯಲ್ಲಿದ್ದ ನಾಲ್ಕು ಸಾವಿರ ಲಾಮಾಗಳು ನಡೆದುಕೊಂಡರು. ಹಿಂದಿನ ದಿನವೇ ಹೊಲಗಳ ಬದುಗಳಲ್ಲಿ, ಬೇಲಿ ಸಾಲುಗಳಲ್ಲಿ ಗುಂಡಿ ತೋಡಿದ್ದರು.
ನೆಡುವ ಸೂಚನೆಗೆ ಪ್ರಶ್ನಾತೀತ ಪಾಲನೆ
ಆ ದಿನ ಅವರು ಮಾಡಿದ್ದಿಷ್ಟೆ: ಸಸಿಗಳನ್ನು ಪ್ರೀತಿಯಿಂದ ತಲೆಮೇಲೆ ಹೊತ್ತು ನಡೆದರು; ಅವುಗಳನ್ನು ಸಾಲು ಸಾಲಾಗಿ ನೆಟ್ಟರು. ಅವರಲ್ಲಿ ಎಷ್ಟು ಜನ ಅಂದಿನ ಕಾರ್ಯಕ್ರಮದಲ್ಲಿ ಪಾಲ್ಗೊಂಡರೋ, ಜ್ವರಕ್ಕೆ ಬಿದ್ದರೋ… ಗೊತ್ತಿಲ್ಲ. ಇದೊಂದು ದಾಖಲೆಯ ನಾಟಿ ಎಂಬ ಸಂಗತಿಯೂ ಅವರಿಗೆ ಗೊತ್ತಿಲ್ಲ ಬಿಡಿ!
ಆ ದಿನವನ್ನು ಸೆಟಲ್‌ಮೆಂಟ್‌ನ ಕೃಷಿ ಶಿಕ್ಷಣ ಅಧಿಕಾರಿ ಜಾಮ್ಯಾಂಗ್ ಈಗಲೂ ನೆನಪಿಸಿಕೊಳ್ಳುತ್ತಾರೆ. ಟಿಬೆಟನ್ ಮಿಶ್ರಿತ ಕನ್ನಡದಲ್ಲಿ ಅವರು ವಿನಯದಿಂದ ಕಥೆ ಒಪ್ಪಿಸುವುದನ್ನು ಕೇಳುವುದೇ ಒಂದು ಅನುಭವ.
ಇಂಥ ದಾಖಲೆಗೆ ಕಾರಣವಾದ ಪ್ರದೇಶ ಈಗ ಹೇಗಿದೆ? ಮೇ ಮೊದಲ ವಾರ ಅಲ್ಲಿಗೆ ಹೋದಾಗ ಸೆಟಲ್‌ಮೆಂಟ್‌ಗೆ ಹೊಸ ಮೇಲಧಿಕಾರಿ ಸೋನಮ್ ತೇನ್‌ಸಿಂಗ್ ಬಂದಿದ್ದರು. ಜೈವಿಕ ಇಂಧನ ಸಸ್ಯಗಳನ್ನು ದಾಖಲೆ ಕಾಲಾವಧಿಯಲ್ಲಿ ನೆಟ್ಟ ರೋಚಕ ಕಥೆ ಅವರಿಗೆ ಅಷ್ಟಾಗಿ ಗೊತ್ತಿರಲಿಲ್ಲ. ನಮ್ಮ ಜೊತೆಗೇ ಅವರೂ ಈ ಕಥೆಯನ್ನು ತಿಳಿದುಕೊಂಡರು.
ಎರಡು ವರ್ಷಗಳಲ್ಲಿ ಕಥೆ ಹಲವು ತಿರುವುಗಳನ್ನು ಪಡೆದುಕೊಂಡಿದೆ. ಅಂದು ನೆಟ್ಟ ಸಸಿಗಳಲ್ಲಿ ಸುಮಾರು ಹತ್ತು ಸಾವಿರ ಸಸಿಗಳು ಉಳಿದುಕೊಂಡಿವೆ ಎಂದು ಇನ್ನೊಬ್ಬ ಕೃಷಿ ಶಿಕ್ಷಣ ಅಧಿಕಾರಿ ಸೆರಿಂಗ್ ಚೂದೆನ್ ಕರೆದುಕೊಂಡು ಹೋಗಿ ತೋರಿಸಿದರು. ಅಂದು ನೆಟ್ಟ ಸಸಿಗಳನ್ನು ನೋಡಿದರೆ, ಅವು ಬೆಳೆದಿದ್ದೇನೋ ನಿಜ. ಆದರೆ ನಿರೀಕ್ಷಿತ ಪ್ರಮಾಣದ ಎತ್ತರಕ್ಕೆ ಬೆಳೆದಿಲ್ಲ. ಕೆಲವಂತೂ ಇನ್ನೂ ಪುಟಾಣಿ ಸಸಿಗಳಾಗೇ ಕಾಣಿಸುತ್ತವೆ.
ಕಾರಣ? ಗಿಡಗಳನ್ನು ಆರೈಕೆ ಮಾಡುವುದಕ್ಕೆ ಟಿಬೆಟನ್ ರೈತರು ಮುಂದಾಗಿಲ್ಲ. `ಅವ್ರೂ ನಿಮ್ ರೈತರ (ಭಾರತೀಯ ರೈತರು) ಥರಾನೇ. ಇದ್ರಿಂದ ಏನು ಲಾಭ ಅಂತ ಕೇಳ್ತಾರೆ. ಎಲ್ರಿಗೂ ಕಮರ್ಶಿಯಲ್ ಇಂಟರೆಸ್ಟ್ ಇದೆ’ ಎಂದು ಸೆರಿಂಗ್ ಹಿಂದಿಯಲ್ಲಿ ಅರುಹಿದರು. ೩೦೫೪ ಎಕರೆ ಪ್ರದೇಶದಲ್ಲಿ ಸರಿಸುಮಾರು ಎಲ್ಲ ಬದುಗಳ ಮೇಲೂ ಹೊಂಗೆಯ ಸಸಿಗಳನ್ನು ನೆಟ್ಟಿದ್ದಾರೆ. ಕೆಲವೊಂದು ಸಿಮರೂಬ ಸಸಿಗಳೂ ಕಂಡವು.
ಕಾರಣ ಇನ್ನೂ ಇದೆ. ಇಲ್ಲಿಗೆ ಬಂದ ಸಸಿಗಳೆಲ್ಲವೂ ಪುಟ್ಟವೇ. ದೊಡ್ಡ ಸಸಿಗಳನ್ನೇ ಇಲ್ಲಿ ನೆಟ್ಟಿದ್ದರೆ ಇಷ್ಟುಹೊತ್ತಿಗೆ ಎಲ್ಲರಿಗೂ ಉತ್ಸಾಹ ಮೂಡಿಸುವಷ್ಟು ಎತ್ತರಕ್ಕೆ ಸಸಿಗಳು ಬೆಳೆಯುತ್ತಿದ್ದವು.
ಜೊತೆಗೆ ಇಲ್ಲೂ ಕುರುಬರ ಸಮಸ್ಯೆ. ಅವರು ಕುರಿಗಳನ್ನು ಮೇಯಿಸಲು ಪರ್ಮಿಟ್ ಇದೆ ಎಂದೇ ತಿಳಿಸುತ್ತಾರೆ. ಅವರೊಡನೆ ಸಂಘರ್ಷ ಮಾಡಲು ಟಿಬೆಟನ್ ಅಧಿಕಾರಿಗಳಿಗೆ ಸಾಧ್ಯವಿಲ್ಲ. ತಾವು ಎಷ್ಟಿದ್ದರೂ ವಿದೇಶಿಯರು ಎಂಬ ವಿನೀತ ಭಾವ ಬೇರೆ. ಹೊಂಗೆಯ ಎಳೆ ಎಲೆಗಳನ್ನು ಕುರಿಗಳು ತಿನ್ನುತ್ತವೆ ಎಂದು ಅಧಿಕಾರಿಗಳು ತಿಳಿಸಿದರು. `ಕುರಿ ಬರ್‍ತಾವು, ತಿಂತಾರ, ಸ್ವಲ್ಪ ತಿಂದು ಬಿಟ್ತಾರ. ಆಗ ಗ್ರೋಥ್ ಆಗೂದಿಲ್ಲ. ಕಾಂಪೌಂಡ್ ಪಕ್ಕ ಎಂಟು ನಂಬರ್, ಏಳು ನಂಬರ್ ಕ್ಯಾಂಪ್‌ನಲ್ಲೂ ಪ್ಲಾಂಟಿಂಗ್ ಮಾಡ್ಸಿದೀವಿ’ ಎಂದು ಚಾಮ್ಯಾಂಗ್ ತಿಳಿಸಿದರು.
ಟಿಬೆಟನ್ ಕ್ಯಾಂಪಿಗೆ ಬಂದ ಮುಂಡಗೋಡದ ಸಹಾಯಕ ಅರಣ್ಯಾಧಿಕಾರಿ (ಎಸಿಎಫ್) ವಿ ಆರ್ ಬಸನಗೌಡರ್ ಕೂಡಾ ಟಿಬೆಟನ್ನರ ಕಾರ್ಯಕ್ಷಮತೆಯನ್ನು ಮೆಚ್ಚಿಕೊಂಡರು. ದಲಾಯಿ ಲಾಮಾ ಮೂಲಕ ಒಂದು ಸಲ ಜೈವಿಕ ಇಂಧನ ಸಸಿಗಳನ್ನು ಸಂರಕ್ಷಿಸುವ ಬಗ್ಗೆ, ಬಯೋಡೀಸೆಲ್ ಮಾಡುವ ಬಗ್ಗೆ ಒಂದು ದಿವ್ಯಸಂದೇಶ ಕೊಡಿಸಿದರೆ ಇವರೆಲ್ಲ ವಿಧೇಯರಾಗಿ ಮಾಡಿತ್ತಾರೆ ಎಂಬ ಐಡಿಯಾ ಅವರದು!
ಬಸನಗೌಡರ್ ಕೂಡಾ ಹಿಂದೊಮ್ಮೆ ಕಿರವತ್ತಿಯಲ್ಲಿ ಹೊಂಗೆ, ಸಿಮರೂಬದ ಬ್ಲಾಕ್ ಪ್ಲಾಂಟೇಶನ್ ಮಾಡಿದವರು. ಕೊನೆಗೆ ನಿರ್ವಹಣೆಗೆ ಧನಸಹಾಯ ಸಿಗಲಿಲ್ಲ ಎಂದು ಬಿಡಬೇಕಾಯಿತು. ಅಲ್ಲೂ ಹೊಂಗೆ ಗಿಡಗಳು ಚೆನ್ನಾಗಿ ಬಂದಿದ್ದವಂತೆ.
ಟಿಬೆಟನ್ ಕ್ಯಾಂಪಿನಿಂದ ಮುಂಡಗೋಡದ ನರ್ಸರಿ ತಲುಪಿದರೆ ಅಲ್ಲಿ ಹೊಂಗೆ ಸಸಿಗಳನ್ನೂ ಸಾವಿರಾರು ಸಂಖ್ಯೆಯಲ್ಲಿ ಬೆಳೆಸಿದ್ದು ಕಂಡುಬಂತು. `೨೦ ಸಾವಿರ ಸಸಿ ಇದೆ, ಈ ವರ್ಷ ಇದನ್ನೆಲ್ಲ ನಾಟಿ ಮಾಡಬಹುದು. ಸೂಕ್ತ ಧನಸಹಾಯ ಸಿಕ್ಕಿದರೆ ಒಂದು ಲಕ್ಷ ಸಸಿ ಬೆಳೆಸಲು ನಾವು ಸಿದ್ಧ’ ಎಂದು ಬಸನಗೌಡರ್ ಸ್ಥಳದಲ್ಲೇ ಘೋಷಿಸಿದರು.
ಮಾಹಿತಿಯ ಕೊರತೆ
ಅಷ್ಟೇ ಅಲ್ಲ, ತಟ್ಟಿಹಳ್ಳದಲ್ಲಿ ರೈತರಿಗೆ ಜೈವಿಕ ಇಂಧನ ಸಸಿಗಳ ಆರೈಕೆ ಮತ್ತು ಮುಂದಿನ ಲಾಭಗಳ ಬಗ್ಗೆ ಮತ್ತೆ ಮತ್ತೆ ತಿಳಿಸುವ ಕೆಲಸ ನಡೆದಿಲ್ಲ. ೨೦೧೧ರ ಅಕ್ಟೋಬರಿನಲ್ಲಿ ರೈತರ ಸಭೆ ನಡೆದಾಗ ಕೃಷಿ ಶಿಕ್ಷಣ ಅಧಿಕಾರಿಗಳು ಜೈವಿಕ ಇಂಧನ ಸಸ್ಯಗಳ ಸುಸ್ಥಿರ ಅನುಕೂಲಗಳನ್ನು, ಬಯೋಡೀಸೆಲ್ ಮಾರುಕಟ್ಟೆ ವಿವರಗಳನ್ನು ಒದಗಿಸಿದ್ದೇನೋ ಹೌದು. ಆದರೆ ಅದೇನೂ ರೈತರ ಮೇಲೆ ಅಂಥ ಪರಿಣಾಮ ಬೀರಿದಂತಿಲ್ಲ. ಜೈವಿಕ ಇಂಧನ ತಜ್ಞರಾರೂ ಇರದ ಆ ಸಭೆಯನ್ನು ಈ ಕೃಷಿ ಅಧಿಕಾರಿಗಳೇ ತಮ್ಮ ಮಿತಿಯಲ್ಲಿ ನಿಭಾಯಿಸಿದ್ದರು. ಈಗ ಶ್ರಮ ಹಾಕಿ, ಮುಂದೆ ಲಾಭ ಬರುತ್ತೆ ಎಂದು ಪುಸಲಾಯಿಸಿದ್ದರು. `ಅವೇರ್‌ನೆಸ್ ತೋ ಕಿಯಾ ಹೈ’ ಎಂಬುದು ಸೆರಿಂಗ್ `ಇಸ್ ಕೇ ಲಿಯೇ ಹಮಾರಾ ಇರಾದಾ ಹೈ ಇಸ್ ಕಾ… ಇಸ್‌ಕಾ ಮಾಸ್ ಭೀ ಮಿಲೇಗಾ ಅಂತ ಹೇಳ್ತೀವಿ’. ಬೀಜ ಸಿಗದಿದ್ದರೇನಂತೆ, ಎಲೆಗೊಬ್ಬರ ಆಗುತ್ತಲ್ಲ ಎಂದು ರೈತರಿಗೆ ಆಕರ್ಷಣೆ ತೋರಿಸಿದ್ದಾರೆ.
`ಹತ್ತು ವರ್ಷದ ಮೇಲೆ ನೋಡಿ, ಈ ಗಿಡಗಳು ಚೆನ್ನಾಗಿ ಮೇಲೆದ್ದಿರುತ್ತವೆ’ ಎಂದು ಸೆರಿಂಗ್ ವಿಶ್ವಾಸ ತೋರಿದರು.
ಈ ಕ್ಯಾಂಪಿನಲ್ಲಿ ೩೨೪ ಸಾವಯವ ಕೃಷಿಕರು ಇದಾರೆ. ಸುಮಾರು ೧೩೦೦ ಎಕರೆಗಳಲ್ಲಿ ಸಾವಯವ ಕೃಷಿ ನಡೆದಿದೆ. ಅಲ್ಲಿ ಬೇವಿನ ಹಿಂಡಿಯನ್ನು ಬಳಸಿ ಹೆಚ್ಚಿನ ಫಸಲು ಸಿಗುವುದನ್ನು ಕಂಡುಕೊಂಡಿದ್ದಾರೆ. ಅವರಿಂದಲೇ ಜೈವಿಕ ಇಂಧನ ಜಾಗೃತಿ ಕಾರ್ಯವನ್ನು ಮಾಡಿಸಬಹುದು ಎಂಬ ಮಾತು ಬಂತು. ಕ್ಯಾಂಪಿನ ಹತ್ತಾರು ರಸ್ತೆಗಳ ಬದಿಗಳಲ್ಲಿ ಹೊಂಗೆ ಬೆಳೆಯಬಹುದು. ಅಲ್ಲಿರುವ ನಾಲೆಯ ಬದುಗಳಲ್ಲಿ ಈಗಾಗಲೇ ದೊಡ್ಡ ದೊಡ್ಡ ಹೊಂಗೆ ಮರಗಳು ಇರುವುದೇ ಈ ಸಾಧ್ಯತೆಗೆ ಇಂಬು. ಮುಂಡಗೋಡು ಒಂದು ರೀತಿಯಲ್ಲಿ ಮಲೆನಾಡಿಗೆ ಅಂಟಿಕೊಂಡ, ಬಯಲುಸೀಮೆ ಚಹರೆಯ ಪ್ರದೇಶವಾದ್ದರಿಂದ ಹೊಂಗೆಯ ಸಾಧ್ಯತೆ ಹೆಚ್ಚು. ಅಲ್ಲೂ ಬೀಜಗಳು ಸಿಗುತ್ತವೆ ಎಂದು ಸೆರಿಂಗ್ ಮತ್ತು ಚಾಮ್ಯಾಂಗ್ ತಿಳಿಸಿದರು. ಈ ವರ್ಷ ಬೀಜಸಂಗ್ರಹಕ್ಕೆ ಒತ್ತು ಕೊಡಲು ಯೋಚಿಸ್ತೇವೆ ಎಂಬುದು ಅವರ ಭರವಸೆ.
ಟಿಬೆಟನ್ನರ ಇನ್ನೊಂದು ಶಿಬಿರವಾದ ಕೊಡಗು ಜಿಲ್ಲೆಯ ಬೈಲುಕುಪ್ಪೆಯಲ್ಲಿ ಹೊಂಗೆ ಬೆಳೆಯೂ ಇದೆ, ನರ್ಸರಿಯೂ ಇದೆ ಎಂಬ ಮಾಹಿತಿ ತಿಳಿಯಿತು.
ಚಾಮ್ಯಾಂಗ್ ಪಾಯಿಂಟ್
`ಈಗ ನಂದು ಪಾಯಿಂಟ್ ಸರ್, ಗ್ರಾಫ್ಟಿಂಗ್ ಇಲ್ಲ. ಗ್ರಾಫ್ಟಿಂಗ್ ಮಾಡ್ಸಿದ್ರೆ ಚಲೋಗೆ ಬರ್‍ತದ’ ಎಂದು ಮೆಲ್ಲಗೆ ಚಾಮ್ಯಾಂಗ್ ತಮ್ಮ ಸಲಹೆಯನ್ನು ಜೈಮಂಡಳಿಯ ನಟರಾಜ ದೇಸಾಯಿಯವರ ಮುಂದಿಟ್ಟರು.
ಅವರು ಹೇಳಿದ್ದು ನಿಜ. ಹೆಚ್ಚು ಫಸಲು ಕೊಡುವ ಹೊಂಗೆ ಮರಗಳ ಟಿಸಿಲು ಕಸಿ ಮಾಡಿದ ಸಸಿಗಳನ್ನು ಕೊಟ್ಟರೆ, ಟಿಬೆಟನ್ ಕ್ಯಾಂಪಿನಲ್ಲೆ ನೆಟ್ಟರೆ ಬಹುಬೇಗ ಫಲ ಕಾಣುತ್ತದೆ. ರೈತರನ್ನು ಒಪ್ಪಿಸುವುದು ಸುಲಭ. ಈ ವರ್ಷವೇ ಇಲ್ಲಿಗೆ ಒಂದು ಎಣ್ಣೆ ತೆಗೆವ ಘಟಕ ಬರುವುದಾದರೆ, ಇವೆಲ್ಲ ಯೋಜನೆಗಳನ್ನೂ ಚೆನ್ನಾಗಿ ರೂಪಿಸಬೇಕಿದೆ ಅನ್ನಿಸಿತು.
ಟಿಬೆಟನ್ ಸಮುದಾಯವೇ ಶ್ರಮಜೀವಿಗಳ ಸಮುದಾಯ. ಜೊತೆಗೆ ಧರ್ಮಭೀರು ಮನೋಭಾವ. ಎಲ್ಲಿಂದಲೋ ಬಂದು ಕನ್ನಡಿಗರ ನಡುವೆಯೂ ತಮ್ಮ ಚಹರೆ ಉಳಿಸಿಕೊಳ್ಳಲು ಯತ್ನಿಸುವ ಟಬೆಟನ್ನರಿಗೆ ಸಸಿ ನೆಡುವುದೂ ಒಂದು ನಿತ್ಯದ ಕಾಯಕ. ದೇಶಭ್ರಷ್ಟವಾಗಿ ಭೌತಿಕವಾಗೇ ಅಸ್ಥಿರವಾಗಿದ್ದರೂ ಸುಸ್ಥಿರ ಬದುಕಿಗೆ ಹಾತೊರೆವ ಅವರ ಮಾದರಿ ಅನುಕರಣೀಯ.
(ಕರ್ನಾಟಕ ರಾಜ್ಯ ಜೈವಿಕ ಇಂಧನ ಮಂಡಳಿಯ ಮಾಧ್ಯಮ ಫೆಲೋಶಿಪ್ ಅವಧಿಯಲ್ಲಿ ಭೇಟಿ ನೀಡಿ ಬರೆದ ಲೇಖನ. ಇದು ಭೂಮಿ ಬುಕ್ಸ್‌ನಿಂದ `ಉರಿಯ ಸಿರಿ’ ಶೀರ್ಷಿಕೆಯ ಪುಸ್ತಕದಲ್ಲಿ ಬಂದ ಲೇಖನಗಳಲ್ಲೊಂದು.)