Moore Mooru Nenapu
A short story published in Udayavani Deepavali issue 2005. This is based on my nostalgic memories.
ಅವಳು ಅವತ್ತು ನಕ್ಕ ಬಗೆಗೆ ನಾನು ಇವತ್ತೂ ಸೋತಿದ್ದೇನೆ. ಅವಳು ಅವತ್ತು ಅರಳಿಸಿದ ಕಣ್ಣುಗಳಲ್ಲಿ ನನ್ನ ಬಿಂಬ ಇತ್ತೇ ಎಂದು ಇವತ್ತೂ ನಾನು ಹುಡುಕುತ್ತಿದ್ದೇನೆ. ಅವಳ ಸರ್ಟಿಫಿಕೇಟುಗಳ ಸ್ಪರ್ಶದ ಗಂಧ ನನ್ನ ಅಂಗೈಯಲ್ಲಿ ಇವತ್ತೂ ಇದೆಯೆ ಎಂದು ಮೂಸಿ ನೋಡುತ್ತಿದ್ದೇನೆ. ಸುಬ್ರಹ್ಮಣ್ಯದ ಅಂಗಳದಲ್ಲಿ ಅವಳು ಬಿತ್ತಿದ ಕನಸುಗಳು ಅರಳಿವೆಯೆ ಎಂದು ನೋಡುವುದಕ್ಕೆ ನಾನು ಕಾತರನಾಗಿದ್ದೇನೆ.
ಅವಳು ಅವತ್ತು ನನಗೆ ಎಲ್ಲ ಸರ್ಟಿಫಿಕೇಟುಗಳನ್ನು ತೋರಿಸಿದಾಗ ನಾನು ಅವಳನ್ನು ಆರಾಧಿಸಿದೆ. ಅವಳ ದೇಹ, ಕಡುಗಪ್ಪು ಗಲ್ಲವನ್ನು ದಿಟ್ಟಿಸಿದೆ. ಲಾಂಗ್ ಕಂಪ್, ಹೈ ಜಂಪ್, ರನ್ನಿಂಗ್ ರೇಸ್, ಜಾವೆಲಿನ್ ಥ್ರೋ…. ಎಲ್ಲಾ ಸ್ಪರ್ಧೆಗಳಲ್ಲೂ ಅವಳು ಗೆದ್ದಿದ್ದಾಳೆ.
ಸುಬ್ರಹ್ಮಣ್ಯದ ಕಡುಮಳೆಯ ನಡುವೆ ಅವಳು ಹೇಳಿದ ಮಾತುಗಳು ಈಗಲೂ ನನಗೆ ಸ್ಫಟಿಕ ಶುದ್ಧವಾಗಿ ಕೇಳಿಸುತ್ತಿದೆ. `ನಾನು ತಗೊಂಡ ಸರ್ಟಿಫಿಕೇಟ್ ನೋಡಿದ್ಯಲ್ಲ, ಈಗ ಹೇಳು ನಾನು ಮುಂದೆ ಓದಬಹುದಿತ್ತಲ್ವ? ನಾನು ಯಾವಾಗ್ಲೂ ಫಸ್ಟ್ ಅಥವಾ ಸೆಕೆಂಡ್ ಪ್ಲೇಸ್ ತಗೊಂಡಿದೀನಿ… '
ಕಾರ್ತಿಕೇಯನ್
ನನ್ನ ಕ್ಲಾಸ್‌ಮೇಟ್. ಕೇರ್ ಉಪ್ಪಿಟ್ಟಿನ ದಿನಗಳಲ್ಲಿ ನನ್ನ ಜೊತೆಯಾದವನು. ಅಂಗಳದಲ್ಲಿ ನನ್ನ ಜತೆ ದಿನಗಟ್ಟಳೆ ಆಟವಾಡಿದವನು. ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಅವನ ಅಪ್ಪ ನಾಗಸ್ವರಕ್ಕೆ ಡೋಲು ಬಾರಿಸುತ್ತಾರೆ.
ನಾನು ಎಂಟು ಗಂಟೆಗೆ ಸರಿಯಾಗಿ ಅಕ್ಕನ ಜೊತೆಗೆ ಹೋಗಿ ದೊಡ್ಡ ಗಂಟೆಯನ್ನು ಹಿಡಿಯುತ್ತೇನೆ. ನಾನು ಸುಬ್ರಹ್ಮಣ್ಯಕ್ಕೆ ಹೋದ ಹೊತ್ತಿಗೆ ರಾತ್ರಿಯಾಗಿತ್ತು. ನಾನು ಹೋದಾಗ ಅಲ್ಲಿ ಅಕ್ಕ ಮತ್ತು ಅಣ್ಣ ಗಂಟೆ ಹಿಡಿದು ನಿಂತಿದ್ದರು. ಆ ಕತ್ತಲಿನಲ್ಲಿ ನನಗೆ ಅವರಿಬ್ಬರೂ ದೇವತೆಗಳ ಹಾಗೆ ಕಂಡರು. ಪ್ರಾಂಗಣವೆಲ್ಲ ಮಂದ ಬೆಳಕಿನಲ್ಲಿ ತೊಯ್ದು ಹೋಗಿತ್ತು. ನಾಗಸ್ವರ, ಡೋಲಕ್, ಆರತಿ, ಕಿಣಿಕಿಣಿ ನಾದದ ನಡುವೆ ನಾನು ಆ ಗುಡ್ಡಗಳಲ್ಲಿ ಕರಗಿಹೋಗಿದ್ದೆ. ದಿನವೂ ಎದ್ದರೆ ಕಾಣಿಸುವ ಕುಮಾರಪರ್ವತ. ಅದಕ್ಕೆ ಮುನ್ನುಡಿಯಾ&am
p;#322
3;ಿ ಕಾಣುವ ಕಲ್ಲುಗುಡ್ಡ….. ಅಲ್ಲಿ ಇರೋ ಭಟ್ಟರ ಮಗನೂ ನನ್ನ ಕ್ಲಾಸ್‌ಮೇಟ್. ದಿನಾ ಅಲ್ಲಿಂದ ಹಾಲು ತರುತ್ತಾನೆ.
ನಾನು ಅಷ್ಟು ಹೊತ್ತಿಗೆ ತೀರ್ಮಾನಿಸಿದ್ದೆ. ಸುನೀತಳೇ ನನ್ನ ಲವರ್. ಅವತ್ತು ಆಕಾಶದಲ್ಲಿ ಜೇನುಹುಳಗಳು ಸರ್ರನೆ ಹಾರಿ ಹೋಗಿದ್ದವು. ನಮ್ಮೆಲ್ಲರಿಗೂ ಭಯ ಆಗೋ ಹಾಗೆ ಅವು ನಮ್ಮ ಮನೆ ಮೇಲೇ ಗೂಡು ಕಟ್ಟಿದವು. ನಾವೆಲ್ಲ ಆ ಮಳೆಯಲ್ಲೂ ಆಡಿದ್ದೆವು. ಅವಳ ಗುಲಾಬಿ ಬಣ್ಣದ ಉದ್ದ ಲಂಗದ ನೆರಿಗೆಗಳು ಮಣ್ಣು ಹಾದಿಯಲ್ಲಿ ಹಾರಿದ ಬಗೆ ನನಗೆ ಈಗಲೂ ನೆನಪಿದೆ.
ಕೋ……….ರ್ಟು………. ಸೂ…….ಚ……..ನೆ….
ಅರ್ಧ ನಿಮಿಷ ಎಳೆದು ಎಕ್ಸರ್‌ಸೈಜ್ ತೆಗೆದರೆ ಅವಳ ಹೆಸರು ಬರೆಯಬೇಕೆಂತ ಅನ್ನಿಸೋದೇ ಇಲ್ಲ. ಅವಳು ಅಲ್ಲಿ ನಾಗರತ್ನನ ಜೊತೆ ಮಾತಾಡ್ತಿದಾಳೆ. ನಾಗರತ್ನನ ನಸುನಗುವಿನಲ್ಲಿ ನಾನು ಗಂಭೀರವಾಗ್ತಾ ಇದೇನೆ.
`ಇದೇನು.. ಈ ಹಾಳೆ ಯಾಕೆ ಖಾಲಿ ಬಿಟ್ಟಿದೀಯಾ?' ಇಬ್ಬರೂ ಅವತ್ತು ಬಂದು ಕೇಳಿದಾಗ ಬೆವರು ಸಾಲುಗಟ್ಟಿ… ಥತ್.. ಇವರಿಗೆ ಈ ನೋಟ್‌ಬುಕ್ ಯಾಕಾದ್ರೂ ತೋರಿಸಬೇಕಾಗಿತ್ತು… ಈ ಹಾಳೆಯ ಮೇಲೆ ಕಲೆ ಇದೆ… ಈ ಹಾಳೆಯ ಮೇಲೆ ನಾನು ಬರೆಯಲಾರೆ. ನನಗೆ ಹಾಳೆ ಪೂರಾ ಬಿಳಿ ಇರಬೇಕು. ನಾನು ಎ ಬಿ ಸಿ ಡಿ ಬರೆಯೋದು ಅಂದ್ರೆ ಒಂದಷ್ಟೂ ಕೊಳಕು ಇರಬಾರದು.
ಅವಳ ಮನೆಯಲ್ಲಿ ಜೋಕಾಲಿ ಇತ್ತು. ಈಗೆಲ್ಲ ಒಂಥರ ಕನಸು.. ಒಂಥರ ಕಾಲದ ಯಾವುದೋ ಗರ್ಭದಲ್ಲಿ ಅವರ ಮನೆ, ರೂಮು, ಪುಸ್ತಕಗಳೆಲ್ಲ ಹೊಳೆಯುತ್ತಿವೆ. ಅವಳ ನಸುಸ್ಪರ್ಶವೂ ನನ್ನೊಳಗೆ ಹುಟ್ಟಿಸುತ್ತಿದ್ದ ರೋಮಾಂಚನ ಈಗ ಎಂಥ ಮಧುರ ಯಾತನೆಯಾಗಿ ಕಾಡುತ್ತಿದೆ. ಎಲ್ ಆಕಾರದ ಅವಳ ಮನೆಯ ಅಂಗಳಕ್ಕೆ ಇಳಿದು ನಾವು ನಿಂತಿದ್ದೇವೆ. ಮಳೆ ಬಂದು ಅಂಗಳ ಜಾರುತ್ತಿದೆ.
ಸುನೀತಳ? ಅವಳು ಬಿ ಎಸ್ಸಿ ಮಾಡ್ತಿದಾಳೆ.
ನನ್ನಂಥ ಕ್ರಿಮಿನಲ್‌ಗೆ ಅಷ್ಟು ಸಾಕು. ಅವಳನ್ನು ಕಾಲೇಜಿನ ಕಾರಿಡಾರ್‌ನಲ್ಲೇ ಎದುರಾಗಿ ಮಾತಾಡಿದೆ. ಅರೆ, ಇವಳು ನನ್ನ ಮಧುರ ಸುನೀತಳ ಥರ ಕಾಣ್ತಾ ಇಲ್ಲ. ನನ್ನ ಕನಸುಗಳಲ್ಲಿ, ನನ್ನ ಅಡೋಲಸೆಂಟ್ ಕ್ಷಣಗಳಲ್ಲಿ ನನ್ನೆದುರು ಮೆದುವಾಗಿ ಹರಿದುಹೋಗುವ, ಮೆಲುದನಿಯಾಗಿ ಕಾಡುವ ಸುನೀತ ಇವಳಲ್ಲ. ಅಥವಾ ನಾನೇ ಕಟು&#
3253
;ಾಗಿದ್ದೇನೆ. ಇವಳನ್ನು ನನ್ನವಳು ಎಂದು ಕರೆಯುವ ಬಯಕೆ ಹುಟ್ಟಿದ್ದಂತೂ ನಿಜ.
ಆಮೇಲೆ ಹೂವಿನಹಡಗಲಿಗೆ ಬಂದಾಗ ಅವಳಿಗೆ ಸರ್ಕಾರಿ ಸ್ಟಾಂಪ್ ಹಚ್ಚಿದ ಪತ್ರ ಬರೆದಿದ್ದೆ. ಅವಳ ಪ್ರೇಮಕ್ಕಾಗಿ ಹಲುಬಿದ್ದೆ. ಪಕ್ಕದ ಹೊಲದ ಯಜಮಾನರ ಮಗಳು ಶ್ಯಾಮಲಾ ನಿಜಕ್ಕೂ ಶ್ವೇತವರ್ಣೆಯಾಗಿ ನನ್ನನ್ನು ಕಾಡಿದಾಗಲೂ ಸುನೀತಳ ಮೇಲೆ ನನ್ನ ಪ್ರೀತಿ ಮಾಸಿಲ್ಲ. ಆಮೇಲೆ ಉಜಿರೆಗೆ ಹೋಗಿದ್ದಾಗ ಅವಳು ಬಂದಿರಲಿಲ್ಲ. ಮತ್ತೆ ಹರಪನಹಳ್ಳಿ, ದಾವಣಗೆರೆ.
ಆಮೇಲೆ ಅವಳು ಸಿಕ್ಕಿದ್ದಾಳೆ. ಕಾಗದ ಬರೀತೀನಿ ಎಂದೆ. ಆಗಲಿ ಎಂದು ವಿಳಾಸ ಕೊಟ್ಟವಳೂ ಅವಳೇ.
ಕೊನೆಗೆ ಒಂದು ಕಾಗದಕ್ಕೂ ಉತ್ತರವಿಲ್ಲ. ಇಂಜಿನಿಯರಿಂಗ್ ಓದಿಗಿಂತ ಅವಳಿಗೆ ಬರೆದದ್ದೇ ಹೆಚ್ಚು. ಸೈಕಲ್ ಹತ್ತಿ ಶಾಮನೂರು ದಾರಿ ಹಿಡಿದರೆ ಅವಳದೇ ನೆನಪು. ಕಾಲೇಜಿನ ಫೆಸ್ಟಿವಲ್‌ನಲ್ಲಿ ಅವಳ ಹಾಗೆ ನೆನಪಾದವರಿಲ್ಲ. ಆಮೇಲೆ ದೇವಸ್ಥಾನದ ಕಾರ್ಯಕ್ರಮದಲ್ಲಿ ನಾಗರತ್ನ ಎಷ್ಟು ಛೆಂದಾಗಿ ನೃತ್ಯ ಮಾಡಿದ್ದಳು. ಈಗ ಎಲ್ಲ ಹಳೇ ಸಿನಿಮಾದ ಕಪ್ಪುಬಿಳುಪು ಚಿತ್ರದ ಹಾಗೆ…..
ಸುನೀತಳಿಗಿಂತ ಇವಳೇ ಚಲೋ ಇದ್ದಾಳೆ. ಉಹು. ಸುನೀತಳ ಗಲ್ಲ ಮುದ್ದು. ಅವಳ ಮಾತು ಮುದ್ದು. ಅವಳ ಲಂಗ ಎಷ್ಟು ಛೆಂದ ಇದೆ. ಅವಳ ಸ್ಕೂಲ್ ಬ್ಯಾಗ್ ಎಷ್ಟು ನೀಟಾಗಿದೆ. ನಾಗರತ್ನಂದು ಉದ್ದ ಜಡೆ. ಇವಳದ್ದು ಹಾಗಿಲ್ಲ. ದರ್ಪಣ ನದಿಗೆ ಹೋಗೋ ಹಾದಿಯ ಆ ತಿರುವಿನಲ್ಲಿ ಅವಳ ಮನೆಗೆ ಹೋಗೋದೆಂದ್ರೆ ನನಗೆ ಎಲ್ಲಿಲ್ಲದ ಖುಷಿ. ದೇಶಪ್ರೇಮದ ನೂರಾರು ಪುಟ್ಟ ಪುಸ್ತಕಗಳು ಅಲ್ಲಿವೆ. ಅವನ್ನೆಲ್ಲ ನಾನು ಅಲ್ಲೇ ಕೂತು ಓದಬಹುದು.
ಯಾರೋ ದೇವಸ್ಥಾನದಲ್ಲಿ ವ್ಯಾಯಾಮ ಮಾಡ್ತಿದಾರೆ. ನಾನೂ ಅಲ್ಲಿಗೆ ಹೋಗಿದೇನೆ. ಯಾವುದೋ ಪ್ರಾರ್ಥನೆ. ಯಾವುದೋ ಹಾಡು. ಅಜ್ಜನ ಬರೀ ಓಕಾರಕ್ಕಿಂತ ಚೆನ್ನಾಗಿದೆ. ಇಂದಿರಾ ಗಾಂಧಿಗೆ ಧಿಕ್ಕಾರ ಅಂತ ನೋಟ್‌ಬುಕ್ ಹಾಳೆಯಲ್ಲಿ ಬರೆದು ಲಕ್ಕಿಗಿಡದಲ್ಲಿ ತೂಗುಹಾಕಿದ್ದೇವೆ. ದೇವಸ್ಥಾನದ ಪ್ರಾಂಗಣದಲ್ಲಿ ಒಬ್ಬರ ಕುಂಡೆ ಕೆಳಗೆ ಒಂದು ಅಕ್ಷರದ ಹಾಗೆ ಧಿಕ್ಕಾರ ಬರೆದು ಒಂದ್ಸಲ ಒಟ್ಟಿಗೇ ಎದ್ದು ಓಡಿದ್ದೇವೆ.
ನನಗೆ ಇದೆಲ್&
amp;
#3250; ಇಷ್ಟವಿಲ್ಲ.
ನಾನು ನನ್ನ ಹಿರಿಯರು ಹೇಳಿದ ಹಾಗೆ ಇರ್‍ತೇನೆ.
ನಾನು ಡಿಗ್ರಿ ಮುಗಿಸುವವರೆಗೆ ಬೇರೆ ಯಾವುದೇ ಯೋಚನೆಯನ್ನೂ ಮಾಡಲ್ಲ.
ದಯವಿಟ್ಟು ನನಗೆ ಕಾಗದ ಬರೀಬೇಡ.
ಎಂಟು ವರ್ಷ ಕಳೆದ ಮೇಲೆ ಸಿಕ್ಕಿದ ಸುನೀತ ನಾನೇ ಇಟ್ಟ ರಿಪ್ಲೈ ಕಾಗದದಲ್ಲಿ ಬರೆದಿದ್ದಳು. ನಾನು ಹಾಸ್ಟೆಲಿನ ಟೆರೇಸಿನಲ್ಲಿ ಮಲಗಿ ಕಣ್ಣು ತುಂಬಿಕೊಂಡೆ.
ಕಾರ್ತಿಕೇಯನ್ ಕಪ್ಪಗಿದ್ದ. ತಮಿಳು ಸಂಸಾರ.
ಅವಳ ಮೇಲೆ ನನ್ನ ಚಿಕ್ಕಪ್ಪನ ಒಂದು ಕಣ್ಣಿದೆ. ಅವನು ಅವತ್ತು ಅಷ್ಟೆಲ್ಲ ಚಾಕಲೇಟ್ ತಗೊಂಡು ಅವಳ ಅಂಗೈಯಲ್ಲಿ ಸುರಿದಿದಾನೆ. ಅವಳು ನನಗೆ, ಕಾರ್ತಿಕೇಯನ್‌ಗೆ ಚಾಕಲೇಟ್ ಕೊಟ್ಟಿದಾಳೆ.
ರಥಬೀದೀಲಿ ನಾನು, ಅವಳು, ಕಾರ್ತಿಕೇಯನ್ ನಡೆದು ಹೋಗ್ತಿದೀವಿ. ಚಿಕ್ಕಪ್ಪ ಅವಳ ಹಿಂದೆ ನಗ್ತಾ ಮಾತಾಡ್ತಾ ಹೋಗ್ತಿದಾನೆ. ಅವಳ ಚಟಪಟ ಮಾತೆಂದರೆ ನನಗೆ ಇಷ್ಟ. ಅವಳ ಆ ನಗುವಿಗಾಗಿ ಎಷ್ಟು ಸಲ ಅವಳ ಮನೆಗೆ ಹೋಗಿದೀನಿ. ಅವಳು ಕಾರ್ತಿಕೇಯನ್‌ಗೆ ಬೈತಾ ಇದ್ದಾಗೆಲ್ಲ ಅವಳ ಗಲ್ಲದ ಕುಳಿಗಳನ್ನೇ ನೋಡ್ತಾ ಕೂತಿದ್ದೇನೆ. ಇನ್ನೇನು ಮಳೆ ಬಂತು ಎಂಬಂತೆ ಕಪ್ಪು ಮೋಡಗಳು ಆಕಾಶವನ್ನೆಲ್ಲ ಆವರಿಸುತ್ತಿವೆ. ಹನಿಮಳೆಗೆ ಎಲ್ಲೂ ಕೊಡೆ ಬಿಚ್ಚಿದ್ದಾರೆ. ಚಪ್ಪಲಿಯೂ ಇಲ್ಲದ ನಾವು ಟಾರು ರಸ್ತೆಯ ಕುಳಿಗಳ ನಡುವೆ ಜಂಪ್ ಮಾಡುತ್ತ ದಾರಿ ಮಾಡಿಕೊಂಡು ಹೊರಟಿದ್ದೇವೆ.
ನಮ್ಮದೊಂದು ಪುಟ್ಟ ಮೆರವಣಿಗೆ.
ಅವಳೇ ನಮ್ಮ ನಾಯಕಿ.
ಚಿಕ್ಕಪ್ಪನೇ ನಮ್ಮ ಸದ್ಯದ ನಾಯಕ.
ನಾನು, ಕಾರ್ತಿಕೇಯನ್ ಸೇನಾನಿಗಳು.
ಅವಳು ಕಟ್ಟೆಯ ಮೇಲೆ ಕೂತಾಗೆಲ್ಲ ನನಗೆ ಅವಳನ್ನೇ ನೋಡ್ತಾ ಇರೊಣ ಅನ್ನಿಸಿತ್ತು. ನನಗೆ ಹತ್ತೇ ವರ್ಷ. ಅವಳಿಗೆ ಹದಿನೆಂಟಾಗಿರಬಹುದು. ಕಾರ್ತಿಕೇಯನ್ ಥರಾನೇ ನಾನೂ ಅವಳ ತಮ್ಮ ಅಂತಾನೇ ನೋಡಿದ್ದಳು. ಅಮ್ಮ ಮಾಡಿಕೊಟ್ಟ ಕಾಫಿಯನ್ನು ನನಗೂ ಕೊಟ್ಟು ತಲೆಗೂದಲು ಸವರಿದ್ದಳು.
ಆ ಗುಡಿಸಲಿನಲ್ಲಿ ಕತ್ತಲಿಗೆ ಬೇಕಾದಷ್ಟು ಜಾಗವಿದೆ. ಅವಳ ಸರ್ಟಿಫಿಕೇಟ್‌ಗಳಿಗೆ ಜಾಗ ಇಲ್ಲ. ಯಾವುದೋ ನಾಗಂದಿಗೆಯಲ್ಲಿ ಅವನ್ನೆಲ್ಲ ಪೇರಿಸಿಟ್ಟಿದಾಳೆ.
ನಮ್ಮ ಎದುರಿನ ಮನೇಲಿ ಗೋಪು ಇದಾನೆ. ಎ&
amp;
#3236;್ರ ಮಣಿ ಗೋಪೂ ಎಂದರೆ ಮೂರು ಮಣಿ ಎಂದು ಮುದ್ದಾಗಿ ನಗುತ್ತ ತೋಟದ ತುಂಬ ಓಡುತ್ತಾನೆ. ನಮ್ಮ ಮನೇಲಿ ಗಡಿಯಾರ ಇಲ್ಲ. ಕಾರ್ತಿಕೇಯನ್ ಜೊತೆ ಆಟ ಆಡುತ್ತಿದ್ದರೆ ನಮಗೆ ಸಮಯ ಗೊತ್ತಾಗಲ್ಲ. ಮಳೆಗತ್ತಲಿನಲ್ಲಿ ನಮಗೆ ಸಂಜೆಯೋ, ಮಧ್ಯಾಹ್ನವೋ ಗೊತ್ತಾಗಲ್ಲ. ಬೇಸಗೆಯ ಬೆವರೋ ಬೆಳಕಲ್ಲಿ ದರ್ಪಣ ನದಿಗೆ ಹೋಗಿ ಮಿಂದು ಬಂದರೆ ನಮಗೆ ಊಟಕ್ಕೆ ಸಮಯವಾಯ್ತೋ ಇಲ್ಲವೋ ಗೊತ್ತಾಗಲ್ಲ. ಆ ಪುಟ್ಟ ಸೇತುವೆಯಿಂದ ಕೆಳಗೆ ಹರೀತಿರೋ ನೀರು ನೋಡ್ತಾ ಇದ್ದರೆ ಯಾವಾಗ ಮನೆಗೆ ಹೋಗಬೇಕು ಅಂತ ಗೊತ್ತಾಗಲ್ಲ. ಗೋಪುನ ಕರೆದರೆ ಸಾಕು.
ಅವನೇ ನಮ್ಮ ಗಡಿಯಾರ.
ಅವಳು ನನ್ನನ್ನು ಕರೆದು ಸರ್ಟಿಫಿಕೇಟ್ ತೋರಿಸಿದ ಮರುವಾರದ ಒಂದು ದಿನ ಕಾರ್ತಿಕೇಯನ್ ಹಾವಿಗೆ ಹೊಡೆದು ನಗ್ತಾ ಇದ್ದ. ಅಲ್ಲಿ ಅವನ ಹೊಡೆತ ತಪ್ಪಿಸಿಕೊಂಡು ಮರೆಯಾದ ಹಾವು ಸುತ್ತಿಬಳಸಿ ಬಂದು ಅವನಿಗೆ ಹಿಂದಿನಿಂದಲೇ ಕಚ್ಚಿದೆ.
ಕಾರ್ತಿಕೇಯನ್ ನೊರೆ ಕಾರುತ್ತ, ನೋವಿನಿಂದ ಮುಲುಗುತ್ತ ಸತ್ತ. ದೇವಸ್ಥಾನಕ್ಕೆ ಹೋಗಿದ್ದ ಅಪ್ಪ, ಅಪ್ಪ, ಅವನ ಗೆಳೆಯರು ಬಂದು ನೋಡಿದರು. ದೇಗುಲದ ಅರ್ಚಕರು ತೀರ್ಥ ತಂದು ಪ್ರೋಕ್ಷಿಸಿದರು. ಸುಬ್ರಹ್ಮಣ್ಯದಲ್ಲಿ ಹಾವು ಸತ್ತು ಕಡಿದವರಿಲ್ಲ. ಇವತ್ತೇ ಈ ಕೃತ್ಯ ಮೊದಲು ನಡೆದಿದೆ. ಅವಿನಾಶ್
ಅವಿನಾಶ್. ಮೊದಲು ಬಂಟಿಂಗ್ಸ್ ಎಲ್ಲ ಅಂಟಿಸೋಣ, ಆಮೇಲೆ ಪ್ಲಕಾರ್ಡ್ ಬರೆಯೋಣ ಆಂತಿದಾನೆ. ಅವನ ಉಬ್ಬು ಹಲ್ಲಿನ ನಡುವೆ ನಗು ಗೀರಿಕೊಂಡು ಬಂದಿದೆ. ಸೆಕೆಂಡ್ ಪಿ ಯು ಆದಮೇಲೆ ಮೈಸೂರಿನಲ್ಲೇ ಅವನು ಸಿಕ್ಕಿದಾನೆ. ವಿದ್ಯಾರ್ಥಿಗಳ ಕಾನ್ಫರೆನ್ಸ್‌ನಲ್ಲಿ ಅವನನ್ನು ನೋಡಿ ನನಗೆ ಅಚ್ಚರಿ. ಅವನು ನಾನು ಒಂದೇ ಸಂಘಟನೆಯಲ್ಲಿ ಇದ್ದೇವಲ್ಲ ಅನ್ನೋ ಖುಷಿ.
ಅವನ ಗೆಳತಿ ರೋಹಿಣಿ. ಅವಳೂ ನನ್ನ ಜೊತೆಗೆ ಪ್ಲಕಾರ್ಡ್ ಬರೀತಿದಾಳೆ. ಅವಳಿಗೂ ಚಳವಳಿಯ ಹುಮ್ಮಸ್ಸು. ಗೋಡೆಬರಹಕ್ಕೂ ಬರ್‍ತಿದ್ದಳೇನೋ. ನಾನೇ ಕರೆಯಲಿಲ್ಲ. ನಮ್ಮ ಸಂಘಟನೆಯಲ್ಲಿ ರಾತ್ರಿಯಲ್ಲಿ ಮಾತ್ರವೇ ಮಾಡಬಹುದಾದ ಅದ್ಭುತ ಕ್ರಿಯೇಟಿವ್ ವರ್ಕ್ ಅದು. ಅಲ್ಲಿ ರಸ್ತೆಗಳು ಜನರಿಂದ ಹೊಳವಾದ ಕ್ಷಣದಲ್ಲಿ ನಾವು ಪ&#
3277
;ರತ್ಯಕ್ಷವಾಗುತ್ತೇವೆ. ರೆಡ್ ಆಕ್ಸೈಡ್ ಡಬ್ಬಗಳು ಜಿನುಗುತ್ತವೆ. ಬ್ರಶ್‌ಗಳು ತೋಯ್ದುಹೋಗುತ್ತವೆ. ಗೋಡೆಗಳು, ಕಾಂಪೌಂಡುಗಳು ಕರಗುತ್ತವೆ. ಆಳೆತ್ತರದಲ್ಲಿ ಅಕ್ಷರಗಳು ಮೂಡುತ್ತವೆ.
ಅವಳು ಅಲ್ಲಿ ಇರಬೇಕಿತ್ತು. ನಾನು ಬರೆದ ಔಟ್‌ಲೈನ್‌ಗೆ ಬಣ್ಣ ತುಂಬಿದರೂ ಸಾಕಾಗಿತ್ತು. ಅವಿನಾಶ್ ಜೊತೆಗೆ ಅವಳು ರಾತ್ರಿಗಳನ್ನೂ ಕಳೆಯಬಹುದಿತ್ತು. ಅವನ ಮುದ್ದುನಗುವಿನಲ್ಲಿ ಅವಳೂ ಬಣ್ಣ ಕಾಣಬಹುದಿತ್ತು. ಸುಮ್ಮನೆ ಫುಟ್‌ಪಾತಿನಲ್ಲಿ ಕೂತು ಮಾತಾಡಿದ್ದರೂ ಸಾಕಾಗಿತ್ತು.
ಟಿಯಾನನ್‌ಮನ್ ನರಮೇಧಕ್ಕೆ ಧಿಕ್ಕಾರ.
ಸ್ಟೂಡೆಂಟ್ಸ್ ಯೂನಿಯನ್ ಬೇಕೇ ಬೇಕು.
ರಾಜ್ಯ ಸಮ್ಮೇಳನಕ್ಕೆ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಬನ್ನಿ.
ಅವಳು ಮರುದಿನ ಉದ್ಘಾಟನಾ ಕಾರ್ಯಕ್ರಮದಲ್ಲಿ ಪ್ರಾರ್ಥನೆ ಹಾಡಿದ್ದಳು. ಅವಿನಾಶ್ ನನ್ನ ಜೊತೆ ಬಾಗಿಲಲ್ಲಿ ನಿಂತಿದ್ದ. ಆಯುರ್ವೇದ ಡಿಗ್ರಿ ಮುಗಿದ ಕೂಡಲೇ ಕ್ಲಿನಿಕ್ ಹಾಕ್ತಾನೆ. ಅವಳನ್ನು ಮದುವೆಯಾಗ್ತಾನೆ.
ಈಗ ಬಲಮುರಿಯಲ್ಲಿ ನಗ್ತಾ ಇದಾನೆ. ಅವನೇನು ಮರೆಯಾಗಿ ಹೋಗ್ತಾನೆ. ನಾಳೆ ತಾನು ಸುದ್ದಿಯಾಗಿ ಬಿಡ್ತೀನಿ ಅಂತ ಅವನಿಗೆ ಗೊತ್ತಾಗಿದೆ. ಫ್ರೀ ಹಾಸ್ಟೆಲಿನ ಫ್ರೀ ದಿನಪತ್ರಿಕೆ ಓದುವಾಗ ಬಲಮುರಿಯಲ್ಲಿ ನಾಲ್ವರು ವಿದ್ಯಾರ್ಥಿಗಳ ಸಾವಿನ ಸುದ್ದಿ ಬಂದಿದೆ. ಏಪ್ರಿಲ್ ಹದಿನೈದು.
ಅವನ ಮೇಲೊಂದು ಕವನ. ಬಲಮುರಿಗೆ ಸಿಕ್ಕಿದವನೆ… ಇತ್ಯಾದಿ.. ಬ್ಲಾ ಬ್ಲಾ ಬ್ಲಾ. ಅವಿನಾಶ್ ಯಾವತ್ತೂ ನನ್ನ ಕವನ ಓದಿದವನಲ್ಲ. ಸತ್ತ ಮೇಲೆ ಹ್ಯಾಗೆ ಓದ್ತಾನೆ? ಥತ್… ಸಾರಿ ಅವಿನಾಶ್. ನನ್ನ ಕಾವ್ಯಪ್ರeಗೆ ಧಿಕ್ಕಾರ ಹಾಕು. ಪ್ಲಕಾರ್ಡ್ ಬರಿ. ಸತ್ತವರ ಮೇಲೆ ಕಥೆ, ಕಾವ್ಯ ಬರೆಯೋ ಈ ಮನುಷ್ಯನಿಗೆ ಇಂತಿಂಥ ಧಿಕ್ಕಾರ….
ಅವಳೀಗ ಎಲ್ಲಿಯೋ ಬಿಕ್ಕುತ್ತ ಕುಳಿತಿರಬಹುದೇ… ಅಥವಾ ಅವಿನಾಶನ ಚಿತ್ರವನ್ನೇ ಮರೆತಿರಬಹುದೆ? ಬೆಂಗಳೂರಿನ ಟ್ರಾಫಿಕ್ಕಿನಲ್ಲಿ ಎಲ್ಲಿಯೂ ಅವಳ ಮುಖ ಕಂಡಿಲ್ಲ.
ಎಂ. ವಿ. ಸುರೇಶ
ಸುರೇಶ ಬ್ಲೇಡಿನಿಂದ ಅಂಗೈ ಹಿಂದೆ ಗೀರಿಕೊಂಡು ನಸುನಗುತ್ತಿದ್ದ. ಅವನಿಗೆ ಇದೆಲ್ಲ ಹಳತು. ಗೀರ್‍ಕೋಬೇಕಾ ಅಂತ ಕೇಳಿ ಕ&
amp;
#3235;್ಣು ಮಿಟುಕಿಸೋದರಲ್ಲಿ ಗೀರಿಕೊಂಡು ರಕ್ತ ಸುರಿಸಿ ಆಮೇಲೆ ಒತ್ತಿ ಹಿಡೀತಾನೆ. ಅವನ ಅಜ್ಜ, ಅಕ್ಕ ಎಲ್ಲರೂ ಸುಮ್ಮನೆ ಇರ್‍ತಾರೆ. ಸಾಗರದ ವಿನೋಬಾ ನಗರದ ಆ ಮನೆಯಲ್ಲಿ ನಾನು ಅವನು ಕೂತು ಇಸ್ಪೀಟಿನ ರೈಲು ಓಡಿಸಿದ್ದೇವೆ. ರೆಡ್ ಆಕ್ಸೈಡ್ ಮನೆಯಲ್ಲಿ ಕೂತು ಎಷ್ಟೆಲ್ಲ ಮಾತಾಡಿದ್ದೇವೆ. ಜಂಬಗಾರು ರೈಲು ನಿಲ್ದಾಣದಲ್ಲಿ ಹತ್ತು ಪೈಸೆ ಇಟ್ಟು ರೈಲಿನ ಕೆಳಗೆ ಅದು ಅಪ್ಪಚ್ಚಿಯಾಗೋದನ್ನು ಅವನೇ ತೋರಿಸಿದ್ದು. ಅಲ್ಲೀವರೆಗೆ ನಾಣ್ಯ ಹಾಗೆ ಹಾಳಾಗುತ್ತೆ ಅಂತಾನೇ ನನಗೆ ಗೊತ್ತಿರಲಿಲ್ಲ.
ಅವತ್ತು ಜ್ಯೂನಿಯರ್ ಕಾಲೇಜಿನ ಕ್ವಾಡ್ರಾಂಗಲ್‌ನಲ್ಲಿ ಡಿಕ್ಕಿಯಾಗಿ ಸಿಕ್ಕಾಗ ಒಂದು ಕ್ಲಾಸು ಹಿಂದೆ ಬಿದ್ದಿದ್ದ. ನಾನು ಒಂಬತ್ತು. ಅವನು ಎಂಟು. ಮತ್ತೆ ಮನೆಗೆ ಹೋದೆವು. ಅಕ್ಕ ಅಲ್ಲಿ ಸುಮ್ಮನೆ ಕುಳಿತಿದ್ದಾಳೆ.
ನಾವು ಚೆಸ್ ಆಡಿದ್ದೇವೆ. ನನ್ನ ಎದುರಿಗೆ ಅವ ಸೋತಿದ್ದಾನೆ. ಮೊದಲಿನ ಸಿಟ್ಟು ಈಗಿಲ್ಲ. ನಗುತ್ತಾನೆ. ನೋಡು.. ನಾನು ಫೇಲ್ ಆಗಿದೇನೆ.. ಬೇಜಾರಿಲ್ಲ ಅಂತಾನೆ.
ಏಯ್ ಸುರೇಶ, ಯಾಕೋ ಹಾಗೆ ಮಾಡ್ದೆ ಅಂತ ಎಷ್ಟೋ ರಾತ್ರಿ ನನ್ನೊಳಗೆ ಕೇಳಿಕೊಂಡಿದೇನೆ. ಸುರೇಶ ನಗುನಗುತ್ತಲೇ ಫಾಲಿಡಾಲ್ ಕುಡಿದಿರಬೇಕು. ಅವನು ಪ್ರೀತಿಸಿದ ಹುಡುಗಿ ಎಷ್ಟು ಕಟುವಾಗಿರಬಹುದು….
ಅವನ ಅಪ್ಪನಿಗೆ ಕಿವಿ ಕೇಳಿಸಲ್ಲ. ಸುರೇಶ ಸತ್ತ ಮೇಲೆ ಮಂಕಾಗಿದಾರೆ. ಅಕ್ಕ ಜಯಲಕ್ಷ್ಮಿ ಮಂಡ್ಯದಲ್ಲಿ ಇದ್ದಾರೆ. ಮದುವೆಯಾಗಿದೆ.
ಇವರಿಗೆ
ಶ್ರೀಮತಿ ಜಯಲಕ್ಷ್ಮಿ
(ಸಾಗರದ ಎಂ. ವಿ. ಸುರೇಶ್ ಅಕ್ಕ)
ಮಂಡ್ಯ
ನೋಡಿ…. ನಾನು ಸುರೇಶನ ಗೆಳೆಯ. ಅವನು ಫಾಲಿಡಾಲ್ ಕುಡಿದು ಸತ್ತ ಸುದ್ದಿ ತಿಳಿಯಿತು. ನೀವೂ ನನಗೆ ಅಕ್ಕ ಇದ್ದ ಹಾಗೆ. ದಯವಿಟ್ಟು ಸುರೇಶ ಯಾಕೆ ಹಾಗೆ ಮಾಡಿದ ಅಂತ ತಿಳಿಸ್ತೀರಾ?
ಉತ್ತರ ಬರಲಿಲ್ಲ. ಅಂಚೆ ಇಲಾಖೆಯವರಿಗೆ ಜಯಲಕ್ಷ್ಮಿ ಸಿಕ್ಕಿಲ್ಲವೇನೋ.
——-
ಈ ಕಥೇಲಿ ಬಂದಿರೋ ಅವಳ ಹೆಸರು ನಾನು ಮರೆತಿದೀನಿ. ಕಾರ್ತಿಕೇಯನ್ ಇಲ್ಲ. ಅವಳು ಎಲ್ಲಿ ಇದಾಳೆ ಎಂದು ನನಗೆ ಗೊತ್ತಿಲ್ಲ. ಅವಳಿಗೆ ಈಗ ಸುಮಾರು ಐವತ್ತು ದಾಟಿರಬಹುದು. ತಮಿಳುನಾಡಿನಲ್ಲೋ, ಎಲ್ಲೋ ಅವಳ&#
3265
; ಸುಖವಾಗಿ ಇರಬಹುದು ಎಂದುಕೊಳ್ಳುವೆ. ಅವಳ ಅಗಲ ಕಣ್ಣುಗಳಲ್ಲಿ ಇದ್ದ ಜೀವನಪ್ರೀತಿ ಇನ್ನೂ ಮಾಸಿಲ್ಲ ಅಂದುಕೊಳ್ಳುವೆ. ಅವಳ ನೆನಪಿನಲ್ಲಿ ನನ್ನ ಕಣ್ಣುಗಳು ಹನಿಗೂಡಿದ ಈ ಕ್ಷಣವೂ ಅದೆಷ್ಟು ಮಾರ್ದವತೆಯನ್ನು ಜಿನುಗಿಸುತ್ತಿದೆ….
ಮಧೂರಿನ ಶ್ರೀ ಮದನಂತೇಶ್ವರ ದೇಗುಲದಲ್ಲಿ ಜುಮುರುಮಳೆ ಸುರಿಯುತ್ತಿದ್ದ ಹೊತ್ತಿನಲ್ಲಿ ನಾವು ಕಟ್ಟೆಯ ಮೇಲೆ ಕುಳಿತು ದೇಗುಲದ ಗೋಪುರವನ್ನೇ ನೋಡುತ್ತಿದ್ದ ಕ್ಷಣದಲ್ಲಿ ಅವಳ ನೆನಪಾಗಿತ್ತು. ನನ್ನೂರಿನ ಕೇಶವ ನಾರಾಯಣ ದೇಗುಲದ ಹಜಾರದಲ್ಲಿ ಕುಳಿತು ಕನ್ಣು ಮುಚ್ಚಿದಾಗ ಅವಳು ನೆನಪಾಗಿದ್ದಳು. ಯಾಣಕ್ಕೆ ಟ್ರೆಕಿಂಗ್ ಹೋದಾಗ ಕಂಡ ಕಲ್ಲು ಬಯಲಿನಲ್ಲಿ ಕೂತಾಗ ಅವಳ ನೆನಪಾಗಿತ್ತು.
ಅವಳು ಅನಾಮಿಕಳಾಗಿ ಇರಲಿ.
ಕಾರ್ತಿಕೇಯನನ್ನು, ಸುರೇಶನನ್ನು, ಅವಿನಾಶನನ್ನು, ಬದುಕಿನಲ್ಲಿ ಇವರೆಲ್ಲ ಬಂದು ಹೋದ ಕ್ಷಣಗಳನ್ನು ನಾನು ಮರೆಯಲಾರೆ. ಅವರು ಕಟ್ಟಿಕೊಟ್ಟ ದೃಶ್ಯಗಳನ್ನು ನಾನು ಅಳಿಸಲಾರೆ. ನನ್ನ ಛಿದ್ರ ಬದುಕಿನಲ್ಲಿ ಅವಳು ಬಂದರೂ ಅಷ್ಟೆ; ಬರದಿದ್ದರೂ ಅಷ್ಟೆ. ನನ್ನ ಖಿನ್ನತೆಯ ಕಂದರದಲ್ಲಿ ಅವಳು ಬೀಳದಿರಲಿ.
ನಾನು ನಾಳೆ ಬೆಳಗ್ಗೆ ಎದ್ದು ಮಳೆಯನ್ನೇ ನೋಡುತ್ತ ಕೂರುವೆ. ಯಲ್ಲಾಪುರದ ಜೇನುಕಲ್ಲು ಗುಡ್ಡದ ಮೇಲೆ ಇರೋ ಮಂಟಪದಲ್ಲಿ ಕೂತರೆ ಮಳೆ ಹೇಗೆ ಮೇಲಿಂದ ಹುಟ್ಟಿ ನೆಲ ಸೇರುತ್ತದೆ ಎಂದು ಗೊತ್ತಾಗುತ್ತೆ.
ನನ್ನ ಗೆಳೆಯರೆಲ್ಲ ಯಾಕೆ ಹಾಗೆ ಹುಟ್ಟಿ ಎಲ್ಲೂ ಕಾಣದ ಹಾಗೆ ಕರಗಿಹೋದರು ಎಂದು ನೆನಪಿಸಿಕೊಂಡಂತೆಲ್ಲ… ಬಿಡಿ…
ಗಂಟಲು ಕಟ್ಟುತ್ತಿದೆ. ಅವರಿಗೆಲ್ಲ ಬದುಕಿನ ವಾಂಛೆ ಇತ್ತೋ ಇಲ್ಲವೋ ಗೊತ್ತಿಲ್ಲ. ನುಗ್ಗಿ ಬರುವ ನೂರು ನೆನಪುಗಳ ನಡುವೆ ದಾರಿ ಮಾಡಿಕೊಂಡು ಬದುಕುವ ಕಲೆಯನ್ನು ನಾನು ರೂಢಿಸಿಕೊಂಡಿದ್ದೆ.
ಕಾರ್ತಿಕೇಯನ್ ನೆನಪಾದರೆ ಅವನ ಅಕ್ಕ ಸಹ ನೆನಪಾಗುತ್ತಾಳೆ. ಸುನೀತ ನಗುತ್ತಾಳೆ.
ಸುರೇಶ ನೆನಪಾದರೆ ಅವನ ಅಕ್ಕ ಜಯಲಕ್ಷ್ಮಿ ನೆನಪಾಗುತ್ತಾಳೆ.
ಅವಿನಾಶ್ ನೆನಪಾದರೆ ಅವನ ಗೆಳತಿ ನೆನಪಾಗುತ್ತಾಳೆ.
ಗೆಳೆಯರ ಜೊತೆಗೇ ನನ್ನ ಬದುಕಿನಲ್ಲಿ ಬಂದು ಹ&
;#32
75;ದ ಅವರೆಲ್ಲರನ್ನೂ ನಾನು ಎಷ್ಟು ಪ್ರೀತಿಸುತ್ತಿದ್ದೆ ಎಂದು ಈಗ ಗೊತ್ತಾಗುತ್ತಿದೆ.
ಮಡಿಕೇರಿಯ ಈ ಲಾಡ್ಜಿನ ಈ ರೂಮು ಎಷ್ಟು ತಣ್ಣಗಿದೆ….
ಈ ಫ್ಯಾನ್ ಹ್ಯಾಗೆ ಸುಮ್ಮನೆ ಗರಗರ ತಿರುಗುತ್ತಿದೆ….
ಪಾಲಿಥಿನ್ ಬ್ಯಾಗ್ ಹರಿದು ಬಾವಿ ಹಗ್ಗ ಇಣುಕುತ್ತಿದೆ.
————————————————————————