ಜೆರ್ರಿ ಶಾ – ಈ ಜಗತ್ತಿನಲ್ಲಿ ಏನೂ ಅಲ್ಲದ ಮನುಷ್ಯ. ಅವನಿಗೆ ಎಲ್ಲೆಲ್ಲೂ ಸೋಲೇ. ಸತ್ತ ಸೋದರನ ಅಂತ್ಯಕ್ರಿಯೆ ಮುಗಿಸಿ ಬರುತ್ತ ಸುಮ್ಮನೆ ಎ ಟಿ ಎಂನಲ್ಲಿ ಕಾರ್ಡ್ ಹಾಕಿ ಮಿನಿ ಸ್ಟೇಟ್‌ಮೆಂಟ್ ಕೇಳುತ್ತಾನೆ. ಯಾವಾಗಲೂ ಖಾಲಿಖಾಲಿಯಾಗಿರೋ ಅವನ ಖಾತೆಯಲ್ಲಿ ಏಳೂವರೆ ಲಕ್ಷ ಡಾಲರ್ ಹಣ ಬಂದು ಬಿದ್ದಿದೆ. ಅಂಗಿ, ಪ್ಯಾಂಟು ಹಿಡಿಯುವಷ್ಟು ತುರುಕಿಕೊಂಡು ತಿಂಗಳ ಬಾಡಿಗೆ ಕೊಟ್ಟಿರದ ಕೊಳಕೆದ್ದು ಹೋದ ಮನೆಗೆ ಬಂದರೆ ಏನಿದೆ? ಮನೆ ತುಂಬಾ ಭಯೋತ್ಪಾದಕರು ಬಳಸೋ ಶಸ್ತ್ರಾಸ್ತ್ರಗಳು; ಬಾಂಬ್ ತಯಾರಿಸುವ ರಾಸಾಯನಿಕಗಳು. ಇದೇನೆಂದು ಜೆರ್ರಿ ಅಚ್ಚರಿಪಡುತ್ತಿರುವಂತೆ ಅವನ ಮೊಬೈಲ್ ರಿಂಗಿಸುತ್ತದೆ. `ಎಫ್ ಬಿ ಐನವರು ಬಂದು ನಿನ್ನನ್ನು ಅರೆಸ್ಟ್ ಮಾಡೋದಕ್ಕೆ ಕೆಲವೇ ಸೆಕೆಂಡುಗಳಿವೆ. ಮೊದಲು ಪರಾರಿ ಆಗು’ ಎಂದು ನಿರ್ಭಾವುಕ ಹೆಣ್ಣು ದನಿಯೊಂದು ಎಚ್ಚರಿಸುತ್ತದೆ. ಜೆರ್ರಿ ರಾಂಗ್ ನಂಬರ್ ಇರಬಹುದೆಂದು ಅದನ್ನೆಲ್ಲ ನಂಬುವುದಿಲ್ಲ. ಎಫ್ ಬಿ ಐ ಪಡೆ ಬಂದು ಅವನನ್ನು ಹಿಡಿದಾಗಲೇ ಎಲ್ಲೋ ಎಡವಟ್ಟಾಗಿದೆಯಲ್ಲ ಅನ್ನಿಸುತ್ತದೆ.
ಕಥೆ ಇಲ್ಲಿಗೇ ನಿಲ್ಲುವುದಿಲ್ಲ. ಜೆರ್ರಿ ಇಂಥ ಫೋನ್ ಕರೆಗಳ ಆದೇಶವನ್ನು ಪಾಲಿಸಿ ತಪ್ಪಿಸಿಕೊಳ್ಳುತ್ತಾನೆ. ಆದರೆ ಆ ಹೆಣ್ಣುದನಿ ಅವನನ್ನು ಎಲ್ಲೆಂದರಲ್ಲಿ ಹಿಂಬಾಲಿಸುತ್ತದೆ. ಮೊಬೈಲ್ ಎಸೆದರೂ ಬಿಡದೆ ಪಬ್ಲಿಕ್ ಕಾಯಿನ್ ಬೂತಿನಿಂದಲೈ ಅವನನ್ನು ಅಟಕಾಯಿಸುತ್ತದೆ. ಹಾಗೆ ಮಾಡು, ಹೀಗೆ ಮಾಡು ಎಂದು ಆದೇಶಿಸುತ್ತದೆ. ಹೆಣ್ಣೊಬ್ಬಳನ್ನು ಜೊತೆ ಮಾಡಿ ಇಬ್ಬರಿಗೂ ವಿಚಿತ್ರ ಆದೇಶಗಳನ್ನು ಕೊಡುತ್ತ, ಕ್ಷಣಕ್ಷಣಕ್ಕೂ ಹಿಂಬಾಲಿಸುತ್ತ …………..
ಕಳೆದ ವರ್ಷ ಬಂದ `ಈಗಲ್ ಐ’ ಎಂಬ ಸಿನೆಮಾದ ಈ ಕಥೆಯಿದೆ. ಅಮೆರಿಕಾದಲ್ಲಿ ಮನುಷ್ಯನಿಗೆ ಪ್ರೈವಸಿ ಎಂಬುದೇ ಇಲ್ಲವೇನೋ ಎಂಬ ಭಯ ಹುಟ್ಟಿಸುವ ಈ ಸಿನೆಮಾ ಕಾಲ್ಪನಿಕ ಎಂದು ನಗಬೇಡಿ. ಅಮೆರಿಕಾದಲ್ಲೀಗ ಸಾವಿರಾರು ನಾಗರಿಕರ ಮೊಬೈಲ್ ಸಂಭಾಷಣೆ, ಎಸ್ ಎಂ ಎಸ್ ಸಂದೇಶ, ಈ ಮೈಲ್‌ಗಳು – ಎಲ್ಲವನ್ನೂ ಅಮೆರಿಕಾ ಸರ್ಕಾರ ಒಂದಕ್ಷರ ಬಿಡದೆ ಓದಿದೆ. ಇದಕ್ಕೆಲ್ಲ ಭಯೋತ್ಪಾದನೆಯ ಬೆದರಿಕೆಯ ನೆಪ. ನ್ಯಾಶನಲ್ ಸೆಕ್ಯುರಿಟಿ ಏಜೆನ್ಸಿಯ ಈ ಅಟಾಟೋಪಗಳಿಗೆ ಅಲ್ಲಿನ ಜನ ತತ್ತರಿಸಿಹೋಗಿದ್ದಾರೆ.
ಖಾಸಗಿತನವೂ ಸರ್ಕಾರದ, ಸಂಸ್ಥೆಗಳ ಆಸ್ತಿಯಾಗಿರುವುದಕ್ಕೆ ಅನೇಕ ಉದಾಹರಣೆಗಳನ್ನು ಕೊಡಬಹುದು:
-
ಮೊನ್ನೆ ಆಂಧ್ರಪ್ರದೇಶದ ಮುಖ್ಯಮಂತ್ರಿ ವೈ ಎಸ್ ಆರ್ ಹೊತ್ತ ಹೆಲಿಕಾಪ್ಟರ್ ಪತನವಾದಾಗ ನೆರವಿಗೆ ಬಂದಿದ್ದು ಇನ್ನೂ ಓದಿರದಿದ್ದ ಒಂದು ಎಸ್ ಎಂ ಎಸ್‌ನ್ನು ಕಾಪಿಟ್ಟುಕೊಂಡಿದ್ದ ಮೊಬೈಲ್! ನಿಮ್ಮ ಮೊಬೈಲ್ ಕೂಡಾ ಯಾವ ಪ್ರದೇಶದಲ್ಲಿದೆ ಎಂದು ಕ್ಷಣಮಾತ್ರದಲ್ಲಿ ಹುಡುಕಬಹುದು.
-
ನೀವು ಬಳಸುತ್ತಿರೋ ಉಚಿತ ಈ ಮೈಲ್‌ನಲ್ಲಿರೋ ಯಾವ ಮಾಹಿತಿಯೂ ಸುರಕ್ಷಿತವಲ್ಲ. ನಿಮ್ಮ ಈ ಮೈಲ್ ಯಾವ ಕಂಪ್ಯೂಟರಿನಿಂದ ಹೊರಟಿದೆ ಎಂದು ಪತ್ತೆ ಹಚ್ಚುವುದು ನಿರಾಳದ ಕೆಲಸ. ನಿಮ್ಮ ಲ್ಯಾಂಡ್‌ಲೈನ್ ಸಂಖ್ಯೆಯನ್ನು ಬಳಸಿ ಅಂಚೆ ವಿಳಾಸ ಪತ್ತೆಹಚ್ಚುವುದು ಚಿಟಿಕೆ ಹೊಡೆದಷ್ಟು ಸುಲಭ. ನೀವು ಫೇಸ್‌ಬುಕ್‌ನಂಥ ಸಾಮಾಜಿಕ ಜಾಲದ ವೆಬ್‌ಸೈಟಿನಲ್ಲಿ ನಿಮ್ಮದೇ ಹೆಸರು ಬಳಸಿದ್ದರೆ, ಹುಷಾರ್… ನಿಮ್ಮನ್ನು ಯಾರಾದರೂ ಮರುಳುಮಾಡಬಹುದು!
-
ನೀವು ಉಚಿತ ಬಹುಮಾನಗಳಿಗಾಗಿ ಆಸೆಪಟ್ಟು ಮಾಲ್‌ಗಳ, ಅಂಗಡಿಗಳ ಡಬ್ಬಿಯಲ್ಲಿ ಹಾಕುವ ವಿಳಾಸವನ್ನು ಯಾವುದೇ ಮಾರುಕಟ್ಟೆ ಸಂಸ್ಥೆ ತನ್ನ ವಾಣಿಜ್ಯಕ ಉದ್ದೇಶಗಳಿಗೆ ಆರಾಮಾಗಿ ಬಳಸಿಕೊಳ್ಳಬಹುದು.
ನೀವು ಸಾರ್ವಜನಿಕ ವ್ಯಕ್ತಿಯಾಗಿದ್ದರೆ, ನಿಮ್ಮ ಹೇಳಿಕೆಗಳು, ನಿಮ್ಮ ಸಂಬಂಧಗಳು, ನಿಮ್ಮ ಬರಹಗಳು, ಪ್ರತಿಕ್ರಿಯೆಗಳು, ಛಾಯಾಚಿತ್ರಗಳು – ಎಲ್ಲವನ್ನೂ ಗೂಗಲ್ /ಫೇಸ್‌ಬುಕ್ / ಆರ್ಕುಟ್ ನಲ್ಲಿ ಜಾಲಾಡಿ ನಿಮ್ಮ ಚರಿತ್ರೆ, ವರ್ತನೆ, ಚಹರೆ, ಬೇಕು, ಬೇಡಗಳನ್ನು ಅಧ್ಯಯನ ಮಾಡಿ ನಿಮ್ಮ ಸಾಮಾಜಿಕ ಸ್ಥಾನಮಾನವನ್ನು ಅಳೆಯಬಹುದು. -
ಕೆಲಸ ಹುಡುಕುವ ಭರದಲ್ಲಿ ಲಿಂಕಡ್‌ಇನ್ ಇತ್ಯಾದಿ ವೆಬ್‌ಸೈಟ್‌ಗಳಲ್ಲಿ ನೀವು ದಾಖಲಾತಿ ಮಾಡಿಕೊಂಡಿದ್ದರೆ, ಅದನ್ನು ಓದಿ ಕಂಪೆನಿಗಳು ನಿಮ್ಮ ಮೇಲೆ ಸದಾ ಒಂದು ಕಣ್ಣಿಡಬಹುದು.
-
ಸಂವಹನದ ಸ್ವಾತಂತ್ರ್ಯ, ಅಭಿವ್ಯಕ್ತಿಯ ವೇದಿಕೆ, ಅತ್ಯಾಧುನಿಕ ಸಾಧನಗಳ ಬಲ – ಇವೆಲ್ಲ ನಿಮ್ಮನ್ನು ನೀವೇ ಹೊಗಳಿಕೊಳ್ಳಲು ಇರೋ ಪದಗುಚ್ಛಗಳು. ಎಲ್ಲವೂ ಈಗ ಖಾಸಗಿ ಮಾಹಿತಿಯನ್ನು ಲೀಲಾಜಾಲವಾಗಿ ಎತ್ತಿಟ್ಟು ಬೇಕಾದವರಿಗೆ, ಬೇಡವಾದವರಿಗೆ ಕೊಡುವ ಮಾಧ್ಯಮಗಳಾಗಿವೆ.
-
ಅದಿರಲಿ, ನಗರಗಳಲ್ಲಿ ಇಂದು ಹೆಚ್ಚು ಜನಪ್ರಿಯವಾಗಿರುವ ಬ್ಲಾಗ್‌ಗಳಲ್ಲಿ (ವೈಯಕ್ತಿಕ ಅನಿಸಿಕೆಗಳನ್ನು ದಾಖಲಿಸುವ ಉಚಿತ ವೆಬ್‌ಸೈಟ್‌ಗಳು) ಜನ ತಮ್ಮ ಖಾಸಗಿ ಜಗತ್ತನ್ನು ಎಲ್ಲರ ಗ್ರಹಿಕೆಗೆಂದೇ ಬಿಚ್ಚಿಡುತ್ತಿದ್ದಾರೆ.
-
ಇನ್ನೊಂದೆಡೆ, ನೀವು ಬಹಿರಂಗವಾಗಬಾರದು ಎಂದು ಬಯಸುವ ಮಾಹಿತಿಯನ್ನು ಸರ್ಕಾರ ಗುಪ್ತವಾಗಿ ಸಂಗ್ರಹಿಸುತ್ತಿದೆ. ಭಯೋತ್ಪಾದನೆಯಿಂದ ತತ್ತರಿಸಿದ ಅಮೆರಿಕಾವು ಈಗ ಏಳೂವರೆ ಲಕ್ಷ ಇರಾಖಿಗಳ ಮಾಹಿತಿ ಹೊಂದಿದೆ. ಈ ಪಟ್ಟಿಯಲ್ಲಿರುವ ಯಾವನೇ ಒಬ್ಬನನ್ನು ಅಮೆರಿಕಾ `ಭಯೋತ್ಪಾದಕ’ ಎಂದು ಕರೆದು ಹೊಸಕಿ ಹಾಕಬಹುದು.
-
ಮೊಬೈಲ್‌ಗಳು ನಮ್ಮ ಖಾಸಗಿತನದ ಹಕ್ಕನ್ನೇ ಕಳೆಯುತ್ತವೆ ಎಂದು ವಿಶ್ವದ ನಂ. ೧ ಹ್ಯಾಕರ್, ಫ್ರೀ ಸಾಫ್ಟ್‌ವೇರ್ ಚಳವಳಿಯ ನಾಯಕ ರಿಚರ್ಡ್ ಸ್ಟಾಲ್‌ಮನ್ ಮೊಬೈಲ್ ಬಳಕೆಯನ್ನೇ ಮಾಡುತ್ತಿಲ್ಲ.
-
ಇದೇ ಕಾರಣವೊಡ್ಡಿ ಭಾರತದ ಕ್ರಿಕೆಟ್ ಆಟಗಾರರು ಮಾದಕದ್ರವ್ಯ ಪರೀಕ್ಷೆ ಕುರಿತ ಒಪ್ಪಂದಕ್ಕೆ ಸಹಿ ಹಾಕಲು ನಿರಾಕರಿಸಿದ್ದಾರೆ. ಮುಂದಿನ ತಿಂಗಳು ನಾವೆಲ್ಲ ಇರುತ್ತೇವೆ ಎಂದು ಬಹಿರಂಗಗೊಳಿಸುವುದು ನಮ್ಮ ಖಾಸಗಿತನಕ್ಕೆ ಧಕ್ಕೆಯಾಗುತ್ತದೆ ಎಂದು ವಾದಿಸಿದ್ದಾರೆ. ವಿಶ್ವಖ್ಯಾತ ಫುಟ್‌ಬಾಲ್ ಆಟಗಾರರೇ ಒಪ್ಪಿಕೊಂಡಿರುವ ನೀತಿಗೆ ನಮ್ಮವರೇಕೆ ಒಪ್ಪುತ್ತಿಲ್ಲ ಎಂಬ ಚರ್ಚೆ ನಡೆದಿದೆ.
ಖಾಸಗಿಯನ್ನು ತರಿದುಹಾಕುವ ಸರ್ಕಾರಗಳು
ಡಿಜಿಟಲ್ ಯುಗ ನಿಮ್ಮನ್ನು ಕೈಬೀಸಿ ಕರೆಯುತ್ತಿದೆ. ನಿಮ್ಮ ಎಲ್ಲ ಖಾಸಗಿತನವನ್ನು ದರದರ ಎಳೆದುತಂದು ತರಿದುಹಾಕುತ್ತಿದೆ. ಈ ಕೆಲಸವನ್ನು ಅಮೆರಿಕಾ ಚೆನ್ನಾಗಿ ಮಾಡುತ್ತಿದೆ.
ಹಲವು ದೇಶಗಳಲ್ಲಿ ಪ್ರಜೆಗಳ ಡಿಜಿಟಲ್ ಜಾತಕ ತಯಾರಾಗುತ್ತಿದೆ. ಭಾರತದಲ್ಲೂ ನಂದನ್ ನೀಲೇಕಣಿ ನೇತೃತ್ವದಲ್ಲಿ ಪ್ರತೀ ಭಾರತೀಯನಿಗೂ ಪ್ರತ್ಯೇಕವಾದ ಒಂದು ಗುರುತು ಪತ್ರ ಸಿಗಲಿದೆ ತಾನೆ? ಈ ಗುರುತು ಪತ್ರ ಡಿಜಿಟಲ್ ಜಾತಕ ತಯಾರಿಸಲು ನಿಮ್ಮೆಲ್ಲರ ಹಲವು ಖಾಸಗಿ ಮಾಹಿತಿಗಳನ್ನು ಶೇಖರಿಸಬೇಕು. ಇದು ಭಾರತೀಯ ಪ್ರಜೆಗಳು ಖಾಸಗಿತನವನ್ನು ಕಳೆದುಕೊಳ್ಳುವ ಮೊದಲ ಹೆಜ್ಜೆಯೆ?
ಇಂಗ್ಲೆಂಡಿನಲ್ಲಿ ಗುರುತಿನ ಚೀಟಿ ಕಲ್ಪನೆಯನ್ನೂ ಮೀರಿ, ಕಣ್ಣಿನ ರೆಟಿನಾದ ಮೂಲಕ ವ್ಯಕ್ತಿಯನ್ನು ಗುರುತು ಹಿಡಿಯುವ ಕುರಿತ ವ್ಯವಸ್ಥೆಯ ಚಿಂತನೆ ನಡೆದಿದೆ.
ನೆದರ್‌ಲ್ಯಾಂಡಿನಲ್ಲೂ ಕಳೆದ ತಿಂಗಳು ಪ್ರಕಟವಾದ ವರದಿಯಲ್ಲಿ ಆಟೋಮ್ಯಾಟಿಕ್ ನಂಬರ್ ಪ್ಲೇಟ್ ರೆಕಗ್ನಿಶನ್ ವ್ಯವಸ್ಥೆಯನ್ನು ಅಳವಡಿಸಬೇಕೇ ಬೇಡವೆ ಎಂಬ ಬಿಸಿ ಚರ್ಚೆ ನಡೆದಿದೆ. ನ್ಯೂಜೀಲೆಂಡಿನ ಹದಿನೆಂಟರ ಹರೆಯದ ಪ್ರಜೆಗಳಿಗೆ ಖಾಸಗಿತನ ಉಳಿಸಿಕೊಳ್ಳುವುದು ಎಂಟನೇ ಗಂಭೀರ ವಿಷಯವಂತೆ. ಆ ದೇಶದಲ್ಲಿ ಪ್ರೈವೆಸಿ ಕಮಿಶನರ್ ಹುದ್ದೆ ಇದೆ.
ಅಮೆರಿಕಾದಲ್ಲಿ `ಐನ್‌ಸ್ಟೈನ್ ಕಾರ್ಯಕ್ರಮ’ ಎಂಬ ವ್ಯವಸ್ಥೆ ಇದೆ. (ಇದಕ್ಕೂ ಐನ್‌ಸ್ಟೈನ್‌ಗೂ ಸಂಬಂಧವಿಲ್ಲ)ಇಂಟರ್‌ನೆಟ್ ಮೂಲಕ ಉಂಟಾದ ಮಾಹಿತಿ ಸ್ಫೋಟದ ಹಿನ್ನೆಲೆಯಲ್ಲಿ ಗಣಕಗಳಲ್ಲಿ ಇರುವ ಭದ್ರತೆ ಕುರಿತ ಮಾಹಿತಿಗಳನ್ನು ಸಂಗ್ರಹಿಸಿ ವಿಶ್ಲೇಷಿಸುವ ವ್ಯವಸ್ಥೆಯಿದು; ಮುಖ್ಯವಾಗಿ ಅಮೆರಿಕಾದ ಭದ್ರತೆ ಕುರಿತ ಕಚೇರಿಗಳ ಮಾಹಿತಿಗಳನ್ನು ಪರಸ್ಪರ ತಾಳೆ ಹಾಕುತ್ತದೆ.
ಖಾಸಗಿ ಸಂಸ್ಥೆಗಳ `ಖಾಸಗೀ’ನಾಶ
ಇತ್ತೀಚೆಗೆ ಮಾಹಿತಿ ತಂತ್ರಜ್ಞಾನಿಗಳು `ಕ್ಲೌಡ್ ಕಾಂಪ್ಯೂಟಿಂಗ್’ ಎಂಬ ಮಾತಿನ ಮಳೆ ಸುರಿಸುತ್ತಿದ್ದಾರೆ. ಗೂಗಲ್, ಐ ಬಿ ಎಂ ಇತ್ಯಾದಿ ದೈತ್ಯ ಸಂಸ್ಥೆಗಳು ಈ ಮೇಘ – ಗಣಕ ಯೋಜನೆಯನ್ನು ಬೃಹತ್ತಾಗಿ ಆರಂಭಿಸಿವೆ. ವಿಶ್ವದ ಯಾವುದೋ ತಾಣದಲ್ಲಿರೋ ಗಣಕವನ್ನು ನಿಮ್ಮ ಸಂಸ್ಥೆಯು ಬಾಡಿಗೆ ಪಡೆದು, ಬೇಕಾದ ತಂತ್ರಾಂಶ ಹಾಕಿ
ಕೊಂಡು ಕೆಲಸ ಮಾಡಬಹುದು. ಬಳಸಿದ್ದಕ್ಕೆ ಬಾಡಿಗೆ ತೆತ್ತರಾಯಿತು! ಆದರೆ ಇದು ನಿಮ್ಮ ಎಲ್ಲ ರಹಸ್ಯವನ್ನೂ ಇನ್ನೊಬ್ಬರಿಗೆ ಬೆಳ್ಳಿತಟ್ಟೆಯಲ್ಲಿ ಕೊಟ್ಟ ಹಾಗಲ್ಲವೇ ಎಂದು ರಿಚರ್ಡ್ ಸ್ಟಾಲ್‌ಮನ್ ಗುಡುಗಿದ್ದಾರೆ.
ವಿಶ್ವದಲ್ಲೀಗ ಟೆಲಿವರ್ಕಿಂಗ್ ಚಾಳಿ ಹೆಚ್ಚಾಗಿದೆ. ಅಂದರೆ ಮನೆಯಲ್ಲೇ ಕುಳಿತು ಕೆಲಸ ಮಾಡುವುದು. ನೀವೇನೋ ಆರಾಮು ಎನ್ನುತ್ತೀರ. ಆದರೆ ನಿಮ್ಮ ಎಲ್ಲ ಸಂಭಾಷಣೆಗಳೂ ಈ ಮೈಲ್, ಚಾಟ್‌ನಲ್ಲಿ ದಾಖಲಾಗುತ್ತವೆ. ಏನಂತೀರಿ ? – ಹೀಗಂತ ವಿಶ್ವದ ಮುಂಚೂಣಿ ಡಿಜಿಟಲ್ ಹಕ್ಕುಗಳ ವಕೀಲ ಎರಿಕ್ ಸಿನ್‌ರಾಡ್ ಪ್ರಶ್ನಿಸುತ್ತಾರೆ.
ದೇಹಾರೋಗ್ಯ ಮತ್ತು ವೈದ್ಯಕೀಯ ಸೇವೆ, ಖಾಸಗಿತನ ಮತ್ತು ಸುರಕ್ಷತೆ, – ಹೀಗೆ ಖಾಸಗಿತನದ ಬಗ್ಗೆ ಚರ್ಚೆ ಹಲವು ಆಯಾಮಗಳಲ್ಲಿ ನಡೆಯುತ್ತೆ ಎಂದು ಡಿಜಿಟಲ್ ಪತ್ರಕರ್ತೆ ಎಸ್ತರ್ ಡೈಸನ್ ಸೈಂಟಿಫಿಕ್ ಅಮೆರಿಕನ್‌ನಲ್ಲಿ ಸುದೀರ್ಘ ಲೇಖನ ಬರೆದಿದ್ದಾರೆ.
ನಾಗರಿಕರಿಗಾಗಿ ಬಾರ್‌ಕೋಡ್
ಬಾರ್ ಕೋಡ್ ವಿಕಿಪೀಡಿಯಾ ಎಂಬ ಹೊಸ ಪರಿಕಲ್ಪನೆಯನ್ನೇ ತೆಗೆದುಕೊಳ್ಳಿ. ನೀವು ಖರೀದಿಸೋ ವಸ್ತುಗಳ ಪ್ಯಾಕಿಂಗ್ ಮೇಲೆ ಇರೋ ಬಾರ್ ಕೋಡ್‌ನ್ನು ನೀವೂ ಓದಿಕೊಂಡು, ಆ ಉತ್ಪನ್ನ ಸರಿಯಿದೆಯೆ ಇಲ್ಲವೆ ಎಂದು ವಿಮರ್ಶೆ ಬರೆದರೆ ಹೇಗಿರುತ್ತೆ? ಸುಮ್ಮನೇ ಏನೋ ಟೀಕಿಸುವುದಕ್ಕಿಂತ ಹೀಗೆ ನಿರ್ದಿಷ್ಟವಾಗಿ ವಸ್ತುವಿನ ಗುಣ, ಅವಗುಣಗಳನ್ನು ಹೇಳಿದರೆ ಜನಾಭಿಪ್ರಾಯಕ್ಕೂ ಬೆಲೆ ಇರುತ್ತಲ್ವೆ?
ಅದಿರಲಿ, ನೀವು ಶಾಪಿಂಗ್ ಮಾಡೋದಕ್ಕೆ ಅಂಗಡಿಗೆ ಹೋಗ್ತೀರ. ಅಲ್ಲಿ ನೀವು ಸಾಲು ಸಾಲು ಉತ್ಪನ್ನಗಳ ಮೇಲೆ ಕಣ್ಣಾಡಿಸುತ್ತ ನಡೆಯುತ್ತೀರಿ. ಎಲ್ಲೋ ಬಗ್ಗುತ್ತೀರಿ. ಎಲ್ಲೋ ವಾರೆ ನೋಟ ಬೀರುತ್ತೀರಿ. ನೀವು ಯಾವ ಕೋನದಲ್ಲಿ ಬಗ್ಗಿ ಯಾವ ಕೋನದಲ್ಲಿ ವಾಲಿದಿರಿ ಎಂದು ಲೆಕ್ಕ ಹಾಕಿ ಗ್ರಾಹಕರ ಮನಸ್ಸನ್ನು ಅಧ್ಯಯನ ಮಾಡುವ ತಂತ್ರಜ್ಞಾನವೂ ಬರುತ್ತಿದೆ!
ನೀವು ಯಾವ ಪುಸ್ತಕ ಓದುತ್ತಿದ್ದೀರಿ, ಯಾವ ಬ್ರಾಂಡಿನ ಉಡುಗೆ ಧರಿಸಿ ಯಾವ ಕಾರಿನಲ್ಲಿ ಕೂತು ಯಾವ ಪೇಯ ಹೀರುತ್ತಿದ್ದೀರಿ ಎಂದು ಪತ್ತೆ ಹಚ್ಚಲು ರೇಡಿಯೀ ಫ್ರಿಕ್ವೆನ್ಸಿ ಗುರುತುಚೀಟಿಗಳು (ಆರ್ ಎಫ್ ಐ ಡಿ)ಬಂದಿವೆ. ನೀವು ಮನೆಯಲ್ಲಿ ಏನೇನು ಮಾಡುತ್ತೀರಿ, ಯಾವ ಆಹಾರ ಇಷ್ಟಪಡುತ್ತೀರಿ, ಯಾವ ಚಾನೆಲ್ ಇಷ್ಟ, ಎಂಥ ಹಾಡು ಕೇಳುತ್ತೀರಿ, ಮಲಗೋವಾಗ ಯಾವ ಮಾತ್ರೆ ನುಂಗುತ್ತೀರಿ ಎಂಬೆಲ್ಲ ಮಾಹಿತಿಗಳನ್ನು ದಾಖಲಿಸಿ……
ನಿಜ. ಆರ್ ಎಫ್ ಐ ಡಿ ವಾಸ್ತವ. ಕಲ್ಪನೆಯಲ್ಲ. ಈಗಾಗಲೇ ಕಾರು ಕೀಲಿಗಳಲ್ಲಿ, ಟಯರುಗಳಲ್ಲಿ, ಶಾಂಪೂ ಬಾಟಲಿಗಳಲ್ಲಿ, ಸಂಪರ್ಕ ರಹಿತ ಪೇಮೆಂಟ್ ಕಾಡ್‌ಗಳಲ್ಲಿ ಅಡಗಿ ಕೂತಿವೆ. ಎರಡನೇ ಮಹಾಯುದ್ಧದಲ್ಲೂ ಇದರ ಬಳಕೆಯಾಗಿತ್ತು ಎನ್ನಿ. ಈಗ ನಡೀತಿರೋದು ಕಾರ್ಪೋರೇಟ್ ಸಮರ, ಅಷ್ಟೆ.
ಎಷ್ಟೋ ಸಲ ಈ ಖಾಸಗಿತನದಲ್ಲಿ ಏನಿದೆ, ಎಲ್ಲವೂ ಮುಕ್ತವಾಗಿದ್ದರೆ ಎಷ್ಟು ಚೆನ್ನು ಎಂದೆನಿಸಬಹುದು. ಪ್ರತಿಯೊಬ್ಬ ವ್ಯಕ್ತಿಗೂ ಒಂದು ಖಾಸಗಿ ಜಗತ್ತಿದೆ. ಅವನದೇ / ಅವಳದೇ ಆದ ಖಾಸಗಿ ಬದುಕಿದೆ.ಮಾನವೀಯ ಸಂಬಂಧಗಳಿವೆ; ವ್ಯವಸ್ಥೆಯನ್ನು ಸರಿಪಡಿಸಲು ನಡೆಸಲೇಬೇಕಾದ ರಹಸ್ಯ ಕರ್ತವ್ಯಗಳೂ ಇರುತ್ತವೆ. ವಿದ್ರೋಹಿಗಳನ್ನು ಮಟ್ಟ ಹಾಕುವ ನೆಪದಲ್ಲಿ ಇಂಥವರ ಮಾಹಿತಿಹರಣ ಮಾಡುವ ವ್ಯವಸ್ಥೆಯನ್ನು ಪ್ರಶ್ನಿಸಲೇಬೇಕು. ದೇಶಕ್ಕೆ, ಸರ್ಕಾರಕ್ಕೆ ಸುರಕ್ಷತೆ ಎಷ್ಟು ಮುಖ್ಯವೋ, ವ್ಯಕ್ತಿಗೆ ವೈಯಕ್ತಿಕ ಬದುಕು, ಮುಕ್ತವಾಗಿ ವರ್ತಿಸುವ ಸ್ವಾತಂತ್ರ್ಯ ಬೇಕು.
ನೀವು ಏನಂತೀರಿ? ನೀವು ಈ ಲೇಖನ ಓದ್ತಾ ಇದೀರಿ ಅಂತ ಯಾರಾದ್ರೂ ನೋಡಿಬಿಟ್ರಾ ಹ್ಯಾಗೆ?
ಉದಯವಾಣಿಯಲ್ಲಿ ೨೦೦೯ ಅಕ್ಟೋಬರ್ ೪ರಂದು ಬಂದ ಈ ಲೇಖನದ ಪಿಡಿಎಫ್ ಪ್ರತಿ ಇಲ್ಲಿದೆ.