ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದ ಬಳಿ ಇರುವ ತದಡಿಯಲ್ಲಿ ೨೧೦೦ ಮೆಗಾವಾಟ್‌ಗಳ ಉತ್ಪಾದನಾ ಸಾಮರ್ಥ್ಯದ ನೈಸರ್ಗಿಕ ಅನಿಲ ಆಧಾರಿತ ವಿದ್ಯುತ್ ಸ್ಥಾವರವನ್ನು ಸ್ಥಾಪಿಸುವ ಕರ್ನಾಟಕ ವಿದ್ಯುತ್ ನಿಗಮದ ಪ್ರಸ್ತಾಪಕ್ಕೆ ಮೊದಲ ಹಿನ್ನಡೆ ಉಂಟಾಗಿದೆ. ಇದೇ ಜನವರಿ ೧೧-೧೨ರಂದು ನಡೆದ ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯದ ತಜ್ಞ ಪರಾಮರ್ಶನಾ ಸಮಿತಿ (ಎಕ್ಸ್‌ಪರ್ಟ್ ಅಪ್ರೈಸಲ್ ಕಮಿಟಿ , ಇ ಎ ಸಿ)ಯ ೬೦ನೇ ಸಭೆಯಲ್ಲಿ ಈ ಕೆಳಗಿನಂತೆ ನಿರ್ಣಯವನ್ನು ಕೈಗೊಳ್ಳಲಾಗಿದೆ:
“ಪಾರಿಸರಿಕವಾಗಿ ಅತ್ಯಂತ ಸೂಕ್ಷ್ಮವಾಗಿರುವ ಮತ್ತು ಜೀವವೈವಿಧ್ಯದ ಮುಖ್ಯತಾಣವಾಗಿರುವ ಈ ಪ್ರದೇಶದಲ್ಲಿ ಉಷ್ಣ ವಿದ್ಯುತ್ ಯೋಜನೆಗಳನ್ನು ಸ್ಥಾಪಿಸುವ ಬಗ್ಗೆ ಸಾರ್ವಜನಿಕರಿಂದ ತೀವ್ರ ವಿರೋಧ ಬಂದಿರುವ ಹಿನ್ನೆಲೆಯಲ್ಲಿ ಮತ್ತು ಈ ನದೀ ಮುಖಜ ಪ್ರದೇಶವು ಅತ್ಯಂತ ಗರಿಷ್ಠ ಉತ್ಪಾದಕತೆಯ ಜೀವಿವ್ಯವಸ್ಥೆಯನ್ನು ಹೊಂದಿರುವುದರ ಹಿನ್ನೆಲೆಯಲ್ಲಿ ಈ ಪ್ರಸ್ತಾಪವನ್ನು ಪರಿಶೀಲಿಸಿದ ನಂತರ, ಈ ಪ್ರಸ್ತಾಪವನ್ನು ಮಾಡಿದವರು ಮೊದಲು ಸಾರ್ವಜನಿಕ ಜನಮತಾಭಿಪ್ರಾಯವನ್ನು ನಡೆಸಿ ಅದರ ಫಲಿತಾಂಶಗಳನ್ನು ಈ ಯೋಜನೆಯ ಹೆಚ್ಚಿನ ಪರಿಶೀಲನೆಗಾಗಿ ಸಲ್ಲಿಸಲು ಸಮಿತಿಯು ನಿರ್ಧರಿಸಿತು.”
ಪಾರಿಸರಿಕವಾಗಿ ಅತ್ಯಂತ ಸೂಕ್ಷ್ಮವಾಗಿರುವ, ಜೀವವೈವಿಧ್ಯದ ಮುಖ್ಯತಾಣವಾಗಿರುವ ಮತ್ತು ಅತ್ಯಂತ ಹೆಚ್ಚಿನ ಉತ್ಪಾದಕತೆಯ ಜೀವಿವ್ಯವಸ್ಥೆಯನ್ನು ಹೊಂದಿರುವ ಪ್ರದೇಶದಲ್ಲಿ ಇಂಥ ಯೋಜನೆಯ ಪ್ರಸ್ತಾಪವನ್ನು ಮಾಡಿರುವುದು ನಮ್ಮ ಸಮಾಜವು ಕಳವಳಪಡಬೇಕಾದ ಸಂಗತಿ. ಪಶ್ಚಿಮಘಟ್ಟದ ಬೆಟ್ಟಸಾಲಿನಲ್ಲೇ ಇರುವ ಅಘನಾಶಿನಿ ನದಿಯ ಮುಖಜಪ್ರದೇಶವೇ ಈ ಪ್ರಸ್ತಾಪಿತ ಯೋಜನೆಯ ಸ್ಥಳ; ಇದು ಸಾಮಾಜಿಕ ಮತ್ತು ಪಾರಿಸರಿಕ ಕಾರಣಗಳಿಗಾಗಿ ಸೂಕ್ಷ್ಮ ಎಂದೇ ಪರಿಗಣಿತವಾಗಿದೆ. ಇದೇ ಕಾರಣಕ್ಕಾಗಿಯೇ ವ್ಯಾಪಕ ಪ್ರತಿಭಟನೆ ಕಂಡುಬಂದಿದ್ದರಿಂದ ಕಲ್ಲಿದ್ದಲು ಆಧಾರಿತ ಶಾಖೋತ್ಪನ್ನ ವಿದ್ಯುತ್ ಸ್ಥಾವರ ಸ್ಥಾಪನೆಯ (ಅಲ್ಟ್ರಾ ಮೆಗಾ ಪವರ್ ಪ್ರಾಜೆಕ್ಟ್, ಯು ಎಂ ಪಿ ಪಿ) ಈ ಹಿಂದಿನ ಪ್ರಸ್ತಾಪವನ್ನು ಸರ್ಕಾರವು ಕೈಬಿಟ್ಟಿತ್ತು ಎನ್ನುವುದು ಗಮನಾರ್ಹ. ಈ ಪ್ರದೇಶದಲ್ಲಿ ಇಂಥ ಯಾವುದೇ ದೊಡ್ಡ ಯೋಜನೆಗಳನ್ನು ಕೈಗೊಳ್ಳಬಾರದು ಎಂದು ಸಾರ್ವಜನಿಕರು ಮತ್ತು ಪರಿಸರವಾದಿಗಳು ಹೇಳುವುದಕ್ಕೆ ಬೇಕಾದಷ್ಟು ಕಾರಣಗಳಿವೆ.
ಕಲ್ಲಿದ್ದಲು ಆಧಾರಿತ ವಿದ್ಯುತ್ ಸ್ಥಾವರಕ್ಕೆ ಹೋಲಿಸಿದರೆ ಅನಿಲ ಆಧಾರಿತ ವಿದ್ಯುತ್ ಸ್ಥಾವರದಿಂದ ಕಡಿಮೆ ಪರಿಸರ ಮಾಲಿನ್ಯ ಉಂಟಾಗುತ್ತದೆ ಎನ್ನುವುದು ನಿಜವಾದರೂ, ಇಂಥ ಬೃಹತ್ ಪ್ರಮಾಣದ ಅನಿಲ ವಿದ್ಯುತ್ ಸ್ಥಾವರ ಯೋಜನೆಯಿಂದ ಒಟ್ಟಾರೆಯಾಗಿ ಈ ಪ್ರದೇಶದ ಮೇಲೆ ಆಗುವ ಸಾಮಾಜಿಕ – ಪಾರಿಸರಿಕ ದುಷ್ಪ್ರಭಾವಗಳನ್ನು ಅಲ್ಲಗಳೆಯಲು ಬರುವುದೇ ಇಲ್ಲ.
ಇಲ್ಲಿ ಉತ್ಪಾದಿಸಿದ ವಿದ್ಯುತ್ತನ್ನು ಪಶ್ಚಿಮ ಘಟ್ಟಗಳ ಮೇಲಿನಿಂದಲೇ ಬೆಂಗಳೂರು / ಮೈಸೂರು ಗಳಿಗೆ ರವಾನಿಸಬೇಕಾಗುತ್ತದೆ; ಹೈ ವೋಲ್ಟೇಜ್ ಟ್ರಾನ್ಸ್‌ಮಿಶನ್ ಲೈನುಗಳನ್ನು ಸ್ಥಾಪಿಸಲು ಸಾವಿರಾರು ಎಕರೆ ಮಳೆಕಾಡಿನ ಪ್ರದೇಶವನ್ನು ನಾಶ ಮಾಡಬೇಕಾಗುತ್ತದೆ.
ಅಘನಾಶಿನಿ ನದಿಮುಖಜ ಪ್ರದೇಶವು ಅತ್ಯಂತ ಸಿರಿವಂತ ಜೀವವೈವಿಧ್ಯದ ತಾಣವಾಗಿದೆ. ಇದು ಸಾವಿರಾರು ಕುಟುಂಬಗಳಿಗೆ ಜೀವನೋಪಾಯವನ್ನು ಒದಗಿಸುತ್ತಿದೆ. ಈ ಯೋಜನೆ ಬಂದಾಗ ಈ ಸಾವಿರಾರು ಕುಟುಂಬಗಳಿಗೆ ಮೀನುಗಾರಿಕೆಗೆ ಅಥವಾ ಗಝನಿ ಭೂಮಿಯಲ್ಲಿ ಭತ್ತ ಬೆಳೆಯಲು ಅವಕಾಶವೇ ಇರುವುದಿಲ್ಲ.
ಯೋಜನಾಸ್ಥಳವು ಸಮುದ್ರದ ಮೇಲುಬ್ಬರಕ್ಕೆ ತುತ್ತಾಗುವ ಪ್ರದೇಶ; ಆದ್ದರಿಂದ ಹಲವಾರು ತಿಂಗಳುಗಳ ಕಾಲ ಈ ಪ್ರದೇಶವು ನೀರು ತುಂಬಿ ಜವುಗಾಗಿರುತ್ತದೆ. ಆದ್ದರಿಂದ ಇದು ಕರಾವಳಿ ನಿಯಂತ್ರಣ ವಲಯ(೧)ದ (ಕೋಸ್ಟಲ್ ರೆಗ್ಯುಲೇಟರಿ ಝೋನ್, ಸಿ ಆರ್ ಝಡ್ ೧) ವ್ಯಾಪ್ತಿಗೆ ಬರುತ್ತದೆ.
ಅಲ್ಲದೆ ಈ ಯೋಜನಾ ಪ್ರದೇಶವು ತಾಂತ್ರಿಕ – ಆರ್ಥಿಕ ಕಾರಣಗಳಿಗಾಗಿಯೂ ಅತ್ಯಂತ ದೋಷಪೂರಿತ ಯೋಜನೆಯೇ ಸರಿ. ಈ ಸ್ಥಳದಲ್ಲಿ ಯೋಜನೆಯನ್ನು ಸ್ಥಾಪಿಸುವ ಏಕೈಕ ಉದ್ದೇಶ ಎಂದರೆ ಇಲ್ಲಿಗೆ ಅನಿಲವನ್ನು ಆಮದು ಮಾಡಿಕೊಳ್ಳಬಹುದು ಎಂಬುದು. ಆದರೆ ಈಗ ಬಂದಿರುವ ಮಾಧ್ಯಮದ ವರದಿಗಳ ಪ್ರಕಾರ ಭಾರತೀಯ ಅನಿಲ ಪ್ರಾಧಿಕಾರವು (ಜಿ ಐ ಎ ಎಲ್) ಮಹಾರಾಷ್ಟ್ರದ ದಾಭೋಲ್‌ನಿಂದ ಬೆಂಗಳೂರಿನವರೆಗೆ ಗೃಹ ಮತ್ತು ವಾಣಿಜ್ಯಕ ಬಳಕೆಯ ಅನಿಲದ ಪ್ರಮಾಣದ ಜೊತೆಗೇ ೮೦೦೦ ಮೆಗಾವಾಟ್‌ನಷ್ಟು ವಿದ್ಯುತ್ ಉತ್ಪಾದಿಸಲು ಬೇಕಾಗುವ ಅನಿಲವನ್ನೂ ಸರಬರಾಜು ಮಾಡಬಲ್ಲ ಅನಿಲ ಕೊಳವೆಯನ್ನು ಸ್ಥಾಪಿಸಲಿದೆ. ಆದ್ದರಿಂದ ಇಂಥ ಅನಿಲ ಆಧಾರಿತ ಯೋಜನೆಗಳನ್ನು ಈ ಕೊಳವೆಯ ಹಾದಿಯಲ್ಲಿ ಬೇರೆ ಬೇರೆ ಕಡೆಗಳಲ್ಲಿ ಸ್ಥಾಪಿಸಬಹುದು. ಇದರಿಂದ ತದಡಿಯಂಥ ಒಂದು ಸೂಕ್ಷ್ಮ ಪ್ರದೇಶದಲ್ಲಿ ಬೃಹತ್ ಸ್ಥಾವರನ್ನು ಸ್ಥಾಪಿಸುವ ಅಪಾಯವನ್ನು ತಪ್ಪಿಸಬಹುದು. ೯೦ರ ದಶಕದಲ್ಲೇ ಬೃಹತ್ ಅನಿಲ ಆಧಾರಿತ ವಿದ್ಯುತ್ ಸ್ಥಾವರಕ್ಕಾಗಿ ಬಿಡದಿಯ ಬಳಿ ರಾಜ್ಯ ಸರ್ಕಾರವು ವಶಪಡಿಸಿಕೊಂಡ ಭಾರೀ ಭೂಪ್ರದೇಶದಲ್ಲಿ ಯಾಕೆ ಈ ಅನಿಲ ವಿದ್ಯುತ್ ಸ್ಥಾವರವನ್ನು ಸ್ಥಾಪಿಸಬಾರದು?
ಬೆಂಗಳೂರಿನ ಹತ್ತಿರದಲ್ಲಿ ಯಾವುದೇ ಬೃಹತ್ ವಿದ್ಯುತ್ ಸ್ಥಾವರವಿಲ್ಲ; ಅಲ್ಲದೆ ಬೆಂಗಳೂರಿಗೇ ಹೆಚ್ಚಿನ ಪ್ರಮಾಣದ ವಿದ್ಯುತ್ ಬೇಕಾಗಿದೆ. ಬಿಡದಿಯ ಬಳಿ ವಿದ್ಯುತ್ ಸ್ಥಾವರ ಸ್ಥಾಪನೆಯಾದರೆ ವಿದ್ಯುತ್ ಸಾಗಾಟದ ನಷ್ಟವನ್ನೂ ಸಾಕಷ್ಟು ತಗ್ಗಿಸಬಹುದಾಗಿದೆ. ಅಲ್ಲದೆ ಪಶ್ಚಿಮ ಘಟ್ಟದ ಮಳೆಕಾಡನ್ನೂ ಈ ಮೂಲಕ ಉಳಿಸಬಹುದಾಗಿದೆ.
ಇದಲ್ಲದೆ ಇನ್ನೂ ಒಂದು ಮೂಲಭೂತ ಪ್ರಶ್ನೆಯನ್ನು ಇಲ್ಲಿ ಕೇಳಬೇಕಿದೆ: ಈಗಿರುವ ವಿದ್ಯುತ್ ಉತ್ಪಾದನಾ ಘಟಕಗಳ ಸಂಪೂರ್ಣ ಉತ್ಪಾದನಾ ಸಾಮರ್ಥ್ಯವನ್ನು ಸಮರ್ಥವಾಗಿ ಬಳಸಿಕೊಳ್ಳಲಾಗಿದೆಯೆ ? ಸಾಗಾಟ ಹಾಗೂ ವಿತರಣೆ ಸೋರಿಕೆಯನ್ನು ಸಮರ್ಥವಾಗಿ ತಗ್ಗಿಸಲಾಗಿದೆಯೆ? ಕರ್ನಾಟಕ ರಾಜ್ಯದ ವಿದ್ಯುತ್ ಸೋರಿಕೆ ಪ್ರಮಾಣ ಶೇ. ೩೦ರಷ್ಟು. ಶಕ್ತಿಯ ಸಮರ್ಥ ಬಳಕೆ – ಸಂರಕ್ಷಣೆ, ಡಿಮ್ಯಾಂಡ್ ಸೈಡ್ ಮ್ಯಾನೇಜ್‌ಮೆಂಟ್ (ಡಿ ಎಸ್ ಎಂ), ಮರುಬಳಕೆ ಶಕ್ತಿಮೂಲಗಳ ಬಳಕೆ, – ಇತ್ಯಾದಿ ಸಂಗತಿಗಳಲ್ಲಿ ಇರುವ ಲಾಭಗಳನ್ನು ಗಣನೆಗೆ ತೆಗೆದುಕೊಂಡು ಇಲ್ಲಿ ಸಿಗಬಹುದಾದ ಹೆಚ್ಚುವರಿ ವಿದ್ಯುತ್ತಿನ ಪ್ರಮಾಣವನ್ನು ಲೆಕ್ಕ ಹಾಕಿದರೆ ಈಗ ಪ್ರಸ್ತಾಪಿಸಿರುವ ಬೃಹತ್ ಯೋಜನೆಗಳು ಸಂಪೂರ್ಣವಾಗಿ ಅನಗತ್ಯ ಎಂಬುದು ಅರಿವಾಗುತ್ತದೆ.
ಇದಲ್ಲದೆ ಭಾರತವು ಅಂತಾರಾಷ್ಟ್ರೀಯ ಸಮುದಾಯಕ್ಕೆ ತನ್ನ ಶಕ್ತಿ ಬೇಡಿಕೆಯನ್ನು ಶೇ. ೨೫-೪೦ರಷ್ಟು ತಗ್ಗಿಸುವುದಾಗಿ ಮಾತು ಕೊಟ್ಟಿದೆ; ಮಳೆಕಾಡುಗಳನ್ನು, ಕಾಡಿನ ಪ್ರಮಾಣವನ್ನು ಸಂರಕ್ಷಿಸುವುದಾಗಿ ಭರವಸೆ ನೀಡಿದೆ. ಈಗಾಗಲೇ ಕರ್ನಾಟಕದಲ್ಲಿ ಕಾಡಿನ ಪ್ರಮಾಣವು ಭಾರತದ ರಾಷ್ಟ್ರೀಯ ಗುರಿಯಾದಶೇ. ೩೩ರಷ್ಟರ ಬದಲಿಗೆ ಕೇವಲ ಶೇ. ೨೦ರಷ್ಟಿದೆ.
ತದಡಿಯಲ್ಲಿ ಕರ್ನಾಟಕ ಉದ್ಯಮ ಪ್ರದೇಶ ಅಭಿವೃದ್ಧಿ ಮಂಡಳಿ (ಕೆ ಐ ಎ ಡಿ ಬಿ) ಬಳಿ ಇದೆ ಎಂದು ಈಗ ಹೇಳಲಾಗಿರುವ ೧೮೦೦ ಎಕರೆ ಭೂಪ್ರದೇಶವನ್ನು ಖಾಸಗಿ ಉದ್ಯಮಕ್ಕೆಂದೇ ಹಲವು ವರ್ಷಗಳ ಹಿಂದೆ ವಶಪಡಿಸಿಕೊಳ್ಳಲಾಗಿದೆ. ಅಂದಿನಿಂದಲೂ ಈ ಪ್ರದೇಶದಲ್ಲಿ ಹಲವು ಯೋಜನೆಗಳನ್ನು ಪ್ರಸ್ತಾಪಿಸಲಾಗಿದ್ದು ಅವೆಲ್ಲವನ್ನೂ ಸ್ಥಳೀಯರು ಪ್ರಬಲವಾಗಿ ವಿರೋಧಿಸುತ್ತ ಬಂದಿದ್ದಾರೆ. ಆದ್ದರಿಂದ ಸಮಾಜದ ಹಿತದೃಷ್ಟಿಯಲ್ಲಿ ಈ ಪ್ರದೇಶವನ್ನು ಸಮುದ್ರ ಸಂಪತ್ತಿನ ಮೀಸಲು ಪ್ರದೇಶ ಅಥವಾ ಜೈವಿಕವಲಯ ಅಥವಾ ಪರಿಸರ ಪ್ರವಾಸದ ನೈಸರ್ಗಿಕ ಥೀಮ್ ಪಾರ್ಕ್ ಎಂದೋ ಘೋಷಿಸಿ ಅದನ್ನು ಇನ್ನುಮುಂದೆ ಯಾವುದೇ ದೊಡ್ಡ ಪ್ರಮಾಣದ ನಿರ್ಮಾಣಕ್ಕೆ ನೀಡದಂತೆ ನೋಡಿಕೊಳ್ಳುವುದು ಅತ್ಯಂತ ಸೂಕ್ತವಾದ ನಿರ್ಧಾರವಾಗುತ್ತದೆ.
ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯವು ೨೦೧೦ರ ಅಂತಾರಾಷ್ಟ್ರೀಯ ಜೀವವೈವಿಧ್ಯ ವರ್ಷದಲ್ಲಿ ರಿಯೋ+೨೦ ಶೃಂಗಸಭೆಯನ್ನು ಸಂಘಟಿಸಲು ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಇಂಥ ಜೈವಿಕ ಮುಖ್ಯತಾಣವನ್ನು ಅತಿ ದುಷ್ಪ್ರಭಾವ ಬೀರುವ ವಿದ್ಯುತ್ ಯೋಜನೆಗೆ ನೀಡುವುದು ಜೀವವೈವಿಧ್ಯ ಸಮಾವೇಶದಲ್ಲಿ ಹೇಳಿದ ಜೀವವೈವಿಧ್ಯ ಸಂರಕ್ಷಣೆಯ ಮುನ್ನೆಚ್ಚರಿಕೆಯ ನೀತಿಗೆ ವಿರುದ್ಧವಾದ ನಡೆಯಾಗಿದೆ.
ಇಂಥ ಸಂದರ್ಭದಲ್ಲಿ ಇ ಎ ಸಿ ಯು (ತನ್ಮೂಲಕ ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯವು) ಒಂದು ಹೊಸ ಮತ್ತು ವಿಧಾಯಕ ನೀತಿಯನ್ನು ಅನುಸರಿಸಿ, ದೂರಗಾಮಿ ಪರಿಣಾಮಗಳಿರುವ ನಿರ್ಣಯಗಳ ಪ್ರಕ್ರಿಯೆಯಲ್ಲಿ ಜನರು ಭಾಗವಹಿಸಬೇಕೆಂದು ಹೇಳಿರುವುದು ಸ್ವಾಗತಾರ್ಹವಾಗಿದೆ. ನಮ್ಮ ರಾಜ್ಯದ ನೀತಿ ನಿರೂಪಕರು ಇನ್ನು ಮುಂದಾದರೂ ರಾಜ್ಯದ ವಿದ್ಯುತ್ ಬೇಡಿಕೆಯನ್ನು ಪೂರೈಸಲು ಬೃಹತ್ ಯೋಜನೆಗಳನ್ನು ಕೈಗೊಳ್ಳುವ ಮುನ್ನ ಈಗ ಇರುವ ಎಲ್ಲ ಅವಕಾಶಗಳನ್ನೂ ಸುಸ್ಥಿರ ಅಭ್ಯುದಯ (ಸಸ್ಟೈನಬಲ್ ಡೆವಲಪ್‌ಮೆಂಟ್) ಮಾದರಿಯಲ್ಲಿ ಪರಿಶೀಲಿಸುವುದು ನಾಡಿನ ಜನತೆಯ ಹಿತದಿಂದ ಅತ್ಯಂತ ಸೂಕ್ತ ಕ್ರಮವಾಗಿದೆ.
ಕನ್ನಡಕ್ಕೆ: ಬೇಳೂರು ಸುದರ್ಶನ
(Published in Kannadaprabha 17.2.2010)
Pictures by Beluru Sudarshana, Tadadi, 2008
1 Comment
ಅಸ್ಟೆ ಅಲ್ಲ ಥರ್ಮಲ್ ಪವರ್ ಪ್ಲ್ಯಾಂಟ್ ಇಂದ ಹೆಲ್ತ್ ಡಿಸಾರ್ಡರ್ ಕೂಡ ತುಂಬಾ..
ಮಂತ್ರಿ ಗಳಿಗೆ ತಮ್ಮ ಸ್ವಿಸ್ ಅಕೌಂಟ್ ನಲ್ಲಿ ದುಡ್ಡು ಬೇಕು…
ಅದಕ್ಕೆ ಜಿಂದಾಲ್ ಪವರ್ .&. ಪವರ್ ಗಳಂಥ ಕಂಪನೀ ಇಂದ ಅಂಡರ್ ಟೇಬಲ್ ದುಡ್ಡು ಬರುತೇ… ಯಾಕೆ ಅಂದ್ರೆ ಪ್ರಾಫಿಟ್….
ಹಿಂದೆ ರಾಜರು ಮಾಡಿ ದಂತ ದಬ್ಬಾಳಿಕೆ ಏಗ ಮುದ್ಗ ಜಾಣರ ಮೇಲಗುತೆ..
ಅವರು ವಾದ್ಯ ವಾಂತರಲ್ಲ್ ಸೋ ಅವರಿಗೆ ಗೆ ಅದು ಅರಿವಾಗುವುದಿಲ್ಲ ….
ವಿದ್ಯಾ ವಾಂತರು ಇದನ್ನು ನಿಲ್ಲಿಸಬೇಕು
ಚೆಕ್ ಮಾಡೀ ಎ ಲಿಂಕ್
http://www.slideshare.net/guest1d7cce/ill-effects-of-thermal-power-plants